Bigg Boss Kannada 11: ಹನುಮನ ಕೃಪಾಕಟಾಕ್ಷ, ಫಿನಾಲೆ ವಾರ ತಲುಪಿದ ಮೋಕ್ಷಿತಾ ಪೈ; ಯಾರ ಪಾಲಿಗೆ ಡಬಲ್ ಎಲಿಮಿನೇಷನ್ ಉರುಳು?
Bigg Boss Kannada 11: ಬಿಗ್ ಬಾಸ್ ಕನ್ನಡ 11ರ ಫಿನಾಲೆ ವಾರ ತಲುಪಿದ್ದಾರೆ ಮೋಕ್ಷಿತಾ ಪೈ. ಸದ್ಯ ಉಳಿದಿರುವುದು ಧನರಾಜ್ ಆಚಾರ್, ಉಗ್ರಂ ಮಂಜು, ಗೌತಮಿ ಜಾಧವ್, ಭವ್ಯಾ ಗೌಡ, ರಜತ್ ಮಾತ್ರ. ಈ ಐವರ ಪೈಕಿ ಡಬಲ್ ಎಲಿಮಿನೇಷನ್ ಉರುಳು ಯಾರಿಗೆ? ಎಂಬುದು ಇಂದಿನ ಸಂಚಿಕೆಯಲ್ಲಿ ರಿವೀಲ್ ಆಗುವ ಸಾಧ್ಯತೆ ಇದೆ.

Bigg Boss Kannada 11: ಬಿಗ್ ಬಾಸ್ ಮನೆಯಲ್ಲಿ ಇದೀಗ ಫಿನಾಲೆ ಕಾವು ಜೋರಾಗಿದೆ. ಇನ್ನೇನು ಮುಂದಿನ ವಾರ ಬಿಗ್ ಬಾಸ್ ಫಿನಾಲೆ ನಡೆಯುವ ಸಾಧ್ಯತೆ ಇದೆ. ಅದಕ್ಕೂ ಮುನ್ನ ಈ ವಾರ ಡಬಲ್ ಎಲಿಮಿನೇಷನ್ ಇರಲಿದೆ ಎಂದು ಬಿಗ್ ಬಾಸ್ ಎಚ್ಚರಿಸಿದ್ದರು. ಅದರಂತೆ, ಯಾವ ಇಬ್ಬರು ಈ ವಾರ ಮನೆಯಿಂದ ಹೊರಹೋಗುತ್ತಾರೆ ಎಂಬುದು ಸದ್ಯದ ಕೌತುಕ. ಇದೆಲ್ಲದರ ನಡುವೆ ಶುಕ್ರವಾರ ಅಚ್ಚರಿಯ ಬೆಳವಣಿಗೆಯಲ್ಲಿ ಮೋಕ್ಷಿತಾ ಪೈ ಫಿನಾಲೆ ವಾರ ತಲುಪಿದ್ದಾರೆ.
ಫಿನಾಲೆ ವಾರಕ್ಕೆ ಕಾಲಿಟ್ಟವರು..
ಇದೇ ವಾರ ಟಾಸ್ಕ್ ವೇಳೆ ಧನರಾಜ್ ಮಾಡಿದ ತಪ್ಪಿನಿಂದ ಟಾಸ್ಕ್ ರದ್ದುಪಡಿಸಲಾಗಿತ್ತು. ತಮ್ಮ ತಪ್ಪಿನ ಅರಿವಾಗಿ, ನಾನೂ ನಾಮಿನೇಷನ್ ಸಾಲಿನಲ್ಲಿ ನಿಲ್ಲುವೆ ಎಂದಿದ್ದರು ಧನರಾಜ್. ಅದರಂತೆ ಎರಡನೇ ಸಲದ ನಾಮಿನೇಷನ್ ಪಟ್ಟಿಯಲ್ಲಿ ಉಗ್ರಂ ಮಂಜು, ಭವ್ಯಾ ಗೌಡ, ಗೌತಮಿ ಜಾದವ್, ರಜತ್, ಮೋಕ್ಷಿತಾ ಪೈ ಜತೆಗೆ ಧನರಾಜ್ ಆಚಾರ್ ಹೆಸರೂ ಸೇರಿಕೊಂಡಿತು. ಇವರುಗಳ ಪೈಕಿ ತ್ರಿವಿಕ್ರಮ್‌ಗೆ ಹೆಚ್ಚು ನಾಮಿನೇಷನ್ ವೋಟ್ ಬೀಳದ ಕಾರಣ ಅವರು ಫಿನಾಲೆ ವಾರಕ್ಕೆ ಕಾಲಿಟ್ಟರು.
ಹನುಮನ ಕೃಪೆಯಿಂದ ಸೇವ್ ಆದ ಮೋಕ್ಷಿತಾ
ಈ ನಡುವೆ ಈಗಾಗಲೇ ಫಿನಾಲೆ ವಾರದಲ್ಲಿ ಕೂತ ಹನುಮಂತನಿಗೆ ಬಿಗ್ ಬಾಸ್ ವಿಶೇಷ ಅಧಿಕಾರವೊಂದನ್ನು ನೀಡಿದರು. ಉಗ್ರಂ ಮಂಜು, ಭವ್ಯಾ ಗೌಡ, ಗೌತಮಿ ಜಾದವ್, ರಜತ್, ಮೋಕ್ಷಿತಾ ಪೈ ಮತ್ತು ಧನರಾಜ್ ಆಚಾರ್ ಪೈಕಿ ಒಬ್ಬರನ್ನು ಸೇವ್ ಮಾಡಬೇಕು ಎಂದರು. ಅದರಲ್ಲಿ ಮೋಕ್ಷಿತಾ ಅವರನ್ನು ಸೇವ್ ಮಾಡಿ, ಫಿನಾಲೆ ವಾರಕ್ಕೆ ಕರೆದೊಯ್ದರು. ಬಹುತೇಕರು ಧನರಾಜ್ ಅವರನ್ನು ಹನುಮಂತು ಸೇವ್ ಮಾಡಬಹುದು ಎಂದೇ ಭಾವಿಸಿದ್ದರು. ಆದರೆ, ಟಾಸ್ಕ್ ವೇಳೆ ಆದ ತಪ್ಪನ್ನು ತಲೆಯಲ್ಲಿಟ್ಟುಕೊಂಡು, ಧನರಾಜ್ ಅವರನ್ನು ಹನುಮಂತು ಆಯ್ಕೆ ಮಾಡಲಿಲ್ಲ.
ಡಬಲ್ ಎಲಿಮಿನೇಷನ್ ಉರುಳು ಯಾರಿಗೆ?
‘ಮೋಕ್ಷಿತಾಕ್ಕ ಚೆನ್ನಾಗಿ ಆಡುತ್ತಿದ್ದಾರೆ. ಹಾಡು ಹೇಳ್ತಾರೆ. ಮನರಂಜನೆಯನ್ನೂ ಮಾಡುತ್ತಾರೆ. ಒಳ್ಳೆಯ ಮನಸ್ಸಿನ ವ್ಯಕ್ತಿ. ಅವರಲ್ಲಿ ಕಲ್ಮಶ ಇಲ್ಲ. ಮಾಡಿದ ತಪ್ಪನ್ನು ಒಪ್ಪಿಕೊಳ್ಳುತ್ತಾರೆ. ನಾನು ಅವರನ್ನು ಸೇವ್ ಮಾಡುತ್ತೇನೆ’ ಎಂದು ಬಿಗ್‌ಬಾಸ್‌ಗೆ ಹೇಳಿದ್ದರು ಹನುಮಂತು. ಈ ಮೂಲಕ ಮೋಕ್ಷಿತಾ ಹನುಮನ ಕೃಪಕಟಾಕ್ಷದಿಂದ ಫಿನಾಲೆ ವೀಕ್ ತಲುಪಿದರು. ಸದ್ಯ ಉಳಿದಿರುವುದು ಧನರಾಜ್ ಆಚಾರ್, ಉಗ್ರಂ ಮಂಜು, ಗೌತಮಿ ಜಾಧವ್, ಭವ್ಯಾ ಗೌಡ, ರಜತ್ ಮಾತ್ರ. ಈ ಐವರ ಪೈಕಿ ಡಬಲ್ ಎಲಿಮಿನೇಷನ್ ಉರುಳು ಯಾರಿಗೆ? ಎಂಬುದು ಇಂದಿನ ಸಂಚಿಕೆಯಲ್ಲಿ ರಿವೀಲ್ ಆಗುವ ಸಾಧ್ಯತೆ ಇದೆ.

ವಿಭಾಗ