Bigg Boss Kannada 11: ಬಿಗ್ ಬಾಸ್ ಮನೆಯ ಆ ಮೂಲೆಯಲ್ಲಿ ಕೂತು ಮಾತನಾಡಿದ್ದೆಲ್ಲ ನಿಜವಾಗಿದೆ! ಸ್ಥಳದ ಮಹಿಮೆ ವಿವರಿಸಿದ ಧನರಾಜ್
ಬಿಗ್ ಬಾಸ್ ಸ್ಪರ್ಧಿಗಳಾಗಿರುವ ಧನರಾಜ್ ಮತ್ತು ಹನುಮಂತು ಸ್ನೇಹಕ್ಕೆ ವೀಕ್ಷಕರಿಂದ ಮೆಚ್ಚುಗೆ ಸಿಕ್ಕಿದೆ. ಈ ನಡುವೆ ಇದೇ ಜೋಡಿ ಸಮಯ ಸಿಕ್ಕಾಗಲೆಲ್ಲ, ಮನೆಯ ಆ ಮೂಲೆಯಲ್ಲಿ ಕೂತು ಒಂದಿಲ್ಲೊಂದು ಚರ್ಚೆಯಲ್ಲಿ ತೊಡಗಿಸಿಕೊಳ್ಳುತ್ತೆ. ಅಲ್ಲಿ ಕೂತು ಮಾತನಾಡಿದ್ದ ಮಾತುಗಳೂ ನಿಜವಾಗಿವೆ. ಅದೆಲ್ಲವನ್ನು ಪತ್ನಿ ಪ್ರಜ್ಞಾ ಬಳಿ ಹೇಳಿಕೊಂಡಿದ್ದಾರೆ ಧನರಾಜ್.
Bigg Boss Kannada 11: ಬಿಗ್ ಬಾಸ್ ಕನ್ನಡ 11ನೇ ಸೀಸನ್ ಸದ್ಯ 95 ದಿನಗಳನ್ನು ಪೂರೈಸಿದೆ. ಇನ್ನೇನು ಫಿನಾಲೆಯ ಸನಿಹ ಬಂದಿದೆ. ಇಂತಿಪ್ಪ ಬಿಗ್ ಬಾಸ್ ಮನೆಯಲ್ಲೀಗ ಕುಟುಂಬದ ಕಲರವ ಜೋರಾಗಿದೆ. ಎಲ್ಲ 9 ಸ್ಪರ್ಧಿಗಳ ಕುಟುಂಬದವರು ಆಗಮಿಸಿ, ಸ್ಪರ್ಧಿಗಳ ಆತ್ಮವಿಶ್ವಾಸವನ್ನು ಹೆಚ್ಚಿಸಿದ್ದಾರೆ. ಸರಿ ಸುಮಾರು ಮೂರು ತಿಂಗಳ ನಂತರ ಮನೆಯವರನ್ನು ನೋಡಿದ ಸ್ಪರ್ಧಿಗಳು ಕಣ್ಣೀರಾಗಿದ್ದಾರೆ. ಅದೇ ಕುಟುಂಬದವರು ಕುಗ್ಗಿದವರನ್ನು ಬಡಿದೆಬ್ಬಿಸಿದ್ದಾರೆ. ಇಲ್ಲಿಯವರೆಗೆ ಆಡಿದ ಆಟ, ಇನ್ನು ಮುಂದೆ ಆಡಬೇಕಿರುವ ಆಟದ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.
ಆದರೆ, ಇದೇ ಬಿಗ್ ಬಾಸ್ ಮನೆಯಲ್ಲಿ ಎಲ್ಲ ಸ್ಪರ್ಧಿಗಳಿಗೂ ಒಂದೊಂದು ಜಾಗದ ಜತೆಗೆ ವಿಶೇಷ ಕನೆಕ್ಷನ್ ಇದೆ. ಬಹುತೇಕ ಸಮಯವನ್ನೇ ಅದೇ ಸ್ಥಳದಲ್ಲಿಯೇ ಕಳೆದವರಿದ್ದಾರೆ. ಇಂದಿಗೂ ಅಲ್ಲಿಯೇ ಮುಂದುವರಿಯುತ್ತಿದ್ದಾರೆ. ಈ ನಡುವೆ, ಸದಾ ಬಿಗ್‌ಬಾಸ್ ಮನೆಯ ಮುಖ್ಯದ್ವಾರದ ಬಳಿಯೇ ಇರುತ್ತಿದ್ದ ಧನರಾಜ್ ಮತ್ತು ಹನುಮಂತುಗೆ, ಅದೇ ಜಾಗ ಹೆಚ್ಚು ಇಷ್ಟ. ಅದ್ಯಾವ ಮಟ್ಟಿಗೆ ಎಂದರೆ, ಅಲ್ಲಿ ಅವರಿಬ್ಬರು ಮಾತನಾಡಿಕೊಂಡ ಎಷ್ಟೋ ವಿಚಾರಗಳು ನಿಜವಾಗಿವೆ. ಈಗ ಅದೇ ಸ್ಥಳದ ಮಹಿಮೆ ಬಗ್ಗೆ ಪತ್ನಿಯ ಮುಂದೆ ಹೇಳಿಕೊಂಡಿದ್ದಾರೆ ಧನರಾಜ್.
ಆ ಸ್ಥಳದ ಮಹಿಮೆ ಎಂಥದ್ದು?
ಮುಖ್ಯದ್ವಾರದ ಬಳಿನ ಪತ್ನಿಯನ್ನು ಪಕ್ಕದಲ್ಲಿ ಕೂರಿಸಿಕೊಂಡ ಧನರಾಜ್, ಅವರ ಜತೆಗೆ ಒಂದಷ್ಟು ಮಾತನಾಡಿದ್ದಾರೆ. "ಈ ಸ್ಥಳದ ಮಹಿಮೆ ಎಂಥದ್ದು ಗೊತ್ತಾ? ಇಲ್ಲಿ ಕುಳಿತುಕೊಂಡು ಏನು ಹೇಳುತ್ತೀವೋ ಅದು ಆಗುತ್ತೆ. ಸುರೇಶ್ ಅವ್ರು ಹೋದ ಮೇಲೆ ನಾನು ಹನುಮಂತು ಹತ್ರ ಏನೋ ಹೇಳಿದ್ದೆ. ನೋಡು ಈ ವಾರ ಹೀಗಾಗುತ್ತೆ ನೋಡಿ ಎಂದಿದ್ದೆ. ಅದೇ ಥರ ಆಯ್ತು. ಸುರೇಶ್ ಅವರು ಇದೇ ಜಾಗಕ್ಕೆ ಬಂದು, ನಾನು ಈ ವಾರ ಕ್ಯಾಪ್ಟನ್ ಆಗಬೇಕು ಅಂದ್ರು. ಅವರು ಹೇಳಿದಂತೆ ಕ್ಯಾಪ್ಟನ್ ಆದ್ರು.
ಈ ಜಾಗದಲ್ಲಿ ಏನೋ ಇದೆ ದೋಸ್ತ ಎಂದು ಹೇಳಿ, ಈ ವಾರ ಕಿಚ್ಚನ ಚಪ್ಪಾಳೆ ಬೇಕು ಎಂದು ಹೇಳಿದ್ದೆ. ಅದೇ ವಾರದಲ್ಲಿ ನನಗೆ ಕಿಚ್ಚನ ಚಪ್ಪಾಳೆ ಸಿಕ್ತು. ಅಷ್ಟೇ ಅಲ್ಲ, ನಿನಗೆ ಚಪ್ಪಾಳೆ ಸಿಗಲಿ, ನಾನು ಮನೆಯಿಂದ ಹೊರಡುತ್ತೇನೆ ಎಂದೆ. ಹೇ.. ದೋಸ್ತ ಹೀಗೆಲ್ಲ ಅನ್ನಬೇಡ, ಇಲ್ಲಿ ಆಗಿದ್ದು ಆಗಿದೆ ಅಂದೆ. ಅವನ ಆ ಮಾತು ಹೇಗೆ ಬದಲಾಯ್ತು ಅಂದ್ರೆ, ನನಗೆ ಉತ್ತಮ ಸಿಕ್ತು. ಅವನು ಮನೆಗೆ ಹೋಗುವ ಬದಲು, ಕಳಪೆ ಪಟ್ಟ ಪಡೆದು ಜೈಲಿಗೆ ಹೋದ. ಅದಕ್ಕೆ ಈ ಜಾಗದ ಮಹತ್ವ ಹಾಗಿದೆ. ಅದಕ್ಕೇ ನಾವು ಇಲ್ಲಿಯೇ ಹೆಚ್ಚು ಕಾಲ ಇರೋದು.
ಇನ್ನೊಂದು ಮಗು ಬೇಕು
ಹಾಗಾದರೆ, ಈಗ ನನ್ನ ಕೈ ಹಿಡಿದುಕೊಂಡು ಏನು ಆಗಬೇಕು ಅನ್ಕೋತಿಯಾ? ಎಂದು ಪತ್ನಿ ಧನರಾಜ್‌ಗೆ ಪ್ರಶ್ನೆ ಕೇಳಿದ್ದಾರೆ. ಅದಕ್ಕೆ ಉತ್ತರ ನೀಡಿದ ಧನರಾಜ್, "ನಮಗೆ ಒಳ್ಳೆಯದಾಗಲಿ. ಇನ್ನೊಂದು ಮಗುವಾಗಲಿ (ಜೋರಾಗಿ ನಗುತ್ತ). ಯಾಕೆ ಬೇಡ್ವಾ? ನೀ ರೆಡಿ ಇಲ್ವಾ? ಎಂದು ತಮಾಷೆಯಾಗಿ ಮಾತನಾಡಿದ್ದಾರೆ.
ಧನರಾಜ್ ಕುಟುಂಬ ಇಷ್ಟೊಂದು ದೊಡ್ಡದಾ?
ಬಿಗ್ ಬಾಸ್ ಮನೆಗೆ ಉಳಿದ ಸ್ಪರ್ಧಿಗಳಿಂದ ಒಬ್ಬಿಬ್ಬರು ಮಾತ್ರ ಮನೆ ಪ್ರವೇಶಿಸಿದ್ದರು. ಆದರೆ, ಧನರಾಜ್ ಅವರ ಕಮಲಜ್ಜಿ ಕುಟುಂಬದ 30ಕ್ಕೂ ಹೆಚ್ಚು ಮಂದಿ ಬಿಗ್ ಮನೆಗೆ ಎಂಟ್ರಿಕೊಟ್ಟಿದ್ದರು. ಇದನ್ನು ನೋಡಿದ ಇತರ ಸ್ಪರ್ಧಿಗಳು ಅರೇ ಕ್ಷಣ ಹೌಹಾರಿದ್ದರು. ಇಷ್ಟೊಂದು ಮಂದಿನಾ ಎಂದು ನಿಬ್ಬೆರಗಾಗಿದ್ದರು. ಇವರೆಲ್ಲರ ಜತೆಗೆ ಹುಲಿ ಕುಣಿತಕ್ಕೆ ಹೆಜ್ಜೆ ಹಾಕಿದ ಧನರಾಜ್, ಎಲ್ಲರನ್ನು ಕಂಡು ಸಂಭ್ರಮಿಸಿದ್ದಾರೆ. ಬಳಿಕ ಅವರನ್ನು ಅಷ್ಟೇ ಆತ್ಮಿಯವಾಗಿ ಬೀಳ್ಕೊಟ್ಟಿದೆ ಬಿಗ್ ಬಾಸ್.