ಮಾವ ಧರ್ಮರಾಜ್‌ಗೆ ಕಾರು ಕೊಡಿಸಲು ಮುಂದಾದ ಭಾಗ್ಯಾ, ಅದಕ್ಕೂ ಕೊಂಕು ಮಾತನಾಡಿದ ತಾಂಡವ್‌; ಭಾಗ್ಯಲಕ್ಷ್ಮೀ ಧಾರಾವಾಹಿ
ಕನ್ನಡ ಸುದ್ದಿ  /  ಮನರಂಜನೆ  /  ಮಾವ ಧರ್ಮರಾಜ್‌ಗೆ ಕಾರು ಕೊಡಿಸಲು ಮುಂದಾದ ಭಾಗ್ಯಾ, ಅದಕ್ಕೂ ಕೊಂಕು ಮಾತನಾಡಿದ ತಾಂಡವ್‌; ಭಾಗ್ಯಲಕ್ಷ್ಮೀ ಧಾರಾವಾಹಿ

ಮಾವ ಧರ್ಮರಾಜ್‌ಗೆ ಕಾರು ಕೊಡಿಸಲು ಮುಂದಾದ ಭಾಗ್ಯಾ, ಅದಕ್ಕೂ ಕೊಂಕು ಮಾತನಾಡಿದ ತಾಂಡವ್‌; ಭಾಗ್ಯಲಕ್ಷ್ಮೀ ಧಾರಾವಾಹಿ

Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿ ಜನವರಿ 6ರ ಎಪಿಸೋಡ್‌ನಲ್ಲಿ ಸ್ಕೂಟರ್‌ನಲ್ಲಿ ಹೊರಗೆ ಹೋದ ಧರ್ಮರಾಜ್‌ಗೆ ಆಕ್ಸಿಡೆಂಟ್‌ ಆಗುತ್ತದೆ, ಅದಕ್ಕೂ ಭಾಗ್ಯಾಳೇ ಕಾರಣ ಎಂದು ತಾಂಡವ್‌ ಆರೋಪಿಸುತ್ತಾನೆ. ಗಂಡನ ಮಾತುಗಳಿಂದ ಬೇಸರಗೊಂಡ ಭಾಗ್ಯಾ, ಮಾವನಿಗೆ ಕಾರು ಕೊಡಿಸಲು ನಿರ್ಧರಿಸುತ್ತಾಳೆ.

ಭಾಗ್ಯಲಕ್ಷ್ಮೀ ಧಾರಾವಾಹಿ ಜನವರಿ 6ರ ಎಪಿಸೋಡ್‌
ಭಾಗ್ಯಲಕ್ಷ್ಮೀ ಧಾರಾವಾಹಿ ಜನವರಿ 6ರ ಎಪಿಸೋಡ್‌ (PC: Jio Cinema)

Bhagyalakshmi Serial: ತಾಂಡವ್‌ ಮನೆಯಲ್ಲಿ ಆರಾಮವಾಗಿ ಇರಬಹುದು ಎಂದುಕೊಂಡು ಬಂದ ಶ್ರೇಷ್ಠಾಗೆ ಕುಸುಮಾ ಹಾಗೂ ಭಾಗ್ಯಾ ಕೈ ತುಂಬಾ ಕೆಲಸ ಕೊಟ್ಟಿದ್ದಾರೆ. ಕಷ್ಟವಾದರೂ ಮನೆಯಲ್ಲಿ ಉಳಿಯುವ ಉದ್ದೇಶದಿಂದ ಶ್ರೇಷ್ಠಾ ಕೆಲಸ ಮಾಡುತ್ತಿದ್ದಾಳೆ. ನಾಳೆಯಿಂದ ಹೇಗಾದರೂ ಮಾಡಿ ತಪ್ಪಿಸಿಕೊಳ್ಳಬೇಕು, ಆಫೀಸಿಗೆ ಹೋಗಿ ತಡವಾಗಿ ಬರಬೇಕು ಇಲ್ಲದಿದ್ರೆ ಈ ಕೆಲಸ ಮಾಡಲು ಆಗುವುದಿಲ್ಲ ಎಂದು ನಿರ್ಧರಿಸಿ ಕೆಲಸದವಳನ್ನು ಮನೆಗೆ ಬರಲು ಹೇಳುತ್ತಾಳೆ.

ಧರ್ಮರಾಜ್‌ಗೆ ಅಪಘಾತವಾಗಿದ್ದನ್ನು ಕಂಡು ಮನೆಯವರು ಶಾಕ್

ಸುಂದ್ರಿ, ಪೂಜಾ ಹಾಗೂ ಮಕ್ಕಳ ಜೊತೆ ಭಾಗ್ಯಾ ಹರಟುತ್ತಿರುವಾಗ ಧರ್ಮರಾಜ್‌ ಬ್ಯಾಂಡೇಜ್‌ ಹಾಕಿಕೊಂಡು ಮನೆಗೆ ಬರುತ್ತಾರೆ. ಅವರನ್ನು ನೋಡಿ ಎಲ್ಲರೂ ಗಾಬರಿ ಆಗುತ್ತಾರೆ. ಕುಸುಮಾ ಕೂಡಾ ಗಂಡನನ್ನು ನೋಡಿ ಶಾಕ್‌ ಆಗುತ್ತಾಳೆ. ಏನಾಯ್ತು ಎಂದು ಎಲ್ಲರೂ ಗಾಬರಿಯಿಂದ ಕೇಳುತ್ತಾರೆ. ಸ್ಕೂಟರ್‌ನಲ್ಲಿ ಹೋಗುವಾಗ ಸಣ್ಣ ಆಕ್ಸಿಡೆಂಟ್‌ ಆಯ್ತು, ಆಸ್ಪತ್ರೆಗೆ ಹೋಗಿ ಬಂದೆ, ಯಾರೂ ಗಾಬರಿ ಆಗುವ ಅವಶ್ಯಕತೆ ಇಲ್ಲ ಎಂದು ಧರ್ಮರಾಜ್‌ ಎಲ್ಲರಿಗೂ ಧೈರ್ಯ ಹೇಳುತ್ತಾರೆ. ಶ್ರೇಷ್ಠಾ ಕೂಡಾ ಧರ್ಮರಾಜ್‌ ಆರೋಗ್ಯ ವಿಚಾರಿಸುತ್ತಾಳೆ. ಆ ಸ್ಕೂಟರ್‌ ಸರಿ ಇಲ್ಲ, ಅದರಲ್ಲಿ ಹೋಗಬೇಡಿ ಎಂದು ಎಷ್ಟು ಬಾರಿ ಹೇಳಿದ್ದರೂ ಏಕೆ ಹೋದಿರಿ ಎಂದು ಕುಸುಮಾ ಕೇಳುತ್ತಾಳೆ.

ಅಷ್ಟರಲ್ಲಿ ತಾಂಡವ್‌ ಮನೆಗೆ ಬರುತ್ತಾನೆ. ಅಪ್ಪನನ್ನು ನೋಡಿ ಶಾಕ್‌ ಆಗುತ್ತಾನೆ. ಹೊರಗೆ ಸ್ಕೂಟರ್‌ನಲ್ಲಿ ಹೋದಾಗ ಈ ರೀತಿ ಆಗಿದೆ ಎಂದು ತಿಳಿದು, ಅಪ್ಪನಿಗೆ ಈ ರೀತಿ ಆಗಲು ಭಾಗ್ಯಾಳೇ ಕಾರಣ, ಇದೇನಾ ನೀನು ಅಪ್ಪ-ಅಮ್ಮನನ್ನು ನೋಡಿಕೊಳ್ಳುವ ರೀತಿ. ನನ್ನ ಅತ್ತೆ ಮಾವನನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದು ಹೇಳುತ್ತಿದ್ದೆ, ಅವರು ಹೊರಗೆ ಹೋಗುವಾಗ ಒಂದು ಕ್ಯಾಬ್‌ ಬುಕ್‌ ಮಾಡಬೇಕು ಎಂಬ ಪರಿಜ್ಞಾನ ಇರಲಿಲ್ಲವಾ ಎಂದು ಪ್ರಶ್ನಿಸುತ್ತಾನೆ. ಅವಳಿಗೆ ಬುಕ್‌ ಮಾಡಲು ಬಂದರೆ ತಾನೇ ಮಾಡುವುದು ಎಂದು ಶ್ರೇಷ್ಠಾ ವ್ಯಂಗ್ಯವಾಡುತ್ತಾಳೆ. ಈ ಸಮಯದಲ್ಲೂ ನೀನು ನನ್ನ ಮಗಳನ್ನು ಅಪಹಾಸ್ಯ ಮಾಡುತ್ತಿದ್ದೀಯ ನಿನಗೆ ಬಾರಿಸುತ್ತೇನೆ ಎಂದು ಸುನಂದಾ ಬೈಯ್ಯುತ್ತಾಳೆ. ನೀವು ಹಾಗೆ ಬಾರಿಸುವುದಿದ್ರೆ ನಿಮ್ಮ ಮಗಳಿಗೆ ಬಾರಿಸಿ ಎಂದು ತಾಂಡವ್‌ ಹೇಳುತ್ತಾನೆ.‌

ಮಾವನಿಗೆ ಕಾರು ಕೊಡಿಸಲು ಭಾಗ್ಯಾ ನಿರ್ಧಾರ

ನನ್ನ ಮಗಳ ಬಗ್ಗೆ ಮಾತನಾಡದಿದ್ದರೆ ನಿನಗೆ ಸಮಾಧಾನವೇ ಆಗುವುದಿಲ್ಲವಾ? ಎಂದು ಸುನಂದಾ ಕೇಳುತ್ತಾಳೆ. ಅಪ್ಪ ಅಮ್ಮ ಮನೆ ಬಿಟ್ಟು ಹೋದಾಗ ಅವರು ಹೇಗಿದ್ದಾರೆ ಎಂದು ಕೇಳಲು ಬರದಿದ್ದವರು ಈಗ ಅವರ ಮೇಲೆ ಕಾಳಜಿ ಇರುವಂತೆ ನಾಟಕ ಮಾಡುತ್ತಿದ್ದೀರ ಭಾವ ಎಂದು ಪೂಜಾ ಕೇಳುತ್ತಾಳೆ. ನಮ್ಮ ಬಗ್ಗೆ ನಿಜವಾಗಲೂ ಕಾಳಜಿ ಇರುವುದು ಭಾಗ್ಯಾಗೆ, ನಿನ್ನ ಅಪ್ಪನಿಗೆ ಒಂದು ಸ್ಕೂಟರ್‌ ಕೂಡಾ ಕೊಡಿಸಲು ನಿನಗೆ ಸಾಧ್ಯವಾಗಲಿಲ್ಲವಲ್ಲ, ಅಂತದರಲ್ಲಿ ನೀನು ಭಾಗ್ಯಾ ಬಗ್ಗೆ ಹೀಗೆಲ್ಲಾ ಮಾತನಾಡುವುದು ಸರಿಯಲ್ಲ ಎಂದು ಕುಸುಮಾ ರೇಗುತ್ತಾಳೆ.

ಗಂಡನ ಮಾತುಗಳನ್ನು ನೆನಪಿಸಿಕೊಂಡು ಬೇಸರ ವ್ಯಕ್ತಪಡಿಸುವ ಭಾಗ್ಯಾ, ಏನೋ ನೆನಪಾದವಳಂತೆ ಬ್ಯಾಗ್‌ ತೆಗೆದುಕೊಂಡು ಹೋಗುತ್ತಾಳೆ. ಭಾಗ್ಯಾ ಮನೆಯಲ್ಲಿ ಇಲ್ಲದನ್ನು ನೋಡಿದ ತಾಂಡವ್‌, ನಿಮ್ಮ ಸೊಸೆ ಊರು ಸುತ್ತಲು ಹೋಗಿದ್ದಾಳೆ. ಅವಳನ್ನು ನೋಡಿ ನನ್ನ ಪರಿಚಯದವರು ನನಗೆ ಕಾಲ್‌ ಮಾಡಿ ಹೇಳಿದ್ರು, ಅವಳಿಗೆ ಇಷ್ಟು ಹೊತ್ತಲ್ಲಿ ಊರು ಸುತ್ತುವ ಅಗತ್ಯ ಏನಿದೆ ಎಂದು ಕೇಳುತ್ತಾನೆ. ನನ್ನ ಸೊಸೆ ಏನೇ ಮಾಡಿದರೂ ಅದಕ್ಕೆ ಒಂದು ಕಾರಣ ಇದೆ, ಎಂದು ಕುಸುಮಾ ಹೇಳುತ್ತಾಳೆ. ಅಷ್ಟರಲ್ಲಿ ಭಾಗ್ಯಾ ಮನೆಗೆ ಬರುತ್ತಾಳೆ.

ಊರು ಸುತ್ತಲು ಹೋಗಿದ್ಯಾ ಎಂದು ತಾಂಡವ್‌ ಕೇಳುತ್ತಾನೆ. ನಾನು ಊರು ಸುತ್ತೋಕೆ ಆದ್ರೂ ಹೋಗುವೆ, ಕಾಡು ಸುತ್ತೋಕಾದ್ರೂ ಹೋಗುತ್ತೇನೆ, ಅದನೆಲ್ಲಾ ನೀವು ಏಕೆ ಕೇಳುತ್ತೀರಿ ಎಂದು ಭಾಗ್ಯಾ ಗಂಡನಿಗೆ ಉತ್ತರಿಸುತ್ತಾಳೆ. ನನಗೆ ನಿಮ್ಮ ಬಳಿ ಮಾತನಾಡಲು ಏನಿಲ್ಲ, ಮಾವ ನಿಮ್ಮ ಬಳಿ ಮಾತನಾಡಬೇಕು ಬನ್ನಿ ಎಂದು ಧರ್ಮರಾಜ್‌ನನ್ನು ಕೂರಿಸಿ, ಕೈಯಲ್ಲಿರುವ ಫೋಟೋಗಳನ್ನು ಮಾವನ ಮುಂದೆ ಇಡುತ್ತಾಳೆ. ನಿಮಗೆ ನಾನು ಕಾರು ಕೊಡಿಸಬೇಕು ಎಂದುಕೊಂಡಿದ್ದೇನೆ, ಇಲ್ಲಿರುವ ಮಾಡೆಲ್‌ಗಳಲ್ಲಿ ನಿಮಗೆ ಯಾವುದು ಇಷ್ಟ ನೋಡಿ ಹೇಳಿ ಎನ್ನುತ್ತಾಳೆ. ಇದನ್ನು ಕೇಳಿ ತಾಂಡವ್ ಶಾಕ್‌ ಆಗುತ್ತಾನೆ, ಕಾರು ಕೊಡಿಸುವುದು ಸುಲಭದ ಮಾತಲ್ಲ, ಅದಕ್ಕೂ ಇಎಂಐ ಕಟ್ಟಬೇಕು, ಇದೆಲ್ಲಾ ಎಷ್ಟು ದಿನ ಅಂತ ನಾನೂ ನೋಡುತ್ತೇನೆ ಎಂದು ಅಲ್ಲಿಂದ ಹೋಗುತ್ತಾನೆ. ಸೊಸೆಯ ಪ್ರೀತಿ ಕಂಡು ಕುಸುಮಾ, ಧರ್ಮರಾಜ್‌ ಖುಷಿಯಾಗುತ್ತಾರೆ.

ಭಾಗ್ಯಲಕ್ಷ್ಮೀ ಧಾರಾವಾಹಿ ಪಾತ್ರ ಪರಿಚಯ

ಕುಸುಮಾ - ಪದ್ಮಜಾ ರಾವ್‌

ಧರ್ಮರಾಜ್‌ - ಶಶಿಧರ್‌ ಕೋಟೆ

ಭಾಗ್ಯಾ - ಸುಷ್ಮಾ ಕೆ ರಾವ್‌

ತಾಂಡವ್‌ ಸೂರ್ಯವಂಶಿ - ಸುದರ್ಶನ್‌ ರಂಗಪ್ರಸಾದ್‌

ಭಾಗ್ಯಾ ತಾಯಿ - ಸುನಿತಾ ಶೆಟ್ಟಿ

ಪೂಜಾ - ಆಶಾ ಅಯ್ಯನರ್‌

ಶ್ರೇಷ್ಠಾ - ಕಾವ್ಯಾ ಗೌಡ

ತನ್ವಿ - ಅಮೃತಾ ಗೌಡ

ಗುಂಡಣ್ಣ - ನಿಹಾರ್‌ ಗೌಡ

ಸುಂದರಿ - ಸುನೇತ್ರಾ ಪಂಡಿತ್‌

Whats_app_banner