ಭಾಗ್ಯಳ ಕೈತುತ್ತನ್ನು ಹುಡುಕಿಕೊಂಡು ಬಂದ ಹಾಸ್ಟೆಲ್ ಹುಡುಗರು; ಕನ್ನಿಕಾಗೆ ಮತ್ತೊಮ್ಮೆ ಮಂಗಳಾರತಿ: ಭಾಗ್ಯಲಕ್ಷ್ಮೀ ಧಾರಾವಾಹಿ
ಕನ್ನಡ ಸುದ್ದಿ  /  ಮನರಂಜನೆ  /  ಭಾಗ್ಯಳ ಕೈತುತ್ತನ್ನು ಹುಡುಕಿಕೊಂಡು ಬಂದ ಹಾಸ್ಟೆಲ್ ಹುಡುಗರು; ಕನ್ನಿಕಾಗೆ ಮತ್ತೊಮ್ಮೆ ಮಂಗಳಾರತಿ: ಭಾಗ್ಯಲಕ್ಷ್ಮೀ ಧಾರಾವಾಹಿ

ಭಾಗ್ಯಳ ಕೈತುತ್ತನ್ನು ಹುಡುಕಿಕೊಂಡು ಬಂದ ಹಾಸ್ಟೆಲ್ ಹುಡುಗರು; ಕನ್ನಿಕಾಗೆ ಮತ್ತೊಮ್ಮೆ ಮಂಗಳಾರತಿ: ಭಾಗ್ಯಲಕ್ಷ್ಮೀ ಧಾರಾವಾಹಿ

Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿಯ ಗುರುವಾರ ಮಾರ್ಚ್ 27ರ ಸಂಚಿಕೆಯಲ್ಲಿ ಭಾಗ್ಯಳ ಕೈತುತ್ತಿಗೆ ಮಾರುಹೋದ ಹಾಸ್ಟೆಲ್ ಹುಡುಗರು ಅವಳನ್ನು ಹುಡುಕಿಕೊಂಡು ಮನೆಗೆ ಬಂದಿದ್ದಾರೆ. ಅಲ್ಲದೆ, ಇನ್ನು ಮುಂದೆ ನಮಗೆ ಮೂರು ಹೊತ್ತು ಊಟ ಒದಗಿಸಿಕೊಡುವಂತೆ ಬುಕ್ ಮಾಡಿದ್ದಾರೆ.

ಭಾಗ್ಯಲಕ್ಷ್ಮೀ ಧಾರಾವಾಹಿ ಗುರುವಾರ ಮಾರ್ಚ್ 27ರ ಸಂಚಿಕೆ
ಭಾಗ್ಯಲಕ್ಷ್ಮೀ ಧಾರಾವಾಹಿ ಗುರುವಾರ ಮಾರ್ಚ್ 27ರ ಸಂಚಿಕೆ (Colors Kannada Facebook)

Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿಯ ಗುರುವಾರ ಮಾರ್ಚ್ 27ರ ಸಂಚಿಕೆಯಲ್ಲಿ ಕನ್ನಿಕಾಳಿಗೆ ಭಾಗ್ಯ ಮತ್ತೊಮ್ಮೆ ಮಂಗಳಾರತಿ ಮಾಡಿದ್ದಾಳೆ. ಹಾಸ್ಟೆಲ್ ಬಳಿ ಊಟ ಹಂಚುತ್ತಿದ್ದ ಭಾಗ್ಯಳನ್ನು ಕಂಡ ಕನ್ನಿಕಾ, ಅವಳನ್ನು ಕಾರಿನ ಬಳಿ ಕರೆಸಿಕೊಂಡಿದ್ದಾಳೆ. ನಂತರ ಅವಳಿಗೆ ಅವಮಾನ ಮಾಡುವ ಉದ್ದೇಶದಿಂದ ನೀವೆಲ್ಲ ಬೀದಿಗೆ ಬಂದಿದ್ದೀರಿ ಎಂದು ಹೀಯಾಳಿಸುತ್ತಾಳೆ. ಆದರೆ ಭಾಗ್ಯ ಮಾತ್ರ ಅದಕ್ಕೆ ತಲೆಕೆಡಿಸಿಕೊಂಡಿಲ್ಲ. ಬದಲಾಗಿ, ಕನ್ನಿಕಾಗೆ ಮುಟ್ಟಿ ನೋಡುವಂತೆ ಉತ್ತರಿಸಿದ್ದಾಳೆ. ನಿನ್ನ ಅಪ್ಪ, ಅಮ್ಮ ಮಾಡಿದ್ದ ಆಸ್ತಿಯನ್ನು ನೀನು ಅನುಭವಿಸುತ್ತಿದ್ದೀ, ಅಷ್ಟೇ ನಿನ್ನ ಸಾಧನೆ, ಅದಕ್ಕಿಂತ ಹೆಚ್ಚಿಗೆ ಏನಿಲ್ಲ, ನಿನ್ನದು ಎಂಬ ಸ್ವಂತಿಕೆ ಇಲ್ಲ ಎಂದು ಜೋರಿನಲ್ಲಿ ಹೇಳಿದ್ದಾಳೆ. ಅದನ್ನು ಕೇಳಿ ಕನ್ನಿಕಾಗೆ ಮುಖಭಂಗವಾಗಿದೆ. ಅವಳು ಅಲ್ಲಿಂದ ಮೆಲ್ಲನೆ ಕಳಚಿಕೊಂಡಿದ್ದಾಳೆ.

ತಂದಿದ್ದ ಊಟವನ್ನೆಲ್ಲಾ ಉಚಿತವಾಗಿ ಹಾಸ್ಟೆಲ್ ಹುಡುಗರಿಗೆ ಹಂಚಿದ ಬಳಿಕ ಭಾಗ್ಯ, ಪೂಜಾ ಮತ್ತು ಸುಂದರಿ ಜತೆ ಮನೆಗೆ ಮರಳಿದ್ದಾಳೆ. ಊಟವನ್ನೆಲ್ಲಾ ಖಾಲಿ ಮಾಡಿ ಮನೆಗೆ ಬಂದ ಅವರನ್ನು ನೋಡಿ ಮನೆಯವರು ಕೇಳಿದಾಗ, ಉಚಿತವಾಗಿ ಊಟ ಕೊಟ್ಟು ಬಂದಿರುವ ಸಂಗತಿ ಗೊತ್ತಾಗುತ್ತದೆ. ಭಾಗ್ಯ ಅಮ್ಮ ಸುನಂದಾ, ಮಗಳಿಗೆ ಮತ್ತೆ ಬುದ್ದಿ ಹೇಳುತ್ತಾರೆ. ನನ್ನ ಮಾತನ್ನು ಕೇಳಿದ್ದರೆ ಈ ಗತಿಯಾಗುತ್ತಿರಲಿಲ್ಲ ಎನ್ನುತ್ತಾರೆ. ಅದಕ್ಕೆ ಭಾಗ್ಯ ಮತ್ತಷ್ಟು ನೊಂದುಕೊಳ್ಳುತ್ತಾಳೆ. ಆದರೆ ಕುಸುಮಾ ಮತ್ತು ಧರ್ಮರಾಜ್ ಅವಳಿಗೆ ಬೆಂಬಲ ಕೊಡುತ್ತಾರೆ.

ಅಷ್ಟರಲ್ಲಿ ಕಾಲಿಂಗ್ ಬೆಲ್ ಸದ್ದಾಗುತ್ತದೆ. ತನ್ಮಯ್‌ನ ಗೆಳೆಯ ಭಾಗ್ಯಳನ್ನು ಹುಡುಕಿಕೊಂಡು ಮನೆಗೆ ಬಂದಿದ್ದಾನೆ. ಅವನ ಜೊತೆ ಹಾಸ್ಟೆಲ್‌ನ ನಾಲ್ಕು ಮಂದಿ ಹುಡುಗರು ಕೂಡ ಬಂದಿದ್ದಾರೆ. ಬಂದವರೇ ಮೊದಲಿಗೆ ನಿಮ್ಮ ಊಟ ತಿಂದು ನಮಗೆ ಹಾಗೆ ಆಯಿತು, ಹೀಗೆ ಆಯಿತು ಎಂದಿದ್ದಾರೆ. ಕೊನೆಗೆ ನಾವು ತಮಾಷೆ ಮಾಡಿದೆವು, ನಿಮ್ಮ ಊಟದಲ್ಲಿ ಅಮ್ಮನ ಕೈರುಚಿಯಿದೆ, ಪ್ರೀತಿಯಿದೆ. ಅಮೃತವಿದೆ, ಇನ್ನು ಮುಂದೆ ದಿನವೂ ಮೂರು ಹೊತ್ತು ನೀವೇ ನಮಗೆ ಊಟ ಕೊಡಬೇಕು ಎನ್ನುತ್ತಾರೆ. ಜತೆಗೆ ದುಡ್ಡನ್ನೂ ಕೊಟ್ಟು ಹೋಗುತ್ತಾರೆ. ಅಲ್ಲಿಗೆ ಭಾಗ್ಯನ ಪ್ಲ್ಯಾನ್ ಸಕ್ಸಸ್ ಆಗಿದೆ. ಕೊನೆಗೂ ಅವಳು ನಿಟ್ಟುಸಿರು ಬಿಟ್ಟಿದ್ದಾಳೆ.

ಇತ್ತ ತನ್ವಿ, ಶ್ರೇಷ್ಠಾಳನ್ನು ಭೇಟಿಯಾಗಿದ್ದಾಳೆ. ಅವಳಿಂದ ಟೂರ್ ಹೋಗಲು ಅನುಮತಿ ಪಡೆದುಕೊಂಡಿದ್ದಾಳೆ. ಶ್ರೇಷ್ಠಾ ಕೂಡ ನೀನು ಆರಾಮವಾಗಿ ಹೋಗಿ ಬಾ ಎಂದು ಹೇಳಿ, ಡ್ರೆಸ್ ಕೂಡ ಉಡುಗೊರೆ ನೀಡಿದ್ದಾಳೆ. ಅದನ್ನು ಕಂಡು ತನ್ವಿಗೆ ಖುಷಿಯಾಗಿದೆ. ಅಲ್ಲಿಗೆ ಭಾಗ್ಯಲಕ್ಷ್ಮೀ ಧಾರಾವಾಹಿಯ ಗುರುವಾರದ ಮಾರ್ಚ್ 27ರ ಸಂಚಿಕೆ ಕೊನೆಯಾಗಿದೆ. ಪ್ರಸ್ತುತ ಭಾಗ್ಯಲಕ್ಷ್ಮಿ ಧಾರಾವಾಹಿ 750ನೇ ಸಂಚಿಕೆ ಮುಗಿಸಿದೆ. ಭಾಗ್ಯ ತನ್ನ ಹೊಸ ಸಾಹಸದಲ್ಲಿ ಮುಂದೆ ಯಾವ ರೀತಿ ಜಯಗಳಿಸುತ್ತಾಳೆ ಎಂದು ಮುಂದಿನ ಸಂಚಿಕೆಯಲ್ಲಿ ತಿಳಿಯಬೇಕಿದೆ.

ಭಾಗ್ಯಲಕ್ಷ್ಮೀ ಧಾರಾವಾಹಿ ಪಾತ್ರ ಪರಿಚಯ

ಕುಸುಮಾ - ಪದ್ಮಜಾ ರಾವ್‌

ಧರ್ಮರಾಜ್‌ - ಶಶಿಧರ್‌ ಕೋಟೆ

ಭಾಗ್ಯಾ - ಸುಷ್ಮಾ ಕೆ ರಾವ್‌

ತಾಂಡವ್‌ ಸೂರ್ಯವಂಶಿ - ಸುದರ್ಶನ್‌ ರಂಗಪ್ರಸಾದ್‌

ಭಾಗ್ಯಾ ತಾಯಿ ಸುನಂದಾ- ಸುನಿತಾ ಶೆಟ್ಟಿ

ಪೂಜಾ - ಆಶಾ ಅಯ್ಯನರ್‌

ಶ್ರೇಷ್ಠಾ - ಕಾವ್ಯಾ ಗೌಡ

ತನ್ವಿ - ಅಮೃತಾ ಗೌಡ

ಗುಂಡಣ್ಣ - ನಿಹಾರ್‌ ಗೌಡ

ಸುಂದರಿ - ಸುನೇತ್ರಾ ಪಂಡಿತ್‌

Kiran Kumar I G

TwittereMail
ಕಿರಣ್ ಐ.ಜಿ.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜನರ ಬದುಕು ಸುಧಾರಿಸಬಲ್ಲ ಟೆಕ್‌ ಮತ್ತು ಗ್ಯಾಜೆಟ್ ಇವರ ಆಸಕ್ತಿಯ ಕ್ಷೇತ್ರ. ಯಾವುದೇ ವಿಷಯವಾದರೂ ಶ್ರದ್ಧೆಯಿಂದ ಕಲಿಯಬಲ್ಲೆ, ಬರೆಯಬಲ್ಲೆ ಎನ್ನುವುದು ಇವರ ವಿಶ್ವಾಸ. ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕ ವೆಬ್ ಹಾಗೂ ಟಿವಿ9 ಕನ್ನಡ ಡಿಜಿಟಲ್‌ನ ವಿವಿಧ ವಿಭಾಗಗಳಲ್ಲಿ ಒಟ್ಟು 10 ವರ್ಷ ಕೆಲಸ ಮಾಡಿದ ಅನುಭವ. ಇಮೇಲ್: kiran.kumar@htdigital.in
Whats_app_banner