Girls Vs Boys: ಜಿಗರ್ ಇರೋ ಹುಡುಗ- ಹುಡುಗೀರ ಜಿದ್ದಾಜಿದ್ದಿ ಶೋಗೆ ಎಂಟ್ರಿಕೊಟ್ಟ ಲಾಯರ್ ಜಗದೀಶ್
ಬಿಗ್ ಬಾಸ್ ಮುಗಿಯುತ್ತಿದ್ದಂತೆ ಕಲರ್ಸ್ ಕನ್ನಡದಲ್ಲಿ ಹೊಸ ಶೋ ಆರಂಭವಾಗಲಿದೆ. ಫೆಬ್ರವರಿ 1ರಿಂದ ಗರ್ಲ್ಸ್ ವರ್ಸಸ್ ಬಾಯ್ಸ್ ಶೋ ಶುರುವಾಗಲಿದ್ದು, ಅದರ ಮೊದಲ ಪ್ರೋಮೋ ಬಿಡುಗಡೆ ಆಗಿದೆ.

Girls Vs Boys Reality show: ಬಿಗ್ ಬಾಸ್ ಕನ್ನಡ 11 ಕೊನೇ ಹಂತಕ್ಕೆ ಬರುತ್ತಿದ್ದಂತೆ, ವಾರಾಂತ್ಯಕ್ಕೆ ಕಲರ್ಸ್ ಕನ್ನಡದಲ್ಲಿ ಹೊಸ ರಿಯಾಲಿಟಿ ಶೋವೊಂದು ವೀಕ್ಷಕರನ್ನು ಮನರಂಜಿಸಲು ಆಗಮಿಸುತ್ತಿದೆ. ಈಗಾಗಲೇ ಗೊತ್ತಿರುವಂತೆ, ಗರ್ಲ್ಸ್ ವರ್ಸಸ್ ಬಾಯ್ಸ್ ಹೊಸ ಶೋನ ಪ್ರೋಮೋವೊಂದನ್ನು ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳಿಂದಲೇ ಆನ್‌ಸ್ಪಾಟ್ ಕ್ರಿಯೇಟ್ ಮಾಡಿಸಿದ್ದರು ನಿರೂಪಕಿ ಅನುಪಮಾ ಗೌಡ. ಈಗ ಇದೇ ಗರ್ಲ್ಸ್ ವರ್ಸಸ್ ಬಾಯ್ಸ್ ಶೋನ ಮೊದಲ ಪ್ರೋಮೋ ಹೊರಬಂದಿದೆ. ಅಚ್ಚರಿಯ ಸ್ಪರ್ಧಿಗಳು ಈ ಶೋನಲ್ಲಿದ್ದಾರೆ.
ಶೋನ ಹೆಸರೇ ಹೇಳುವಂತೆ ಇದು ಗರ್ಲ್ಸ್ ವರ್ಸಸ್ ಬಾಯ್ಸ್ ಜಟಾಪಟಿಯ ಶೋ. ಈ ವರೆಗೂ ಈ ಶೋ ಹೇಗಿರಲಿದೆ, ಯಾರೆಲ್ಲ ಇರಲಿದ್ದಾರೆ? ಶೋನ ಕಾನ್ಸೆಪ್ಟ್ ಯಾವ ರೀತಿ ಇರಲಿದೆ ಅನ್ನೋ ಕುತೂಹಲವಿತ್ತು. ಈಗ ಅದಕ್ಕೆ ತಕ್ಕಂತೆ, ಮೊದಲ ಪ್ರೋಮೋ ಬಿಡುಗಡೆ ಆಗಿದೆ. ಪ್ರೋಮೋದಲ್ಲಿ ಬಹುತೇಕ ಬಿಗ್‌ಬಾಸ್ ಸ್ಪರ್ಧಿಗಳು ಕಾಣಿಸಿಕೊಂಡಿದ್ದಾರೆ. ಕಳೆದ ಸೀಸನ್‌ನ ವಿನಯ್ ಗೌಡ ಅವರಿಂದ ಹಿಡಿದು ಈ ಸಲದ ಲಾಯರ್ ಕೆ.ಎನ್ ಜಗದೀಶ್, ಶೋಭಾ ಶೆಟ್ಟಿ ಸಹ ಇದ್ದಾರೆ. ಇನ್ನೇನು ಫೆಬ್ರವರಿ 1ರಿಂದ ಈ ಶೋ ಶುರುವಾಗಲಿದೆ.
ಗರ್ಲ್ಸ್ ವರ್ಸಸ್ ಬಾಯ್ಸ್; ಯಾರೆಲ್ಲ ಇರಲಿದ್ದಾರೆ
ಜಿಗರ್ ಇರೋ ಹುಡುಗ- ಹುಡುಗೀರ ಜಿದ್ದಾಜಿದ್ದಿ ಶೋನಲ್ಲಿ ವಿನಯ್ ಗೌಡ ಬಾಯ್ಸ್ ಟೀಮ್‌ನ ಲೀಡರ್ ಆಗಿದ್ದರೆ, ಈ ಬಾಯ್ಸ್ ಟೀಮ್‌ನಲ್ಲಿ ಮಂಜು ಪಾವಗಡ, ಟ್ಯಾಲೆಂಟೆಡ್ ಕಲಾವಿದ ಪ್ರಶಾಂತ್, ವಿಶ್ವಾಸ್, ಸೂರಜ್, ಚಂದನಾ, ವಿವೇಕ್ ಸಿಂಹ, ಲಾಯರ್ ಜಗದೀಶ್ ಇದ್ದರೆ, ಅತ್ತ ಕಡೆ ಗರ್ಲ್ಸ್ ಟೀಮ್‌ನಿಂದ ಶುಭಾ ಪೂಂಜಾ ಲೀಡರ್. ಆ ಟೀಮ್‌ನಲ್ಲಿ ಬಿಗ್ ಬಾಸ್ ಖ್ಯಾತಿಯ ಐಶ್ವರ್ಯಾ ಶಿಂಧೋಗಿ, ಶೋಭಾ ಶೆಟ್ಟಿ, ಕೋಳಿ ರಮ್ಯಾ, ಸ್ಫೂರ್ತಿ, ಕರಿಮಣಿ ಸೀರಿಯಲ್ ನಟಿ ಸ್ಪಂದನಾ ಇದ್ದಾರೆ.
ಕಲರ್ಸ್‌ಗೆ ಮತ್ತೆ ಮರಳಿದ ಲಾಯರ್
ಬಿಗ್ ಬಾಸ್ ಆರಂಭವಾದ ಮೂರನೇ ವಾರದಲ್ಲಿಯೇ ಅವಾಚ್ಯ ಪದಗಳ ಬಳಕೆ ಮತ್ತು ದೈಹಿಕ ಹಲ್ಲೆ ಮಾಡಿದ್ದರಿಂದ ಲಾಯರ್ ಜಗದೀಶ್ ಮತ್ತು ರಂಜಿತ್ ಮನೆಯಿಂದ ನೇರವಾಗಿ ಎಲಿಮಿನೇಟ್ ಆಗಿದ್ದರು. ಅದಾದ ಮೇಲೆ ಜೀ ಕನ್ನಡದ ಡಾನ್ಸ್ ಕರ್ನಾಟಕ ಡಾನ್ಸ್ ಶೋನಲ್ಲಿಯೂ ಗೆಸ್ಟ್ ಆಗಿ ಮಿಂಚಿದ್ದರು ಜಗದೀಶ್. ಈಗ ಮರಳಿ ಕಲರ್ಸ್ ಕನ್ನಡದ ಗರ್ಲ್ಸ್ ವರ್ಸಸ್ ಬಾಯ್ಸ್ ಶೋಗೆ ಎಂಟ್ರಿ ಕೊಟ್ಟಿದ್ದಾರೆ. ಪ್ರೋಮೋದಲ್ಲಿ ಜಗದೀಶ್ ಕಾಣಿಸಿದ್ದೇ ತಡ, ನೆಟ್ಟಿಗರ ಕಣ್ಣು ಅರಳಿದೆ. ಜಗ್ಗು ಇದ್ರೆ ಕಾಮಿಡಿಗೆ ಮೋಸ ಇಲ್ಲ ಎಂದು ಬಗೆಬಗೆ ಕಾಮೆಂಟ್ ಸಂದಾಯವಾಗುತ್ತಿವೆ.
