ದುನಿಯಾ ವಿಜಯ್ ಸಹಾಯದ ಮೇರೆಗೆ ಜೈಲಿಂದ ಬಿಡುಗಡೆ ಆಗಿದ್ದ ವ್ಯಕ್ತಿಯಿಂದಲೇ ನಡೆಯಿತು ಜೋಡಿ ಕೊಲೆ!
Bengaluru Crime: ಅತ್ಯಾಚಾರ ಮತ್ತು ಕೊಲೆ ಪ್ರಕರಣವೊಂದರಲ್ಲಿ ಸುರೇಶ್ ಎಂಬಾತ ಜೈಲು ಸೇರಿದ್ದ. 10 ವರ್ಷಗಳ ಶಿಕ್ಷೆಯನ್ನೂ ಅನುಭವಿಸಿದ್ದ. ಅಪರಾಧಿಗೆ ಶ್ಯೂರಿಟಿ ನೀಡುವರು ಯಾರೂ ಇರಲಿಲ್ಲ. ಈ ವಿಷಯ ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು. ಆಗ ನೆರವಿಗೆ ಬಂದವರು ದುನಿಯಾ ವಿಜಯ್. ಈಗ ಹೀಗೆ ಜೈಲಿಂದ ಹೊರಬಂದು ಜೋಡಿ ಕೊಲೆ ಮಾಡಿದ್ದಾನೆ.
Duniya Vijay: ಸಹಾಯವನ್ನು ಅಪಾತ್ರರಿಗೆ ಮಾಡಬಾರದು ಎಂದು ನಮ್ಮ ಹಿರಿಯರು ಹೇಳುತ್ತಿದ್ದರು. ಏಕೆಂದರೆ ಅವರಿಗೆ ಸಹಾಯದ ಅರ್ಥ ಗೊತ್ತಿರುವುದಿಲ್ಲ ಮತ್ತು ಅರ್ಥವನ್ನು ಮಾಡಿಕೊಳ್ಳುವ ಗೋಜಿಗೂ ಹೋಗುವುದಿಲ್ಲ. ಅಂತಹವರಿಗೆ ಮಾಡಿದ ಸಹಾಯ ನಿಜಕ್ಕೂ ವ್ಯರ್ಥ ಎನ್ನುವುದು ಆಗೊಮ್ಮೆ ಈಗೊಮ್ಮೆ ಸಾಬೀತಾಗುತ್ತಾ ಬರುತ್ತಿದೆ. ಅಂತಹುದೇ ಪ್ರಕರಣ ಇದೀಗ ಬೆಳಕಿಗೆ ಬಂದಿದೆ.
ಕನ್ನಡದ ಖ್ಯಾತ ನಟ ದುನಿಯಾ ವಿಜಯ್ ಯಾರಿಗೆ ಗೊತ್ತಿಲ್ಲ ? ಅವರಿಂದ ಸಹಾಯ ಪಡೆದ ವ್ಯಕ್ತಿಯೊಬ್ಬ ತನ್ನ ಹಳೆಯ ಚಾಳಿಯನ್ನು ಮುಂದುವರೆಸಿ ಮತ್ತೆ ಜೈಲು ಪಾಲಾಗಿದ್ದಾನೆ. ಇದರಿಂದ ತನಗೆ ಸಹಾಯ ಮಾಡಿದ ಖ್ಯಾತ ನಟನಿಗೆ ನೋವಾಗುತ್ತದೆ ಎಂಬ ಕಿಂಚಿತ್ತೂ ಕಾಳಜಿ ಇಲ್ಲದ ಕ್ರೂರಿ ಈತ. ಯಾರು ಎನ್ನುವುದು ತಿಳಿಯದಿದ್ದರೂ ವಿಜಿ ಸಹಾಯ ಹಸ್ತ ಚಾಚಿದ್ದರು.
ಏನಿದು ಪ್ರಕರಣ?
ಬೆಂಗಳೂರು ನಗರದ ಹೊರವಲಯದ ಬಾಗಲೂರು ಎಂಬಲ್ಲಿ ಬಸ್ ಶೆಡ್‌ವೊಂದರಲ್ಲಿ ಜೋಡಿ ಕೊಲೆ ನಡೆದಿತ್ತು. ಈ ವರದಿಯ ಖಳನಾಯಕ ಸುರೇಶ್. ತನ್ನ ಜತೆಗಿದ್ದ ನಾಗೇಶ್ (55) ಮತ್ತು ಮಂಜುನಾಥ್ (50) ಎಂಬವರನ್ನು ರಾಡ್‌ನಿಂದ ಹೊಡೆದು ಕೊಲೆ ಮಾಡಿದ್ದ. ಕುಡಿದ ನಶೆಯಲ್ಲಿ ಗಲಾಟೆ ಮಾಡಿಕೊಂಡು ಹತ್ಯೆ ಮಾಡಿದ್ದಾನೆ ಎನ್ನುವುದು ಬೇರೆ ಪ್ರಶ್ನೆ. ಬಸ್ ಶೆಡ್‌ನಲ್ಲಿ ಮೂವರೂ ಜತೆಯಲ್ಲಿ ಕೆಲಸ ಮಾಡುತ್ತಿದ್ದರು. ಕುಡಿದ ಮತ್ತಿನಲ್ಲಿ ಜಗಳ ಆಡುತ್ತಿದ್ದರು. ಇತ್ತೀಚೆಗೆ ತ್ಯಾಜ್ಯ ಮಾರಾಟದ ವಿಷಯಕ್ಕೆ ಮೂವರ ನಡುವೆ ಜಗಳ ನಡೆದಿತ್ತು.
ಹೀಯಾಳಿಸಿದ್ದಕ್ಕೆ ಕೊಲೆ
ನಾಗೇಶ್ ಮತ್ತು ಮಂಜುನಾಥ್ ನನ್ನನ್ನು ಸದಾ ಹೀಯಾಳಿಸುತ್ತಿದ್ದರು. ನಿನ್ನ ಮೇಲೆ ಕೇಸ್‌ಗಳಿವೆ ಎಂದು ನಿಂದಿಡುತ್ತಿದ್ದರು. ಆದ್ದರಿಂದ ಬೇಸತ್ತು ಇಬ್ಬರನ್ನು ಕೊಂದು ಹಾಕಿದೆ ಎಂದು ಹೇಳಿದ್ದಾನೆ. ಈ ಮೂವರು ಸಹ ಬಸ್‌ಗಳ ಸರ್ವಿಸ್ ಕೆಲಸ ಮಾಡಿಕೊಂಡಿದ್ದರು. ಬಾಗಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ದುನಿಯಾ ವಿಜಿ ಬಿಡಿಸಿದ್ದ ಆರೋಪಿ ಸುರೇಶ್ ಮತ್ತೆ ಕೊಲೆ ಮಾಡಿ ಜೈಲು ಸೇರಿದ್ದಾನೆ. ಬಾಗಲೂರು ಡಬಲ್ ಮರ್ಡರ್ ಆರೋಪಿ ಸುರೇಶ್‌ಗೆ ಈ ಹಿಂದೆ ಪ್ರಕರಣವೊಂದರಲ್ಲಿ ಶ್ಯೂರಿಟಿ ಹಣ ನೀಡಿ ದುನಿಯಾ ವಿಜಯ್ ಬಿಡಿಸಿದ್ದರು.
ಶ್ಯೂರಿಟಿ ನೀಡಿದ್ದ ದುನಿಯಾ ವಿಜಯ್
ಈ ಹಿಂದೆ ಅತ್ಯಾಚಾರ ಮತ್ತು ಕೊಲೆ ಪ್ರಕರಣವೊಂದರಲ್ಲಿ ಸುರೇಶ್ ಎಂಬಾತ ಜೈಲು ಸೇರಿದ್ದ. 10 ವರ್ಷಗಳ ಶಿಕ್ಷೆಯನ್ನೂ ಅನುಭವಿಸಿದ್ದ. ಅಪರಾಧಿಗೆ ಶ್ಯೂರಿಟಿ ನೀಡುವರು ಯಾರೂ ಇರಲಿಲ್ಲ. ಈ ವಿಷಯ ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು. ಆಗ ನೆರವಿಗೆ ಬಂದವರು ದುನಿಯಾ ವಿಜಯ್. ವಿಜಿ ಕೇವಲ ಸುರೇಶ್‌ಗೆ ಮಾತ್ರವಲ್ಲದೆ ಇದೇ ರೀತಿ ಶ್ಯೂರಿಟಿ ಕಟ್ಟಲಾಗದ ಹಲವು ಅಪರಾಧಿಗಳಿಗೆ ನೆರವು ನೀಡಿದ್ದರು. ಇದೀಗ ಸುರೇಶ್ ಮತ್ತೆ ಅಪರಾಧ ಎಸಗಿ ಕಂಬಿ ಎಣಿಸುತ್ತಿದ್ದಾನೆ.
ಜೈಲಿನಿಂದ ಬಿಡುಗಡೆಯಾದ ಬಳಿಕ ಸುರೇಶ್ ಮಾರುಕಟ್ಟೆಯಲ್ಲಿ ತರಕಾರಿ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ. ಸಂಬಂಧಿಯೊಬ್ಬರ ಸಹಾಯದಿಂದ ಬಾಗಲೂರು ಬಸ್ ಶೆಡ್‌ನಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದ. ಅಲ್ಲಿಯೂ ಮತ್ತೆ ಅಪರಾಧ ಎಸಗಿದ್ದಾನೆ.
ವರದಿ: ಮಾರುತಿ ಎಸ್. ಎಚ್