ಕನ್ನಡ ಸುದ್ದಿ  /  Entertainment  /  Bigg Boss Fame Divya Uruduga And Arvind Kp Have Join Hands For A New Movie

Divya and Arvind New Movie: ದಿವ್ಯಾ- ಅರವಿಂದ್‌ ʻಅರ್ದಂಬರ್ಧ ಪ್ರೇಮಕಥೆʼ ವಿಚಾರ; ಬಿಗ್‌ಬಾಸ್‌ ಬಳಿಕ ಇಲ್ಲಿಯೂ ಮುಂದುವರಿದ ಲವ್ವಿಡವ್ವಿ..

ದಿವ್ಯಾ ಉರುಡುಗ ನಟಸಿದ ʻಅರ್ದಂಬರ್ಧ ಪ್ರೇಮ ಕಥೆʼ ಎನ್ನುವ ಭಿನ್ನ ಶೀರ್ಷಿಕೆಯ ಚಿತ್ರ ಈಗಾಗಲೇ ಶೂಟಿಂಗ್ ಮುಗಿಸಿಕೊಂಡಿದೆ. ಆದರೆ ಈ ವರೆಗೂ ಈ ಚಿತ್ರದ ನಾಯಕ ನಟ ಯಾರು ಎಂಬುದು ರಿವೀಲ್ ಆಗಿಲ್ಲ. ಇದೀಗ ಅದಕ್ಕೆ ಉತ್ತರ ಸಿಕ್ಕಿದೆ.

ದಿವ್ಯಾ- ಅರವಿಂದ್‌ ʻಅರ್ದಂಬರ್ಧ ಪ್ರೇಮಕಥೆʼ ವಿಚಾರ; ಬಿಗ್‌ಬಾಸ್‌ ಬಳಿಕ ಇಲ್ಲಿಯೂ ಮುಂದುವರಿದ ಲವ್ವಿಡವ್ವಿ..
ದಿವ್ಯಾ- ಅರವಿಂದ್‌ ʻಅರ್ದಂಬರ್ಧ ಪ್ರೇಮಕಥೆʼ ವಿಚಾರ; ಬಿಗ್‌ಬಾಸ್‌ ಬಳಿಕ ಇಲ್ಲಿಯೂ ಮುಂದುವರಿದ ಲವ್ವಿಡವ್ವಿ..

ಅರವಿಂದ್ ಕೌಶಿಕ್ ನಿರ್ದೇಶನದ "ಹುಲಿರಾಯ" ಸಿನಿಮಾದ ಮೂಲಕ ನಾಯಕಿಯಾಗಿ ಪರಿಚಯಗೊಂಡವರು ದಿವ್ಯಾ. ಈಗ ಮತ್ತೆ ಈಕೆ ಅರವಿಂದ್ ಕೌಶಿಕ್ ಜೊತೆಯಾಗಿದ್ದಾರೆ. ʻಅರ್ದಂಬರ್ಧ ಪ್ರೇಮ ಕಥೆʼ ಎನ್ನುವ ಭಿನ್ನ ಶೀರ್ಷಿಕೆಯ ಚಿತ್ರ ಈಗಾಗಲೇ ಮುಕ್ತಾಯಗೊಂಡಿದೆ. ಆದರೆ ಈ ವರೆಗೂ ಈ ಚಿತ್ರದ ನಾಯಕ ನಟ ಯಾರು ಅಂತಾ ರಿವೀಲ್ ಮಾಡಿಲ್ಲ. ಇದೀಗ ಅದಕ್ಕೆ ಉತ್ತರ ಸಿಕ್ಕಿದೆ.

ಬಿಗ್‌ಬಾಸ್‌ ಬಳಿಕ ಸಿನಿಮಾದಲ್ಲಿಯೂ ಜೋಡಿ..

ಬಿಗ್‌ಬಾಸ್ ಖ್ಯಾತಿಯ ಯುವಜೋಡಿ ಅರವಿಂದ್ ಕೆಪಿ ಮತ್ತು ದಿವ್ಯಾ ಉರುಡುಗ ಈಗ ತೆರೆಯಮೇಲೂ ಒಟ್ಟಿಗೇ ಕಾಣಿಸಿಕೊಳ್ಳುತ್ತಿದ್ದಾರೆ. ಅರವಿಂದ್ ಕೌಶಿಕ್ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ʻಅರ್ದಂಬರ್ಧ ಪ್ರೇಮಕಥೆʼ ಸಿನಿಮಾದಲ್ಲಿ ಅರವಿಂದ್‌ ನಾಯಕನಾಗಿ ನಟಿಸಿದ್ದಾರೆ. ಈ ಮೂಲಕ ಬೈಕ್‌ ರೇಸರ್‌ವೊಬ್ಬರನ್ನು ಚಂದನವನಕ್ಕೆ ನಾಯಕನನ್ನಾಗಿ ಪರಿಚಯಿಸುತ್ತಿದ್ದಾರೆ.

"ತುಘ್ಲಕ್", "ನಮ್ ಏರಿಯಾಲ್ ಒಂದಿನ", "ಹುಲಿರಾಯ", ಸಿನಿಮಾಗಳಿಂದ ಗುರುತಿಸಿಕೊಂಡ ಅರವಿಂದ್ ಕೌಶಿಕ್, ರಕ್ಷಿತ್‌ ಶೆಟ್ಟಿ, ರಿಷಬ್‌ ಶೆಟ್ಟಿ, ಅನೀಶ್, ಬಾಲು ನಾಗೇಂದ್ರ ಸೇರಿದಂತೆ ಅನೇಕ ಕಲಾವಿದರನ್ನು ನಿರ್ದೇಶಕ ಅರವಿಂದ್‌ ಕೌಶಿಕ್ ಪರಿಚಯಿಸಿದ್ದರು. ಈಗ ಬೈಕ್ ರೇಸರ್ ಅರವಿಂದ್‌ರನ್ನು ನಾಯಕನಾಗಿ ಇಂಟ್ರಡ್ಯೂಸ್ ಮಾಡುತ್ತಿದ್ದಾರೆ. ‌

ಅರ್ಜುನ್ ಜನ್ಯ ಅವರು ʻಅರ್ದಂಬರ್ಧ ಪ್ರೇಮಕಥೆʼಗೆ ಚೆಂದದ ಹಾಡುಗಳನ್ನು ಮಾಡಿಕೊಟ್ಟಿದ್ದಾರೆ. ಪ್ರೀತಿ ಎನ್ನುವುದು ನಮ್ಮ ಕನಸುಗಳ ಜೊತೆಗೇ ಬೆಳೆಯುತ್ತೆ. ಆದರೆ ಅದೇ ಪ್ರೀತಿ ಸಂಬಂಧವಾಗಿ ಬದಲಾದಾಗ ಅದು ಉಳಿಯೋದು ಕಷ್ಟ. ಏಕೆಂದರೆ ಅದು ನಮ್ಮ ಸುತ್ತಲಿನ ಸಮಾಜದ ಚೌಕಟ್ಟಿನಲ್ಲಿ ಬದುಕಬೇಕಾಗಿರುತ್ತೆ. ಇಂಥ ಒಂದು ಲವ್‌ಸ್ಟೋರಿಯೇ ʻಅರ್ದಂಬರ್ಧ ಪ್ರೇಮಕಥೆʼ. ಈಗಾಗಲೇ ಚಿತ್ರದ ಚಿತ್ರೀಕರಣ ಮುಗಿದಿದ್ದು, ನಾಯಕನ ಇಂಟ್ರೋಡಕ್ಷನ್ ಟೀಸರ್ ದಸರಾ ಹಬ್ಬದ ಶುಭದಿನ ಬಿಡುಗಡೆಯಾಯತು.

ಈ ಸಂದರ್ಭದಲ್ಲಿ ಹಿರಿಯನಟ ದ್ವಾರಕೀಶ್, ಬಿಗ್‌ಬಾಸ್ ತಂಡದ ಶುಭಾ ಪುಂಜಾ, ರಾಜೀವ್, ಅರವಿಂದ್ ಕೂಡ ಹಾಜರಿದ್ದು ಗೆಳೆಯನಿಗೆ ಶುಭ ಹಾರೈಸಿದರು. ಈ ಚಿತ್ರದಲ್ಲಿ ಹಿರಿಯ ಕಲಾವಿದ ದ್ವಾರಕೀಶ್ ಅವರ ಪುತ್ರ ಅಭಿಲಾಷ್ ದ್ವಾರಕೀಶ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, 25 ವರ್ಷಗಳ ನಂತರ ನಟನೆಗೆ ಹಿಂದಿರುಗಿದ್ದಾರೆ.

ಬೈಕ್ ರೇಸರ್ ಆಗಿದ್ದ ಅರವಿಂದ್ ಅವರ ಗುರುಗಳು ಕೂಡ ಈ ಸಮಾರಂಭದಲ್ಲಿ ಹಾಜರಿದ್ದರು. ನಿರ್ದೇಶಕ ಅರವಿಂದ್ ಕೌಶಿಕ್ ಮಾತನಾಡಿ, "ಚಿತ್ರದಲ್ಲಿ ಅರವಿಂದ್ ಅವರ ಬೈಕ್ ರೇಸಿಂಗ್ ಸಾಧನೆಗಳ ಬಗ್ಗೆ ಹೇಳಿಲ್ಲ, ನಾನು ಮಾಡಿಕೊಂಡ ಕಥೆಗೆ ಒಬ್ಬ ಹೊಸ ಹೀರೋ ಬೇಕಿತ್ತು. ಆತ ಜನ ಗುರುತಿಸುವಂಥ ಹೀರೋನೂ ಆಗಿರಬೇಕು ಅಂದುಕೊಂಡಾಗ ನೆನಪಿಗೆ ಬಂದದ್ದೇ ಕೆ.ಪಿ.ಅರವಿಂದ್. ಇದೊಂದು ಅಪ್ಪಟ ಪ್ರೇಮಕಥೆಯಾಗಿದ್ದು ಶೂಟಿಂಗ್ ಮುಗಿದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಅಂತಿಮ ಹಂತದಲ್ಲಿವೆ. ನವೆಂಬರ್ ವೇಳೆಗೆ ರಿಲೀಸ್ ಮಾಡೋ ಯೋಜನೆಯಿದೆ" ಎಂದು ಹೇಳಿದರು.

ನೆಗೆಟಿವ್‌ ಕಮೆಂಟ್‌ ಶೀರ್ಷಿಕೆ ಸಾಹಸ..

ನಂತರ ದ್ವಾರಕೀಶ್ ಮಾತನಾಡುತ್ತ "ನಮ್ಮ ಕಾಲದಲ್ಲಿ ಈ ಥರದ ನೆಗೆಟಿವ್ ಟೈಟಲ್ ಇಡುತ್ತಲೇ ಇರಲಿಲ್ಲ, ಈಗ ಅರವಿಂದ್ ಅಂಥಾ ಸಾಹಸ ಮಾಡಿದ್ದಾರೆ. ನಾಯಕ ಸೌತ್ ಕೆನರಾದವನು, ಈಗ ಅಲ್ಲಿನವರೇ ಜಾಸ್ತಿ ಹೆಸರು ಮಾಡುತ್ತಿದ್ದಾರೆ. ಹಿಂದೆ ಪುಟ್ಟಣ್ಣ ಕಣಗಾಲರು ನೀಡಿದ ಒಂದು ಸಲಹೆ, ನಾನು ಹೊಸಬರನ್ನು ಹಾಕಿಕೊಂಡು ಸಿನಿಮಾ ಮಾಡುವಂತೆ ಮಾಡಿತು" ಎಂದು ಹಿಂದಿನ ಘಟನೆಗಳನ್ನು ನೆನಪಿಸಿಕೊಂಡರು.

ಬಕ್ಸಸ್ ಮೀಡಿಯಾ, ಲೈಟ್‌ಹೌಸ್ ಮೀಡಿಯಾ ಮತ್ತು ಆರ್‌ಎಸಿ ವಿಷುವಲ್ಸ್ ಸೇರಿ ʻಅರ್ದಂಬರ್ಧ ಪ್ರೇಮಕಥೆʼ ಚಿತ್ರವನ್ನು ನಿರ್ಮಿಸಿದೆ. ಸೂರ್ಯ ಅವರ ಛಾಯಾಗ್ರಹಣ, ಸಂತೋಷ್ ರಾಧಾಕೃಷ್ಣನ್ ಅವರ ಶೀರ್ಷಿಕೆ ವಿನ್ಯಾಸದ ಜೊತೆಗೆ ಗ್ರಾಫಿಕ್ಸ್ ಕೆಲಸವನ್ನೂ ನಿಭಾಯಿಸಿದ್ದಾರೆ. ಆಲ್‌ಓಕೆ ಅಲೋಕ್, ಶ್ರೇಯಾ, ವೆಂಕಟ್‌ ಶಾಸ್ತ್ರಿ, ಪ್ರದೀಪ್‌ ರೋಷನ್, ಸೂರಜ್ ಹೂಗಾರ್, ಸುಜಿತ್‌ ಶೆಟ್ಟಿ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಶಿವರಾಜ್ ಮೇಹು ಅವರ ಸಂಕಲನ, ಸತೀಶ್ ಬ್ರಹ್ಮಾವರ್ ಅವರ ನಿರ್ಮಾಣ ನಿರ್ವಹಣೆ ಈ ಚಿತ್ರಕ್ಕಿದೆ.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ