ನಾನೇ ಕೆಲಸ ಬಿಡ್ತೀನಿ ಎಂದ ಭಾಗ್ಯ; ಶ್ರೇಷ್ಠಾ ಮತ್ತು ಕನ್ನಿಕಾಳ ಕುತಂತ್ರಕ್ಕೆ ಗೆಲುವು : ಭಾಗ್ಯಲಕ್ಷ್ಮೀ ಧಾರಾವಾಹಿ
Bhagyalakshmi Serial: ಭಾಗ್ಯಾಳನ್ನು ಕೆಲಸದಿಂದ ತೆಗೆಯಲು ಕನ್ನಿಕಾ ಮತ್ತು ಶ್ರೇಷ್ಠಾ ರೂಪಿಸಿದ ಪ್ಲ್ಯಾನ್ ಸಕ್ಸಸ್ ಆಗಿದೆ. ಕನ್ನಿಕಾಳ ಬ್ಲ್ಯಾಕ್‌ಮೇಲ್‌ಗೆ ಬಲಿಯಾದ ಭಾಗ್ಯ, ತಾನು ಕೆಲಸ ಬಿಡಲು ತಯಾರಾಗಿದ್ದೇನೆ ಎಂದು ಹೇಳುತ್ತಾಳೆ, ಅದನ್ನೇ ಕನ್ನಿಕಾ ಹೊರಗಡೆ ಬಂದು ಮಾಧ್ಯಮದವರ ಮುಂದೆ ಹೇಳುತ್ತಾಳೆ.

Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿಯ ಶನಿವಾರ ಫೆಬ್ರುವರಿ 1ರ ಸಂಚಿಕೆಯಲ್ಲಿ ಕಥಾನಾಯಕಿ ಭಾಗ್ಯಾಗೆ ಮತ್ತೊಮ್ಮೆ ಸಂಕಷ್ಟ ಎದುರಾಗಿದೆ. ಭಾಗ್ಯಾಳ ಶತ್ರುಗಳಾಗಿರುವ ಶ್ರೇಷ್ಠಾ ಮತ್ತು ಕನ್ನಿಕಾ, ಅವಳ ಕೆಲಸವನ್ನು ಕಿತ್ತುಕೊಳ್ಳುವ ಪ್ಲ್ಯಾನ್ ರೂಪಿಸಿದ್ದರು. ಹಾಗೆ ಮಾಡಿದರೆ, ಅವಳಿಗೆ ಹಣಕಾಸಿನ ನೆರವು ಇರುವುದಿಲ್ಲ ಮತ್ತು ಅದರಿಂದ ಸಮಸ್ಯೆ ಎದುರಾಗುತ್ತದೆ. ಮುಖ್ಯವಾಗಿ ಕುಟುಂಬವನ್ನು ಸಾಕುತ್ತಿರುವ ಅವಳಿಗೆ ಸಂಕಷ್ಟ ಬರುತ್ತದೆ ಎಂದು ಅವರು ಸಂಚು ಮಾಡಿದ್ದರು. ಅದರಂತೆ ಹೋಟೆಲ್‌ಗೆ ಬಂದ ವಿಐಪಿ ಅತಿಥಿಗೆ ಆರೋಗ್ಯ ಸಮಸ್ಯೆಯ ಪ್ರಹಸನ ಸೃಷ್ಟಿಸಿ, ಭಾಗ್ಯಾ ಕೆಲಸ ಕಳೆದುಕೊಳ್ಳುವಂತೆ ಮಾಡಿದ್ದಾರೆ. ಅಲ್ಲದೆ, ಮಾಧ್ಯಮದವರು ಕೂಡ ಹೋಟೆಲ್ ಮುಂದೆ ಕಾಯುತ್ತಿದ್ದಾರೆ. ಮತ್ತೊಂದೆಡೆ ವಿಐಪಿ ಅತಿಥಿಯ ಕಡೆಯವರು ಎಂದು ಹೇಳಿಕೊಂಡು ಒಂದಷ್ಟು ಮಂದಿ ಹೊಟೆಲ್ ಹೊರಗಡೆ ಗಲಾಟೆ ಮಾಡುತ್ತಿದ್ದಾರೆ.
ಭಾಗ್ಯಾಗೆ ಬೆಂಬಲವಾಗಿ ನಿಂತ ಸಹೋದ್ಯೊಗಿಗಳು
ಹೋಟೆಲ್‌ನ ಅಡುಗೆಯ ಉಸ್ತುವಾರಿ ಹೊಂದಿದ್ದ ಭಾಗ್ಯಾಗೆ ಅವಳ ಸಹೋದ್ಯೋಗಿಗಳು ಬೆಂಬಲವಾಗಿ ನಿಲ್ಲುತ್ತಾರೆ. ಆದರೆ ಆಗ ಕನ್ನಿಕಾ, ನೀನು ಕೆಲಸ ಬಿಡದಿದ್ದರೆ, ಇವರೆಲ್ಲರ ಕೆಲಸವನ್ನು ಕೂಡ ನಾನು ಕಿತ್ತುಕೊಳ್ಳುತ್ತೇನೆ ಎಂದು ಹೆದರಿಸುತ್ತಾಳೆ. ಅಲ್ಲಿಯವರೆಗೆ ಕೆಲಸ ಬಿಡುವುದಿಲ್ಲ, ತನಿಖೆಯಾಗಲಿ ಎಂದು ಹೇಳುತ್ತಿದ್ದ ಭಾಗ್ಯ, ಅವರ ಕೆಲಸ ಕಿತ್ತುಕೊಳ್ಳುವುದು ಬೇಡ, ನಿನ್ನ ಸೇಡು ತೀರಲಿ, ಇವರ ಕೆಲಸವೂ ಉಳಿಯಲಿ, ನಾನೇ ಕೆಲಸ ಬಿಡುತ್ತೇನೆ ಎಂದು ಹೇಳುತ್ತಾಳೆ. ಆಗ ಆಕೆಯ ಸಹೋದ್ಯೋಗಿಗಳು, ನೀವೇನೂ ತಪ್ಪು ಮಾಡಿಲ್ಲ, ಆದರೂ ಯಾಕೆ ಕೆಲಸ ಬಿಡುತ್ತೀರಿ, ತಪ್ಪು ನಮ್ಮದು, ನಾವೇ ಕೆಲಸ ಬಿಟ್ಟು ಹೋಗುತ್ತೇವೆ ಎನ್ನುತ್ತಾರೆ. ಆದರೆ ಅವರ ಕೆಲಸ ಕಸಿದುಕೊಳ್ಳಲು ಭಾಗ್ಯಾಗೆ ಇಷ್ಟವಿಲ್ಲ, ಅಲ್ಲದೆ, ಇದು ಕನ್ನಿಕಾ ಕುತಂತ್ರ ಮತ್ತು ನನ್ನನ್ನು ಕೆಲಸದಿಂದ ತೆಗೆದುಹಾಕಲು ಮಾಡಿದ ಸಂಚು ಎಂದು ಭಾಗ್ಯಾಗೆ ಅರಿವಾಗುತ್ತದೆ. ಹೀಗಾಗಿ ನಾನೇ ಕೆಲಸ ಬಿಡುತ್ತೇನೆ, ಅವರೆಲ್ಲಾ ಇಲ್ಲೇ ಇರಲಿ ಎಂದು ಹೇಳುತ್ತಾಳೆ. ಅದನ್ನು ಕೇಳಿ ಕನ್ನಿಕಾಗೆ ಖುಷಿಯಾಗುತ್ತದೆ. ತನ್ನ ಪ್ಲ್ಯಾನ್ ಯಶಸ್ವಿಯಾಗಿದ್ದಕ್ಕೆ ಮನಸ್ಸಿನಲ್ಲಿಯೇ ಖುಷಿ ಪಡುತ್ತಾಳೆ.
ತಾಂಡವ್‌ಗೆ ಉರಿಸಿದ ಮನೆಯವರು
ಒಂದೆಡೆ ತಾಂಡವ್, ಶ್ರೇಷ್ಠಾಳ ಬೆಸ್ಟ್‌ಫ್ರೆಂಡ್‌ನ ಕಿರಿಕಿರಿಯಿಂದ ರೋಸಿಹೋಗಿದ್ದಾನೆ. ಪಾರ್ಕ್‌ನಲ್ಲಿ ಅವನು ಮಾಡಿದ ಕೀಟಲೆ, ತಾಂಡವ್‌ಗೆ ಕೋಪ ತರಿಸಿದೆ. ಅಲ್ಲಿಂದ ಅವನನ್ನು ಶ್ರೇಷ್ಠಾ ಮನೆಗೆ ಕರೆದುಕೊಂಡು ಬಂದಿದ್ದಾಳೆ. ಮನೆಗೆ ಬಂದ ತಾಂಡವ್‌ಗೆ ಪೂಜಾ, ಅಕ್ಕ ಕಾರ್ ತೆಗೆದುಕೊಂಡ ವಿಚಾರವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿ, ಟ್ಯಾಗ್ ಮಾಡಿ ಹೇಳುತ್ತಾಳೆ. ಅದನ್ನು ಕೇಳಿ, ಸ್ಟೋರಿ ನೋಡಿದ ತಾಂಡವ್‌ಗೆ ಮತ್ತಷ್ಟು ಕೋಪ ಬರುತ್ತದೆ. ಅಷ್ಟಕ್ಕೇ ಸುಮ್ಮನಾಗದ ಸುಂದರಿ ಮತ್ತು ಕುಸುಮಾ, ತಾಂಡವ್ ಬಳಿ ನೀನು ಮಾಡದೇ ಇರುವುದನ್ನು ನಮ್ಮ ಸೊಸೆ ಮಾಡಿದ್ದಾಳೆ. ನೀನು ಏನೂ ಮಾಡಿಲ್ಲ ಎಂದು ಉರಿಸುತ್ತಾರೆ. ಅದನ್ನು ಕೇಳಿ ತಾಂಡವ್‌ಗೆ ಕೋಪ ಬಂದರೂ, ಏನೂ ಹೇಳಲಾಗದೇ ಸುಮ್ಮನಾಗುತ್ತಾನೆ.
ಇದನ್ನೂ ಓದಿ: ಮನೆಗೆ ಮರಳಿದ ಲಕ್ಷ್ಮೀ; ಗೊಂಬೆಯಲ್ಲೂ ಕ್ಯಾಮೆರಾ ಕಂಡು ಹೆದರಿದ ಜಾಹ್ನವಿ: ಲಕ್ಷ್ಮೀ ನಿವಾಸ ಧಾರಾವಾಹಿ
ಮಾಧ್ಯಮಕ್ಕೆ ಹೇಳಿಕೆ ನೀಡಿದ ಕನ್ನಿಕಾ
ಭಾಗ್ಯಾ ಜತೆ ಮಾತುಕತೆ ಮುಗಿಸಿ, ಹೊರಗಡೆ ಬಂದ ಕನ್ನಿಕಾ, ಮಾಧ್ಯಮದವರನ್ನು ಕರೆಯುತ್ತಾಳೆ. ಹೋಟೆಲ್‌ನಲ್ಲಿ ನಡೆದ ಅಚಾತುರ್ಯವನ್ನು ಸರಿಪಡಿಸಿದ್ದೇನೆ, ಸಮಸ್ಯೆಗೆ ಕಾರಣವಾದವರನ್ನು ಕೆಲಸದಿಂದ ತೆಗೆಯುತ್ತಿದ್ದೇನೆ. ಇಷ್ಟಕ್ಕೆಲ್ಲಾ ಕಾರಣ ಭಾಗ್ಯ ಎಂದು ಅವಳತ್ತ ಕೈತೋರಿಸುತ್ತಾಳೆ. ಭಾಗ್ಯಾಗೆ ಅಲ್ಲಿ ಹೇಳಿಕೆ ನೀಡುವ ಅವಕಾಶವೇ ದೊರೆಯುವುದಿಲ್ಲ. ಅಲ್ಲಿಗೆ ಫೆಬ್ರುವರಿ 1ರ ಸಂಚಿಕೆ ಕೊನೆಯಾಗಿದೆ. ಪ್ರಸ್ತುತ ಭಾಗ್ಯಲಕ್ಷ್ಮಿ ಧಾರಾವಾಹಿ 703ನೇ ಸಂಚಿಕೆ ಮುಗಿಸಿದೆ. ಕೆಲಸ ಕಳೆದುಕೊಂಡ ಭಾಗ್ಯಾ ಮುಂದೇನು ಮಾಡುತ್ತಾಳೆ? ಭಾಗ್ಯಾಗೆ ಮುಂದೇನು ಸಂಕಟ ಕಾದಿದೆ? ಯಾವ ರೀತಿಯಲ್ಲಿ ತನ್ನ ಕುಟುಂಬವನ್ನು ಸಾಕುತ್ತಾಳೆ? ಮುಂದಿನ ಎಪಿಸೋಡ್‌ನಲ್ಲಿ ತಿಳಿಯಲಿದೆ.
ಇದನ್ನೂ ಓದಿ: ಸಂತೋಷ್ ತಂದೆಯೇ ಶ್ರೀನಿವಾಸ್ ಎಂದು ಅರಿತ ಮೇಸ್ತ್ರಿ; ಸಿದ್ದೇಗೌಡ್ರನ್ನ ಮಾತಲ್ಲೇ ಮಣಿಸಿದ ಜವರೇಗೌಡ್ರು: ಲಕ್ಷ್ಮೀ ನಿವಾಸ ಧಾರಾವಾಹಿ
ಭಾಗ್ಯಲಕ್ಷ್ಮೀ ಧಾರಾವಾಹಿ ಪಾತ್ರ ಪರಿಚಯ
ಕುಸುಮಾ - ಪದ್ಮಜಾ ರಾವ್
ಧರ್ಮರಾಜ್ - ಶಶಿಧರ್ ಕೋಟೆ
ಭಾಗ್ಯಾ - ಸುಷ್ಮಾ ಕೆ ರಾವ್
ತಾಂಡವ್ ಸೂರ್ಯವಂಶಿ - ಸುದರ್ಶನ್ ರಂಗಪ್ರಸಾದ್
ಭಾಗ್ಯಾ ತಾಯಿ - ಸುನಿತಾ ಶೆಟ್ಟಿ
ಪೂಜಾ - ಆಶಾ ಅಯ್ಯನರ್
ಶ್ರೇಷ್ಠಾ - ಕಾವ್ಯಾ ಗೌಡ
ತನ್ವಿ - ಅಮೃತಾ ಗೌಡ
ಗುಂಡಣ್ಣ - ನಿಹಾರ್ ಗೌಡ
ಸುಂದರಿ - ಸುನೇತ್ರಾ ಪಂಡಿತ್

ವಿಭಾಗ