ಬಿಗ್ ಬಾಸ್ ಖ್ಯಾತಿಯ ಲಾಯರ್ ಜಗದೀಶ್ ಮೇಲೆ ಹಲ್ಲೆ ವಿಡಿಯೋ ವೈರಲ್; ನಡೆದುದೇನು ಎಂಬ ಸ್ಪಷ್ಟೀಕರಣ ಕೊಟ್ಟ ವಕೀಲ
Lawyer Jagadish: ಬಿಗ್ ಬಾಸ್ ಖ್ಯಾತಿಯ ಲಾಯರ್ ಜಗದೀಶ್ ಅವರ ಮೇಲಿನ ಹಲ್ಲೆ ವಿಡಿಯೋ ವೈರಲ್ ಆಗಿದೆ. ವಿಡಿಯೋದಲ್ಲಿ ನಾಲ್ಕೈದು ಜನ ಲಾಯರ್ ಜಗದೀಶ್ ಅವರೊಂದಿಗೆ ವಾಗ್ವಾದ ಮಾಡುತ್ತ ಹಲ್ಲೆ ನಡೆಸಿದ ದೃಶ್ಯವಿದೆ. ಹಲ್ಲೆ ನಡೆಸಿದವರು ದರ್ಶನ್ ಫ್ಯಾನ್ಸ್ ಎಂಬ ವದಂತಿ ಇದೆ. ಹೀಗಾಗಿ, ನಡೆದುದೇನು ಎಂಬ ಸ್ಪಷ್ಟೀಕರಣವನ್ನು ವಕೀಲ ಜಗದೀಶ್ ನೀಡಿದ್ದಾರೆ.

Lawyer Jagadish: ಬಿಗ್ ಬಾಸ್ ಖ್ಯಾತಿಯ ಲಾಯರ್ ಜಗದೀಶ್ ಅವರ ಮೇಲಿನ ಹಲ್ಲೆ ವಿಡಿಯೋ ವೈರಲ್ ಆಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಬಹಳ ಚರ್ಚೆಗೆ ಗ್ರಾಸವಾಗಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ನಾಲ್ಕೈದು ಜನ ಲಾಯರ್ ಜಗದೀಶ್ ಅವರೊಂದಿಗೆ ವಾಗ್ವಾದ ನಡೆಸುತ್ತಿರುವ ದೃಶ್ಯವಿದೆ. ನಡುವೆ, ಅಲ್ಲಿ ನೂಕಾಟ ತಳ್ಳಾಟವೂ ನಡೆದಿದೆ. ಆಗ ವ್ಯಕ್ತಿಯೊಬ್ಬರು ಜಗದೀಶ್‌ಗೆ ಎರಡೇಟು ಹೊಡೆದ ದೃಶ್ಯವೂ ಅದರಲ್ಲಿದೆ. ಹಲ್ಲೆ ನಡೆಸಿದವರು ದರ್ಶನ್ ಫ್ಯಾನ್ಸ್ ಎಂಬ ವದಂತಿ ಇದೆ. ಹೀಗಾಗಿ, ವಕೀಲ ಜಗದೀಶ್ ತಾವೂ ಒಂದು ವಿಡಿಯೋ ಹೇಳಿಕೆ ಬಿಡುಗಡೆ ಮಾಡಿ ಸ್ಪಷ್ಟೀಕರಣ ನೀಡಲು ಪ್ರಯತ್ನಿಸಿದ್ದಾರೆ.
ಬಿಗ್ ಬಾಸ್ ಖ್ಯಾತಿಯ ಲಾಯರ್ ಜಗದೀಶ್ ಮೇಲೆ ಹಲ್ಲೆ ವಿಡಿಯೋ ವೈರಲ್
ಬಿಗ್ ಬಾಸ್ ಖ್ಯಾತಿಯ ಲಾಯರ್ ಜಗದೀಶ್ ಅವರು ನಟ ದರ್ಶನ್ ಮತ್ತು ಅವರ ಅಭಿಮಾನಿಗಳ ವಿರುದ್ಧ ಮಾತನಾಡುತ್ತಿರುತ್ತಾರೆ. ವಕೀಲ ಜಗದೀಶ್ ಅವರ ನಡವಳಿಕೆ ಬಗ್ಗೆ ದರ್ಶನ್ ಅಭಿಮಾನಿಗಳು ಅಸಮಾಧಾನಗೊಂಡಿದ್ದರು. ಹೀಗಾಗಿ ದರ್ಶನ್ ಅಭಿಮಾನಿಗಳೇ ಅವರಿಗೆ ಹಲ್ಲೆ ನಡೆಸಿರುವುದು ಎಂದು ವೈರಲ್ ವಿಡಿಯೋ ನೋಡಿದ ಅನೇಕರು ಹೇಳಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ವಿಡಿಯೋ ಶೇರ್ ಮಾಡುತ್ತ ಸಂಭ್ರಮಿಸಿದ್ದಾರೆ.
ವೈರಲ್ ಆಗಿರುವ ವಿಡಿಯೋದಲ್ಲಿ, ನಾಲ್ಕಾರು ಜನ ಲಾಯರ್ ದರ್ಶನ್ ಅವರೊಂದಿಗೆ ವಾಗ್ವಾದ ನಡೆಸುತ್ತಿರುವ ದೃಶ್ಯವಿದೆ. ಅಷ್ಟೇ ಅಲ್ಲ, ಸ್ವಲ್ಪ ನೂಕಾಟ, ತಳ್ಳಾಟ ನಡೆದಿದ್ದು, ನಡುವೆ ವ್ಯಕ್ತಿಯೊಬ್ಬರು ಜಗದೀಶ್ ಮೇಲೆ ಹಲ್ಲೆ ನಡೆಸಿದ ದೃಶ್ಯವೂ ಇದೆ. ಇಲ್ಲಿದೆ ನೋಡಿ ಆ ವೈರಲ್ ವಿಡಿಯೋ-
ಬಿಗ್ ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿ ಲಾಯರ್ ಜಗದೀಶ್ ಅವರು ಮತ್ತು ಇನ್ನೊಬ್ಬ ವ್ಯಕ್ತಿ ಪರಸ್ಪರ ಕಾಲರ್ ಪಟ್ಟಿ ಹಿಡಿದುಕೊಂಡು ನೂಕಾಟ, ತಳ್ಳಾಟ ನಡೆಸಿದ ದೃಶ್ಯವಿದೆ. ಪರಿಸ್ಥಿತಿ ವಿಕೋಪ ಹೋಗಿ ಜಗದೀಶ್ ಅವರ ಮೇಲೆ ಆ ಗುಂಪು ಹಲ್ಲೆ ನಡೆಸದ್ದು ಕಂಡುಬಂತು. ಅಪರಿಚಿತ ಗುಂಪಿನ ಜತೆಗೆ ಲಾಯರ್ ಜಗದೀಶ್ ವಾಗ್ವಾದಕ್ಕೆ ಇಳಿದುದು ಯಾಕೆ ಎಂಬುದು ಸ್ಪಷ್ಟವಾಗುವುದಿಲ್ಲ. ಈ ವಿಡಿಯೋವನ್ನು ದರ್ಶನ್ ಅಭಿಮಾನಿಯೊಬ್ಬರು ಸಂಜೆ 4.12ಕ್ಕೆ ಶೇರ್ ಮಾಡಿದ್ದು, ಆಗಲೇ 10 ಸಾವಿರಕ್ಕೂ ಅಧಿಕ ವೀಕ್ಷಣೆ ಪಡೆದಿದೆ.
ನಡೆದುದೇನು ಎಂಬ ಸ್ಪಷ್ಟೀಕರಣ ಕೊಟ್ಟ ವಕೀಲ ಜಗದೀಶ್
ವೈರಲ್ ಆಗಿರುವ ಹಲ್ಲೆ ವಿಡಿಯೋದ ಬಗ್ಗೆ ಲಾಯರ್ ಜಗದೀಶ್ ಸ್ಪಷ್ಟೀಕರಣ ನೀಡಿದ್ದಾರೆ. "ವೈರಲ್ ಆಗಿರುವ ವಿಡಿಯೋ ನಮ್ಮ ಕಾಂಪ್ಲೆಕ್ಸ್ ಮುಂಭಾಗದ್ದು. ಅಲ್ಲಿ ರಸ್ತೆ ಬಂದ್ ಮಾಡಿ ಅಣ್ಣಮ್ಮದೇವಿಯನ್ನು ಕೂರಿಸಿದ್ದಾರೆ. ಪೊಲೀಸರಿಗೆ ಈ ವಿಚಾರ ತಿಳಿಸಿದ್ದೆ. ಅಲ್ಲದೆ ರಸ್ತೆ ಬಂದ್ ಮಾಡಿದ ಬಗ್ಗೆ ಪ್ರಶ್ನಿಸಿದ್ದಕ್ಕೆ 40 ಜನ ದಾಂಡಿಗರು ನನ್ನ ಮೇಲೆ ದಾಳಿ ನಡೆಸಿದರು. ನಾನು ವಾಕಿಂಗ್ ಹೋಗಿದ್ದ ಕಾರಣ, ಜತೆಗೆ ಗನ್‌ಮ್ಯಾನ್ ಇರಲಿಲ್ಲ. ಹಲ್ಲೆ ಮಾಡುವುದಕ್ಕೆ ಕಾರಣ ಇಷ್ಟೆ ಎಂದು ಲಾಯರ್ ಜಗದೀಶ್ ವಿವರಿಸಿದ್ದಾರೆ.
"ಕೊಡಿಗೇಹಳ್ಳಿ ಪೊಲೀಸರಿಗೆ ದೂರು ನೀಡಿದ್ದೆ. ಅವರು ನನ್ನ ದೂರನ್ನು ಪರಿಗಣಿಸಿಲ್ಲ. ಉತ್ಸವ ಮಾಡುವಂತಿದ್ದರೆ ಯಾವುದಾದರೂ ಮೈದಾನದಲ್ಲಿ ಮಾಡಲಿ. ರಸ್ತೆ ಬಂದ್ ಮಾಡಿ ಅಣ್ಣಮ್ಮ ಉತ್ಸವ ಮಾಡುವುದೇಕೆ. ಪೊಲೀಸ್ ಕಮೀಷನರ್ ಏನ್ ಮಾಡುತ್ತಿದ್ದೀರಾ?" ಎಂದು ಲಾಯರ್ ಜಗದೀಶ್ ಪ್ರಶ್ನಿಸಿರುವುದು ವಿಡಿಯೋದಲ್ಲಿ ಕಂಡುಬಂದಿದೆ. ಇದಲ್ಲದೆ, ಅಲ್ಲಿದ್ದವರನ್ನೆಲ್ಲ ವಿಚಾರಿಸುತ್ತಿರುವ ಲಾಯರ್ ಜಗದೀಶ್, ಯಾರೋ ನೀನು, ಇಲ್ಲೇಕೆ ನಿಂತಿದ್ದೀಯಾ ಎನ್ನುತ್ತ, ನೀನು ಮಾಹಿತಿದಾರನಾ, ನನ್ನ ಮೇಲೆ ಹಲ್ಲೆ ನಡೆಯುವಾಗ ನೋಡ್ತಾ ನಿಂತಿದ್ದೆ ಎಂದೆಲ್ಲ ಹೇಳಿರುವುದು ವೈರಲ್ ವಿಡಿಯೋದಲ್ಲಿ ದಾಖಲಾಗಿದೆ.

ವಿಭಾಗ