Bharjari Bachelors 2: ಬರ್ತಿದೆ ಭರ್ಜರಿ ಬ್ಯಾಚುಲರ್ಸ್ ಸೀಸನ್ 2; ಹೊಸ ವರ್ಷಕ್ಕೆ ಹೊಸ ಗ್ಯಾಂಗ್, ಅಚ್ಚರಿಯ ಬದಲಾವಣೆಗಳು
ಜೀ ಕನ್ನಡ ಹಿಟ್ ಶೋಗಳಲ್ಲಿ ಒಂದೆನಿಸಿಕೊಂಡಿರುವ ಭರ್ಜರಿ ಬ್ಯಾಚುಲರ್ಸ್ ಕಾರ್ಯಕ್ರಮ ಇದೀಗ ಎರಡನೇ ಸೀಸನ್ ಮೂಲಕ ಆಗಮಿಸಿದೆ . ಮೊದಲಾರ್ಥವಾಗಿ ಈ ಸೀಸಿನ್‌ನ ಮೊದಲ ಪ್ರೋಮೋ ಬಿಡುಗಡೆ ಆಗಿದ್ದು, ಹೊಸ ವರ್ಷಕ್ಕೆ, ಹೊಸ ಬಳಗದ ಜತೆಗೆ ನಿರೂಪಕ ನಿರಂಜನ್ ದೇಶಪಾಂಡೆ ಸಹ ಬಂದಿದ್ದಾರೆ.

Bharjari Bachelors 2: ನಾನ್ ಫಿಕ್ಷನ್ ಕಿಂಗ್ ಎನಿಸಿಕೊಂಡಿರುವ ಜೀ ಕನ್ನಡ ವಾಹಿನಿ ಇದೀಗ, ಮತ್ತೊಂದು ಹಿಟ್ ರಿಯಾಲಿಟಿ ಶೋ ಮೂಲಕ ಎಂಟ್ರಿಕೊಡುತ್ತಿದೆ. ಅದುವೇ ಭರ್ಜರಿ ಬ್ಯಾಚುಲರ್ಸ್ ಸೀಸನ್ 2 (Bharjari Bachelors Season 2) ಶೋ. ಹೌದು, ಕಳೆದ ವರ್ಷದಿಂದ ಆರಂಭವಾದ ಈ ಕಾರ್ಯಕ್ರಮ, ಇದೀಗ ತನ್ನ ಎರಡನೇ ಆವೃತ್ತಿಯ ಜತೆಗೆ ಆಗಮಿಸುತ್ತಿದೆ. ಹೊಸ ವರ್ಷಕ್ಕೆ ಹೊಸ ಸ್ಪರ್ಧಿಗಳು ಮತ್ತು ಹೊಸ ನಿರೂಪಕರೊಂದಿಗೆ ನಗಿಸಲು ಬರುತ್ತಿದೆ. ಈ ಶೋನ ಮೊದಲ ಪ್ರೋಮೋ ಸಹ ಇಂದು (ಜ 23) ರಿಲೀಸ್ ಆಗಿದೆ.
ಜೀ ಕನ್ನಡ ಭರ್ಜರಿ ಬ್ಯಾಚುಲರ್ಸ್‌ನ ಪ್ರೋಮೋ ಬಿಡುಗಡೆ ಮಾಡಿದೆ. ಬ್ಯಾಚುಲರ್ಸ್ ಪ್ರಾಬ್ಲಮ್‌ಗಳಿಗೆ ಇಲ್ಲಿದೆ ಸಲ್ಯುಷನ್; ಇದು ಮನರಂಜನೆಯ ಹೊಸ ಸೆನ್ಸೇಷನ್! ಎಂಬ ಅಡಿಬರಹದ ಮೂಲಕ ಕಿರುತೆರೆ ವೀಕ್ಷಕರನ್ನು ಮೋಡಿ ಮಾಡಲಿದೆ. ಅಚ್ಚರಿಯ ವಿಚಾರ ಏನೆಂದರೆ, ಈ ಹಿಂದೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ನಿರೂಪಕರಾಗಿದ್ದ ನಿರಂಜನ್ ದೇಶಪಾಂಡೆ, ಭರ್ಜರಿ ಬ್ಯಾಚುಲರ್ಸ್ 2 ಮೂಲಕ ಆಂಕರ್ ಆಗಿ ಜೀ ಕನ್ನಡಕ್ಕೆ ಎಂಟ್ರಿಕೊಡುತ್ತಿದ್ದಾರೆ. ಈ ಹಿಂದೆ ಇದೇ ಶೋವನ್ನು ಅಕುಲ್ ಬಾಲಾಜಿ ನಡೆಸಿಕೊಡುತ್ತಿದ್ದರು.
ಭರ್ಜರಿ ಬ್ಯಾಚುಲರ್ಸ್ 2 ಯಾರೆಲ್ಲ ಇದ್ದಾರೆ?
ಈ ಹಿಂದೆ ಹಲವು ಶೋಗಳಲ್ಲಿ ಭಾಗವಹಿಸಿದ್ದ, ಇನ್ನು ಕೆಲವು ಶೋಗಳಲ್ಲಿ ವಿಜೇತರಾಗಿ ಹೊರ ಹೊಮ್ಮಿದವರನ್ನು ಭರ್ಜರಿ ಬ್ಯಾಚುಲರ್ಸ್ ಶೋಗೆ ಕರೆತರಲಾಗಿದೆ. ಕಳೆದ ಬಿಗ್ ಬಾಸ್ ಸೀಸನ್ 10ರಲ್ಲಿ ಭಾಗವಹಿಸಿದ್ದ ರಕ್ಷಕ್ ಬುಲೆಟ್ ಈ ಶೋನಲ್ಲಿ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟರೆ, ಕಳೆದ ವರ್ಷದ ಸರಿಗಮಪ ಸೀಸನ್ 20ರ ವಿನ್ನರ್ (Sa Re Ga Ma Pa Season 20) ದರ್ಶನ್ ನಾರಾಯಣ್ ಸಹ ಶೋನಲ್ಲಿ ಇದ್ದಾರೆ. ಇದೇ ವರ್ಷದ ಸರಿಗಮಪಕ್ಕೆ ಆಡಿಷನ್ ನೀಡಿದ್ದ ಪ್ರೇಮ್ ಥಾಪ ಸಹ ಶೋನಲ್ಲಿ ಇದ್ದಾರೆ. ಇನ್ನುಳಿದಂತೆ ಕಲರ್ಸ್ ಕನ್ನಡದ ಗಿಚ್ಚಿ ಗಿಲಿ ಗಿಲಿ ಶೋನಲ್ಲಿ ಮಿಂಚಿದ ಕೆಲವು ಹಾಸ್ಯ ಕಲಾವಿದರೂ ಬ್ಯಾಚುಲರ್ಸ್‌ಗೆ ಆಗಮಿಸಿದ್ದಾರೆ.
ಈ ಶೋನ ತೀರ್ಪುಗಾರರು ಯಾರು?
ಜೀ ಕನ್ನಡದ ಭರ್ಜರಿ ಬ್ಯಾಚುಲರ್ಸ್ ಸೀಸನ್ 2 ಪ್ರೋಮೋ ಬಿಡುಗಡೆ ಆಗಿದೆ. ಪ್ರೋಮೋದಲ್ಲಿ ಶೋನಲ್ಲಿ ಭಾಗವಹಿಸಲಿರುವ ಸ್ಪರ್ಧಿಗಳು ಮತ್ತು ನಿರೂಪಕರು ಯಾರು ಎಂಬ ಮಾಹಿತಿ ನೀಡಿದೆ ಜೀ ಕನ್ನಡ ವಾಹಿನಿ. ಆದರೆ ತೀರ್ಪುಗಾರರು ಯಾರು ಎಂಬ ಬಗ್ಗೆ ಗುಟ್ಟು ಬಿಟ್ಟುಕೊಟ್ಟಿಲ್ಲ. ಈ ಹಿಂದಿನ ಸೀಸನ್‌ನಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಮತ್ತು ರಚಿತಾ ರಾಮ್ ತೀರ್ಪುಗಾರರ ಸ್ಥಾನದಲ್ಲಿ ಕೂತಿದ್ದರು. ಅಕುಲ್ ಬಾಲಾಜಿ ಶೋನ ನಿರೂಪಕರಾಗಿದ್ದರು. ಈಗ ಇನ್ನೇನು ಶೀಘ್ರದಲ್ಲಿಯೇ ಜಡ್ಜ್‌ಗಳ ಪ್ರೋಮೋ ಜತೆಗೆ ಯಾವಾಗ ಪ್ರಸಾರ ಎಂಬ ಮಾಹಿತಿಯೂ ಹೊರಬೀಳಲಿದೆ.
