ಕೈತುತ್ತು.. ಹೊಸ ಸಾಹಸಕ್ಕೆ ಮುಂದಾದಳು ಭಾಗ್ಯ; ಮನೆಮನೆಗೆ ಊಟದ ಬುತ್ತಿ ತಲುಪಿಸುವ ಯೋಜನೆ: ಭಾಗ್ಯಲಕ್ಷ್ಮೀ ಧಾರಾವಾಹಿ
Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿಯ ಶುಕ್ರವಾರ ಮಾರ್ಚ್ 21ರ ಸಂಚಿಕೆಯಲ್ಲಿ ಭಾಗ್ಯ ಮತ್ತು ಮನೆಯವರ ಜೊತೆ ತನ್ವಿ ರೆಸಾರ್ಟ್‌ಗೆ ಟ್ರಿಪ್ ಹೋಗುವ ವಿಚಾರಕ್ಕೆ ಸಂಬಂಧಿಸಿ ಕಿರಿಕಿರಿ ಮಾಡಿದ್ದಾಳೆ. ಆದರೆ ಅವಳಿಗೆ ಹೋಗಲು ಮನೆಯವರು ಅನುಮತಿ ನೀಡಿಲ್ಲ, ಹೀಗಾಗಿ ತನ್ವಿ ಕೋಪಗೊಂಡಿದ್ದಾಳೆ.

Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿಯ ಶುಕ್ರವಾರ ಮಾರ್ಚ್ 21ರ ಸಂಚಿಕೆಯಲ್ಲಿ ತನ್ವಿಗೆ ಗೆಳತಿಯರ ಜತೆ ರೆಸಾರ್ಟ್‌ಗೆ ಟ್ರಿಪ್ ಹೋಗುವುದೇ ದೊಡ್ಡ ಸಮಸ್ಯೆಯಾಗಿದೆ. ಮನೆಯಲ್ಲಿ ಅನುಮತಿ ಸಿಗದಿರುವುದು ಒಂದೆಡೆಯಾದರೆ, ಮತ್ತೊಂದೆಡೆ ಅಮ್ಮ ಅನುಮತಿ ನೀಡುತ್ತಾರೋ ಇಲ್ಲವೋ, ಅಜ್ಜಿ ಮತ್ತು ತಾತ ಏನು ಹೇಳುತ್ತಾರೆ ಎನ್ನುವುದೇ ಅವಳಿಗೆ ಈಗ ಕಿರಿಕಿರಿ ಅನ್ನಿಸಿದೆ. ಹೀಗಾಗಿ ಅವಳು ಅಜ್ಜಿ ಕುಸುಮಾ ಮತ್ತು ಪೂಜಾ ಒಟ್ಟಿಗೆ ಇರುವಾಗ ಮೆಲ್ಲನೇ ಹೋಗಿ ಅನುಮತಿ ಕೇಳಿದ್ದಾಳೆ. ಆದರೆ ಅಜ್ಜಿ ಕುಸುಮಾ, ಅವಳ ಮಾತು ಕೇಳುತ್ತಲೇ ಕೋಪಗೊಂಡಿದ್ದಾರೆ. ನೀವು ಹುಡುಗಿಯರೇ ಸೇರಿಕೊಂಡು ಎಲ್ಲಿಗೂ ಹೋಗುವುದು ಬೇಡ. ಸುಮ್ಮನೆ ಮನೆಯಲ್ಲಿ ಬಿದ್ದಿರು ಎಂದು ಜೋರು ಮಾಡುತ್ತಾರೆ.
ಅಜ್ಜಿಯ ಮಾತು ಕೇಳಿ ತನ್ವಿಗೆ ಬೇಸರವಾಗಿದೆ, ಇವರ ಬಳಿ ಮಾತನಾಡಿ ಪ್ರಯೋಜನವಿಲ್ಲ ಎಂದು ಮತ್ತೆ ಅಮ್ಮನ ಬಳಿ ತೆರಳುತ್ತಾಳೆ. ಅಮ್ಮನ ಜೊತೆ ಹಾಗೇ ಮಾತನಾಡುತ್ತಾ, ಅವರನ್ನು ಮಾತಿಗೆ ಎಳೆಯುತ್ತಾಳೆ. ನಂತರ ಮೆಲ್ಲನೆ, ನನಗೆ ಈಗ ರೆಸಾರ್ಟ್ ಪ್ರವಾಸಕ್ಕೆ ಹೋಗಲು ಅನುಮತಿ ಬೇಕಿದೆ, ಒಂದು ದಿನ ಅಲ್ಲಿಯೇ ರಾತ್ರಿ ತಂಗಿದ್ದು, ನಂತರ ಮನೆಗೆ ವಾಪಸ್ ಬರುತ್ತೇನೆ ಎಂದು ಹೇಳುತ್ತಾಳೆ. ಅದಕ್ಕೆ ಭಾಗ್ಯ ಅನುಮತಿ ಕೊಡುವುದಿಲ್ಲ. ನೀವು ಹುಡುಗಿಯರೇ ಹಾಗೆಲ್ಲ ಹೊರಗೆ ಹೋಗುವುದು, ರಾತ್ರಿ ತಂಗುವುದು ಎಷ್ಟು ಸರಿ? ಎಂದು ಪ್ರಶ್ನಿಸುತ್ತಾಳೆ. ಅವಳ ಮಾತಿನಿಂದ ತನ್ವಿಗೆ ಅಮ್ಮನೂ ಅನುಮತಿ ಕೊಡುವುದಿಲ್ಲ ಎಂದು ಖಾತರಿಯಾಗುತ್ತದೆ, ಸಪ್ಪೆ ಮೋರೆ ಹಾಕಿಕೊಂಡು ಅವಳು ಹೊರಗೆ ಹೋಗುತ್ತಾಳೆ.
ಇತ್ತ ಮನೆಯಲ್ಲಿ ಭಾಗ್ಯ, ಹೊಸ ಪ್ಲ್ಯಾನ್ ಮಾಡಿದ್ದು, ಮನೆ ಮನೆಗೆ ಊಟದ ಡಬ್ಬ ತಲುಪಿಸುವ ಬಗ್ಗೆ ಯೋಜನೆ ರೂಪಿಸಿದ್ದಾಳೆ. ಅದಕ್ಕೆ ಮನೆಯವರೆಲ್ಲರೂ ಸಹಕಾರ ನೀಡಿದ್ದಾರೆ. ಭಾಗ್ಯಗೆ ಅವರ ಪ್ರೋತ್ಸಾಹ ಕಂಡು ಮತ್ತಷ್ಟು ಖುಷಿಯಾಗಿದೆ. ಹೀಗಾಗಿ ಅವಳು, ಚೆಂದದ ಒಂದು ಲೋಗೊ ರೂಪಿಸಿದ್ದಾಳೆ, ಜತೆಗೆ ಸೂಕ್ತ ಹೆಸರಿನ ಹುಡುಕಾಟದಲ್ಲಿದ್ದಾಳೆ. ಮನೆಯವರೆಲ್ಲರ ಬಳಿ, ತನ್ನ ಹೊಸ ಯೋಜನೆಗೆ ಯಾವ ಹೆಸರು ಇರಿಸೋಣ ಎಂದು ಕೇಳಿದ್ದಾಳೆ.
ಮನೆಯವರೆಲ್ಲರೂ, ತಮಗೆ ತೋಚಿದ ರೀತಿಯಲ್ಲಿ ಒಂದೊಂದು ರೀತಿಯ ಹೆಸರನ್ನು ಸೂಚಿಸಿದ್ದಾರೆ. ಆದರೆ ಅವರ ಸೂಚನೆ, ಹೆಸರು ಕೇಳಿ ಭಾಗ್ಯಗೆ ಅಷ್ಟೊಂದು ಸಮ್ಮತಿಯಾಗಿಲ್ಲ. ಅಷ್ಟರಲ್ಲಿ, ಗುಂಡಣ್ಣ, ಹೇಗೂ ಅಮ್ಮ ಮಾಡುವ ಅಡುಗೆ ಸೂಪರ್ ಆಗಿರುತ್ತದೆ. ಅವಳ ಕೈರುಚಿಯನ್ನು ಎಲ್ಲರೂ ಹೊಗಳುತ್ತಾರೆ. ಹೀಗಾಗಿ ಕೈತುತ್ತು ಎನ್ನುವ ಹೆಸರೇ ಸೂಕ್ತ ಎಂದು ಹೇಳುತ್ತಾನೆ. ಅದನ್ನು ಕೇಳಿ ಭಾಗ್ಯಗೆ ಖುಷಿಯಾಗುತ್ತದೆ, ಎಲ್ಲರೂ ಗುಂಡಣ್ಣನ ಮಾತಿಗೆ ತಲೆದೂಗುತ್ತಾರೆ. ಕೈತುತ್ತು ಹೆಸರು ಎಲ್ಲರಿಗೂ ಒಪ್ಪಿಗೆಯಾಗುತ್ತದೆ. ಅಲ್ಲಿಗೆ ಭಾಗ್ಯಲಕ್ಷ್ಮೀ ಧಾರಾವಾಹಿಯ ಶುಕ್ರವಾರದ ಮಾರ್ಚ್ 21ರ ಸಂಚಿಕೆ ಕೊನೆಯಾಗಿದೆ. ಪ್ರಸ್ತುತ ಭಾಗ್ಯಲಕ್ಷ್ಮಿ ಧಾರಾವಾಹಿ 746ನೇ ಸಂಚಿಕೆ ಮುಗಿಸಿದೆ. ಭಾಗ್ಯ ಯಾವ ರೀತಿ ಹೊಸ ಸಾಹಸದಲ್ಲಿ ಜಯಗಳಿಸುತ್ತಾಳೆ ಎಂದು ಮುಂದಿನ ಸಂಚಿಕೆಯಲ್ಲಿ ತಿಳಿಯಬೇಕಿದೆ.
ಭಾಗ್ಯಲಕ್ಷ್ಮೀ ಧಾರಾವಾಹಿ ಪಾತ್ರ ಪರಿಚಯ
ಕುಸುಮಾ - ಪದ್ಮಜಾ ರಾವ್
ಧರ್ಮರಾಜ್ - ಶಶಿಧರ್ ಕೋಟೆ
ಭಾಗ್ಯಾ - ಸುಷ್ಮಾ ಕೆ ರಾವ್
ತಾಂಡವ್ ಸೂರ್ಯವಂಶಿ - ಸುದರ್ಶನ್ ರಂಗಪ್ರಸಾದ್
ಭಾಗ್ಯಾ ತಾಯಿ - ಸುನಿತಾ ಶೆಟ್ಟಿ
ಪೂಜಾ - ಆಶಾ ಅಯ್ಯನರ್
ಶ್ರೇಷ್ಠಾ - ಕಾವ್ಯಾ ಗೌಡ
ತನ್ವಿ - ಅಮೃತಾ ಗೌಡ
ಗುಂಡಣ್ಣ - ನಿಹಾರ್ ಗೌಡ
ಸುಂದರಿ - ಸುನೇತ್ರಾ ಪಂಡಿತ್

ವಿಭಾಗ