ಭೋಜ್‌ಪುರಿ ನಟಿ ಅಮೃತಾ ಪಾಂಡೆ ಬಿಹಾರದ ಮನೆಯಲ್ಲಿ ಶವವಾಗಿ ಪತ್ತೆ; ಸಾವಿಗೂ ಮುನ್ನ ವಾಟ್ಸಾಪ್ ಸ್ಟೇಟಸ್, ಆತ್ಮಹತ್ಯೆ ಶಂಕೆ
ಭೋಜ್‌ಪುರಿ ನಟಿ ಅಮೃತಾ ಪಾಂಡೆ ಬಿಹಾರದ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಸಾವಿಗೂ ಮುನ್ನ ವಾಟ್ಸಾಪ್ ಸ್ಟೇಟಸ್ ಹಾಕಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಪಾಟ್ನಾ: ಅನ್ನಪೂರ್ಣ ಎಂದೇ ಖ್ಯಾತರಾಗಿದ್ದ ಭೋಜ್‌ಪುರಿ ನಟಿ ಅಮೃತಾ ಪಾಂಡೆ (Amrita Pandey) ಬಿಹಾರದ ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಕಳೆದ ಶನಿವಾರ (ಏಪ್ರಿಲ್ 27) ಈ ಘಟನೆ ನಡೆದಿದ್ದು, ಸಾವಿಗೆ ಕೆಲವು ಗಂಟೆಗಳ ಮುನ್ನ ಈಕೆ ತನ್ನ ವಾಟ್ಸಾಪ್ ಸ್ಟೇಟಸ್‌ನಲ್ಲಿ ನಿಗೂಢ ಸ್ಟೇಟಸ್ ಹಂಚಿಕೊಂಡಿದ್ದರು. 27 ವರ್ಷದ ನಟಿ ಅಮೃತಾ ಪಾಂಡೆ ಆದಂಪುರ ಶಿಪ್ ಘಾಟ್‌ನಲ್ಲಿರುವ ದಿವ್ಯಧರ್ಮ ಅಪಾರ್ಟ್‌ಮೆಂಟ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ ಎಂದು ವರದಿಯಾಗಿದೆ.
ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ಅಮೃತಾ ಪಾಂಡೆ ಖಿನ್ನತೆಯಿಂದ ಬಳಲುತ್ತಿದ್ದರು. ತನ್ನ ಸಿನಿ ಬದುಕಿನ ಬಗ್ಗೆ ತುಂಬಾ ಚಿಂತೆಗೊಳಲಾಗಿದ್ದರು ಎಂದು ವರದಿಯಾಗಿದೆ. ಅಮೃತಾ ಅವರ ಮಾನಸಿಕ ಆರೋಗ್ಯದ ಹಿಂದಿನ ಕಾರಣವೆಂದರೆ ಆಕೆಗೆ ಸಿನಿಮಾ ಕ್ಷೇತ್ರದಲ್ಲಿ ಸಾಕಷ್ಟು ಅವಕಾಶ ಸಿಗುತ್ತಿರಲಿಲ್ಲ ಎಂದು ಅಮೃತಾ ಅವರ ಕುಟುಂಬದವರು ಹೇಳಿಕೊಂಡಿದ್ದಾರೆ.
ಅಮೃತಾ ಪಾಂಡೆ ಅವರು 2022 ರಲ್ಲಿ ಮುಂಬೈ ಮೂಲದ ಅನಿಷೇನ್ ಇಂಜಿನಿಯರ್ ಚಂದ್ರಮಣಿ ಜಂಗಡ್ ಎಂಬುವವನ್ನು ವಿವಾಹವಾಗಿದ್ದರು. ಅಮೃತಾ ಪತಿಯೊಂದಿಗೆ ಮುಂಬೈನಲ್ಲಿ ನೆಲೆಸಿದ್ದರು. ಕುಟುಂಬದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಭಾಗಲ್ಪುರಕ್ಕೆ ಆಗಮಿಸಿದ್ದರು. ಸಾಮಾಜಿಕ ಜಾಲತಾಣದಲ್ಲಿ ನಿಗೂಢವಾದ ಸ್ಟೇಟಸ್ ಹಾಕಿದ ನಂತರ ತಮ್ಮ ಬಿಹಾರದ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.