ಶ್ರೇಷ್ಠಾ, ತಾಂಡವ್‌ನನ್ನು ಆರತಿ ಮಾಡಿ ಮನೆಗೆ ಬರಮಾಡಿಕೊಂಡ ಭಾಗ್ಯಾ, ಕುಸುಮಾ; ಭಾಗ್ಯಲಕ್ಷ್ಮೀ ಧಾರಾವಾಹಿ
ಕನ್ನಡ ಸುದ್ದಿ  /  ಮನರಂಜನೆ  /  ಶ್ರೇಷ್ಠಾ, ತಾಂಡವ್‌ನನ್ನು ಆರತಿ ಮಾಡಿ ಮನೆಗೆ ಬರಮಾಡಿಕೊಂಡ ಭಾಗ್ಯಾ, ಕುಸುಮಾ; ಭಾಗ್ಯಲಕ್ಷ್ಮೀ ಧಾರಾವಾಹಿ

ಶ್ರೇಷ್ಠಾ, ತಾಂಡವ್‌ನನ್ನು ಆರತಿ ಮಾಡಿ ಮನೆಗೆ ಬರಮಾಡಿಕೊಂಡ ಭಾಗ್ಯಾ, ಕುಸುಮಾ; ಭಾಗ್ಯಲಕ್ಷ್ಮೀ ಧಾರಾವಾಹಿ

Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿ ಡಿಸೆಂಬರ್‌ 29ರ ಎಪಿಸೋಡ್‌ನಲ್ಲಿ ಶ್ರೇಷ್ಠಾಳನ್ನು ತಾಂಡವ್‌ ಮನೆಗೆ ಕರೆದುಕೊಂಡು ಬರುತ್ತಾನೆ. ಅಮ್ಮ ಹಾಗೂ ಭಾಗ್ಯಾ ಎಲ್ಲಿ ನನ್ನನ್ನು ತಡೆಯುತ್ತಾರೋ ಎಂದುಕೊಂಡಿದ್ದವನಿಗೆ ಶಾಕ್‌ ಕಾದಿರುತ್ತದೆ. ಭಾಗ್ಯಾ ಏನೂ ಮಾತನಾಡದೆ ಮೌನವಾಗಿರುತ್ತಾಳೆ. ಕುಸುಮಾ, ಇಬ್ಬರಿಗೂ ಆರತಿ ಮಾಡಿ ಮನೆ ಒಳಗೆ ಬರಮಾಡಿಕೊಳ್ಳುತ್ತಾಳೆ.

ಭಾಗ್ಯಲಕ್ಷ್ಮೀ ಧಾರಾವಾಹಿ ಡಿಸೆಂಬರ್‌ 29ರ ಎಪಿಸೋಡ್‌
ಭಾಗ್ಯಲಕ್ಷ್ಮೀ ಧಾರಾವಾಹಿ ಡಿಸೆಂಬರ್‌ 29ರ ಎಪಿಸೋಡ್‌ (PC: Jio Cinema)

Bhagyalakshmi Serial: ನಿನ್ನ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ಳುವೆ ಎಂದು ಶ್ರೇಷ್ಠಾ, ಬ್ಲಾಕ್‌ಮೇಲ್‌ ಮಾಡಿದ್ದು ತಾಂಡವ್‌ಗೆ ಭಯವಾಗುತ್ತದೆ. ಶ್ರೇಷ್ಠಾ, ಬಿಲ್ಡಿಂಗ್‌ ಮೇಲೆ ನಿಂತಿರುವುದು, ಕೆಳಗೆ ತಾಂಡವ್‌ ಹಾಗೂ ಜನಗಳು ಇರುವುದು ಎಲ್ಲವೂ ಫೇಸ್‌ಬುಕ್‌ನಲ್ಲಿ ಲೈವ್‌ ಆಗುತ್ತದೆ. ಇದೆಲ್ಲದಕ್ಕೂ ಹೆದರುವ ತಾಂಡವ್‌ ಶ್ರೇಷ್ಠಾಳನ್ನು ಮನೆಗೆ ಕರೆದೊಯ್ಯುವಂತೆ ಪ್ರಾಮಿಸ್‌ ಮಾಡುತ್ತಾನೆ.

ತಾಂಡವ್‌-ಶ್ರೇಷ್ಠಾಳನ್ನು ನೋಡಿ ಕೋಪಗೊಂಡ ಸುನಂದಾ

ಫೇಸ್‌ಬುಕ್‌ ಲೈವ್‌ ವಿಚಾರ, ತಾಂಡವ್‌ ಮತ್ತೆ ಶ್ರೇಷ್ಠಾಳನ್ನು ಮನೆಗೆ ಕರೆತರುವ ವಿಚಾರ ನೆರೆಹೊರೆಯವರಿಂದ ಕುಸುಮಾಗೆ ಗೊತ್ತಾಗುತ್ತದೆ. ಮಗ ಎಷ್ಟು ಬುದ್ಧಿ ಹೇಳಿದರೂ ಬದಲಾಗುತ್ತಿಲ್ಲ ಎಂದು ಕುಸುಮಾ ಕಣ್ಣೀರಿಡುತ್ತಾಳೆ. ಭಾಗ್ಯಾಗೆ ಕೂಡಾ ವಿಚಾರ ತಿಳಿದು ಬೇಸರವಾಗುತ್ತದೆ. ಹೇಗೆ ಶ್ರೇಷ್ಠಾಳನ್ನು ಅವರು ಮನೆಗೆ ಕರೆದುಕೊಂಡು ಬರುತ್ತಾರೆ ನಾನು ನೋಡುತ್ತೇನೆ, ಅದು ಮಾತ್ರ ಸಾಧ್ಯವಿಲ್ಲ ಎನ್ನುತ್ತಾಳೆ. ನೆರೆಮನೆಯವರು ಕೂಡಾ ಕುಸುಮಾ ಮನೆಯಲ್ಲಿ ನಡೆಯುತ್ತಿರುವುದನ್ನು ನೋಡಿ, ಕ್ಷಮಿಸಿ ನಮ್ಮ ಕೈಯಲ್ಲೂ ಏನು ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಬೇಸರಗೊಳ್ಳುತ್ತಾರೆ.

ಶ್ರೇಷ್ಠಾ ಕೈ ಹಿಡಿದು ತಾಂಡವ್‌ ಮನೆಗೆ ಕರೆತರುತ್ತಾನೆ. ಒಂದು ವೇಳೆ ನಿಮ್ಮ ಮನೆಯವರು ನಮ್ಮನ್ನು ತಡೆದರೆ ಏನು ಮಾಡುವುದು ಎಂದು ಶ್ರೇಷ್ಠಾ ಕೇಳುತ್ತಾಳೆ. ಈ ಬಾರಿ ನಾನು ಹೆದರುವುದಿಲ್ಲ. ಅದು ನನ್ನ ಮನೆ, ಅವರೆಲ್ಲಾ ಹೇಗೆ ತಡೆಯುತ್ತಾರೆ ನಾನೂ ನೋಡುತ್ತೇನೆ ಎಂದು ತಾಂಡವ್‌ ಧೈರ್ಯವಾಗಿ ಶ್ರೇಷ್ಠಾಳನ್ನು ಕರೆತರುತ್ತಾನೆ. ಅವರಿಬ್ಬರನ್ನೂ ನೋಡಿ ಸುನಂದಾ ಕೋಪಗೊಳ್ಳುತ್ತಾಳೆ. ನೀವಿಬ್ಬರೂ ಮನೆಯೊಳಗೆ ಬರುವಂತಿಲ್ಲ. ನಾನು ಅದಕ್ಕೆ ಅವಕಾಶ ಮಾಡಿಕೊಡುವುದಿಲ್ಲ. ಜೈಲಿಗೆ ಹೋಗಲು ನೀನು ಹೀಗೆಲ್ಲಾ ಮಾಡುತ್ತಿದ್ದೀಯ , ಈ ಮನೆಹಾಳಿಯನ್ನು ಇಲ್ಲಿಗೆ ಕರೆತರಲು ನಿನಗೆಷ್ಟು ಧೈರ್ಯ ಎಂದು ಸುನಂದಾ ಅಳಿಯನ ವರ್ತನೆಗೆ ಬೇಸರ ವ್ಯಕ್ತಪಡಿಸುತ್ತಾಳೆ. ಪೂಜಾ ಕೂಡಾ ತಾಂಡವ್‌-ಶ್ರೇಷ್ಠಾ ಕೈ ಹಿಡಿದಿರುವುದನ್ನು ಕಂಡು ಕೋಪಗೊಳ್ಳುತ್ತಾಳೆ.

ಮಗ ಆಯ್ಕೆ ಮಾಡಿದ ಹುಡುಗಿಯೇ ನನ್ನ ಸೊಸೆ ಎಂದ ಕುಸುಮಾ

ಶ್ರೇಷ್ಠಾ, ನನ್ನವಳು, ಇದು ನನ್ನ ಮನೆ, ಇನ್ಮುಂದೆ ಅವಳು ಇಲ್ಲೇ ಇರುತ್ತಾಳೆ ಎನ್ನುತ್ತಾನೆ. ಅಷ್ಟರಲ್ಲಿ ಅಲ್ಲಿಗೆ ಕುಸುಮಾ ಬರುತ್ತಾಳೆ. ಅಮ್ಮನನ್ನು ನೋಡಿ ತಾಂಡವ್‌ ಒಂದು ಕ್ಷಣ ಗಾಬರಿಯಾಗುತ್ತಾನೆ. ನಿಮ್ಮ ಮಗ ಮಾಡುತ್ತಿರುವ ಕೆಲಸ ನೋಡಿ ಎಂದು ಸುನಂದಾ ಹೇಳುತ್ತಾಳೆ. ಆದರೆ ಕುಸುಮಾ ವರಸೆ ಬದಲಿಸುತ್ತಾಳೆ. ನನ್ನ ಮಗ, ಅವಳು ಇಷ್ಟಪಟ್ಟ ಹುಡುಗಿಯನ್ನು ಮನೆಗೆ ಕರೆತಂದಿದ್ದಾನೆ. ಅವರನ್ನು ಹೀಗೆ ಹೊರಗೆ ನಿಲ್ಲಿಸಿ ಮಾತನಾಡಿಸುವುದು ಎಷ್ಟು ಸರಿ ಸುನಂದಾ ಎನ್ನುತ್ತಾಳೆ. ಕುಸುಮಾ ಮಾತು ಕೇಳಿ ಎಲ್ಲರೂ ಶಾಕ್‌ ಆಗುತ್ತಾರೆ. ಕುಸುಮಾ, ಸೊಸೆಯನ್ನು ಕರೆಯುತ್ತಾಳೆ. ಭಾಗ್ಯಾ ಎಲ್ಲಾ ಗೊತ್ತಿದ್ದೂ ಏನೂ ಮಾತನಾಡದೆ, ಬಂದು ಸುಮ್ಮನೆ ನಿಲ್ಲುತ್ತಾಳೆ. ಎಲ್ಲಾ ರೆಡಿ ಇದೆಯಾ ಎಂದು ಕುಸುಮಾ ಕೇಳುತ್ತಾಳೆ. ಭಾಗ್ಯಾ ತಲೆ ಆಡಿಸುತ್ತಾ ಅಡುಗೆ ಮನೆಗೆ ಹೋಗುತ್ತಾಳೆ.

ಕುಸುಮಾ, ಭಾಗ್ಯಾ ವರ್ತನೆ ಕಂಡು ಮನೆಯವರಿಗೆ ಮಾತ್ರವಲ್ಲ, ಶ್ರೇಷ್ಠಾ ಹಾಗೂ ತಾಂಡವ್‌ಗೂ ಆಶ್ಚರ್ಯ ಎನಿಸುತ್ತದೆ. ಭಾಗ್ಯಾ ಬೂದುಕುಂಬಳಕಾಯಿ ತೆಗೆದುಕೊಂಡು ಬರುತ್ತಾಳೆ. ಅದರಲ್ಲಿ ಕರ್ಪೂರ ಇಟ್ಟು ತಾಂಡವ್‌ ಹಾಗೂ ಶ್ರೇಷ್ಠಾಗೆ ಆರತಿ ಮಾಡುತ್ತಾಳೆ. ಅತ್ತೆ ಸೊಸೆ ಸೇರಿ ಏನು ಮಾಡುತ್ತಿದ್ದಾರೆ ಎಂದು ಯಾರಿಗೂ ಅರ್ಥವಾಗುವುದಿಲ್ಲ. ಇಬ್ಬರೂ ಒಳಗೆ ಬನ್ನಿ ಎಂದು ಕುಸುಮಾ ಕರೆಯುತ್ತಾಳೆ. ಶ್ರೇಷ್ಠಾ-ತಾಂಡವ್‌ ಮಾತ್ರ ಖುಷಿಯಾಗಿ ಮನೆ ಒಳಗೆ ಬರುತ್ತಾರೆ.

ಕುಸುಮಾ ಉದ್ದೇಶ ಏನು? ನಿಜಕ್ಕೂ ಶ್ರೇಷ್ಠಾಳನ್ನು ಸೊಸೆ ಎಂದು ಒಪ್ಪಿಕೊಂಡುಬಿಟ್ಲಾ? ಮುಂದಿನ ಎಪಿಸೋಡ್‌ಗಳಲ್ಲಿ ತಿಳಿಯಲಿದೆ.

ಭಾಗ್ಯಲಕ್ಷ್ಮೀ ಧಾರಾವಾಹಿ ಪಾತ್ರ ಪರಿಚಯ

ಕುಸುಮಾ - ಪದ್ಮಜಾ ರಾವ್‌

ಧರ್ಮರಾಜ್‌ - ಶಶಿಧರ್‌ ಕೋಟೆ

ಭಾಗ್ಯಾ - ಸುಷ್ಮಾ ಕೆ ರಾವ್‌

ತಾಂಡವ್‌ ಸೂರ್ಯವಂಶಿ - ಸುದರ್ಶನ್‌ ರಂಗಪ್ರಸಾದ್‌

ಭಾಗ್ಯಾ ತಾಯಿ - ಸುನಿತಾ ಶೆಟ್ಟಿ

ಪೂಜಾ - ಆಶಾ ಅಯ್ಯನರ್‌

ಶ್ರೇಷ್ಠಾ - ಕಾವ್ಯಾ ಗೌಡ

ತನ್ವಿ - ಅಮೃತಾ ಗೌಡ

ಗುಂಡಣ್ಣ - ನಿಹಾರ್‌ ಗೌಡ

ಸುಂದರಿ - ಸುನೇತ್ರಾ ಪಂಡಿತ್‌

-----

ಹೊಸ ವರ್ಷ ಹೇಗಿರುತ್ತೆ? ಇಲ್ಲಿದೆ 2025 ರ ರಾಶಿವಾರು ಮಾಹಿತಿ

2025 ನಿಮಗೆ ಏನೆಲ್ಲಾ ಶುಭಫಲಗಳನ್ನು ನೀಡಲಿದೆ? ಹೊಸ ವರ್ಷದಲ್ಲಿ ಬದಲಾವಣೆಗಳು, ಉದ್ಯೋಗ ಪ್ರಗತಿ, ವಿದ್ಯಾಭ್ಯಾಸ, ಪ್ರೀತಿ, ದಾಂಪತ್ಯ ಸೇರಿದಂತೆ ನೀವು ತಿಳಿಯಬಯಸುವ ಸಮಗ್ರ ಮಾಹಿತಿ ಇಲ್ಲಿದೆ. ಪ್ರತಿ ರಾಶಿಯ ಸಮಗ್ರ ವಿವರ ಇಲ್ಲಿ ಲಭ್ಯ. ನೀವು ಈವರೆಗೆ ನೋಡಿಲ್ಲ ಅಂತಾದ್ರೆ ಬೇಗ ನೋಡಿ. ಈಗಾಗಲೇ ನೋಡಿದ್ದರೆ ನಿಮ್ಮ ಆಪ್ತರಿಗೂ ಈ ಬಗ್ಗೆ ತಿಳಿಸಿ. kannada.hindustantimes.com/astrology/yearly-horoscope

Whats_app_banner