ಭಾಗ್ಯ ಕೆಲಸ ಮಾಡುವ ರೆಸಾರ್ಟ್‌ನಲ್ಲಿಯೇ ತನ್ವಿ ಹುಟ್ಟುಹಬ್ಬ ಆಚರಿಸುತ್ತಿರುವ ತಾಂಡವ್: ಭಾಗ್ಯಲಕ್ಷ್ಮೀ ಧಾರಾವಾಹಿ
ಕನ್ನಡ ಸುದ್ದಿ  /  ಮನರಂಜನೆ  /  ಭಾಗ್ಯ ಕೆಲಸ ಮಾಡುವ ರೆಸಾರ್ಟ್‌ನಲ್ಲಿಯೇ ತನ್ವಿ ಹುಟ್ಟುಹಬ್ಬ ಆಚರಿಸುತ್ತಿರುವ ತಾಂಡವ್: ಭಾಗ್ಯಲಕ್ಷ್ಮೀ ಧಾರಾವಾಹಿ

ಭಾಗ್ಯ ಕೆಲಸ ಮಾಡುವ ರೆಸಾರ್ಟ್‌ನಲ್ಲಿಯೇ ತನ್ವಿ ಹುಟ್ಟುಹಬ್ಬ ಆಚರಿಸುತ್ತಿರುವ ತಾಂಡವ್: ಭಾಗ್ಯಲಕ್ಷ್ಮೀ ಧಾರಾವಾಹಿ

Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿಯ ಶನಿವಾರ ಫೆಬ್ರುವರಿ 15ರ ಸಂಚಿಕೆಯಲ್ಲಿ ಭಾಗ್ಯ ಅತ್ಯಂತ ದಯನೀಯವಾಗಿ ಬೇಡಿಕೊಂಡು, ರೆಸಾರ್ಟ್‌ನಲ್ಲಿ ಕುಣಿಯುವ ಕೆಲಸ ಗಿಟ್ಟಿಸಿಕೊಂಡಿದ್ದಾಳೆ. ಅವಳ ಮನೆಯವರಿಗೆ ಈ ವಿಚಾರ ತಿಳಿದಿಲ್ಲ, ಮತ್ತೊಂದೆಡೆ ತಾಂಡವ್, ಶ್ರೇಷ್ಠಾ, ತನ್ವಿಯನ್ನು ಕರೆದುಕೊಂಡು ಭಾಗ್ಯ ಕೆಲಸ ಮಾಡುವ ರೆಸಾರ್ಟ್‌ಗೆ ಬಂದಿದ್ದಾನೆ.

ಭಾಗ್ಯಲಕ್ಷ್ಮೀ ಧಾರಾವಾಹಿಯ ಶನಿವಾರ ಫೆಬ್ರುವರಿ 15ರ ಸಂಚಿಕೆ
ಭಾಗ್ಯಲಕ್ಷ್ಮೀ ಧಾರಾವಾಹಿಯ ಶನಿವಾರ ಫೆಬ್ರುವರಿ 15ರ ಸಂಚಿಕೆ (Colors Kannada)

Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿಯ ಶನಿವಾರ ಫೆಬ್ರುವರಿ 15ರ ಸಂಚಿಕೆಯಲ್ಲಿ ಭಾಗ್ಯ ಮತ್ತೊಂದು ಅಹಿತಕರ ಸನ್ನಿವೇಶ ಎದುರಿಸುವ ಪ್ರಸಂಗ ಬಂದಿದೆ. ಭಾಗ್ಯ ಮನೆಯಲ್ಲಿ ಆಕೆ ಕೆಲಸ ಹುಡುಕಿ, ರೆಸಾರ್ಟ್‌ನಲ್ಲಿ ಸೇರಿರುವ ವಿಚಾರ ತಿಳಿದಿಲ್ಲ. ಮತ್ತೊಂದೆಡೆ ತಾಂಡವ್ ಶ್ರೇಷ್ಠಾ ಜತೆ ಸೇರಿಕೊಂಡು, ತನ್ವಿ ಕಾಲೇಜಿನಲ್ಲಿ ಭರ್ಜರಿಯಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾನೆ. ತನ್ವಿಯನ್ನು ಕರೆದುಕೊಂಡು ನಂತರ ಅವರು ರೆಸಾರ್ಟ್‌ಗೆ ತೆರಳಿದ್ದಾರೆ. ತನ್ವಿ ಮತ್ತು ಅವಳ ಸಹಪಾಠಿಗಳನ್ನು ಕೂಡ ಪಾರ್ಟಿಗೆ ಕರೆದಿದ್ದಾರೆ. ಅವರೆಲ್ಲರೂ ಖುಷಿ ಖುಷಿಯಾಗಿ ಪಾರ್ಟಿಗೆ ತೆರಳಿದ್ದಾರೆ. ರೆಸಾರ್ಟ್‌ನಲ್ಲಿ ಈಗಾಗಲೇ ಒಂದು ಬರ್ತ್‌ಡೇ ಪಾರ್ಟಿಯಲ್ಲಿ ಕುಣಿದಿರುವ ಭಾಗ್ಯ ತುಂಬಾ ಸುಸ್ತಾಗಿದ್ದಾಳೆ. ಸ್ವಲ್ಪ ವಿಶ್ರಾಂತಿಗೆ ಎಂದು ಕುಳಿತ ಅವಳಿಗೆ ಮ್ಯಾನೇಜರ್ ಬಂದು ಬೈದಿದ್ದಾರೆ. ಹೀಗಾಗಿ ಮತ್ತೆ ಕುಣಿದು ಜನರನ್ನು ರಂಜಿಸಲು ಭಾಗ್ಯ ತೆರಳಿದ್ದಾಳೆ.

ಭಾಗ್ಯ ಮನೆಯಲ್ಲಿ ಕಳವಳ

ಈಗಾಗಲೇ ಬಹಳ ಹೊತ್ತಾಯಿತು, ಯಾಕೆ ಮಗಳು ಇನ್ನೂ ಮನೆಗೆ ಬಂದಿಲ್ಲ ಎಂದು ಭಾಗ್ಯ ತಾಯಿ ಚಿಂತಿತರಾಗಿದ್ದಾರೆ. ಮತ್ತೊಂದೆಡೆ ಕುಸುಮಾ ಮತ್ತು ಧರ್ಮರಾಜ್ ಕೂಡ ಭಾಗ್ಯ ಮನೆಗೆ ಬಂದಿಲ್ಲ ಎಂದು ಚಿಂತೆಗೆ ಒಳಗಾಗಿದ್ದಾರೆ. ಅಷ್ಟರಲ್ಲಿ ಭಾಗ್ಯ, ಪೂಜಾಗೆ ಕರೆ ಮಾಡಿದ್ದಾಳೆ. ತಾನೊಂದು ಕಡೆ ಕೆಲಸಕ್ಕೆ ಸೇರಿದ್ದೇನೆ, ಅದು ಏನು ಹೇಗೆ ಎಂದು ಆಮೇಲೆ ಹೇಳುವೆ, ಮೊದಲು ನೀನು ಮನೆ ಪಕ್ಕದ ಅಂಗಡಿಯಿಂದ ತನ್ವಿ ಬರ್ತ್‌ಡೇಗೆ ಬೇಕಾದ ವಸ್ತುಗಳನ್ನು ಖರೀದಿಸಿ ತೆಗೆದುಕೊಂಡು ಹೋಗು, ಮನೆಯಲ್ಲಿ ತಯಾರಿ ಮಾಡು, ನಾನು ಬಂದು ದುಡ್ಡು ಕೊಡುತ್ತೇನೆ ಎಂದು ಹೇಳುತ್ತಾಳೆ. ಅದಕ್ಕೆ ಪೂಜಾ ಸರಿ ಅಕ್ಕ ಎಂದು ಹೇಳುತ್ತಾಳೆ.

ಭಾಗ್ಯ ಕೆಲಸ ಮಾಡುವ ರೆಸಾರ್ಟ್‌ಗೆ ಬಂದ ತಾಂಡವ್

ತನ್ವಿಯ ಹುಟ್ಟುಹಬ್ಬವನ್ನು ಅತ್ಯಂತ ಸಂಭ್ರಮದಿಂದ ಆಚರಿಸಬೇಕು ಎಂಬ ಉದ್ದೇಶದಿಂದ ತಾಂಡವ್, ತನ್ವಿ ಮತ್ತು ಶ್ರೇಷ್ಠಾಳನ್ನು ಕರೆದುಕೊಂಡು, ಭಾಗ್ಯ ಕೆಲಸ ಮಾಡುವ ರೆಸಾರ್ಟ್‌ಗೆ ಕರೆದುಕೊಂಡು ಬಂದಿದ್ದಾನೆ. ಅಲ್ಲಿ ಹುಟ್ಟುಹಬ್ಬ ಆಚರಣೆಗೆ ಎಲ್ಲ ರೀತಿಯ ಏರ್ಪಾಟು ಆಗಿದೆ. ತನ್ವಿಯ ಸಹಪಾಠಿಗಳು ಕೂಡ ಬಂದಿದ್ದಾರೆ. ತನ್ವಿ, ಕಡು ಗುಲಾಬಿ ಬಣ್ಣದ ಬಾರ್ಬಿ ಉಡುಗೆ ಧರಿಸಿ, ಮಿರ ಮಿರ ಮಿಂಚುತ್ತಿದ್ದಾಳೆ, ರಾಜಕುಮಾರಿ ರೀತಿ ಕಾಣಿಸುತ್ತಿದ್ದಾಳೆ, ಅಂದವಾಗಿ ಸಿಂಗಾರಗೊಂಡು ರೆಡಿಯಾದ ಅವಳನ್ನು ಕಂಡು ತಾಂಡವ್‌ಗೆ ಖುಷಿಯಾಗಿದೆ. ಅವಳ ಜತೆ ಫೋಟೊಶೂಟ್ ಮಾಡಿಸಿದ್ದಾನೆ. ನಂತರ ಸರ್‌ಪ್ರೈಸ್ ಇದೆ ಎಂದು ಹೇಳಿ ಅವಳನ್ನು ಕರೆದುಕೊಂಡು ವೇದಿಕೆಗೆ ಕರೆದುಕೊಂಡು ಹೋಗಿದ್ದಾನೆ.

ವೇದಿಕೆಗೆ ಕೇಕ್ ತಂದ ಭಾಗ್ಯ

ಅದೇ ವೇದಿಕೆಗೆ ಭಾಗ್ಯ ತನ್ವಿ ಬರ್ತ್‌ಡೇ ಕೇಕ್ ತೆಗೆದುಕೊಂಡು ಹೋಗಲು ಅವಳ ಮ್ಯಾನೇಜರ್ ಸೂಚಿಸಿದ್ದಾರೆ. ವೇದಿಕೆಯಲ್ಲಿ ತನ್ವಿ, ತಾಂಡವ್ ಮತ್ತು ಶ್ರೇಷ್ಠಾ ಇರುವುದನ್ನು ಭಾಗ್ಯ ಗಮನಿಸಿ ಶಾಕ್‌ಗೆ ಒಳಗಾಗಿದ್ದಾಳೆ. ಅಲ್ಲಿಗೆ ಫೆಬ್ರುವರಿ 15ರ ಸಂಚಿಕೆ ಕೊನೆಯಾಗಿದೆ. ಪ್ರಸ್ತುತ ಭಾಗ್ಯಲಕ್ಷ್ಮಿ ಧಾರಾವಾಹಿ 717ನೇ ಸಂಚಿಕೆ ಮುಗಿಸಿದೆ. ಒಂದೆಡೆ ಭಾಗ್ಯ ತನ್ವಿ ಬರ್ತ್‌ಡೇಗೆ ಹಣ ಹೊಂದಿಸಲು ಪರದಾಡುತ್ತಿದ್ದರೆ, ತನ್ವಿ ಇಲ್ಲಿ ಭರ್ಜರಿ ಹುಟ್ಟುಹಬ್ಬ ಆಚರಿಸುತ್ತಿದ್ದಾಳೆ. ಹೀಗಾಗಿ ಭಾಗ್ಯ ಮುಂದೇನು ಮಾಡುತ್ತಾಳೆ ಎಂದು ಮುಂದಿನ ಎಪಿಸೋಡ್‌ನಲ್ಲಿ ತಿಳಿಯಲಿದೆ.

 

ಭಾಗ್ಯಲಕ್ಷ್ಮೀ ಧಾರಾವಾಹಿ ಪಾತ್ರ ಪರಿಚಯ

ಕುಸುಮಾ - ಪದ್ಮಜಾ ರಾವ್‌

ಧರ್ಮರಾಜ್‌ - ಶಶಿಧರ್‌ ಕೋಟೆ

ಭಾಗ್ಯಾ - ಸುಷ್ಮಾ ಕೆ ರಾವ್‌

ತಾಂಡವ್‌ ಸೂರ್ಯವಂಶಿ - ಸುದರ್ಶನ್‌ ರಂಗಪ್ರಸಾದ್‌

ಭಾಗ್ಯಾ ತಾಯಿ - ಸುನಿತಾ ಶೆಟ್ಟಿ

ಪೂಜಾ - ಆಶಾ ಅಯ್ಯನರ್‌

ಶ್ರೇಷ್ಠಾ - ಕಾವ್ಯಾ ಗೌಡ

ತನ್ವಿ - ಅಮೃತಾ ಗೌಡ

ಗುಂಡಣ್ಣ - ನಿಹಾರ್‌ ಗೌಡ

ಸುಂದರಿ - ಸುನೇತ್ರಾ ಪಂಡಿತ್‌

Kiran Kumar I G

TwittereMail
ಕಿರಣ್ ಐ.ಜಿ.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜನರ ಬದುಕು ಸುಧಾರಿಸಬಲ್ಲ ಟೆಕ್‌ ಮತ್ತು ಗ್ಯಾಜೆಟ್ ಇವರ ಆಸಕ್ತಿಯ ಕ್ಷೇತ್ರ. ಯಾವುದೇ ವಿಷಯವಾದರೂ ಶ್ರದ್ಧೆಯಿಂದ ಕಲಿಯಬಲ್ಲೆ, ಬರೆಯಬಲ್ಲೆ ಎನ್ನುವುದು ಇವರ ವಿಶ್ವಾಸ. ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕ ವೆಬ್ ಹಾಗೂ ಟಿವಿ9 ಕನ್ನಡ ಡಿಜಿಟಲ್‌ನ ವಿವಿಧ ವಿಭಾಗಗಳಲ್ಲಿ ಒಟ್ಟು 10 ವರ್ಷ ಕೆಲಸ ಮಾಡಿದ ಅನುಭವ. ಇಮೇಲ್: kiran.kumar@htdigital.in
Whats_app_banner