Kannada Serial TRP: ಟಿಆರ್‌ಪಿಯಲ್ಲಿ ಮೊದಲ ಸ್ಥಾನಕ್ಕೆ ಹೆಚ್ಚಿದ ಪೈಪೋಟಿ! ಬಿಗ್‌ಬಾಸ್ ಮಾತ್ರವಲ್ಲ ಸರಿಗಮಪ ಶೋಗೂ ಸಿಕ್ತು ಒಳ್ಳೆ ನಂಬರ್
Kannada Serial TRP Ratings: ಕನ್ನಡ ಕಿರುತೆರೆ ಮತ್ತು ರಿಯಾಲಿಟಿ ಶೋಗಳ ಟಿಆರ್‌ಪಿಯಲ್ಲಿ ಕಳೆದ ವಾರ ಗೆದ್ದಿದ್ದು ಯಾರು? ಕನ್ನಡದ ಟಾಪ್ 10 ಧಾರಾವಾಹಿಗಳು ಯಾವವು, ಬಿಗ್‌ಬಾಸ್ ಕನ್ನಡ 11ಕ್ಕೆ ಸಿಕ್ಕ ಟಿಆರ್‌ಪಿ ಎಷ್ಟು, ಸರಿಗಮಪ ಗ್ರ್ಯಾಂಡ್ ಓಪನಿಂಗ್‌ಗೆ ಸಿಕ್ಕ ನಂಬರ್ ಎಷ್ಟು? ಎಂಬಿತ್ಯಾದಿ ಕಿರುತೆರೆಯ ಪೂರ್ಣ ವಿವರ ಇಲ್ಲಿದೆ.
![ಕನ್ನಡ ಸೀರಿಯಲ್ ಮತ್ತು ರಿಯಾಲಿಟಿ ಶೋಗಳ ಟಿಆರ್‌ಪಿ ರೇಟಿಂಗ್ಸ್ ಕನ್ನಡ ಸೀರಿಯಲ್ ಮತ್ತು ರಿಯಾಲಿಟಿ ಶೋಗಳ ಟಿಆರ್‌ಪಿ ರೇಟಿಂಗ್ಸ್](https://images.hindustantimes.com/kannada/img/2024/12/27/550x309/asjjjs_1735290617250_1735290626331.png)
Kannada Serial TRP: ಕನ್ನಡ ಕಿರುತೆರೆಯಲ್ಲಿ ಸೀರಿಯಲ್‌ಗಳು ಸಾಕಷ್ಟು ಸದ್ದು ಮಾಡುತ್ತಿವೆ. ತರಹೇವಾರಿ ಟ್ವಿಸ್ಟ್‌ಗಳ ಮೂಲಕ ವೀಕ್ಷಕರನ್ನು ಸೆಳೆಯಲು ತಂತ್ರ ಹೆಣೆಯುತ್ತಿವೆ. ಈ ನಡುವೆ ವಾರದ ಟಿಆರ್‌ಪಿ ಲೆಕ್ಕಾಚಾರವೂ ಬಹಿರಂಗವಾಗಿದೆ. ಯಾವ ಸೀರಿಯಲ್ ಈ ವಾರ ಟಾಪ್ ಇದೆ? ಯಾವೆಲ್ಲ ಧಾರಾವಾಹಿಗಳ ಅಂಕಿ ಅಂಶದಲ್ಲಿ ಬದಲಾವಣೆಗಳಾಗಿವೆ? ಎಂಬ ವಿವರ ಇಲ್ಲಿದೆ. ಇದರ ನಡುವೆ ಕಲರ್ಸ್ ಕನ್ನಡದ ಬಿಗ್ ಬಾಸ್ ಕನ್ನಡ 11 ಮತ್ತು ಜೀ ಕನ್ನಡದ ಹೊಸ ಶೋ ಸರಿಗಮಪ ಸೀಸನ್ 21ಕ್ಕೆ ಸಿಕ್ಕ ಟಿಆರ್‌ಪಿ ಎಷ್ಟು ಎಂಬ ಮಾಹಿತಿಯೂ ಇಲ್ಲಿದೆ.
ಮೊದಲ ಸ್ಥಾನದಲ್ಲಿ ಎರಡು ಸೀರಿಯಲ್‌ಗಳು
ಕನ್ನಡ ಕಿರುತೆರೆಯಲ್ಲಿ ಈ ವಾರ ಅಚ್ಚರಿಯ ಬೆಳವಣಿಗೆ ಘಟಿಸಿದೆ. ಜೀ ಕನ್ನಡದ ಅಮೃತಧಾರೆ ಸೀರಿಯಲ್ ಮತ್ತು ಲಕ್ಷ್ಮೀ ನಿವಾಸ ಧಾರಾವಾಹಿಗಳು ಈ ವಾರದ ಟಾಪ್ ಸೀರಿಯಲ್‌ಗಳಾಗಿ ಹೊರಹೊಮ್ಮಿವೆ. ಅಂದರೆ ಎರಡೂ ಸೀರಿಯಲ್‌ಗಳು ಟಿಆರ್‌ಪಿಯಲ್ಲಿ ಒಂದೇ ನಂಬರ್ ಪಡೆದುಕೊಂಡಿವೆ. ಈ ಸೀರಿಯಲ್‌ಗಳು 7.9 ಟಿಆರ್‌ಪಿ ಪಡೆದು ಮೊದಲ ಸ್ಥಾನ ಅಲಂಕರಿಸಿವೆ.
ಇನ್ನು ಸದಾ ಅಗ್ರಸ್ಥಾನದಲ್ಲಿಯೇ ಮುಂದುವರಿಯುತ್ತಿದ್ದ ಜೀ ಕನ್ನಡದ ಪುಟ್ಟಕ್ಕನ ಮಕ್ಕಳು ಧಾರಾವಾಹಿ 7.6 ಟಿಆರ್‌ಪಿ ಪಡೆದುಕೊಂಡು ಎರಡನೇ ಸ್ಥಾನದಲ್ಲಿದೆ. ಅಣ್ಣಯ್ಯ ಧಾರಾವಾಹಿಯೂ ನೋಡುಗರ ಗಮನ ಸೆಳೆಯುತ್ತಿದೆ. ಶಿವು ಪಾರ್ವತಿಯ ನಡುವಿನ ಪ್ರೀತಿ ಈಗ ವೀಕ್ಷಕರ ನೆಚ್ಚಿನ ಸಂಚಿಕೆಗಳಾಗಿವೆ. ಹಾಗಾಗಿ ಈ ಧಾರಾವಾಹಿ 7.3 ಟಿಆರ್ ಪಡೆದು ಮೂರನೇ ಸ್ಥಾನದಲ್ಲಿದೆ. ಇದೇ ಅಣ್ಣಯ್ಯ ಸೀರಿಯಲ್ ಜತೆಗೆ ಕಲರ್ಸ್ ಕನ್ನಡದ ಭಾಗ್ಯಲಕ್ಷ್ಮೀ ಧಾರಾವಾಹಿಯೂ ಸರಿ ಸಮ ಟಿಆರ್‌ಪಿ ಪಡೆದಿದೆ. ಎರಡೂ ಸೀರಿಯಲ್‌ಗಳಿಗೆ 7.3 ಟಿಆರ್‌ಪಿ ಸಿಕ್ಕಿದೆ.
ಲಕ್ಷ್ಮೀ ಬಾರಮ್ಮ ಕುಸಿತ
ಕಳೆದ ಎರಡು ವಾರಗಳ ಹಿಂದೆ ಮೊದಲ ಸ್ಥಾನದಲ್ಲಿ ಮಿಂಚಿದ್ದ ಲಕ್ಷ್ಮೀ ಬಾರಮ್ಮ ಧಾರಾವಾಹಿ ಈ ಬಾರಿ ಅದ್ಯಾಕೋ ಕೊಂಚ ಮಂಕಾದಂತಿದೆ. ಟಿಆರ್‌ಪಿಯಲ್ಲಿ ದಾಖಲೆ ಬರೆದಿದ್ದ ಈ ಸೀರಿಯಲ್ ಈಗ 6.7 ಟಿಆರ್‌ಪಿ ಪಡೆದು ಟಾಪ್ ಐದರಲ್ಲಿ ಸ್ಥಾನ ಪಡೆದಿದೆ. ಟಾಪ್ ಹತ್ತರಲ್ಲಿ ಈ ಸೀರಿಯಲ್‌ಗೆ ಈ ಸಲ ಸಿಕ್ಕಿದ್ದು ನಾಲ್ಕನೇ ಸ್ಥಾನ. ಅದೇ ರೀತಿ ಜೀ ಕನ್ನಡದ ಶ್ರಾವಣಿ ಸುಬ್ರಮಣ್ಯ ಸೀರಿಯಲ್‌ಗೆ 6.6 ಟಿಆರ್‌ಪಿ ಸಿಕ್ಕಿದ್ದು 5ನೇ ಸ್ಥಾನದಲ್ಲಿದೆ.
ಸೀತಾ ರಾಮಗೆ ಎಷ್ಟನೇ ಸ್ಥಾನ
ಕಲರ್ಸ್‌ನ ನಿನಗಾಗಿ ಸೀರಿಯಲ್ 5.7 ಟಿಆರ್‌ಪಿಯೊಂದಿಗೆ ಆರನೇ ಸ್ಥಾನದಲ್ಲಿದ್ದರೆ, ಜೀ ಕನ್ನಡದ ಸೀತಾ ರಾಮ 5.1 ಟಿಆರ್‌ಪಿಯೊಂದಿಗೆ ಏಳನೇ ಸ್ಥಾನದಲ್ಲಿದೆ. ಈ ಹಿಂದೆ ಈ ಸೀರಿಯಲ್ 10ನೇ ಸ್ಥಾನದಲ್ಲಿಯೂ ಕಂಡಿತ್ತು. ಕಲರ್ಸ್‌ನ ಮತ್ತೊಂದು ಹಿಟ್ ಸೀರಿಯಲ್ ರಾಮಾಚಾರಿ, ಟಿಆರ್‌ಪಿಯಲ್ಲಿ ಕೊಂಚ ಇಳಿಕೆ ಕಂಡಿದೆ. ಈ ಧಾರಾವಾಹಿ 5.0 ರೇಟಿಂಗ್ ಪಡೆದು, ಎಂಟನೇ ಸ್ಥಾನದಲ್ಲಿದೆ. ಶ್ರೀಗೌರಿ 4.9 ಟಿಆರ್‌ಪಿಯೊಂದಿಗೆ 9ನೇ ಸ್ಥಾನದಲ್ಲಿದೆ. ಜೀ ಕನ್ನಡದ ಬ್ರಹ್ಮಗಂಟು ಧಾರಾವಾಹಿ 4.7 ಟಿಆರ್‌ಪಿಯೊಂದಿಗೆ 10ನೇ ಸ್ಥಾನದಲ್ಲಿದೆ.
ಬಿಗ್ ಬಾಸ್ ಮತ್ತು ಸರಿಗಮಪ ಟಿಆರ್‌ಪಿ ಹೇಗಿದೆ?
ಇನ್ನು ಕಳೆದ ಎರಡು ವಾರಗಳ ಹಿಂದಷ್ಟೇ ಸರಿಗಮಪ ಸೀಸನ್ 21 ಶುರುವಾಗಿದೆ. ಗ್ರ್ಯಾಂಡ್ ಓಪನಿಂಗ್ ಏಪಿಸೋಡ್‌ಗೆ ಒಳ್ಳೆಯ ಟಿಆರ್‌ಪಿ ಒಲಿದು ಬಂದಿದೆ. ಶನಿವಾರ ಮತ್ತು ಭಾನುವಾರದ ಸಂಚಿಕೆಗಳಿಗೆ 13.8 ಟಿಆರ್‌ಪಿ ಮೂಲಕ ಹೊಸ ದಾಖಲೆ ಬರೆದಿದೆ. ಇನ್ನು ಬಿಗ್‌ಬಾಸ್ ಸಹ ತನ್ನ ನಾಗಾಲೋಟ ಮುಂದುವರಿಸಿದೆ. ಸೋಮವಾರದಿಂದ ಶುಕ್ರವಾರದ ವರೆಗೆ 7.5 ಟಿಆರ್‌ಪಿ ಪಡೆದರೆ, ಶನಿವಾರ 10.0, ಭಾನುವಾರ 10.6 ಟಿಆರ್‌ಪಿ ತನ್ನದಾಗಿಸಿಕೊಂಡಿದೆ. ಈ ಮೂಲಕ ವಾರಾಂತ್ಯದ 9 ಗಂಟೆಯ ಸ್ಲಾಟ್‌ನಲ್ಲಿ ಕಿಚ್ಚ ಸುದೀಪ್ ಗಟ್ಟಿಯಾಗಿ ನಿಂತಿದ್ದಾರೆ.
![Whats_app_banner Whats_app_banner](https://kannada.hindustantimes.com/static-content/1y/wBanner.png)
ವಿಭಾಗ