ಸಂಗೀತಪ್ರಿಯರ ಮನತಣಿಸುವ ಅತ್ಯುತ್ತಮ ಮ್ಯೂಸಿಕಲ್ ಸಿನಿಮಾಗಳಿವು; ಹಾಯ್ ಜುನೂನ್‌ಗೆ ಮುನ್ನ ಒಟಿಟಿಯಲ್ಲಿ ನೋಡಿಬಿಡಿ
ಜಾಕ್ವೆಲಿನ್ ಫರ್ನಾಂಡಿಸ್ ಮತ್ತು ನೀಲ್ ನಿತಿನ್ ಮುಖೇಶ್ ಅಭಿನಯದ ಹಾಯ್ ಜುನೂನ್ ಸರಣಿಯು ಮೇ 16ರಂದು ಬಿಡುಗಡೆಯಾಗಲಿದೆ. ಅದಕ್ಕೂ ಮುನ್ನ ಒಟಿಟಿಯಲ್ಲಿ ಕೆಲವೊಂದು ಅತ್ಯುತ್ತಮ ಮ್ಯೂಸಿಕ್ ಡ್ರಾಮಾಗಳನ್ನು ನೀವು ನೋಡಲು ಬಯಸಿದರೆ ಇಲ್ಲೊಂದಿಷ್ಟು ಚಿತ್ರಗಳ ವಿವರ ನೀಡಲಾಗಿದೆ.

ಸಾಕಷ್ಟು ಸಿನಿಮಾ ಪ್ರೇಮಿಗಳು ಸಂಗೀತಮಯವಾಗಿರುವ ಮ್ಯೂಸಿಕಲ್ ಡ್ರಾಮಾ ನೋಡಲು ಬಯಸಬಹುದು. ಹಿತವಾದ ಸಂಗೀತದೊಂದಿಗೆ ಸಾಗುವ ಇಂತಹ ಸಿನಿಮಾ ಅಥವಾ ವೆಬ್‌ಸರಣಿಗಳಲ್ಲಿ ಹಾಡುಗಾರರ ಅಥವಾ ಮ್ಯೂಸಿಕಲ್ ಇನ್‌ಸ್ಟ್ರುಮೆಂಟ್‌ಗಳ ಜತೆ ಒಡನಾಟ ಇರುವವರ ಕಥೆ ಇರುತ್ತದೆ. ಈ ತಿಂಗಳು ಹಾಯ್ ಜುನೂನ್ (ಹೇ ಜುನೂನ್ ಎಂದೂ ಓದಬಹುದು) ಬಿಡುಗಡೆಯಾಗಲಿದೆ. ಜಾಕ್ವೆಲಿನ್ ಫೆರ್ನಾಂಡಿಸ್ ಮತ್ತು ನೀಲ್ ನಿತಿನ್ ಮುಖೇಶ್ ಅವರ ಸಂಗೀತ ನಾಟಕ ಸರಣಿ ಹೈ ಜುನೂನ್ - ಡ್ರೀಮ್, ಡೇರ್, ಡಾಮಿನೇಟ್, ಮೇ 16ರಂದು ಜಿಯೋಹಾಟ್‌ಸ್ಟಾರ್‌ನಲ್ಲಿ ರಿಲೀಸ್ ಆಗುತ್ತಿದೆ. ಇದು ಆಂಡರ್ಸನ್ ಕಾಲೇಜಿನಲ್ಲಿ ಗೋಟ್ ಟ್ರೋಫಿಗಾಗಿ ಸ್ಪರ್ಧಿಸುತ್ತಿರುವ ಎರಡು ಸಂಗೀತ ಕ್ಲಬ್‌ಗಳಾದ ದಿ ಮಿಸ್‌ಫಿಟ್ಸ್ ಮತ್ತು ದಿ ಸೂಪರ್‌ಸಾನಿಕ್ಸ್ ನಡುವಿನ ಸ್ಪರ್ಧೆಯ ಕಥೆ ಹೊಂದಿದೆ. ಇದು ಬಿಡುಗಡೆಯಾಗುವ ಮುನ್ನ ಒಟಿಟಿಯಲ್ಲಿ ಅತ್ಯುತ್ತಮ ಮ್ಯೂಸಿಕಲ್ ಸಿನಿಮಾ ನೋಡಿ.
ತಾಲ್
ಈ ಮ್ಯೂಸಿಕಲ್ ಡ್ರಾಮಾದಲ್ಲಿ ಐಶ್ವರ್ಯಾ ರೈ ನಟಿಸಿದ್ದಾರೆ. ಶ್ರೀಮಂತ ಅನಿವಾಸಿ ಭಾರತೀಯನ ಮಗ ಮಾನವ್ (ಅಕ್ಷಯ್ ಖನ್ನಾ)ಗೆ ಬಡ ಸಂಗೀತ ಶಿಕ್ಷಕಿಯ ಮಗಳು ಮಾನಸಿ (ಐಶ್ವರ್ಯ ರೈ ಬಚ್ಚನ್) ಮೇಲೆ ಲವ್ ಆಗುತ್ತದೆ. ಈ ಚಿತ್ರವು ಸಂಗೀತಮಯವಾಗಿದ್ದು, ಹಲವಾರು ಸ್ಮರಣೀಯ ಹಾಡು ಮತ್ತು ನೃತ್ಯಗಳನ್ನು ಹೊಂದಿದೆ. ಎಆರ್ ರೆಹಮಾನ್ ಮ್ಯೂಸಿಕ್ ಇರುವ ಈ ಸಿನಿಮಾದಲ್ಲಿ ಸರೋಜ್ ಖಾನ್, ಅಹ್ಮದ್ ಖಾನ್ ಮತ್ತು ಶಿಯಾಮಕ್ ದಾವರ್ ನೃತ್ಯ ಸಂಯೋಜನೆ ಇದೆ. ಅಮೆಜಾನ್ ಪ್ರೈಮ್ ವಿಡಿಯೋ ಮತ್ತು ಜೀ5 ಒಟಿಟಿಯಲ್ಲಿ ಈ ಸಿನಿಮಾ ನೋಡಬಹುದು.
ಬ್ಯಾಂಜೊ
ಇದು ಪ್ರತಿಭಾನ್ವಿತ ಬೀದಿಬದಿ ಹಾಡುವ ಸಂಗೀತಗಾರ ತಾರತ್ (ರಿತೇಶ್ ದೇಶಮುಖ್) ಮತ್ತು ಅಮೇರಿಕನ್ ಸಂಗೀತಗಾರ್ತಿ ಕ್ರಿಸ್ಟಿನಾ (ನರ್ಗಿಸ್ ಫಕ್ರಿ) ಸಂಗೀತ ಪ್ರಯಾಣದ ಕಥೆ ಹೊಂದಿದೆ. ಸಂಗೀತ ಉತ್ಸವಕ್ಕಾಗಿ ಬ್ಯಾಂಜೊ ವಾದಕನನ್ನು ಹುಡುಕುತ್ತಿರುವ ಈಕೆಗೆ ಮುಂಬೈ ಕೊಳೆಗೇರಿ ನಿವಾಸಿ ತಾರತ್ ಸಿಗುತ್ತಾನೆ. ಬ್ಯಾಂಡ್ ರಚನೆ ಮತ್ತು ಸಂಗೀತದ ಕನಸಿನ ಜತೆಗೆ ಪ್ರೀತಿಯೂ ಅರಳುತ್ತದೆ. ಅಮೆಜಾನ್ ಪ್ರೈಮ್ ವಿಡಿಯೋ ಮತ್ತು ಜೀ5 ಒಟಿಟಿಯಲ್ಲಿ ಈ ಸಿನಿಮಾ ನೋಡಬಹುದು.
ರಾಕ್‌ಸ್ಟಾರ್
ಇದು ಕೂಡ ಬಾಲಿವುಡ್‌ನ ಜನಪ್ರಿಯ ಮ್ಯೂಸಿಕಲ್ ಡ್ರಾಮಾ. ಈ ಚಿತ್ರವು ರಾಕ್ ಸ್ಟಾರ್ ಆಗುವ ಜನಾರ್ಧನ್ ಜಾಖರ್ (ರಣಬೀರ್ ಕಪೂರ್) ಕನಸು, ಆತನ ಲವ್ ಸ್ಟೋರಿ ಇತ್ಯಾದಿ ವಿಷಯಗಳನ್ನು ಹೊಂದಿದೆ. ಜನಾರ್ಧನ್ ಜನಪ್ರಿಯತೆ ಹೆಚ್ಚುವುದು, ಹೀರ್ (ನರ್ಗಿಸ್ ಫಕ್ರಿ) ಜೊತೆಗಿನ ಅವನ ಪ್ರೇಮ ಸಂಬಂಧ ಮತ್ತು ವೈಯಕ್ತಿಕ ಜೀವನದ ಸವಾಲಿನ ಕಥೆಗಳನ್ನು ಹೊಂದಿದೆ. ಈ ಚಿತ್ರವನ್ನು ಇಮ್ತಿಯಾಜ್ ಅಲಿ ನಿರ್ದೇಶಿಸಿದ್ದಾರೆ. ಇದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಬಳಿಕ ಸೂಪರ್‌ಹಿಟ್ ಆಯಿತು. ಈ ಸಿನಿಮಾ ಜೀ5 ಒಟಿಟಿಯಲ್ಲಿದೆ.
ಹಮ್ ಆಪ್ಕೆ ಹೈ ಕೌನ್
ಹಮ್ ಆಪ್ಕೆ ಹೈ ಕೌನ್ ಚಿತ್ರದ ಹಾಡುಗಳು ಜನಪ್ರಿಯತೆ ಪಡೆದಿವೆ. ಈ ಚಿತ್ರದಲ್ಲಿ ಪ್ರೇಮ್ (ಸಲ್ಮಾನ್ ಖಾನ್) ಮತ್ತು ಸಹೋದರ ರಾಜೇಶ್‌ನ ಅತ್ತಿಗೆ ನಿಶಾ (ಮಾಧುರಿ ದೀಕ್ಷಿತ್) ಪ್ರೀತಿಸುತ್ತಾರೆ. ನಿಶಾಳ ಸಹೋದರಿ ಅನಿರೀಕ್ಷಿತವಾಗಿ ಮೃತಪಟ್ಟಾಗ ಕಥೆ ತಿರುವು ಪಡೆಯುತ್ತದೆ. ಈ ಸಿನಿಮಾ ಅಮೆಜಾನ್ ಪ್ರೈಮ್ ವಿಡಿಯೋ, ನೆಟ್‌ಫ್ಲಿಕ್ಸ್ ಮತ್ತು ಜೀ5ನಲ್ಲಿದೆ.
ಆಶಿಕ್ 2
ಇದನ್ನು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ನೋಡಬಹುದು. ಕಷ್ಟದಲ್ಲಿರುವ ಗಾಯಕ ರಾಹುಲ್ ಜಯ್ಕರ್ (ಆದಿತ್ಯ ರಾಯ್ ಕಪೂರ್) ಮತ್ತು ಅವನ ಶಿಷ್ಯೆ ಆರೋಹಿ ಶಿರ್ಕೆ (ಶ್ರದ್ಧಾ ಕಪೂರ್) ನಡುವಿನ ಸಂಗೀತ ಪ್ರೇಮಕಥೆಯಾಗಿದೆ. ರಾಹುಲ್‌ನ ಕುಡಿತ ಮತ್ತು ದುರಹಂಕಾರವು ಅವರ ಸಂಬಂಧ ಮತ್ತು ವೃತ್ತಿಜೀವನದ ಆಕಾಂಕ್ಷೆಗಳ ಮೇಲೆ ಪರಿಣಾಮ ಬೀರುತ್ತದೆ. ಇದು ಪ್ರೀತಿ, ದ್ವೇಷ ಮತ್ತು ಯಶಸ್ಸಿನ ರೋಲರ್‌ಕೋಸ್ಟರ್‌ಗೆ ಕಾರಣವಾಗುತ್ತದೆ.