ಭಾಗ್ಯಳಿಗೆ ಯಾವುದೇ ಕಾರಣಕ್ಕೂ ಫುಡ್ ಲೈಸನ್ಸ್ ಕೊಡಬಾರದು ಎಂದು ಸೂಚನೆ ಕೊಟ್ಟ ಕನ್ನಿಕಾ: ಭಾಗ್ಯಲಕ್ಷ್ಮೀ ಧಾರಾವಾಹಿ
ಕನ್ನಡ ಸುದ್ದಿ  /  ಮನರಂಜನೆ  /  ಭಾಗ್ಯಳಿಗೆ ಯಾವುದೇ ಕಾರಣಕ್ಕೂ ಫುಡ್ ಲೈಸನ್ಸ್ ಕೊಡಬಾರದು ಎಂದು ಸೂಚನೆ ಕೊಟ್ಟ ಕನ್ನಿಕಾ: ಭಾಗ್ಯಲಕ್ಷ್ಮೀ ಧಾರಾವಾಹಿ

ಭಾಗ್ಯಳಿಗೆ ಯಾವುದೇ ಕಾರಣಕ್ಕೂ ಫುಡ್ ಲೈಸನ್ಸ್ ಕೊಡಬಾರದು ಎಂದು ಸೂಚನೆ ಕೊಟ್ಟ ಕನ್ನಿಕಾ: ಭಾಗ್ಯಲಕ್ಷ್ಮೀ ಧಾರಾವಾಹಿ

Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿಯ ಮಂಗಳವಾರ ಏಪ್ರಿಲ್ 15ರ ಸಂಚಿಕೆಯಲ್ಲಿ ಭಾಗ್ಯ, ಮನೆಯಲ್ಲಿ ಕೈತುತ್ತು ಊಟದ ಸರ್ವಿಸ್ ನೀಡುವ ಉದ್ದೇಶದಿಂದ ಅದಕ್ಕಾಗಿ ಫುಡ್ ಲೈಸನ್ಸ್ ಪಡೆದುಕೊಳ್ಳಲು ಮುಂದಾಗಿದ್ದಾಳೆ. ಆದರೆ ಅವಳಿಗೆ ಅಲ್ಲಿಯೂ ಅಡ್ಡಿಪಡಿಸಲು ಕನ್ನಿಕಾ ಪ್ಲ್ಯಾನ್ ರೂಪಿಸಿದ್ದಾಳೆ.

ಭಾಗ್ಯಲಕ್ಷ್ಮೀ ಧಾರಾವಾಹಿ ಮಂಗಳವಾರ ಏಪ್ರಿಲ್ 15ರ ಸಂಚಿಕೆ
ಭಾಗ್ಯಲಕ್ಷ್ಮೀ ಧಾರಾವಾಹಿ ಮಂಗಳವಾರ ಏಪ್ರಿಲ್ 15ರ ಸಂಚಿಕೆ (Colors Kannada Facebook)

Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿಯ ಮಂಗಳವಾರ ಏಪ್ರಿಲ್ 15ರ ಸಂಚಿಕೆಯಲ್ಲಿ ಭಾಗ್ಯ ಮನೆಯಲ್ಲಿ ಊಟ ತಯಾರಿಸಿ, ಅದನ್ನು ಫುಡ್ ಇನ್ಸ್‌ಪೆಕ್ಟರ್ ಬಳಿ ಪರೀಕ್ಷೆಗೆ ತೆಗೆದುಕೊಂಡು ಹೋಗಿದ್ದಾಳೆ. ಅಲ್ಲಿ ಅವಳು ಹೋದಾಗ, ಮನೆಯಲ್ಲಿ ಸೀಜ್ ಮಾಡಿಕೊಂಡು ಅಧಿಕಾರಿಗಳು ತೆಗೆದುಕೊಂಡು ಬಂದಿದ್ದ ಊಟದ ಡಬ್ಬಿಯನ್ನು ಅಲ್ಲಿನ ಸಿಬ್ಬಂದಿ ಸವಿಯುತ್ತಿರುವುದು ಕಾಣಿಸುತ್ತದೆ. ಅಷ್ಟರಲ್ಲಿ ಅಲ್ಲಿಗೆ ಬಂದ ಅಧಿಕಾರಿಯ ಜತೆ ಭಾಗ್ಯ, ಲೈಸನ್ಸ್‌ಗೆ ಅರ್ಜಿ ಸಲ್ಲಿಸುವುದು ಹೇಗೆ ಎಂದು ಕೇಳುತ್ತಾಳೆ. ಅದಕ್ಕೆ ಆತ, ಅಲ್ಲಿದ್ದ ಸಿಬ್ಬಂದಿ ತೋರಿಸಿ, ಅವರಲ್ಲಿ ಕೇಳಿ ಎನ್ನುತ್ತಾನೆ. ನಂತರ ಭಾಗ್ಯ ಬಳಿ ದುಡ್ಡು ತೆಗೆದುಕೊಂಡು ಎಣಿಸಿಕೊಂಡು, ಜೇಬಿಗೆ ಇಳಿಸುತ್ತಾನೆ.

ಭಾಗ್ಯಳ ಊಟವನ್ನು ಅಲ್ಲಿನ ಸಿಬ್ಬಂದಿ ಬಾಯಿತುಂಬಾ ತಿಂದು ಹೊಗಳುತ್ತಾರೆ. ಖುಷಿಯಿಂದ ಅವರು ಊಟ ಮಾಡುವುದನ್ನು ನೋಡಿ ಭಾಗ್ಯಗೆ ಕಣ್ಣು ತುಂಬಿ ಬರುತ್ತದೆ. ಅಲ್ಲದೆ, ಸಿಬ್ಬಂದಿ, ಅಧಿಕಾರಿಯ ಬಳಿ, ಊಟ ತುಂಬಾ ಚೆನ್ನಾಗಿದೆ, ಇದನ್ನು ಪರೀಕ್ಷೆ ಮಾಡದೆಯೇ ಲೈಸನ್ಸ್ ಕೊಡಬಹುದು, ಈ ಊಟದಲ್ಲಿ ಯಾವುದೇ ತಪ್ಪಾಗಿಲ್ಲ ಎಂದು ಹೇಳುತ್ತಾರೆ. ಆಗ ಅಧಿಕಾರಿ ಕೋಪದಿಂದ, ನನ್ನ ಕೆಲಸ ನೀವು ಮಾಡುವುದು ಬೇಡ, ನನಗೆ ಬುದ್ದಿ ಹೇಳುವುದು ಕೂಡ ಬೇಡ, ನಿಮ್ಮ ಕೆಲಸ ನೀವು ಮಾಡಿ ಎಂದು ಗದರುತ್ತಾನೆ.

ಅಲ್ಲದೆ, ಭಾಗ್ಯ ಕೊಟ್ಟ ಊಟದ ಡಬ್ಬವನ್ನು ಇವತ್ತು ಹಾಗೇ ಉಳಿಸಿಕೊಂಡಿರಿ, ಪರೀಕ್ಷೆಗೆ ಕಳುಹಿಸಬೇಡಿ ಎಂದು ಹೇಳುತ್ತಾನೆ. ಸಿಬ್ಬಂದಿ ಯಾಕೆ ಎಂದು ಪ್ರಶ್ನಿಸಿದಾಗ, ನಾಳೆ ಕೊಟ್ಟರೆ ಊಟ ಹಾಳಾಗಿರುತ್ತದೆ, ಅದರಿಂದ ರಿಪೋರ್ಟ್ ಕೂಡ ಹಾಗೆಯೇ ಬರುತ್ತದೆ. ಅದರಿಂದ ಭಾಗ್ಯ ಊಟ ಚೆನ್ನಾಗಿಲ್ಲ ಎಂದು ಲೈಸನ್ಸ್ ಸಿಗುವುದಿಲ್ಲ, ನನಗೂ ಅದೇ ಬೇಕಾಗಿರುವುದು, ಭಾಗ್ಯಗೆ ಲೈಸನ್ಸ್ ಸಿಗಬಾರದು ಎಂದು ಹೇಳಿ ಹೊರಗಡೆ ಹೋಗುತ್ತಾನೆ. ಸಿಬ್ಬಂದಿ ಅಧಿಕಾರಿಯ ಮಾತು ಕೇಳಿ ಮುಖ ಮುಖ ನೋಡಿಕೊಳ್ಳುತ್ತಾರೆ. ಆದರೆ ಭಾಗ್ಯಗೆ ಇದ್ಯಾವುದರ ಅರಿವಿರುವುದಿಲ್ಲ.

ಇತ್ತ ಆಫೀಸ್‌ನಲ್ಲಿ ಭಾಗ್ಯಳ ಕೈತುತ್ತು ಊಟವನ್ನು ಅರಿಯದೇ ತಿನ್ನುತ್ತಾ, ಹೊಗಳುತ್ತಾ ತಾಂಡವ್ ಹೊಟ್ಟೆ ತುಂಬಾ ಊಟ ಮಾಡಿದ್ದಾನೆ. ಅಲ್ಲದೆ, ಶ್ರೇಷ್ಠಾ ಜೊತೆ ರಾತ್ರಿಗೂ ಇದೇ ಊಟವನ್ನು ಆರ್ಡರ್ ಮಾಡುವಂತೆ ಹೇಳಿದ್ದಾನೆ. ಅದರಂತೆ ಶ್ರೇಷ್ಠಾ, ಕೈತುತ್ತು ಮನೆ ಊಟದ ಸರ್ವಿಸ್‌ಗೆ ಕರೆ ಮಾಡಿದಾಗ ಅತ್ತ ಭಾಗ್ಯ ಕರೆ ಸ್ವೀಕರಿಸಿದ್ದಾಳೆ. ಅದು ಭಾಗ್ಯ ಎಂದು ಶ್ರೇಷ್ಠಾಗೆ ಗೊತ್ತಾಗಿ ಕರೆ ಕಟ್ ಮಾಡಿದ್ದಾಳೆ. ಇಷ್ಟು ದಿನ ತಾಂಡವ್ ರುಚಿಯಾಗಿದೆ ಎಂದು ಹೊಗಳಿ ಊಟ ಸವಿದದ್ದು ಭಾಗ್ಯನ ಕೈತುತ್ತು ಊಟ ಎಂದು ಅವಳಿಗೆ ಅರಿವಾಗುತ್ತದೆ. ಅಷ್ಟರಲ್ಲಿ ಕನ್ನಿಕಾ ಕೂಡ ಕರೆ ಮಾಡಿ, ಭಾಗ್ಯಳ ಮನೆಗೆ ಅಧಿಕಾರಿಗಳು ದಾಳಿ ಮಾಡಿ, ಫುಡ್ ಸೀಜ್ ಮಾಡಿದ್ದಾರೆ. ಅವಳಿಗೆ ಇನ್ನು ಲೈಸನ್ಸ್ ಸಿಗದೇ ಊಟದ ಸರ್ವಿಸ್ ನೀಡಲು ಸಾಧ್ಯವಿಲ್ಲ ಎಂದು ಹೇಳುತ್ತಾಳೆ.

ಅದನ್ನು ಕೇಳಿ ಶ್ರೇಷ್ಠಾ ಮತ್ತು ತಾಂಡವ್ ಖುಷಿಪಡುತ್ತಾರೆ. ಅಲ್ಲಿಗೆ ಭಾಗ್ಯಲಕ್ಷ್ಮೀ ಧಾರಾವಾಹಿಯ ಮಂಗಳವಾರದ ಏಪ್ರಿಲ್ 15ರ ಸಂಚಿಕೆ ಕೊನೆಯಾಗಿದೆ. ಪ್ರಸ್ತುತ ಭಾಗ್ಯಲಕ್ಷ್ಮಿ ಧಾರಾವಾಹಿ 763ನೇ ಸಂಚಿಕೆ ಮುಗಿಸಿದೆ. ಭಾಗ್ಯ ಈಗ ಮತ್ತೆ ತಾಂಡವ್, ಶ್ರೇಷ್ಠಾ ಮತ್ತು ಕನ್ನಿಕಾಳ ಹೊಸ ಸಂಚನ್ನು ಹೇಗೆ ಎದುರಿಸುತ್ತಾಳೆ, ಇನ್ನು ಮುಂದೆ ಏನು ನಡೆಯಲಿದೆ ಎನ್ನುವುದನ್ನು ಮುಂದಿನ ಸಂಚಿಕೆಯಲ್ಲಿ ತಿಳಿಯಬೇಕಿದೆ.

ಭಾಗ್ಯಲಕ್ಷ್ಮೀ ಧಾರಾವಾಹಿ ಪಾತ್ರ ಪರಿಚಯ

ಕುಸುಮಾ - ಪದ್ಮಜಾ ರಾವ್‌

ಧರ್ಮರಾಜ್‌ - ಶಶಿಧರ್‌ ಕೋಟೆ

ಭಾಗ್ಯಾ - ಸುಷ್ಮಾ ಕೆ ರಾವ್‌

ತಾಂಡವ್‌ ಸೂರ್ಯವಂಶಿ - ಸುದರ್ಶನ್‌ ರಂಗಪ್ರಸಾದ್‌

ಭಾಗ್ಯಾ ತಾಯಿ ಸುನಂದಾ- ಸುನಿತಾ ಶೆಟ್ಟಿ

ಪೂಜಾ - ಆಶಾ ಅಯ್ಯನರ್‌

ಶ್ರೇಷ್ಠಾ - ಕಾವ್ಯಾ ಗೌಡ

ತನ್ವಿ - ಅಮೃತಾ ಗೌಡ

ಗುಂಡಣ್ಣ - ನಿಹಾರ್‌ ಗೌಡ

ಸುಂದರಿ - ಸುನೇತ್ರಾ ಪಂಡಿತ್‌

Kiran Kumar I G

TwittereMail
ಕಿರಣ್ ಐ.ಜಿ.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜನರ ಬದುಕು ಸುಧಾರಿಸಬಲ್ಲ ಟೆಕ್‌ ಮತ್ತು ಗ್ಯಾಜೆಟ್ ಇವರ ಆಸಕ್ತಿಯ ಕ್ಷೇತ್ರ. ಯಾವುದೇ ವಿಷಯವಾದರೂ ಶ್ರದ್ಧೆಯಿಂದ ಕಲಿಯಬಲ್ಲೆ, ಬರೆಯಬಲ್ಲೆ ಎನ್ನುವುದು ಇವರ ವಿಶ್ವಾಸ. ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕ ವೆಬ್ ಹಾಗೂ ಟಿವಿ9 ಕನ್ನಡ ಡಿಜಿಟಲ್‌ನ ವಿವಿಧ ವಿಭಾಗಗಳಲ್ಲಿ ಒಟ್ಟು 10 ವರ್ಷ ಕೆಲಸ ಮಾಡಿದ ಅನುಭವ. ಇಮೇಲ್: kiran.kumar@htdigital.in
Whats_app_banner