Bhagyalakshmi serial: ಬದುಕಿನ ನಿರ್ಣಾಯಕ ಘಟ್ಟಕ್ಕೆ ಬಂದು ನಿಂತ ಭಾಗ್ಯಲಕ್ಷ್ಮೀ; ಕಲರ್ಸ್ ಕನ್ನಡದಿಂದ ನಾನು ಭಾಗ್ಯ ಅಭಿಯಾನ
ಕನ್ನಡ ಸುದ್ದಿ  /  ಮನರಂಜನೆ  /  Bhagyalakshmi Serial: ಬದುಕಿನ ನಿರ್ಣಾಯಕ ಘಟ್ಟಕ್ಕೆ ಬಂದು ನಿಂತ ಭಾಗ್ಯಲಕ್ಷ್ಮೀ; ಕಲರ್ಸ್ ಕನ್ನಡದಿಂದ ನಾನು ಭಾಗ್ಯ ಅಭಿಯಾನ

Bhagyalakshmi serial: ಬದುಕಿನ ನಿರ್ಣಾಯಕ ಘಟ್ಟಕ್ಕೆ ಬಂದು ನಿಂತ ಭಾಗ್ಯಲಕ್ಷ್ಮೀ; ಕಲರ್ಸ್ ಕನ್ನಡದಿಂದ ನಾನು ಭಾಗ್ಯ ಅಭಿಯಾನ

Bhagyalakshmi serial: ತನ್ನನ್ನು ತಾನು ಕಂಡುಕೊಂಡ ಭಾಗ್ಯಳ ದಿಟ್ಟ ಪಯಣದಿಂದ ಹುರುಪು ಪಡೆದು ಅವಳಂತೆ ಎಲ್ಲ ಎಲ್ಲೆಗಳನ್ನು ದಾಟಬಯಸುವ ಹೆಂಗಳೆಯರ ಕೆಚ್ಚು ಹಾಗೂ ಸ್ಥೈರ್ಯವನ್ನು ಸಂಭ್ರಮಿಸುವುದೇ ನಾನು ಭಾಗ್ಯ ಅಭಿಯಾನದ ಗುರಿ.

ಕಲರ್ಸ್ ಕನ್ನಡದಿಂದ ನಾನು ಭಾಗ್ಯ ಅಭಿಯಾನ
ಕಲರ್ಸ್ ಕನ್ನಡದಿಂದ ನಾನು ಭಾಗ್ಯ ಅಭಿಯಾನ

Bhagyalakshmi serial: ಸಾಮಾನ್ಯ ಮಧ್ಯಮ ವರ್ಗದ ಕುಟುಂಬದಲ್ಲಿ ಬೆಳೆದರೂ, ತನಗೊದಗಿದ ಪರಿಸ್ಥಿತಿಯನ್ನು ಎದುರಿಸುತ್ತಾ ಕೆಚ್ಚು, ಮಹತ್ವಾಕಾಂಕ್ಷೆಗಳ ಹಾದಿ ತುಳಿದ ಭಾಗ್ಯಳ ಪಯಣ ವೀಕ್ಷಕರ ಮನಸನ್ನು ಇನ್ನಿಲ್ಲದಂತೆ ತಟ್ಟಿದೆ. ಎದುರಾದ ಸವಾಲುಗಳನ್ನೆಲ್ಲಾ ನಿಭಾಯಿಸುತ್ತಾ, ಎಲ್ಲ ನಿರೀಕ್ಷೆಗಳು ಹುಸಿಯಾಗುವಂತೆ ಬೆಳೆಯುತ್ತಿರುವ ಭಾಗ್ಯಳ ಕಥೆ ನಾಡಿನ ಹೆಣ್ಣು ಮಕ್ಕಳಿಗೆ ಹೊಸ ಹುರುಪು ತುಂಬುತ್ತಿದೆ. ಕಲರ್ಸ್ ಕನ್ನಡದ ಜನಪ್ರಿಯ ಧಾರಾವಾಹಿ ʼಭಾಗ್ಯಲಕ್ಷ್ಮಿʼ ಇದೀಗ ಏಳುನೂರನೇ ಸಂಚಿಕೆಯ ಹೊಸಿಲಿನಲ್ಲಿದ್ದು, ಭಾಗ್ಯ ತನ್ನ ಬದುಕಿನ ನಿರ್ಣಾಯಕ ತಿರುವಿನಲ್ಲಿ ನಿಂತಿದ್ದಾಳೆ. ಇಲ್ಲಿಂದ ಮುಂದಕ್ಕೆ ಕಥೆ ಭಾರೀ ಬದಲಾವಣೆ ಕಾಣಲಿದೆ.

ಆರಂಭದಲ್ಲಿ ತನ್ನ ಗಂಡನ ಸಾಂಪ್ರದಾಯಿಕ ಮನೆಗೆ ತಕ್ಕ ಸೊಸೆಯಾಗಲು ಹೆಣಗಿದ ಭಾಗ್ಯಳ ಪ್ರೀತಿ ಮತ್ತು ತಾಳ್ಮೆ ಅವಳ ಅತ್ತೆ ಕುಸುಮಳ ಮನಗೆದ್ದಿದ್ದವು. ಅದೇ ಉತ್ಸಾಹದಲ್ಲಿ ಎರಡು ಮಕ್ಕಳಾದ ಮೇಲೂ ಮತ್ತೆ ಶಾಲೆಗೆ ಸೇರಿ ಹತ್ತನೇ ಕ್ಲಾಸಿನ ಪರೀಕ್ಷೆಯನ್ನೂ ಮುಗಿಸಿದ ಭಾಗ್ಯ ತನ್ನ ಕುಟುಂಬ ಹಾಗೂ ಮಕ್ಕಳ ಗೌರವ ಗಳಿಸಿದಳು. ಹೆಸರಾಂತ ಫೈವ್ ಸ್ಟಾರ್ ಹೋಟೆಲಿನಲ್ಲಿ ಮುಖ್ಯ ಶೆಫ್ ಆಗಿ ಕೆಲಸ ಶುರುಮಾಡಿದಾಗಲಂತೂ ಅವಳ ಪಯಣ ಹೊಸ ಮಜಲಿಗೇರಿತ್ತು.

ರೋಚಕ ಸಂಚಿಕೆಗಳು

ಆದರೂ ಇದೀಗ ಭಾಗ್ಯ ತನ್ನ ಕುಟುಂಬದ ತಳಪಾಯವನ್ನೇ ಅಲುಗಾಡಿಸುವಂಥ ಸತ್ಯಕ್ಕೆ ಮುಖಾಮುಖಿಯಾಗಿದ್ದಾಳೆ. ತನ್ನ ಗಂಡ ತಾಂಡವನ ಮೋಸ ಬಟಾಬಯಲಾಗಿ ಕಂಗೆಟ್ಟ ಅವಳಿಗೆ ಸಂಸಾರದಲ್ಲಿ ಉಳಿಯಬೇಕೋ ಬೇಡವೊ ಅನ್ನುವ ಪ್ರಶ್ನೆ ಎದುರಾಗಿತ್ತು. ಸಂಸಾರದೊಳಗೇ ಇದ್ದು ತನ್ನನ್ನು ತಾನು ಮರಳಿ ಕಂಡುಕೊಳ್ಳುವ ಕೆಚ್ಚಿನ ನಿರ್ಧಾರ ತೆಗೆದುಕೊಂಡಿರುವ ಭಾಗ್ಯಳ ಇದುವರೆಗೆ ಕಂಡಿರದ ಹೊಸ ಮುಖದ ಪರಿಚಯ ವೀಕ್ಷಕರಿಗೆ ಮುಂಬರುವ ಸಂಚಿಕೆಗಳಲ್ಲಿ ಆಗಲಿದೆ. ತನ್ನನ್ನು ತಾನು ಸಂಪೂರ್ಣವಾಗಿ ಬದಲಾಯಿಸಿಕೊಂಡು ತನ್ನ ಮುಂದಿನ ಹೆಜ್ಜೆಗಳನ್ನು ದೃಢವಾಗಿ ಇಡಲಿರುವ ಸ್ವತಂತ್ರ ಭಾಗ್ಯಳನ್ನು ಅವರು ನೋಡಲಿದ್ದಾರೆ.

ನಾನು ಭಾಗ್ಯ ಅಭಿಯಾನ

ಭಾಗ್ಯಳ ಈ ದಿಟ್ಟ ತಿರುವಿನ ಕ್ಷಣವನ್ನು ಸಂಭ್ರಮಿಸಲು ಕಲರ್ಸ್ ಕನ್ನಡ “ನಾನು ಭಾಗ್ಯ” ಅನ್ನುವ ಅಭಿಯಾನವೊಂದನ್ನು ಆರಂಭಿಸಿದೆ. ಈ ಅಭಿಯಾನಕ್ಕೆಂದೇ #IAMBHAGYA ಅನ್ನುವ ಹ್ಯಾಷ್ ಟ್ಯಾಗ್ ಆರಂಭಿಸಲಾಗಿದೆ. ಇದರ ಮುಖಾಂತರ ಎಲ್ಲ ಹೆಣ್ಣುಮಕ್ಕಳನ್ನು ಸಮಾಜದ ಒತ್ತಡಗಳನ್ನು ಮೀರಿ ತಮ್ಮ ಕನಸನ್ನು ಬೆಂಬತ್ತುವಂತೆ ಉತ್ತೇಜಿಸುವುದು ಕಲರ್ಸ್ ಕನ್ನಡದ ಉದ್ದೇಶ. ಇದಕ್ಕಾಗಿ ಪ್ರೊಮೋ ಹಾಡೊಂದನ್ನು ಸಹ ನಿರ್ಮಿಸಲಾಗಿದೆ. ಈ ಹಾಡಿಗೆ ಗಿರಿಧರ್ ದಿವಾನ್ ಸಂಗೀತ ನೀಡಿದ್ದು, ಪ್ರದ್ಯುಮ್ನ ಗೀತೆ ರಚಿಸಿದ್ದಾರೆ.

ಭಾಗ್ಯಲಕ್ಷ್ಮೀ ಧಾರಾವಾಹಿ ಪಾತ್ರ ಪರಿಚಯ

ಕುಸುಮಾ - ಪದ್ಮಜಾ ರಾವ್‌

ಧರ್ಮರಾಜ್‌ - ಶಶಿಧರ್‌ ಕೋಟೆ

ಭಾಗ್ಯಾ - ಸುಷ್ಮಾ ಕೆ ರಾವ್‌

ತಾಂಡವ್‌ ಸೂರ್ಯವಂಶಿ - ಸುದರ್ಶನ್‌ ರಂಗಪ್ರಸಾದ್‌

ಭಾಗ್ಯಾ ತಾಯಿ - ಸುನಿತಾ ಶೆಟ್ಟಿ

ಪೂಜಾ - ಆಶಾ ಅಯ್ಯನರ್‌

ಶ್ರೇಷ್ಠಾ - ಕಾವ್ಯಾ ಗೌಡ

ತನ್ವಿ - ಅಮೃತಾ ಗೌಡ

ಗುಂಡಣ್ಣ - ನಿಹಾರ್‌ ಗೌಡ

ಸುಂದರಿ - ಸುನೇತ್ರಾ ಪಂಡಿತ್‌

Whats_app_banner