ಹೈಜಾಕ್, ನೀರ್ಜಾ, ಬೆಲ್ ಬಾಟಮ್: ಬೆಸ್ಟ್ ಹೈಜಾಕ್ ಕಥೆಗಳಿರುವ ಸಿನಿಮಾಗಳಿವು, ಒಟಿಟಿಯಲ್ಲಿ ಹೀಗೆ ನೋಡಿ
ಥ್ರಿಲ್ಲರ್ ಚಲನಚಿತ್ರ ಐಸಿ 814: ದಿ ಕಂದಹಾರ್ ಹೈಜಾಕ್ ಬಿಡುಗಡೆಗೆ ಸಜ್ಜಾಗಿದೆ. ಈ ನಡುವೆ ದೊಡ್ಡಪರದೆಯಲ್ಲಿ ಸದ್ದು ಮಾಡಿರುವ ಹೈಜಾಕಿಂಗ್ ಕಥಾಹಂದರವಿರುವ ಭಾರತದ ಅತ್ಯುತ್ತಮ ಸಿನಿಮಾಗಳನ್ನು ನೋಡೋಣ.
ಅನುಭವ್ ಸಿನ್ಹಾ ಅವರ ಐಸಿ 814: ದಿ ಕಂದಹಾರ್ ಹೈಜಾಕ್ ನೆಟ್‌ಫ್ಲಿಕ್ಸ್ ಸೀರೀಸ್ ಆಗಸ್ಟ್ 29ರಂದು ಸ್ಟ್ರೀಮ್ ಆಗಲಿದೆ. ವಿಮಾನವೊಂದು ಹೈಜಾಕ್ ಆಗುವ ಕಥೆಯಿರುವ ಥ್ರಿಲ್ಲರ್ ಚಿತ್ರವು ಭಾರತೀಯ ಪ್ರೇಕ್ಷಕರಲ್ಲಿ ಮತ್ತೊಮ್ಮೆ ಭಾರಿ ಆಸಕ್ತಿ ಮೂಡಿಸಿದೆ. ಇತ್ತೀಚಿನ ವರ್ಷಗಳಲ್ಲಿ, ಬಾಲಿವುಡ್ ಮತ್ತು ದಕ್ಷಿಣ ಭಾರತದ ವಿವಿಧ ಸಿನಿಮಾ ರಂಗಗಳಲ್ಲಿ ಹಲವು ರೋಚಕ ಚಿತ್ರಗಳು ತೆರೆಕಂಡಿವೆ. ಥ್ರಿಲ್ಲರ್ ಮತ್ತು ಆಕ್ಷನ್‌ಗಳಿರುವ ಡ್ರಾಮಾ ಹಾಗೂ ಜೀವನಚರಿತ್ರೆಗಳಿರುವ ವಿವಿಧ ಮಜಲುಗಳ ಚಿತ್ರಗಳನ್ನು ಸಿನಿಪ್ರಿಯರಿಗೆ ಉಣಬಡಿಸಿದೆ. ನೈಜ ಘಟನೆಗಳಿಂದ ಪ್ರೇರಿತವಾಗಿ ಕಾಲ್ಪನಿಕ ಕಥೆಗಳೊಂದಿಗೆ ವೀಕ್ಷಕರನ್ನು ಆಕರ್ಷಿಸಿದೆ. ನೀರ್ಜಾ, ಬೆಲ್ ಬಾಟಮ್ ಹೀಗೆ ಹಲವು ಚಿತ್ರಗಳು ಮೆಚ್ಚುಗೆ ಗಳಿಸಿವೆ. ಹೈಜಾಕಿಂಗ್, ಬೇಹುಗಾರಿಕೆ ಹೀಗೆ ರೋಚಕತೆ ಹೆಚ್ಚಿಸುವ ಚಿತ್ರಗಳು ಜನರ ಕುತೂಹಲ ಹೆಚ್ಚಿಸುತ್ತವೆ.
ಸದ್ಯ ಐಸಿ 814: ದಿ ಕಂದಹಾರ್ ಹೈಜಾಕ್ ಸೀರೀಸ್ ಬಿಡುಗಡೆಯಾಗುತ್ತಿದೆ. ಈಗ ಹೈಜಾಕಿಂಗ್ ಸನ್ನಿವೇಶಗಳಿರುವ ವಿವಿಧ ಚಿತ್ರಗಳನ್ನು ಮೆಲುಕು ಹಾಕುವ ಸಮಯ. ಬೆಳ್ಳಿ ಪರದೆಯ ಮೇಲೆ ಮಿಂಚು ಹರಿಸಿರುವ ಸಿನಿಮಾಗಳನ್ನು ನೋಡಿಕೊಂಡು ಬರೋಣ.
ಹೈಜಾಕ್ (ಯೂಟ್ಯೂಬ್)
2008ರ ಆಕ್ಷನ್ ಥ್ರಿಲ್ಲರ್ ಹೈಜಾಕ್ ಚಿತ್ರದಲ್ಲಿ ಶೈನಿ ಅಹುಜಾ ಮತ್ತು ಇಶಾ ಡಿಯೋಲ್ ಕಾಣಿಸಿಕೊಂಡಿದ್ದಾರೆ. ಇಂಡಿಯನ್ ಏರ್‌ಲೈನ್ಸ್ ವಿಮಾನ 814ರ ಅಪಹರಣದ ಸುತ್ತಲಿನ ಘಟನೆಗಳು ಕುನಾಲ್ ಶಿವದಾಸನಿ ಅವರ ಚಿತ್ರಕಥೆ ಮತ್ತು ನಿರ್ದೇಶನಕ್ಕೆ ಸ್ಫೂರ್ತಿಯಾಗಿದೆ.
ಬೆಲ್ ಬಾಟಮ್ (ಪ್ರೈಮ್ ವಿಡಿಯೋ)
2021ರಲ್ಲಿ ಬಿಡುಗಡೆಯಾದ ಆಕ್ಷನ್ ಥ್ರಿಲ್ಲರ್ ಚಿತ್ರ ಬೆಲ್ ಬಾಟಮ್. ರಂಜಿತ್ ಎಂ ತಿವಾರಿ ನಿರ್ದೇಶನಲ್ಲಿ, ಅಕ್ಷಯ್ ಕುಮಾರ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಕೊಂಡ ಹಿಟ್ ಸಿನಿಮಾ ಇದು. 1980ರ ದಶಕದಲ್ಲಿ ಖಾಲಿಸ್ತಾನಿ ಉಗ್ರರಿಂದ ಇಂಡಿಯನ್ ಏರ್‌ಲೈನ್ಸ್ ವಿಮಾನಗಳು 423, 405 ಮತ್ತು 421ರ ಅಪಹರಣವಾದ ಘಟನೆಯೇ ಬೆಲ್ ಬಾಟಮ್ ಚಿತ್ರದ ನಿರ್ಮಾಣಕ್ಕೆ ಸ್ಫೂರ್ತಿಯಾಗಿದೆ. ಚಿತ್ರದಲ್ಲಿ ವಾಣಿ ಕಪೂರ್, ಲಾರಾ ದತ್ತಾ, ಮತ್ತು ಹುಮಾ ಖುರೇಷಿ ಸುದೀರ್ಘವಾದ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ನೀರ್ಜಾ (ಡಿಸ್ನಿ+ ಹಾಟ್‌ಸ್ಟಾರ್)
ರಾಮ್ ಮಾಧ್ವನಿ ಅವರು 2016ರ ಜೀವನಚರಿತ್ರೆಯ ಥ್ರಿಲ್ಲರ್ ಚಲನಚಿತ್ರ ನೀರ್ಜಾವನ್ನು ನಿರ್ದೇಶಿಸಿದರು. ಸಂಯುಕ್ತಾ ಚಾವ್ಲಾ ಶೇಖ್ ಮತ್ತು ಸೈವಿನ್ ಕ್ವಾಡ್ರಾಸ್ ಚಿತ್ರಕಥೆಯನ್ನು ಬರೆದಿದ್ದಾರೆ. ಸೋನಮ್ ಕಪೂರ್ ಜೊತೆಗೆ, ಪೋಷಕ ಪಾತ್ರದಲ್ಲಿ ಶೇಖರ್ ರಾವ್ಜಿಯಾನಿ, ಶಬಾನಾ ಅಜ್ಮಿ, ಯೋಗೇಂದ್ರ ಟಿಕು, ಕವಿ ಶಾಸ್ತ್ರಿ ಮತ್ತು ಜಿಮ್ ಸರ್ಭ್ ಕಾಣಿಸಿಕೊಂಡಿದ್ದಾರೆ. ಚಿತ್ರವು 64ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಎರಡು ಪುರಸ್ಕಾರಗಳನ್ನು ಪಡೆಯಿತು.
IB71 (ಡಿಸ್ನಿ+ ಹಾಟ್‌ಸ್ಟಾರ್)
2023ರಲ್ಲಿ ತೆರೆಕಂಡ ಸ್ಪೈ ಥ್ರಿಲ್ಲರ್ ಚಲನಚಿತ್ರ IB71 ಅನ್ನು ಸಂಕಲ್ಪ್ ರೆಡ್ಡಿ ಬರೆದು ನಿರ್ದೇಶಿಸಿದ್ದಾರೆ. ಇದು 1971ರಲ್ಲಿ ಇಂಡಿಯನ್ ಏರ್‌ಲೈನ್ಸ್ ವಿಮಾನದ ಅಪಹರಣವನ್ನು ಆಧರಿಸಿದ ಚಿತ್ರ. ಅನುಪಮ್ ಖೇರ್, ಅಶ್ವಥ್ ಭಟ್, ಡ್ಯಾನಿ ಸುರಾ ಮತ್ತು ಸುವ್ರತ್ ಜೋಶಿ ಜೊತೆಗೆ, ವಿದ್ಯುತ್ ಜಮ್ವಾಲ್, ವಿಶಾಲ್ ಜೇತ್ವಾ ಮತ್ತು ಫೈಜಾನ್ ಖಾನ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.
ಕಂದಹಾರ್ (ಡಿಸ್ನಿ+ ಹಾಟ್‌ಸ್ಟಾರ್ ಮತ್ತು ಶೆಮರೂಮಿ)
ಮೇಜರ್ ರವಿ ಬರೆದು ನಿರ್ದೇಶಿಸಿದ ಮಲಯಾಳಂ ಮಿಲಿಟರಿ ಡ್ರಾಮಾ ಚಿತ್ರ ಕಂದಹಾರ್. 2010ರಲ್ಲಿ ಬಿಡುಗಡೆಯಾದ ಚಿತ್ರದಲ್ಲಿ ಮೋಹನ್ ಲಾಲ್ ಸತತ ಮೂರನೇ ಚಿತ್ರದಲ್ಲಿ ಮೇಜರ್ ಮಹಾದೇವನ ಪಾತ್ರದಲ್ಲಿ ನಟಿಸಿದರು. ಗಣೇಶ್ ವೆಂಕಟರಾಮನ್ ಮತ್ತು ಅಮಿತಾಬ್ ಬಚ್ಚನ್ ಇಬ್ಬರೂ ಈ ಚಿತ್ರದ ಮೂಲಕ ಮಲಯಾಳಂ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಾರೆ.
ಪಯಣಂ (ಡಿಸ್ನಿ+ ಹಾಟ್‌ಸ್ಟಾರ್)
ರಾಧಾ ಮೋಹನ್ ನಿರ್ದೇಶಿಸಿದ ಪಯಣಂ ಆಕ್ಷನ್ ಥ್ರಿಲ್ಲರ್ ಚಿತ್ರ 2011ರಲ್ಲಿ ತೆರೆಕಂಡಿತು. ರಾಧಾ ಮೋಹನ್ ತಮಿಳು ಮತ್ತು ತೆಲುಗು ಎರಡೂ ಆವೃತ್ತಿಗಳನ್ನು ಏಕಕಾಲದಲ್ಲಿ ಚಿತ್ರೀಕರಿಸಿದ್ದಾರೆ. ತೆಲುಗು ಆವೃತ್ತಿಗೆ ಗಗನಂ ಎಂದು ಹೆಸರಿಸಿದ್ದಾರೆ. ಒಂದು ವಿಮಾನದ ಅಪಹರಣ ಘಟನೆಯು ಚಿತ್ರದ ಕಥಾವಸ್ತುವಿಗೆ ಸ್ಫೂರ್ತಿಯಾಗಿದೆ. ನಾಗಾರ್ಜುನ, ಪ್ರಕಾಶ್ ರಾಜ್, ಪೂನಂ ಕೌರ್, ಸನಾ ಖಾನ್, ರಿಷಿ, ಬ್ರಹ್ಮಾನಂದಂ ಮತ್ತು ತಲೈವಾಸಲ್ ವಿಜಯ್ ಪಯಣಂ ಚಿತ್ರದ ಪಾತ್ರವರ್ಗದಲ್ಲಿದ್ದಾರೆ.
ಯೋಧಾ (ಪ್ರೈಮ್ ವಿಡಿಯೋ)
ಸಾಗರ್ ಅಂಬ್ರೆ ಮತ್ತು ಪುಷ್ಕರ್ ಓಜಾ ಅವರ ಆಕ್ಷನ್ ಥ್ರಿಲ್ಲರ್ ಚಿತ್ರ ಈ ವರ್ಷ ಯೋಧಾ ಬಿಡುಗಡೆಯಾಯಿತು. ಚಿತ್ರದಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ, ರಾಶಿ ಖನ್ನಾ, ದಿಶಾ ಪಟಾನಿ ಮತ್ತು ಸನ್ನಿ ಹಿಂದುಜಾ ನಟಿಸಿದ್ದಾರೆ. ಬಾಕ್ಸ್ ಆಫೀಸ್‌ನಲ್ಲಿ ಚಿತ್ರವು ಹೇಳಿಕೊಳ್ಳುವಷ್ಟು ಪ್ರದರ್ಶನ ಕಾಣಲಿಲ್ಲ. ಅಂತಾರಾಷ್ಟ್ರೀಯ ವಿಮಾನದ ಅಪಹರಣವು ಯೋಧಾ ಕಾರ್ಯಪಡೆಯ ಅಧಿಕಾರಿಗೆ ಹೇಗೆ ಸವಾಲಾಗುತ್ತದೆ ಎಂಬುದನ್ನು ಚಿತ್ರದಲ್ಲಿ ನೋಡಬಹುದು.
ಚೋರ್ ನಿಕಲ್ ಕೆ ಭಾಗಾ (ನೆಟ್‌ಫ್ಲಿಕ್ಸ್)
ಅಜಯ್ ಸಿಂಗ್ ನಿರ್ದೇಶನ ಮತ್ತು ಅಮರ್ ಕೌಶಿಕ್ ನಿರ್ಮಾಣದ 2023ರ ಥ್ರಿಲ್ಲರ್ ಚಿತ್ರ ಚೋರ್ ನಿಕಲ್ ಕೆ ಭಾಗಾ. ಶರದ್ ಕೇಳ್ಕರ್, ಇಂದ್ರನೀಲ್ ಸೇನ್‌ಗುಪ್ತಾ ಮತ್ತು ಬರುನ್ ಚಂದಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸನ್ನಿ ಕೌಶಲ್ ಮತ್ತು ಯಾಮಿ ಗೌತಮ್ ಮುಖ್ಯ ತಾರಾಗಣದಲ್ಲಿದ್ದಾರೆ. ಫ್ಲೈಟ್ ಅಟೆಂಡೆಂಟ್ ಮತ್ತು ಅವರ ವ್ಯಾಪಾರ ಪಾಲುದಾರ ವಜ್ರಗಳನ್ನು ಕದ್ದು ತಪ್ಪಿಸಿಕೊಳ್ಳಲು ಯತ್ನಿಸುವುದೇ ಚಿತ್ರದ ರೋಚಕ ಕಥೆ. 40 ಸಾವಿರ ಅಡಿ ಎತ್ತರದಲ್ಲಿ ಕಳ್ಳತನವು ವಿಫಲವಾದಾಗ ಏನಾಗುತ್ತದೆ ಎಂಬುದೇ ಕಥೆಯ ರೋಚಕತೆ.
ಝಮೀನ್ (ಡಿಸ್ನಿ+ ಹಾಟ್‌ಸ್ಟಾರ್)
ರೋಹಿತ್ ಶೆಟ್ಟಿ 2003ರ ಆಕ್ಷನ್ ಥ್ರಿಲ್ಲರ್ ಚಿತ್ರ ಝಮೀನ್‌ನೊಂದಿಗೆ ತಮ್ಮ ಚೊಚ್ಚಲ ನಿರ್ದೇಶನವನ್ನು ಮಾಡಿದರು. ಅಜಯ್ ದೇವಗನ್, ಅಭಿಷೇಕ್ ಬಚ್ಚನ್, ಮತ್ತು ಬಿಪಾಶಾ ಬಸು ತಾರೆಯರಾಗಿದ್ದು, ಬಾಕ್ಸ್ ಆಫೀಸ್‌ನಲ್ಲಿ ಚಿತ್ರದ ಪ್ರದರ್ಶನ ಸಾಧಾರಣವಾಗಿತ್ತು.
ಐತೆ (ನೆಟ್‌ಫ್ಲಿಕ್ಸ್ ಮತ್ತು ಪ್ರೈಮ್ ವಿಡಿಯೋ)
ಗಂಗರಾಜು ಗುನ್ನಂ ಅವರ ಸ್ಟುಡಿಯೋ ಜಸ್ಟ್ ಯೆಲ್ಲೋ 2003ರಲ್ಲಿ ಬಿಡುಗಡೆ ಮಾಡಿದ ತೆಲುಗು ಥ್ರಿಲ್ಲರ್ ಚಿತ್ರ ಐತೆ. ಚಂದ್ರಶೇಖರ್ ಯೆಲೇಟಿ ಇದನ್ನು ಬರೆದು ನಿರ್ದೇಶಿಸಿದ್ದಾರೆ. ಕ್ರಿಮಿನಲ್ ಭೂಗತ ಜಗತ್ತಿನಲ್ಲಿ ಹೈಜಾಕ್ ಮಾಡುವುದು ಚಿತ್ರದ ವಿಷಯವಾಗಿದೆ. ಚಿತ್ರವು ಭರ್ಜರಿ ಯಶಸ್ಸು ಕಂಡು, 100 ದಿನ ಓಡಿತ್ತು. ಅದೇ ವರ್ಷ ತೆಲುಗಿನ ಅತ್ಯುತ್ತಮ ಚಲನಚಿತ್ರವಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಪಡೆಯಿತು.