ಹನುಮಂತನಿಗೆ ‘ದೋಸ್ತಾ ನೀ ನನ್ನ ಪ್ರಾಣ ಕಣೋ’ ಎನ್ನುತ್ತಲೇ ಬಿಗ್ ಬಾಸ್‌ನಿಂದ ಆಚೆ ಬಂದ ಧನರಾಜ್ ಆಚಾರ್
ಕಾಮಿಡಿಯನ್ ಧನರಾಜ್ ಆಚಾರ್ ಅವರ 112 ದಿನಗಳ ಬಿಗ್ ಬಾಸ್ ಋಣ ಮುಗಿದಿದೆ. ಭಾನುವಾರ ಮನೆಗೆ ಹೋಗಲು ರಜತ್, ಭವ್ಯಾ, ಧನರಾಜ್ ಮತ್ತು ಮಂಜು ನಾಮಿನೇಟ್ ಆಗಿದ್ದರು. ಆ ಪೈಕಿ ಧನರಾಜ್ ಆಚಾರ್ ಫಿನಾಲೆ ಸನಿಹ ಬಂದು ಎಡವಿದ್ದಾರೆ.

Bigg Boss Kannada 11: ಬಿಗ್ ಬಾಸ್ ಕನ್ನಡ 11ರಲ್ಲಿ 16 ವಾರಗಳ ಆಟ ಮುಗಿಸಿದ್ದಾರೆ ಕಾಮಿಡಿಯನ್ ಧನರಾಜ್ ಆಚಾರ್. ಕೊನೇ ಹಂತದಲ್ಲಿ ಉಗ್ರಂ ಮಂಜು ಮತ್ತು ಧನರಾಜ್ ಪೈಕಿ ಮಂಜು ಸೇವ್ ಆಗಿ, ಧನರಾಜ್ ಮನೆಯಿಂದ ಹೊರ ನಡೆಯಬೇಕಾಯ್ತು. 112ನೇ ದಿನಗಳಲ್ಲಿ ಮನೆಯಲ್ಲಿದ್ದಷ್ಟು ದಿನ ಎಲ್ಲರನ್ನು ನಗಿಸುತ್ತ, ತಾವೂ ನಗುತ್ತ ಜೀವಿಸಿದವರು ಧನರಾಜ್. ಆದರೆ ಕೊನೇ ಹಂತಕ್ಕೆ ಬಂದು ಎಡವಿದ್ದಾರೆ.
ಧನರಾಜ್ ಅವರ ಪ್ರಾಮಾಣಿಕತೆ ಬಗ್ಗೆ ಮನೆ ಮಂದಿ ಮಾತ್ರವಲ್ಲದೆ, ಕಿಚ್ಚ ಸುದೀಪ್ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಆದ ತಪ್ಪನ್ನು ಕ್ಯಾಮರಾ ಮುಂದೆ ಹೇಳಿಕೊಂಡು, ವೀಕ್ಷಕರಿಂದಲೂ ಚಪ್ಪಾಳೆ ಗಿಟ್ಟಿಸಿಕೊಂಡಿದ್ದರು. ಅಷ್ಟಕ್ಕೆ ಮುಗಿಯಲಿಲ್ಲ, ಸ್ವತಃ ಕಿಚ್ಚನಿಂದಲೇ ಚಪ್ಪಾಳೆ ಸಿಕ್ಕಿತ್ತು. ಆ ಉತ್ಸಾಹದಲ್ಲಿಯೇ ಒಳ್ಳೆಯ ಆಟ ಮುಂದುವರಿಸಿದ್ದ ಧನರಾಜ್, ಕಳೆದ ವಾರ ತಮಗರಿವಿಲ್ಲದೆ ತಪ್ಪು ಮಾಡಿದ್ದರು. ಆ ತಪ್ಪೇ ಭಾನುವಾರದ ಎಲಿಮಿನೇಷನ್‌ಗೆ ಮುಳುವಾಯ್ತಾ?
ಈ ವಾರ ಮನೆಯಿಂದ ಹೊರಹೋಗಲು, ಗೌತಮಿ ಜಾಧವ್, ಉಗ್ರಂ ಮಂಜು, ರಜತ್, ಧನರಾಜ್ ಮತ್ತು ಭವ್ಯಾ ಗೌಡ ನಾಮಿನೇಟ್ ಆಗಿದ್ದರು. ಆ ಪೈಕಿ ಡಬಲ್ ಎಲಿಮಿನೇಷನ್ ಮುಗಿದಿದೆ. ಶನಿವಾರ ಗೌತಮಿ ಜಾಧವ್ ಮನೆಯಿಂದ ಆಚೆ ಬಂದಿದ್ದರೆ, ಭಾನುವಾರ ಧನರಾಜ್ ಆಚಾರ್ ಬೇಸರದಲ್ಲಿಯೇ ಎಲಿಮಿನೇಟ್ ಆಗಿದ್ದರು. ಹನುಮಂತ, ತ್ರಿವಿಕ್ರಮ್, ಮೋಕ್ಷಿತಾ ಪೈ ಅದಾಗಲೇ ಫಿನಾಲೆ ರೇಸ್‌ನಲ್ಲಿದ್ದರು. ಇವರುಗಳ ಜತೆಗೆ ಮಂಜು, ಭವ್ಯ, ರಜತ್ ಸೇರಿಕೊಂಡು ಒಟ್ಟು ಆರು ಮಂದಿ ಬಿಗ್ ಬಾಸ್ ಫಿನಾಲೆ ವಾರಕ್ಕೆ ಕಾಲಿರಿಸಿದ್ದಾರೆ.
ಬಿಗ್ ಬಾಸ್ ಮನೆಯಿಂದ ಆಚೆ ಬರುವಾಗ, ಉಳಿದ ಸ್ಪರ್ಧಿಗಳಿಗೆ ಒಂದೊಂದು ಮಾತು ಹೇಳಿ ಧನರಾಜ್ ಆಚೆ ಬಂದರು. "ಮೋಕ್ಷಿತಾ ನಿಮಗೆ ಪ್ರಾಮಾಣಿಕತೆ ಇದೆ" ಎಂದರೆ, "ಮಂಜು ಅವರೇ ನೀವು ಸೈಲೆಂಟ್ ಆಗಿ ಇರಬಾರದು, ಎದುರುತ್ತರ ಕೊಡುವುದನ್ನು ನಾವು ನೋಡಬೇಕು", "ದೋಸ್ತಾ, ನಿನ್ನ ಜೊತೆಗೆ ನಾನು ಇರ್ತೀನಿ, ಚನ್ನಾಗಿ ಆಡು" ಎಂದು ಹನುಮಂತನಿಗೆ ಹೇಳಿದರೆ, ರಜತ್, ಭವ್ಯ, ಮೋಕ್ಷಿತಾ, ತ್ರಿವಿಕ್ರಮ್ ಬಗ್ಗೆಯೂ ಖುಷಿಯ ಮಾತುಗಳನ್ನಾಡಿ ಆಚೆ ಬಂದಿದ್ದಾರೆ.
