ʻನನ್ನ ಬಾಲ್ಯ ಚೆನ್ನಾಗಿರಲಿಲ್ಲ, ಆ ಒಂದೇ ಒಂದು ಕಾರಣಕ್ಕೆ ಪಾಠ ಕಲಿಸಿದ ಶಿಕ್ಷಕರೇ ಹಾಗೆ ಮಾಡಬಾರದಿತ್ತು!ʼ ನಟಿ ವಿಜಯಲಕ್ಷ್ಮೀ ಕಣ್ಣೀರು
ಸ್ಕೂಲ್ ಕಾರ್ಯಕ್ರಮಗಳಿಗೆ ಎಲ್ಲರ ಪೇರೆಂಟ್ಸ್ ಬಂದು ತಮ್ಮ ಮಕ್ಕಳ ಫರ್ಫಾಮನ್ಸ್ ನೋಡೋರು. ಆದರೆ, ನನಗೆ ಆ ಅವಕಾಶವೇ ಸಿಗಲಿಲ್ಲ. ಅದಕ್ಕೆ ಕಾರಣ ನನ್ನ ಮೈಬಣ್ಣ. ಪಾಠ ಕಲಿಸುವ ಟೀಚರ್ಸ್‌ಗಳಿಂದಲೇ ತಿರಸ್ಕಾರಕ್ಕೆ ಒಳಗಾದೆ ಎಂದು ಭರ್ಜರಿ ಬ್ಯಾಚುಲರ್ಸ್ ಸೀಸನ್ 2 ಶೋನಲ್ಲಿ ನಟಿ ವಿಜಯಲಕ್ಷ್ಮೀ ಹೇಳಿಕೊಂಡಿದ್ದಾರೆ.

ಕನ್ನಡ ಕಿರುತೆರೆಯಲ್ಲಿ ಗುರುತಿಸಿಕೊಂಡು, ಇದೀಗ ʻಭರ್ಜರಿ ಬ್ಯಾಚುಲರ್ಸ್ ಸೀಸನ್ 2ʼ ಶೋ ಮೂಲಕ ವೀಕ್ಷಕರಿಗೆ ಮತ್ತಷ್ಟು ಹತ್ತಿರವಾಗಿದ್ದಾರೆ ನಟಿ ವಿಜಯಲಕ್ಷ್ಮೀ. ಕನ್ನಡ ಕಿರುತೆರೆಯಲ್ಲಿ ʻಲಕ್ಷಣʼ, ʻಮೈನಾʼ ಸೇರಿ ಹಲವು ಧಾರಾವಾಹಿಗಳಲ್ಲಿ ನಟಿಸಿರುವ ವಿಜಯಲಕ್ಷ್ಮೀ ಸದ್ಯ ಜೀ ಕನ್ನಡದ ʻಭರ್ಜರಿ ಬ್ಯಾಚುಲರ್ಸ್ ಸೀಸನ್ 2ʼ ಶೋನಲ್ಲಿ ಮಿಂಚುತ್ತಿದ್ದಾರೆ. ಹೀಗಿರುವಾಗಲೇ ಇದೇ ನಟಿ ತಮ್ಮ ಬಾಲ್ಯದ ಕೆಟ್ಟ ಕ್ಷಣದ ಬಗ್ಗೆ ಮಾತನಾಡಿ ಕಣ್ಣೀರಿಟ್ಟಿದ್ದಾರೆ. ಪಾಠ ಕಲಿಸಿದ ಶಿಕ್ಷಕರ ಬಗ್ಗೆ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ಅಷ್ಟಕ್ಕೂ ಆಗಿದ್ದೇನು?
ನಟಿ ವಿಜಯಲಕ್ಷ್ಮೀ ಕೃಷ್ಣ ಸುಂದರಿ. ಲಕ್ಷಣವಾಗಿದ್ದರೂ, ಬಣ್ಣದಲ್ಲಿ ಚೂರು ಕಪ್ಪು. ಆ ಒಂದೇ ಒಂದು ಕಾರಣಕ್ಕೆ ತಮ್ಮ ಬಾಲ್ಯದಲ್ಲಿ ಸಾಕಷ್ಟು ನೋವು, ತಿರಸ್ಕಾರವನ್ನು ಎದುರಿಸಿದ್ದಾರೆ. ಅಷ್ಟೇ ಅಲ್ಲ ಅದೇ ಮೈ ಬಣ್ಣದ ನೆಪದಲ್ಲಿ ಸಾಕಷ್ಟು ಸೀರಿಯಲ್ ಆಡಿಷನ್‌ಗಳನ್ನೂ ಕಳೆದುಕೊಂಡಿದ್ದಾರೆ. ಅದರಲ್ಲೂ ಬಾಲ್ಯದಲ್ಲಿ ಪಾಠ ಕಲಿಸುವ ಶಿಕ್ಷಕ, ಶಿಕ್ಷಕಿಯರೇ ವಿಜಯಲಕ್ಷ್ಮೀ ಅವರನ್ನು ತಿರಸ್ಕಾರ ಮಾಡಿ, ವೇದಿಕೆ ಮೇಲೆ ಹತ್ತದಂತೆ ಮಾಡಿದ್ದರು. ಆ ನೋವು ಇಂದಿಗೂ ಅವರನ್ನು ಕಾಡುತ್ತಿದೆ ಎಂದು ಭರ್ಜರಿ ಬ್ಯಾಚುಲರ್ಸ್ ಸೀಸನ್ 2 ವೇದಿಕೆ ಮೇಲೆ ಹೇಳಿಕೊಂಡಿದ್ದಾರೆ. ಅದನ್ನು ಅವರ ಮಾತಲ್ಲೇ ಓದಿ.
ನನ್ನ ಬಾಲ್ಯವೇ ಒಂದು ಕೆಟ್ಟ ಕನಸು..
"ನನಗೆ ಚಿಕ್ಕ ವಯಸ್ಸಿನಿಂದಲೇ ವೇದಿಕೆ ಅಂದ್ರೆ ತುಂಬ ಇಷ್ಟ. ಟಿವಿಯಲ್ಲಿ ನೋಡಿದಾಗ, ಹೊರಗಡೆ ನಡೆಯುವ ಕಾರ್ಯಕ್ರಮಗಳನ್ನು ನೋಡಿದಾಗ, ನನಗೂ ಅಲ್ಲಿ ಹೋಗಿ ನಿಲ್ಲಬೇಕು ಅನ್ನೋ ಆಸೆ. ಅಲ್ಲಿ ಹೋಗಿ ಫರ್ಫಾಮ್ ಮಾಡಬೇಕು, ಚಪ್ಪಾಳೆ ಗಿಟ್ಟಿಸಿಕೊಳ್ಳಬೇಕು ಅನ್ನೋ ಕನಸು. ಆದರೆ, ಇಲ್ಲಿಯವರೆಗೂ ನಾನು ನನ್ನ ಬಾಲ್ಯವನ್ನು ಹೇಗೆ ಕಳೆದಿದ್ದೇನೆ ಅನ್ನೋದೇ ಗೊತ್ತಿಲ್ಲ. ಏಕೆಂದರೆ ನನ್ನ ಪಾಲಿಗೆ ಅದೊಂದು ಕೆಟ್ಟ ಕನಸು. ಬಾಲ್ಯದಲ್ಲಿ ಒಂದೇ ಒಂದು ದಿನವೂ ನಾನು ಪ್ರೈಮರಿ ಸ್ಕೂಲ್, ಹೈ ಸ್ಕೂಲ್ ಎಲ್ಲಿಯೂ ವೇದಿಕೆ ಮೇಲೆ ಹತ್ತಿಲ್ಲ" ಎಂದಿದ್ದಾರೆ ವಿಜಯಲಕ್ಷ್ಮೀ.
ನನ್ನ ಬಣ್ಣ ನೋಡಿ ವೇದಿಕೆಯಿಂದ ಕೆಳಗಿಳಿಸ್ತಿದ್ರು..
ಮುಂದುವರಿದು ಮಾತನಾಡುವ ಅವರು, "ಸ್ಕೂಲ್ ಕಾರ್ಯಕ್ರಮಗಳಿಗೆ ಎಲ್ಲರ ಪೇರೆಂಟ್ಸ್ ಬಂದು ತಮ್ಮ ಮಕ್ಕಳ ಫರ್ಫಾಮನ್ಸ್ ನೋಡೋರು. ಆದರೆ, ನನಗೆ ಆ ಅವಕಾಶವೇ ಸಿಗಲಿಲ್ಲ. ಒಂದು ಈ ಸಮಾಜ ಚೇಂಜ್ ಆಗಬೇಕೆಂದರೆ, ಆಧಾರ ಸ್ತಂಭಗಳಾದ ಶಿಕ್ಷಕರು, ತಂದೆ ತಾಯಿ ಆಗಿರಬಹುದು. ಇವರೆಲ್ಲರೂ ಬದಲಾಗಬೇಕು. ಏಕೆಂದರೆ ನನ್ನ ಮೈ ಬಣ್ಣದ ವಿಚಾರಕ್ಕೆ ತಿರಸ್ಕಾರಕ್ಕೆ ಒಳಗಾದ ಸಾಕಷ್ಟು ಉದಾಹರಣೆಗಳಿವೆ. ಶಾಲಾ ದಿನಗಳಲ್ಲಿ ಕಾರ್ಯಕ್ರಮಗಳಿದ್ದರೆ, ವೇದಿಕೆ ಮೇಲೆ ಮೊದಲ ಸಾಲಿನಲ್ಲಿ ನಿಂತರೆ, ನನ್ನನ್ನು ಕರೆದು ಹೊರಗಡೆ ಕಳಿಸಿಬಿಟ್ರು. ನನ್ನ ಜಾಗಕ್ಕೆ ಬೇರೆ ಹುಡುಗಿಯನ್ನ ರೀಪ್ಲೆಸ್ ಮಾಡಿದ್ರು" ಎಂದು ಭರ್ಜರಿ ಬ್ಯಾಚುಲರ್ಸ್ ವೇದಿಕೆ ಮೇಲೆ ಕಣ್ಣೀರಿಟ್ಟಿದ್ದಾರೆ.
ಟೀಚರ್ಸ್‌ಗಳೇ ಹೀಗೆ ಮಾಡಿದ್ರೆ ಹೇಗೆ?
"ನಾನು ಕಪ್ಪಗಿದ್ದೇನೆ ಅನ್ನೋ ಒಂದೇ ಒಂದು ಕಾರಣಕ್ಕೆ ಟೀಚರ್ಸ್‌ಗಳಿಂದಲೇ ತಿರಸ್ಕಾರಕ್ಕೆ ಒಳಗಾಗುತ್ತಲೇ ಬಂದೆ. ಈಗಲೂ ಕೆಲವೊಂದು ಕಡೆ ಇದು ನಡಿಯಬಹುದೇನೋ? ಇದೆಲ್ಲವೂ ಶಾಲಾ ಹಂತದಿಂದಲೇ ಬರಬೇಕು. ಶಿಕ್ಷಕರೇ ಇದೆಲ್ಲವನ್ನು ತಿಳಿ ಹೇಳಬೇಕು. ಎಲ್ಲರೂ ಒಂದೇ, ಎಲ್ಲ ಮಕ್ಕಳೂ ಒಂದೇ ಎಂದು ಭಾವಿಸಬೇಕು. ಇದೀಗ ನನಗೆ ನನ್ನ ಬಗ್ಗೆ ಹೆಮ್ಮೆ ಇದೆ. ನನ್ನ ಚರ್ಮದ ಬಣ್ಣದಿಂದಲೇ ನಾನು ಇವತ್ತು ಅನ್ನ ತಿನ್ನುತ್ತಿದ್ದೇನೆ. ಈ ಮೊದಲು ನನ್ನೊಳಗೆ ಅಭದ್ರತೆ ಭಾವ ಕಾಡುತ್ತಿತ್ತು. ಅದೆಲ್ಲವನ್ನು ದಾಟಿ ಇದೀಗ ಮುಂದೆ ಬಂದಿದ್ದೇನೆ. ಸೆಲ್ಫ್ ಮೋಟಿವೇಟ್ ಮಾಡಿಕೊಳ್ಳುತ್ತಿರುತ್ತೇನೆ" ಎಂದು ಹೇಳಿದ್ದಾರೆ ವಿಜಯಲಕ್ಷ್ಮೀ.