Drone Prathap: ಕೆರೆಯಲ್ಲಿ ಸೋಡಿಯಂ ಬಾಂಬ್ ಸ್ಫೋಟ; ಎಕ್ಸ್‌ಪೀರಿಮೆಂಟ್ ಮಾಡಲು ಹೋಗಿ ಕೈ ಸುಟ್ಟುಕೊಂಡ ಡ್ರೋನ್ ಪ್ರತಾಪ್!
Drone Prathap: ಬಿಗ್ ಬಾಸ್ ಕನ್ನಡ ಸೀಸನ್ 10ರ ರನ್ನರ್ ಅಪ್ ಡ್ರೋನ್ ಪ್ರತಾಪ್, ಸದ್ಯ ಹಳ್ಳಿ ಜೀವನದ ಜತೆಗೆ ತಮ್ಮ ಡ್ರೋನ್ ತಯಾರಿಕಾ ಉದ್ಯಮದಲ್ಲಿ ನಿರತರಾಗಿದ್ದಾರೆ. ಈ ನಡುವೆ ಗ್ಯಾಪ್‌ನಲ್ಲಿಯೇ ಊರ ಹೊರಗಿನ ಕೃತಕ ಕೆರೆಯೊಂದರಲ್ಲಿ ಬಾಂಬ್ ಸಿಡಿಸಿದ್ದಾರೆ. ಅದೂ ಸೋಡಿಯಂ ಬಾಂಬ್.
Drone Prathap Science Experiment: ಬಿಗ್ ಬಾಸ್ ಸೀಸನ್ 10ರ ರನ್ನರ್ ಅಪ್ ಸ್ಪರ್ಧಿ ಡ್ರೋನ್ ಪ್ರತಾಪ್ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿದ್ದಾರೆ. ಬಿಗ್ ಬಾಸ್‌ಗೂ ಮೊದಲು ಕೇವಲ ಟೀಕೆಗಳನ್ನೇ ಎದುರಿಸುತ್ತಿದ್ದ ಪ್ರತಾಪ್‌ಗೆ, ಬಿಗ್ ಬಾಸ್ ಪುನರ್ಜನ್ಮ ನೀಡಿತ್ತು. ತಮ್ಮ ಮೇಲಿನ ಒಂದಷ್ಟು ಆರೋಪಗಳನ್ನು ದೂರವಾಗಿಸಿಕೊಂಡು ನಿಟ್ಟುಸಿರು ಬಿಟ್ಟಿದ್ದರು. ಅದಷ್ಟೇ ಅಲ್ಲ ಕೆಲ ವರ್ಷಗಳಿಂದ ಅಪ್ಪ ಅಮ್ಮ, ಹುಟ್ಟೂರಿನಿಂದಲೇ ದೂರ ಉಳಿದಿದ್ದ ಡ್ರೋನ್ ಪ್ರತಾಪ್, ಸದ್ಯ ತುಂಬು ಕುಟುಂಬದ ಜತೆಗೆ ಖುಷಿಯ ಕ್ಷಣಗಳನ್ನು ಕಳೆಯುತ್ತಿದ್ದಾರೆ. ಅಪ್ಪನ ಜತೆಗೆ ಗದ್ದೆಯಲ್ಲಿ ಕೆಲಸ ಮಾಡುತ್ತ, ಅಮ್ಮನ ಕೈತುತ್ತು ಸವಿಯುತ್ತ, ತಮ್ಮ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ. ಇತ್ತೀಚೆಗೆ ಸಿನಿಮಾವೊಂದರಲ್ಲೂ ನಟಿಸುತ್ತಿದ್ದಾರೆ.
ಡ್ರೋನ್ ಪ್ರತಾಪ್ ಹಳ್ಳಿ ಜೀವನದ ಜತೆಗೆ ತಮ್ಮ ಡ್ರೋನ್ ತಯಾರಿಕಾ ಉದ್ಯಮದಲ್ಲಿ ನಿರತರಾಗಿದ್ದಾರೆ. ಈ ನಡುವೆ ಗ್ಯಾಪ್‌ನಲ್ಲಿಯೇ ಊರ ಹೊರಗಿನ ಕೃತಕ ಕೆರೆಯೊಂದರಲ್ಲಿ ಬಾಂಬ್ ಸಿಡಿಸಿದ್ದಾರೆ. ಅದೂ ಸೋಡಿಯಂ ಬಾಂಬ್. ಸೋಷಿಯಲ್ ಮೀಡಿಯಾದಲ್ಲಿ ಸದಾ ಒಂದಿಲ್ಲೊಂದು ವಿಡಿಯೋ ಪೋಸ್ಟ್ ಮಾಡಿಕೊಳ್ಳುವ ಪ್ರತಾಪ್, ಈ ಸಲ ವಿಜ್ಞಾನದ ಪ್ರಯೋಗವೊಂದಕ್ಕೆ ಇಳಿದಿದ್ದಾರೆ. ಅರ್ಧ ಕೆಜಿ ಸೋಡಿಯಂ ಬಳಸಿ ಬಾಂಬ್ ಸಿಡಿಸಿದ್ದಾರೆ. ಪ್ರತಾಪ್ ಅವರ ಈ ಎಕ್ಸ್‌ಪೀರಿಮೆಂಟ್ ನೆಟ್ಟಿಗರ ವಲಯದಲ್ಲಿ ಚರ್ಚೆಯ ವಿಷಯವಾಗಿದೆ. ಪ್ರತಾಪ್ ಅವರ ಈ ನಡೆಗೆ ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದರೆ, ಇನ್ನು ಕೆಲವರು ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.
ಸೋಡಿಯಂ ಬಾಂಬ್ ಸ್ಫೋಟ
ಯೂಟ್ಯೂಬ್‌ನಲ್ಲಿ ವಿಡಿಯೋ ಶೇರ್ ಮಾಡಿರುವ ಪ್ರತಾಪ್, ಈ ವಿಡಿಯೋವನ್ನು ಪ್ಯೂರ್ ಎಕ್ಸ್‌ಪಿರಿಮೆಂಟ್ ಸಲುವಾಗಿ ಮಾಡಲಾಗಿದೆ. ಬೇರೆ ಕಡೆ ಇದನ್ನು ಟ್ರೈ ಮಾಡಬೇಕು ಎಂದಾದರೆ, ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಿ. ಇದು ಕೇವಲ ಎಜುಕೇಷನಲ್ ಉದ್ದೇಶಕ್ಕೆ ಮಾಡಿದ ವಿಡಿಯೋ. ಇದು ಯಾವ ರೀತಿ ರಿಯಾಕ್ಟ್ ಮಾಡುತ್ತೆ ಅನ್ನೋದು ನನಗೂ ಗೊತ್ತಿಲ್ಲ ಎಂದು ಮನವಿ ಮಾಡಿದ್ದಾರೆ. ಐದು ಬಾಕ್ಸ್ ಸೋಡಿಯಂ ಮೆಟಲ್ ಬಳಸಿದ್ದಾರೆ. ಈ ಸೋಡಿಯಂ ನೀರಿನ ಜತೆಗೆ ಸೇರಿದಾಗ ದೊಡ್ಡ ಮಟ್ಟದಲ್ಲಿ ರಿಯಾಕ್ಟ್ ಆಗುತ್ತೆ. ಇದೆಲ್ಲ ಸೋಡಿಯಂ ಅನ್ನು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿದ್ದಾರೆ. ಆ ಚೀಲಕ್ಕೆ ತೂತು ಮಾಡಿ, ಕೆರೆಗೆ ಎಸೆದಿದ್ದಾರೆ. ಕೆಲ ಸೆಕೆಂಡ್‌ಗಳಲ್ಲಿ ಅದು ಬ್ಲಾಸ್ಟ್ ಆಗಿದೆ.
ಪ್ರಯೋಗ ಮಾಡಿ ಕೈ ಸುಟ್ಟುಕೊಂಡ ಪ್ರತಾಪ್..
ಸ್ಪೋಟದ ರಭಸಕ್ಕೆ ಕೆರೆಯ ನೀರಿನಲ್ಲಿ ಅಲೆಗಳು ನಿರ್ಮಾಣವಾಗಿವೆ. ಬಳಿಕ ಕೈಗೆ ಹಾಕಿಕೊಂಡಿದ್ದ ಗ್ಲೌಸ್ ತೆಗೆದಿದ್ದಾರೆ. ಗ್ಲೌಸ್ ಧರಿಸಿದರೂ ಸೋಡಿಯಂ ಬಳಸಿದ್ದಕ್ಕೆ ಬೆರಳುಗಳಿಗೆ ಸುಟ್ಟ ಗಾಯಗಳಾಗಿವೆ. ಬಳಿಕ ಪ್ರಯೋಗ ಸಕ್ಸಸ್ ಆಗುತ್ತಿದ್ದಂತೆ, ನಾವು ಇದನ್ನು ಸಂಪೂರ್ಣವಾಗಿ ಎಜುಕೇಷನಲ್ ಉದ್ದೇಶಕ್ಕಾಗಿ ಮಾಡಿದ್ದೇವೆ. ಇದೇ ಸೋಡಿಯಂ ಬಳಸಿ ಶಾಲೆಗಳಲ್ಲಿ ಚಿಕ್ಕ ಪುಟ್ಟ ಎಕ್ಸ್‌ಪೀರಿಮೆಂಟ್ ಮಾಡಬಹುದು. ಆದರೆ, ನಾನು ಮೊದಲ ಸಲ ಇಷ್ಟೊಂದು ಸೋಡಿಯಂ ಬಳಸಿ ಪ್ರಯೋಗ ಮಾಡಿದ್ದೇನೆ. ಅದು ಯಶಸ್ವಿಯಾಗಿದೆ. ಇಲ್ಲಿ ನಾವು ಯಾವುದೇ ಜಲಚರಗಳಿಗೆ, ಪ್ರಾಣಿಸಂಕುಲಕ್ಕೆ ಹಾನಿ ಮಾಡಿಲ್ಲ ಎಂದೂ ಹೇಳಿಕೊಂಡಿದ್ದಾರೆ ಪ್ರತಾಪ್.
ಚಿತ್ರರಂಗಕ್ಕೆ ಡ್ರೋನ್ ಪ್ರತಾಪ್
ಈ ವರೆಗೂ ತಾವಾಯ್ತು ತಮ್ಮ ಕೆಲಸವಾಯ್ತು ಎಂದಷ್ಟೇ ಇದ್ದ ಡ್ರೋನ್ ಪ್ರತಾಪ್, ಬಿಗ್ ಬಾಸ್ ಮುಗಿಸಿ ಬಂದ ಬಳಿಕ, ಅದರಿಂದ ಸಿಕ್ಕ ಹಣದಿಂದ ಕೈಲಾದ ಕೆಲಸ ಮಾಡಿ ಮೆಚ್ಚುಗೆ ಪಡೆದಿದ್ದರು. ಈಗ ಒಂದು ಹೆಜ್ಜೆ ಮುಂದೆ ಹೋಗಿ, ಚಂದನವನಕ್ಕೂ ಕಾಲಿಡುತ್ತಿದ್ದಾರೆ ಪ್ರತಾಪ್. ಅಂದರೆ, ನಟನೆ ಆರಂಭಿಸುವ ಸುಳಿವು ನೀಡಿದ್ದಾರೆ. ಈ ವಿಚಾರವನ್ನು ಸ್ವತಃ ಪ್ರತಾಪ್ ಖಚಿತಪಡಿಸಿದ್ದಾರೆ. ಇತ್ತೀಚೆಗಷ್ಟೇ ಮಂಡ್ಯದ ಕೆ. ಆರ್ ಪೇಟೆ ತಾಲೂಕಿನಲ್ಲಿನ ಶ್ರೀ ಹನುಮಾನ ದೇವಸ್ಥಾನಕ್ಕೆ ಭೇಟಿ ನೀಡಿದ ಡ್ರೋನ್ ಪ್ರತಾಪ್, ವೇದಿಕೆ ಕಾರ್ಯಕ್ರಮದಲ್ಲಿ "ಒಂದು ಸಿನಿಮಾಕ್ಕೆ ನಾಯಕ ನಟನಾಗಿ ಅಭಿನಯಿಸುತ್ತಿದ್ದೇನೆ. ಅದೆಲ್ಲದಕ್ಕೂ ನಿಮ್ಮ ಆಶೀರ್ವಾದ ಬೇಕು. ನನ್ನ ಒಂದು ಬಿಜಿನೆಸ್ ಜತೆಗೆ ಸಿನಿಮಾರಂಗಕ್ಕೂ ಕಾಲಿಡುತ್ತಿದ್ದೇನೆ. ಶ್ರೀ ಆಂಜನೇಯ ಸ್ವಾಮಿಯ ಆಶೀರ್ವಾದದೊಂದಿಗೆ" ಎಂದಿದ್ದರು.