ಹೊಸ ನಾಟಕ ಶುರು ಮಾಡಿದ ಶ್ರೇಷ್ಠಾ, ಮಗಳನ್ನು ಬಿಟ್ಟು ಪ್ರೇಯಸಿಯನ್ನು ಕಾಣಲು ಹೊರಟ ತಾಂಡವ್‌; ಭಾಗ್ಯಲಕ್ಷ್ಮೀ ಧಾರಾವಾಹಿ
ಕನ್ನಡ ಸುದ್ದಿ  /  ಮನರಂಜನೆ  /  ಹೊಸ ನಾಟಕ ಶುರು ಮಾಡಿದ ಶ್ರೇಷ್ಠಾ, ಮಗಳನ್ನು ಬಿಟ್ಟು ಪ್ರೇಯಸಿಯನ್ನು ಕಾಣಲು ಹೊರಟ ತಾಂಡವ್‌; ಭಾಗ್ಯಲಕ್ಷ್ಮೀ ಧಾರಾವಾಹಿ

ಹೊಸ ನಾಟಕ ಶುರು ಮಾಡಿದ ಶ್ರೇಷ್ಠಾ, ಮಗಳನ್ನು ಬಿಟ್ಟು ಪ್ರೇಯಸಿಯನ್ನು ಕಾಣಲು ಹೊರಟ ತಾಂಡವ್‌; ಭಾಗ್ಯಲಕ್ಷ್ಮೀ ಧಾರಾವಾಹಿ

Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿ ಡಿಸೆಂಬರ್‌ 27ರ ಎಪಿಸೋಡ್‌ನಲ್ಲಿ ಮಗಳ ಸಮಸ್ಯೆಯನ್ನು ಪರಿಹರಿಸುವುದನ್ನು ಬಿಟ್ಟು ತಾಂಡವ್‌, ಪ್ರಿನ್ಸಿಪಾಲ್‌ಗೆ ಬೈದು ಶ್ರೇಷ್ಠಾಳನ್ನು ನೋಡಲು ಹೋಗುತ್ತಾನೆ. ಇತ್ತ ಶ್ರೇಷ್ಠಾ ಹೊಸ ಡ್ರಾಮಾ ಶುರು ಮಾಡುತ್ತಾಳೆ. ನನಗೆ ನ್ಯಾಯ ದೊರೆಯದಿದ್ದರೆ ಬಿಲ್ಡಿಂಗ್‌ ಮೇಲಿಂದ ಬಿದ್ದು ಸಾಯುವುದಾಗಿ ಹೆದರಿಸುತ್ತಾಳೆ.

ಭಾಗ್ಯಲಕ್ಷ್ಮೀ ಧಾರಾವಾಹಿ ಡಿಸೆಂಬರ್‌ 27ರ ಎಪಿಸೋಡ್‌
ಭಾಗ್ಯಲಕ್ಷ್ಮೀ ಧಾರಾವಾಹಿ ಡಿಸೆಂಬರ್‌ 27ರ ಎಪಿಸೋಡ್‌ (PC: Jio cinema)

Bhagyalakshmi Serial: ತನ್ವಿ ಸಸ್ಪೆಂಡ್‌ ಆಗಿರುವ ಬಗ್ಗೆ ಕಾಲೇಜ್‌ ಪ್ರಿನ್ಸಿಪಾಲ್‌ ಬಳಿ ಮಾತನಾಡಬೇಕು ಎಂದು ತಾಂಡವ್‌ನನ್ನು ಕರೆದುಕೊಂಡು ಭಾಗ್ಯಾ ಹೋಗುತ್ತಾಳೆ. ಆದರೆ ದಾರಿಯುದ್ದಕ್ಕೂ ತಾಂಡವ್‌ಗೆ ಶ್ರೇಷ್ಠಾ ಕರೆ ಮಾಡುತ್ತಲೇ ಇರುತ್ತಾಳೆ. ಕಾಲೇಜಿಗೆ ಬಂದ ಬಳಿಕವೂ ಶ್ರೇಷ್ಠಾ ಕಾಟ ನಿಲ್ಲುವುದಿಲ್ಲ. ಪ್ರಿನ್ಸಿಪಾಲ್‌ ಜೊತೆಗೆ ಮಗಳ ಬಗ್ಗೆ ಭಾಗ್ಯಾ ಮಾತನಾಡುತ್ತಿದ್ದರೆ ತಾಂಡವ್‌ ಮಾತ್ರ ಫೋನ್‌ ಕಡೆಗೆ ಗಮನ ಕೊಡುತ್ತಾನೆ.

ಮಗಳ ಸಮಸ್ಯೆಯನ್ನೂ ಮರೆತು ಶ್ರೇಷ್ಠಾಳನ್ನು ಭೇಟಿ ಆಗಲು ಹೊರಟ ತಾಂಡವ್‌

ನಾನು ನಿನ್ನ ಹೆಸರು ಬರೆದು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಶ್ರೇಷ್ಠಾ ಕಳಿಸಿದ ಸಂದೇಶ ನೋಡಿ ತಾಂಡವ್‌ ಗಾಬರಿಯಾಗುತ್ತಾನೆ. ಕಾಲೇಜ್‌ ಒಳಗೆ ಬರುವಾಗ ಫೋನ್‌ ಸೈಲೆಂಟ್‌ ಇಡಬೇಕು ಎಂಬ ಕಾಮನ್‌ ಸೆನ್ಸ್‌ ಇಲ್ಲವೇ ಎಂದು ಪ್ರಶ್ನಿಸಿದ ಪ್ರಿನ್ಸಿಪಾಲ್‌ ಬಳಿ ತಾಂಡವ್‌ ರೇಗುತ್ತಾನೆ. ನಿಮ್ಮ ಮಾತುಗಳನ್ನು ಕೇಳಲು ನಾನು ಇಲ್ಲಿಗೆ ಬಂದಿಲ್ಲ, ನೀವು ನನ್ನ ಮಗಳಿಗೆ ಮಾತ್ರ ಪ್ರಿನ್ಸಿಪಾಲ್‌, ನನಗಲ್ಲ ಎಂದು ದುರಹಂಕಾರದ ಮಾತುಗಳನ್ನು ಆಡುತ್ತಾ ಅಲ್ಲಿಂದ ಎದ್ದು ಹೋಗುತ್ತಾನೆ. ತಾಂಡವ್‌ ವರ್ತನೆ ಕಂಡು ಭಾಗ್ಯಾ , ತನ್ವಿ ಬೇಸರಗೊಳ್ಳುತ್ತಾರೆ. ಪ್ರಿನ್ಸಿಪಾಲ್‌ ಕೂಡಾ ಕೋಪಗೊಳ್ಳುತ್ತಾರೆ. ಆದರೆ, ಭಾಗ್ಯಾ ಅವರ ಬಳಿ ಮಾತನಾಡಿ ದಯವಿಟ್ಟು ನನ್ನ ಮಗಳ ಭವಿಷ್ಯ ಹಾಳು ಮಾಡಬೇಡಿ ಎಂದು ಕೈ ಮುಗಿದು ಮನವಿ ಮಾಡಿಕೊಳ್ಳುತ್ತಾಳೆ.

ಭಾಗ್ಯಾ, ಈ ವಯಸ್ಸಿನಲ್ಲೂ 10ನೇ ತರಗತಿ ಪರೀಕ್ಷೆ ಬರೆದು ಪಾಸ್‌ ಆಗಿದ್ದಾಳೆ ಎಂದು ತಿಳಿದ ಪ್ರಿನ್ಸಿಪಾಲ್‌, ನೀವು ಈ ರೀತಿ ಕೈ ಮುಗಿದು ನನಗೆ ಮುಜುಗರ ಮಾಡಬೇಡಿ, ನಿಮ್ಮ ಮಗಳನ್ನು ಮತ್ತೆ ಕಾಲೇಜಿಗೆ ಸೇರಿಸಿಕೊಳ್ಳುತ್ತೇನೆ ಎನ್ನುತ್ತಾರೆ. ಅದನ್ನು ಕೇಳಿ ಭಾಗ್ಯಾ, ತನ್ವಿ ಖುಷಿಯಾಗುತ್ತಾರೆ. ಹಾಗೇ ನನ್ನ ಮಗಳ ಜೊತೆ ಸಸ್ಪೆಂಡ್‌ ಆದ ಆ ಮೂವರೂ ಮಕ್ಕಳನ್ನು ನೀವು ಕಾಲೇಜಿಗೆ ಸೇರಿಸಿಕೊಳ್ಳಿ ಎಂದು ಭಾಗ್ಯಾ ಮನವಿ ಮಾಡುತ್ತಾಳೆ. ಭಾಗ್ಯಾ ಗುಣ ಕಂಡು ಆತ ಇಂಪ್ರೆಸ್‌ ಆಗುತ್ತಾರೆ. ಶಿಕ್ಷಣದ ಬಗ್ಗೆ ನಿಮಗೆ ಇರುವ ಗೌರವ ನೋಡಿ ನಿಜಕ್ಕೂ ಖುಷಿಯಾಗುತ್ತಿದೆ ಎಂದು ಸಂತೋಷ ವ್ಯಕ್ತಪಡಿಸುತ್ತಾರೆ. ಪ್ರಿನ್ಸಿಪಾಲ್‌ಗೆ ಧನ್ಯವಾದ ಹೇಳಿ ಭಾಗ್ಯಾ ಮನೆಗೆ ಬರುತ್ತಾಳೆ. ತನ್ವಿ ಮತ್ತೆ ಕಾಲೇಜಿಗೆ ಅಡ್ಮಿಷನ್‌ ಆಗಿದ್ದನ್ನು ಕೇಳಿ ಕುಸುಮಾ, ಧರ್ಮರಾಜ್‌ ಖುಷಿಯಾಗುತ್ತಾರೆ.

ಬಿಲ್ಡಿಂಗ್‌ ಮೇಲೆ ಹತ್ತಿ ನಿಂತ ಶ್ರೇಷ್ಠಾ

ಇತ್ತ, ಶ್ರೇಷ್ಠಾ ಮೆಸೇಜ್‌ ನೋಡಿ ಗಾಬರಿಯಾಗಿದ್ದ ತಾಂಡವ್‌, ಅವಳನ್ನು ಹುಡುಕಿ ಹೋಗುತ್ತಾನೆ. ನಾನು ಕಳಿಸುವ ಲೊಕೇಷನ್‌ಗೆ ನೀನು ಇನ್ನು 10 ನಿಮಿಷದಲ್ಲಿ ಬರಬೇಕು, ಇಲ್ಲವಾದರೆ ನಾನು ಸಾಯುತ್ತೇನೆ ಎಂದು ಶ್ರೇಷ್ಠಾ ಹೆದರಿಸುತ್ತಾಳೆ. ಅವಳು ಹೇಳಿದ ಜಾಗಕ್ಕೆ ಹೋಗಿ ನೋಡಿದರೆ ಅಲ್ಲಿ ಶ್ರೇಷ್ಠಾ ಹೊಸ ನಾಟಕ ಶುರು ಮಾಡಿರುವುದು ತಾಂಡವ್‌ಗೆ ಗೊತ್ತಾಗುತ್ತದೆ. ಬಿಲ್ಡಿಂಗ್‌ ಮೇಲೆ ನಿಂತ ಶ್ರೇಷ್ಠಾ, ನನಗೆ ನಿನ್ನಿಂದ ಎಷ್ಟು ಕಷ್ಟವಾಗುತ್ತಿದೆ ಅನ್ನೋದು ಗೊತ್ತಾ? ನೀನು ನನ್ನನ್ನು ಏಕೆ ಅವಾಯ್ಡ್‌ ಮಾಡುತ್ತಿದ್ದೀಯ ಎಂದು ಕೇಳುತ್ತಾಳೆ. ನನ್ನ ಪರಿಸ್ಥಿತಿ ಆ ರೀತಿ ಇದೆ, ದಯವಿಟ್ಟು ಕೆಳಗೆ ಇಳಿದು ಬಾ ಎಂದು ಮನವಿ ಮಾಡುತ್ತಾನೆ. ಇಲ್ಲ ನನಗೆ ನ್ಯಾಯ ಸಿಗುವವರೆಗೂ ನಾನು ಇಳಿಯುವುದಿಲ್ಲ. ಇಲ್ಲಿ ನಡೆಯುತ್ತಿರುವುದೆಲ್ಲಾ ಫೇಸ್‌ಬುಕ್‌ ಲೈವ್‌ ಹೋಗುತ್ತಿದೆ. ಎಲ್ಲರೂ ನಮ್ಮನ್ನು ನೋಡುತ್ತಿದ್ದಾರೆ ಎಂದು ಹೇಳುತ್ತ ತಾಂಡವ್‌ನನ್ನು ಶ್ರೇಷ್ಠಾ ಬ್ಲಾಕ್‌ಮೇಲ್‌ ಮಾಡುತ್ತಾಳೆ. ಅದನ್ನು ಕೇಳಿ ತಾಂಡವ್‌ ಶಾಕ್‌ ಆಗುತ್ತಾನೆ.

ತಾಂಡವ್‌ಗೆ ಶ್ರೇಷ್ಠಾ ಏನು ಕಂಡಿಷನ್‌ ಹಾಕುತ್ತಾಳೆ? ಈ ವಿಚಾರ ಭಾಗ್ಯಾಗೆ ಗೊತ್ತಾಗುತ್ತಾ? ಮುಂದಿನ ಎಪಿಸೋಡ್‌ನಲ್ಲಿ ತಿಳಿಯಲಿದೆ.

ಭಾಗ್ಯಲಕ್ಷ್ಮೀ ಧಾರಾವಾಹಿ ಪಾತ್ರ ಪರಿಚಯ

ಕುಸುಮಾ - ಪದ್ಮಜಾ ರಾವ್‌

ಧರ್ಮರಾಜ್‌ - ಶಶಿಧರ್‌ ಕೋಟೆ

ಭಾಗ್ಯಾ - ಸುಷ್ಮಾ ಕೆ ರಾವ್‌

ತಾಂಡವ್‌ ಸೂರ್ಯವಂಶಿ - ಸುದರ್ಶನ್‌ ರಂಗಪ್ರಸಾದ್‌

ಭಾಗ್ಯಾ ತಾಯಿ - ಸುನಿತಾ ಶೆಟ್ಟಿ

ಪೂಜಾ - ಆಶಾ ಅಯ್ಯನರ್‌

ಶ್ರೇಷ್ಠಾ - ಕಾವ್ಯಾ ಗೌಡ

ತನ್ವಿ - ಅಮೃತಾ ಗೌಡ

ಗುಂಡಣ್ಣ - ನಿಹಾರ್‌ ಗೌಡ

ಸುಂದರಿ - ಸುನೇತ್ರಾ ಪಂಡಿತ್‌

Whats_app_banner