ಬಿಗ್ಬಾಸ್-11 ಆರಂಭಕ್ಕೆ ದಿನಾಂಕ ಫಿಕ್ಸ್; 10 ವರ್ಷದಿಂದ ಒಂದ್ಲೆಕ್ಕ, ಈಗಿಂದ ಬೇರೆ ಲೆಕ್ಕ ಎಂದ ಸುದೀಪ್
Bigg Boss 11: ಬಹುನಿರೀಕ್ಷಿತ ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ಬಾಸ್ 11ನೇ ಆವೃತ್ತಿ ಆರಂಭಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಇದರ ಜೊತೆಗೆ ಈ ಬಿಗ್ಬಾಸ್ ಶೋ ಯಾರು ನಿರೂಪಿಸಲಿದ್ದಾರೆ ಎಂಬ ಗೊಂದಲಕ್ಕೂ ತೆರೆ ಬಿದ್ದಿದೆ. ನಿಮ್ಮೆಲ್ಲ ಗೊಂದಲಗಳಿಗೂ ಇಲ್ಲಿದೆ ಉತ್ತರ.
Bigg Boss 11: ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 11ರ ಆರಂಭಕ್ಕೆ ಕೊನೆಗೂ ದಿನಾಂಕ ಅಂತಿಮಗೊಂಡಿದೆ. ಬಿಗ್ಬಾಸ್ ಯಾವಾಗಿನಿಂದ ಆರಂಭವಾಗುತ್ತದೆ ಎನ್ನುವುದರ ಜೊತೆಗೆ ಈ ಬಾರಿ ಹೋಸ್ಟ್ ಯಾರು ಎಂಬ ಪ್ರಶ್ನೆಗೂ ತೆರೆ ಬಿದ್ದಿದೆ. ಹಲವು ದಿನಗಳಿಂದ ಕುತೂಹಲ ಮೂಡಿಸಿದ್ದ ಪ್ರೇಕ್ಷಕರ ಪ್ರಶ್ನೆಗಳಿಗೆ ಕಲರ್ಸ್ ಕನ್ನಡ ಪ್ರೋಮೋ ಬಿಡುಗಡೆ ಮಾಡುವ ಮೂಲಕ ತೆರೆ ಎಳೆದಿದೆ. ಇದರಲ್ಲಿ ಕಿಚ್ಚ ಸುದೀಪ್ ಖಡಕ್ ಡೈಲಾಗ್ನೊಂದಿಗೆ, ಈ ಬಾರಿಯೂ ತಾನೇ ಹೋಸ್ಟ್ ಎಂಬುದನ್ನು ಖಚಿತಪಡಿಸಿದ್ದಾರೆ.
ಕಲರ್ಸ್ ಕನ್ನಡ ವಾಹಿನಿಯು ತನ್ನ ಸಾಮಾಜಿಕ ಜಾಲತಾಣಗಳಲ್ಲಿ ಪ್ರೋಮೋ ಹಂಚಿಕೊಂಡಿದ್ದು, ಜಗವೇ ಬದಲಾದರೂ ರಿಯಾಲಿಟಿ ಶೋ ಹೋಸ್ಟ್ ಮಾಡುವ ವ್ಯಕ್ತಿ ಬದಲಾಗುವ ಸಾಧ್ಯತೆಯೇ ಇಲ್ಲ ಎನ್ನುವ ಅರ್ಥದಲ್ಲಿ ಬರೆದುಕೊಂಡಿದೆ. ಸೆಪ್ಟೆಂಬರ್ 29 ರಿಂದ ಈ ರಿಯಾಲಿಟಿ ಶೋ ಶುರುವಾಗಲಿದ್ದು, ಅಭಿಮಾನಿಗಳ ಕುತೂಹಲಕ್ಕೆ ತೆರೆ ಎಳೆದಿದೆ. ಅಲ್ಲದೆ, ಈ ಪ್ರೋಮೋದಲ್ಲಿ ಸುದೀಪ್ ನಯಾ ಲುಕ್ನಲ್ಲಿ ಕಾಣಿಸಿಕೊಂಡಿದ್ದು, ಮಾಸ್ ಡೈಲಾಗ್ ಮೂಲಕ ಗಮನ ಸೆಳೆದಿದ್ದಾರೆ. ಆ ಡೈಲಾಗ್ ಅಭಿಮಾನಿಗಳಿಗೆ ಸಖತ್ ಇಷ್ಟವಾಗಿದೆ.
ಪ್ರೋಮೋದಲ್ಲಿ ಏನಿದೆ?
ಇಲ್ಲಿ ಎರಡು ಗುಂಪುಗಳ ನಡುವೆ ಕಾದಾಟ ನಡೆಯುತ್ತಿರುತ್ತದೆ. ಅದಕ್ಕೆ ಬ್ಯಾಗ್ರೌಂಡ್ ವಾಯ್ಸ್ ಓವರ್ನಲ್ಲಿ, 'ಮಾತಿಗೆ ಮಾತು, ಸೇಡಿಗೆ ಸೇಡು, ವರ್ಷ ವರ್ಷ ಯುದ್ಧ ಮಾಡೋರು ಬದಲಾಗ್ತಾರೆ, ಆದರೆ ಎಲ್ಲರನ್ನೂ ನಿಯಂತ್ರಿಸುವ ಸೂತ್ರಧಾರ.. ಎಂದು ಈ ಡೈಲಾಗ್ ಅಲ್ಲಿಗೆ ನಿಂತುಕೊಳ್ಳುತ್ತದೆ. ಆಗ ಸುದೀಪ್ ಎಂಟ್ರಿ ಆಗಲಿದೆ. ಅಲ್ಲದೆ, ಮಾಸ್ ಎಂಟ್ರಿಕೊಟ್ಟ ಸುದೀಪ್, ಕೊನೆಯಲ್ಲಿ ಹೇಳುವ ಒಂದು ಡೈಲಾಗ್, ರೋಮಾಂಚನ ತರಿಸುತ್ತದೆ. 10 ವರ್ಷದಿಂದ ಒಂದು ಲೆಕ್ಕ, ಈಗಿಂದ ಬೇರೇನೆ ಲೆಕ್ಕ. ಇದು ಹೊಸ ಅಧ್ಯಾಯ ಎಂದು ಪಂಚ್ ಡೈಲಾಗ್ ಹೇಳುವುದರೊಂದಿಗೆ 50 ಸೆಕೆಂಡ್ಗಳ ಪ್ರೋಮೋ ಕೊನೆಯಾಗುತ್ತದೆ.
ಹಾಗೆಯೇ ಕಲರ್ಸ್ ಕನ್ನಡವು ಹೋಸ್ಟ್ ಯಾವುದೇ ಕಾರಣಕ್ಕೂ ಬದಲಾವಣೆ ಕಾಣುವುದಿಲ್ಲ ಎಂದು ಶೇರ್ ಮಾಡಿರುವ ಪೋಸ್ಟ್ನಲ್ಲಿ ಹಂಚಿಕೊಂಡಿದೆ. ಬದಲಾವಣೆ ಜಗದ ನಿಯಮ; ಅದಕ್ಕೆ ಬಿಗ್ ಬಾಸ್ ಕೂಡಾ ಹೇಳೋದು 'ಹೌದು ಸ್ವಾಮಿ'. ಆದ್ರೆ ಇವರ ವಿಚಾರದಲ್ಲಿ ಬದಲಾವಣೆ 'ನೋ ವೇ, ಛಾನ್ಸೇ ಇಲ್ಲ'! ಎಂದು ಕ್ಯಾಪ್ಶನ್ ಹಾಕಿದೆ. ಅಂದರೆ ಹೋಸ್ಟ್ ಮಾಡುವವರ ವಿಚಾರವಾಗಿ ಯಾವುದೇ ಕಾರಣಕ್ಕೂ ಬದಲಾವಣೆ ಅಸಾಧ್ಯ ಎಂದು ಸ್ಪಷ್ಟಪಡಿಸಿದೆ. ಆ ಮೂಲಕ ಹರಡಿದ್ದ ಸುಳ್ಳು ಸುದ್ದಿಗಳಿಗೆ ತೆರೆ ಎಳೆದಿದೆ.
ಸ್ಪರ್ಧಿಗಳು ಯಾರೆಂಬುದು ಇನ್ನೂ ರಹಸ್ಯ
ಬಿಗ್ಬಾಸ್ ಆರಂಭಕ್ಕೆ ದಿನಾಂಕವೇನೋ ಫಿಕ್ಸ್ ಆಯ್ತು, ಆದರೆ ಸ್ಪರ್ಧಿಗಳು ಯಾರು ಎಂಬುದು ಇನ್ನೂ ರಹಸ್ಯವಾಗಿಯೇ ಉಳಿದಿದೆ. ಈ ಸಲ ನಟಿ ಪ್ರೇಮ, ಮಜಾ ಭಾರತ ಖ್ಯಾತಿಯ ರಾಘವೇಂದ್ರ, ತುಕಾಲಿ ಸಂತು ಪತ್ನಿ ಮಾನಸ ಜೊತೆಗೆ ಸೋಷಿಯಲ್ ಮೀಡಿಯಾ ಇನ್‌ಫ್ಲುಯರ್‌ಗಳು, ಕಿರುತೆರೆ ಕಲಾವಿದರು ದೊಡ್ಮನೆ ಸೇರಲಿದ್ದಾರೆ ಎಂಬ ಸುದ್ದಿ ಇದೆ. ಇವರ ಜೊತೆಗೆ ಸ್ಯಾಂಡಲ್‌ವುಡ್ ಅವಳಿ ಸಹೋದರಿಯರಾದ ಅದ್ವಿತಿ ಶೆಟ್ಟಿ-ಅಶ್ವಿತಿ ಶೆಟ್ಟಿ ಈ ಬಾರಿ ಸ್ಪರ್ಧಿಗಳಾಗಿ ಬರಬಹುದು ಎನ್ನಲಾಗುತ್ತಿದೆ. ಆದರೆ ಯಾರಿಗೆ ಅವಕಾಶ ಸಿಗುತ್ತದೆ ಎಂಬುದನ್ನು ಕಾದುನೋಡೋಣ.
10 ಆವೃತ್ತಿಗಳ ವಿಜೇತರು | ಆವೃತ್ತಿ | ವರ್ಷ | ಬಹುಮಾನ ಮೊತ್ತ |
---|---|---|---|
ವಿಜಯ್ ರಾಘವೇಂದ್ರ | 1 | 2013 | 50 ಲಕ್ಷ |
ಅಕುಲ್ ಬಾಲಾಜಿ | 2 | 2014 | 50 ಲಕ್ಷ |
ಶ್ರುತಿ | 3 | 2016 | 50 ಲಕ್ಷ |
ಪ್ರಥಮ್ | 4 | 2017 | 50 ಲಕ್ಷ |
ರಾಪರ್ ಚಂದನ್ ಶೆಟ್ಟಿ | 5 | 2018 | 50 ಲಕ್ಷ |
ಶಶಿ ಕುಮಾರ್ | 6 | 2019 | 50 ಲಕ್ಷ |
ಶೈನ್ ಶೆಟ್ಟಿ | 7 | 2020 | 50 ಲಕ್ಷ |
ಮಂಜು ಪಾವಗಡ | 8 | 2021 | 50 ಲಕ್ಷ |
ರೂಪೇಶ್ ಶೆಟ್ಟಿ | 9 | 2022 | 50 ಲಕ್ಷ |
ಕಾರ್ತಿಕ್ ಮಹೇಶ್ | 10 | 2023-24 | 50 ಲಕ್ಷ |