ಆಫೀಸ್‌ನಲ್ಲಿ ಎಲ್ಲರ ಮುಂದೆಯೇ ಕನ್ನಿಕಾಗೆ ಕಪಾಳಕ್ಕೆ ಬಾರಿಸಿಯೇ ಬಿಟ್ಟಳು ಭಾಗ್ಯ: ಭಾಗ್ಯಲಕ್ಷ್ಮೀ ಧಾರಾವಾಹಿ
Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿಯ ಮಂಗಳವಾರ ಫೆಬ್ರುವರಿ 11ರ ಸಂಚಿಕೆಯಲ್ಲಿ ಕನ್ನಿಕಾ ತನ್ನ ಆಫೀಸ್‌ನಲ್ಲಿ ಧರ್ಮರಾಜ್ ಮತ್ತು ಕುಸುಮಾಗೆ ಅವಮಾನ ಮಾಡುವುದನ್ನು ಮುಂದುವರಿಸಿದ್ದಾಳೆ. ಸಾಲದ್ದಕ್ಕೆ ಕುಸುಮಾಳ ಕೈ ಹಿಡಿದು ಎಳೆದು ಹೊರಗಡೆ ತಳ್ಳಲು ಯತ್ನಿಸಿದ್ದಾಳೆ. ಆಗ ಅಲ್ಲಿಗೆ ಬಂದ ಭಾಗ್ಯ, ಕನ್ನಿಕಾಳ ಕೆನ್ನೆಗೆ ಬಾರಿಸುತ್ತಾಳೆ.

Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿಯ ಮಂಗಳವಾರ ಫೆಬ್ರುವರಿ 11ರ ಸಂಚಿಕೆಯಲ್ಲಿ ಕುಸುಮಾ ಮತ್ತು ಧರ್ಮರಾಜ್‌ಗೆ ಕನ್ನಿಕಾ ಇನ್ನಿಲ್ಲದ ರೀತಿಯಲ್ಲಿ ಅವಮಾನ ಮಾಡುತ್ತಿದ್ದಾಳೆ. ಇಬ್ಬರೂ ನ್ಯಾಯ ಕೇಳಿಕೊಂಡು ಕನ್ನಿಕಾ ಆಫೀಸ್‌ಗೆ ಹೋಗಿರುತ್ತಾರೆ. ಆಗ ಕನ್ನಿಕಾ ಆಫೀಸ್‌ನ ಉದ್ಯೋಗಿಗಳು ಕೂಡ ಅವಳಿಗೆ ಸಾಥ್ ನೀಡುತ್ತಾ, ಭಾಗ್ಯ ಮಾಡಿದ್ದು ತಪ್ಪು ಎಂದು ವಾದಿಸುತ್ತಾರೆ. ಕುಸುಮಾ ಮತ್ತು ಧರ್ಮರಾಜ್ ಮಾತಿಗೆ ಕನ್ನಿಕಾ ಒಂದಿಷ್ಟೂ ಬೆಲೆ ಕೊಡುವುದಿಲ್ಲ. ಅಲ್ಲದೆ, ಅವರಿಗೆ ಮತ್ತಷ್ಟು ನಿಂದನೆಯ ಮಾತುಗಳನ್ನು ಆಡುತ್ತಾ, ಬೇಸರ ಮೂಡಿಸುತ್ತಾಳೆ. ಅವರ ಬೆಂಬಲಕ್ಕೆ ಅಲ್ಲಿ ಯಾರೂ ಇರುವುದಿಲ್ಲ. ಕನ್ನಿಕಾಳ ಕಿರುಚಾಟದ ಎದುರು, ಕುಸುಮಾ ಮಾತು ಯಾರಿಗೂ ಕೇಳಿಸುವುದಿಲ್ಲ, ತನ್ನ ಸೊಸೆಯನ್ನು ಸಮರ್ಥಿಸಿಕೊಳ್ಳಲು ಪ್ರಯತ್ನಪಟ್ಟರೂ, ಕನ್ನಿಕಾ ಎದುರು ಅದು ಸಾಧ್ಯವಾಗುವುದಿಲ್ಲ.
ತಾಂಡವ್‌ಗೆ ಕಾಫಿ ಕೊಟ್ಟ ಶ್ರೇಷ್ಠಾ
ಆಫೀಸ್‌ನಲ್ಲಿ ತಾಂಡವ್ ತುಂಬಾ ಟೆನ್ಶನ್‌ನಲ್ಲಿ ಕುಳಿತಿರುತ್ತಾನೆ. ಯಾವುದೋ ಕೆಲಸ ಬಾಕಿ ಇದೆ ಎಂದು ಕೊರಗುತ್ತಿರುವಾಗ, ಶ್ರೇಷ್ಠಾ ಅಲ್ಲಿಗೆ ಬರುತ್ತಾಳೆ. ಬರುವಾಗ ಆಕೆ ಮನೆಯಿಂದ ಫ್ಲಾಸ್ಕ್‌ನಲ್ಲಿ ಕಾಫಿ ಮಾಡಿಕೊಂಡು ತಂದಿರುತ್ತಾಳೆ. ಅದನ್ನು ತಾಂಡವ್‌ಗೆ ಕೊಡುತ್ತಾಳೆ. ಕಾಫಿ ಕುಡಿದ ತಾಂಡವ್, ಖುಷಿಪಡುತ್ತಾನೆ. ನಿನಗೋಸ್ಕರ ನಾನು ಮನೆಯಲ್ಲೇ ಕಾಫಿ ಮಾಡಿಕೊಂಡು ಬಂದೆ ಎಂದು ಹೇಳಿ ಶ್ರೇಷ್ಠಾ ಅಲ್ಲಿಂದ ಹೊರಡುತ್ತಾಳೆ. ಹೊರಡುವ ಮೊದಲು, ನಾಳೆ ನಿನಗೊಂದು ಸರ್ಪ್ರೈಸ್ ಇದೆ, ಆಫೀಸ್‌ಗೆ ರಜೆ ಹಾಕಬೇಕು ಎಂದು ಹೇಳಿ ಹೋಗುತ್ತಾಳೆ.
ತನ್ವಿಗೆ ಅವಮಾನ ಮಾಡಿದ ಕ್ಲಾಸ್‌ಮೇಟ್ಸ್
ಸಹಪಾಠಿಯ ಬರ್ತ್‌ಡೇಗೆ ಮೈಸೂರ್ ಪಾಕ್ ನೀಡುವಾಗ ತನ್ವಿ ಎರಡು ಪೀಸ್ ತೆಗೆದುಕೊಂಡಳು, ಅದನ್ನು ಗಮನಿಸಿದ ಅವಳ ಸಹಪಾಠಿಗಳು, ತನ್ವಿ ಯಾವುದೇ ಪಾರ್ಟಿ ಮಿಸ್ ಮಾಡುವುದಿಲ್ಲ, ಯಾರದೇ ಬರ್ತ್‌ಡೇ ಇದ್ದರೂ, ಎರಡೆರಡು ಕೇಕ್ ತೆಗೆದುಕೊಳ್ಳುತ್ತಾಳೆ. ಅವಳ ಬರ್ತ್‌ಡೇ ಪಾರ್ಟಿಗೆ ಯಾರನ್ನೂ ಕರೆಯುವುದಿಲ್ಲ, ಯಾರಿಗೂ ಸ್ವೀಟ್ ಕೂಡ ಕೊಡುವುದಿಲ್ಲ ಎಂದು ಗೇಲಿ ಮಾಡುತ್ತಾರೆ. ಅವರ ಚುಚ್ಚು ಮಾತುಗಳನ್ನು ಕೇಳಿದ ತನ್ವಿಗೆ ಅವಮಾನವಾಗಿ ಅಲ್ಲಿಂದ ಎದ್ದು ಹೋಗುತ್ತಾಳೆ.
ಕನ್ನಿಕಾಗೆ ಕಪಾಳಕ್ಕೆ ಬಾರಿಸಿದ ಭಾಗ್ಯ
ಕನ್ನಿಕಾ ತನ್ನ ಆಫೀಸ್ ಕ್ಯಾಬಿನ್‌ನಿಂದ ಕುಸುಮಾಳ ಕೈ ಹಿಡಿದು ಎಳೆದುಕೊಂಡು ಹೊರಗಡೆ ಕರೆತರುತ್ತಾಳೆ. ಅಲ್ಲಿಯೂ ಅವಮಾನ ಮಾಡಿ, ಹೊರಗಡೆ ತಳ್ಳಲು ಮುಂದಾಗುತ್ತಾಳೆ. ಆಗ ಅಲ್ಲಿಗೆ ಪೂಜಾಳನ್ನು ಕರೆದುಕೊಂಡು ಭಾಗ್ಯ ಬರುತ್ತಾಳೆ. ಆಯತಪ್ಪಿ ಬೀಳಲಿದ್ದ ಕುಸುಮಾಳನ್ನು ಭಾಗ್ಯ ಹಿಡಿದುಕೊಳ್ಳುತ್ತಾಳೆ. ಕನ್ನಿಕಾ ಭಾಗ್ಯಳನ್ನು ಅಲ್ಲಿಯೂ ಅವಮಾನ ಮಾಡಲು ಮುಂದಾಗುತ್ತಾಳೆ. ಆಗ ಭಾಗ್ಯ, ಕನ್ನಿಕಾ ಕಪಾಳಕ್ಕೆ ಬಾರಿಸುತ್ತಾಳೆ. ಕನ್ನಿಕಾಗೆ ಎಲ್ಲರ ಮುಂದೆ ತೀವ್ರ ಅವಮಾನವಾಗುತ್ತದೆ. ಜತೆಗೆ ಅವಳ ಕಚೇರಿ ಸಿಬ್ಬಂದಿ ಕೂಡ ನೋಡುತ್ತಿರುವುದು ಅವಳ ಗಮನಕ್ಕೆ ಬರುತ್ತದೆ. ಅಷ್ಟಕ್ಕೇ ಸುಮ್ಮನಾಗದ ಕನ್ನಿಕಾ, ಮತ್ತೊಮ್ಮೆ ಬಾಯಿ ತೆರೆಯಲು ಸಿದ್ಧಳಾದಾಗ, ಭಾಗ್ಯ ಅವಳ ಬಾಯಿ ಮುಚ್ಚಿಸುತ್ತಾಳೆ. ಅಲ್ಲಿಗೆ ಫೆಬ್ರುವರಿ 11ರ ಸಂಚಿಕೆ ಕೊನೆಯಾಗಿದೆ. ಪ್ರಸ್ತುತ ಭಾಗ್ಯಲಕ್ಷ್ಮಿ ಧಾರಾವಾಹಿ 713ನೇ ಸಂಚಿಕೆ ಮುಗಿಸಿದೆ. ಅತ್ತೆ ಮಾವನಿಗೆ ಅವಮಾನ ಮಾಡಿದ ಕನ್ನಿಕಾಗೆ ಭಾಗ್ಯ ತಕ್ಕ ಶಾಸ್ತಿ ಮಾಡಿದ್ದಾಳೆ, ಭಾಗ್ಯ ಮುಂದೇನು ಮಾಡುತ್ತಾಳೆ ಎಂದು ಮುಂದಿನ ಎಪಿಸೋಡ್‌ನಲ್ಲಿ ತಿಳಿಯಲಿದೆ.
ಭಾಗ್ಯಲಕ್ಷ್ಮೀ ಧಾರಾವಾಹಿ ಪಾತ್ರ ಪರಿಚಯ
ಕುಸುಮಾ - ಪದ್ಮಜಾ ರಾವ್
ಧರ್ಮರಾಜ್ - ಶಶಿಧರ್ ಕೋಟೆ
ಭಾಗ್ಯಾ - ಸುಷ್ಮಾ ಕೆ ರಾವ್
ತಾಂಡವ್ ಸೂರ್ಯವಂಶಿ - ಸುದರ್ಶನ್ ರಂಗಪ್ರಸಾದ್
ಭಾಗ್ಯಾ ತಾಯಿ - ಸುನಿತಾ ಶೆಟ್ಟಿ
ಪೂಜಾ - ಆಶಾ ಅಯ್ಯನರ್
ಶ್ರೇಷ್ಠಾ - ಕಾವ್ಯಾ ಗೌಡ
ತನ್ವಿ - ಅಮೃತಾ ಗೌಡ
ಗುಂಡಣ್ಣ - ನಿಹಾರ್ ಗೌಡ
ಸುಂದರಿ - ಸುನೇತ್ರಾ ಪಂಡಿತ್

ವಿಭಾಗ