Actor Kishore: 16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ನಟ ಕಿಶೋರ್ ರಾಯಭಾರಿ, ಮಾರ್ಚ್ 1-8ಕ್ಕೆ ಚಿತ್ರೋತ್ಸವ
BIFFES: ಬೆಂಗಳೂರಿನಲ್ಲಿ 2025ರ ಮಾರ್ಚ್ 1 ರಿಂದ 8ರವರೆಗೆ ನಡೆಯಲಿರುವ 16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ರಾಯಭಾರಿಯಾಗಿ ದಕ್ಷಿಣ ಭಾರತ ಹಾಗೂ ಕನ್ನಡದ ಜನಪ್ರಿಯ ನಟ ಕಿಶೋರ್ ನೇಮಕಗೊಂಡಿದ್ದಾರೆ.
ಬೆಂಗಳೂರು: ದಕ್ಷಿಣ ಭಾರತ ಹಾಗೂ ಕನ್ನಡದ ಹೆಸರಾಂತ ಚಲನಚಿತ್ರ ನಟ ಕಿಶೋರ್ ಕುಮಾರ್ ಜಿ ಅವರು 16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ರಾಯಭಾರಿಯಾಗಿ ನೇಮಕಗೊಂಡಿದ್ದಾರೆ. ಈ ಕುರಿತು ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದೆ.
ಚಿತ್ರೋತ್ಸವ ಯಾವಾಗ?
2024-2025ನೇ ಸಾಲಿನಲ್ಲಿ 16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವನ್ನು 2025ರ ಮಾರ್ಚ್ 1 ರಿಂದ 8ರ ವರೆಗೆ ಬೆಂಗಳೂರಿನಲ್ಲಿ ಆಯೋಜಿಸಲಾಗಿದೆ. ಚಿತ್ರೋತ್ಸವದ ಕುರಿತು ಹೆಚ್ಚಿನ ಪ್ರಚಾರ ಸಲುವಾಗಿ ಹಿಂದಿ ಹಾಗೂ ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲಿ ನಟಿಸಿ ಜನ ಮನ್ನಣೆ ಪಡೆದಿರುವ ಕನ್ನಡದ ಖ್ಯಾತ ನಟ ಕಿಶೋರ್ ಕುಮಾರ್. ಜಿ ಇವರನ್ನು ಚಿತ್ರೋತ್ಸವದ 16ನೇ ಆವೃತ್ತಿಗೆ ರಾಯಭಾರಿಯಾಗಿ ನೇಮಿಸಿರುವುದಾಗಿ ಆದೇಶದಲ್ಲಿ ತಿಳಿಸಲಾಗಿದೆ.
ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಬೆಲ್ಜಿಯಂನ ಎಫ್‌ಐಎಪಿಎಫ್ ಅಂತಾರಾಷ್ಟ್ರೀಯ ಮನ್ನಣೆ ಪಡೆದಿರುವ ಚಿತ್ರೋತ್ಸವವಾಗಿದೆ. ಸುಮಾರು 8 ದಿನಗಳ ಕಾಲ ಬೆಂಗಳೂರಿನ 13 ಚಿತ್ರಮಂದಿರಗಳಲ್ಲಿ ದೇಶ-ವಿದೇಶಗಳ ಅತ್ಯುನ್ನತ ಚಿತ್ರಗಳ ಪ್ರದರ್ಶನ ನಡೆಯಲಿದೆ. ಇದರೊಂದಿಗೆ ಚಲನಚಿತ್ರಗಳಿಗೆ ಸಂಬಂಧಿಸಿದಂತೆ ಕಾರ್ಯಾಗಾರಗಳು, ವಿಚಾರ ಸಂಕಿರಣ ಇನ್ನಿತರ ಚಿತ್ರರಂಗಕ್ಕೆ ಪೂರಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಸಂಘಟನಾ ಸಮಿತಿಯ ಅಧ್ಯಕ್ಷರೂ ಆಗಿರುವ ಮಾನ್ಯ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರು ಇತ್ತೀಚೆಗಷ್ಟೆ ಸಭೆ ನಡೆಸಿ, ಚಿತ್ರೋತ್ಸವದ ದಿನಾಂಕ ಘೋಷಿಸಿದ್ದಾರೆ. "16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ “ಸರ್ವ ಜನಾಂಗದ ಶಾಂತಿಯ ತೋಟ” ಶೀರ್ಷಿಕೆಯಡಿ ಪ್ರಸಕ್ತ ಸಾಲಿನಲ್ಲಿ ನಡೆಯುತ್ತಿದ್ದು, ಚಿತ್ರೋತ್ಸವಕ್ಕೆ ದೇಶ-ವಿದೇಶಗಳಿಂದ ಅತ್ಯುನ್ನತ ಚಿತ್ರಗಳನ್ನು ತರುವ ಕುರಿತು ಹಾಗೂ ದೇಶ-ವಿದೇಶಗಳ ಸಿನಿಮಾ ರಂಗದ ಗಣ್ಯಾಥಿ ಗಣ್ಯರನ್ನು ಚಿತ್ರೋತ್ಸವದಲ್ಲಿ ಭಾಗವಹಿಸಲು ಕ್ರಮ ಕೈಗೊಳ್ಳಲಾಗಿದೆ" ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
200 ಚಲನಚಿತ್ರಗಳ ಪ್ರದರ್ಶನ
16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಸುಮಾರು 60 ದೇಶಗಳು ಭಾಗವಹಿಸಲಿವೆ. ಕನ್ನಡ ಸೇರಿ ವಿವಿಧ ಭಾಷೆಗಳ ಒಟ್ಟಾರೆ 200 ಚಲನಚಿತ್ರಗಳು ಪ್ರದರ್ಶನಗೊಳ್ಳಲಿವೆ. ವಿವಿಧ 13 ಚಿತ್ರಮಂದಿರಗಳಲ್ಲಿ ಈ ಸಿನಿಮಾಗಳು ಎಂಟು ದಿನಗಳ ಕಾಲ ಪ್ರದರ್ಶನಗೊಳ್ಳಲಿವೆ. ಬೆಂಗಳೂರು ಮತ್ತು ರಾಜ್ಯದ ನಾಗರಿಕರಿಗೆ ಅಂತರರಾಷ್ಟ್ರೀಯ ಚಲನಚಿತ್ರ ವೀಕ್ಷಿಸಲು ಇದು ಅವಕಾಶವಾಗಿದೆ. ಬೆಂಗಳೂರು ಚಿತ್ರೋತ್ಸವದ ಕುರಿತು ಹೆಚ್ಚಿನ ಮಾಹಿತಿ ತಿಳಿಯಲು ಭೇಟಿ ನೀಡಬೇಕಾದ ವೆಬ್‌ಸೈಟ್ ವಿಳಾಸ: https://biffes.org/