ಬಿಗ್‌ಬಾಸ್‌ ಕನ್ನಡ 11: ಇಲ್ಲಿಂದ ಹೊರ ಹೋಗ್ತಿದ್ದಂತೆ ಮದುವೆ ಆಗುತ್ತೆ, ಉಗ್ರಂ ಮಂಜು ಭವಿಷ್ಯ ನುಡಿದ ಶ್ರೀ ವಿದ್ಯಾಶಂಕರಾನಂದ ಸರಸ್ವತಿ ಗುರೂಜಿ
ಕನ್ನಡ ಸುದ್ದಿ  /  ಮನರಂಜನೆ  /  ಬಿಗ್‌ಬಾಸ್‌ ಕನ್ನಡ 11: ಇಲ್ಲಿಂದ ಹೊರ ಹೋಗ್ತಿದ್ದಂತೆ ಮದುವೆ ಆಗುತ್ತೆ, ಉಗ್ರಂ ಮಂಜು ಭವಿಷ್ಯ ನುಡಿದ ಶ್ರೀ ವಿದ್ಯಾಶಂಕರಾನಂದ ಸರಸ್ವತಿ ಗುರೂಜಿ

ಬಿಗ್‌ಬಾಸ್‌ ಕನ್ನಡ 11: ಇಲ್ಲಿಂದ ಹೊರ ಹೋಗ್ತಿದ್ದಂತೆ ಮದುವೆ ಆಗುತ್ತೆ, ಉಗ್ರಂ ಮಂಜು ಭವಿಷ್ಯ ನುಡಿದ ಶ್ರೀ ವಿದ್ಯಾಶಂಕರಾನಂದ ಸರಸ್ವತಿ ಗುರೂಜಿ

ಬಿಗ್‌ ಬಾಸ್‌ ಸೀಸನ್‌ 11 ಇದೇ ಭಾನುವಾರ ಅಂತ್ಯಗೊಳ್ಳುತ್ತಿದೆ. ಈ ನಡುವೆ ಮನೆಗೆ ಬಂದ ಮಹರ್ಷಿ ದರ್ಶನ ಖ್ಯಾತಿಯ ಶ್ರೀ ವಿದ್ಯಾಶಂಕರಾನಂದ ಸರಸ್ವತಿ ಗುರೂಜಿ , ಇಲ್ಲಿಂದ ಹೋಗುತ್ತಿದ್ದಂತೆ ನಿನ್ನ ಮದುವೆ ಆಗಲಿದೆ, ಒಳ್ಳೆ ಸಂಗಾತಿ ಸಿಗುತ್ತಾಳೆ, ವೃತ್ತಿ ಜೀವನವೂ ಚೆನ್ನಾಗಿರುತ್ತದೆ ಎಂದು ಉಗ್ರಂ ಮಂಜು ಬಗ್ಗೆ ಭವಿಷ್ಯ ನುಡಿದಿದ್ದಾರೆ.

ಬಿಗ್‌ ಬಾಸ್‌ ಕನ್ನಡ 11ರಲ್ಲಿ ಉಗ್ರಂ ಮಂಜು ಭವಿಷ್ಯ ನುಡಿದ ಶ್ರೀ ವಿದ್ಯಾಶಂಕರಾನಂದ ಸರಸ್ವತಿ ಗುರೂಜಿ
ಬಿಗ್‌ ಬಾಸ್‌ ಕನ್ನಡ 11ರಲ್ಲಿ ಉಗ್ರಂ ಮಂಜು ಭವಿಷ್ಯ ನುಡಿದ ಶ್ರೀ ವಿದ್ಯಾಶಂಕರಾನಂದ ಸರಸ್ವತಿ ಗುರೂಜಿ (PC: Jio Cinema)

ಬಿಗ್‌ಬಾಸ್‌ ಕನ್ನಡ ಸೀಸನ್‌ 11 ಕೊನೆಯ ಹಂತಕ್ಕೆ ಬಂದಿದೆ. ಇದೇ ಭಾನುವಾರ ಅಂದರೆ, ಜನವರಿ 26 ರಂದು ಈ ಬಾರಿಯ ಬಿಗ್‌ಬಾಸ್‌ ವಿನ್ನರ್‌ ಯಾರು ಅನ್ನೋದು ತಿಳಿಯಲಿದೆ. ಈಗ ಮನೆಯಲ್ಲಿ ಉಗ್ರಂ ಮಂಜು, ರಜತ್‌, ಹನುಮಂತ , ತ್ರಿವಿಕ್ರಮ್‌, ಭವ್ಯಾ ಗೌಡ, ಮೋಕ್ಷಿತಾ ಪೈ ಉಳಿದುಕೊಂಡಿದ್ದಾರೆ. ಧನರಾಜ್‌ ಆಚಾರ್‌ ಹಾಗೂ ಗೌತಮಿ ಜಾಧವ್‌ ಕಳೆದ ವಾರ ಎಲಿಮಿನೇಟ್‌ ಆಗಿದ್ದಾರೆ. ಎಲ್ಲಾ ಸ್ಪರ್ಧಿಗಳಿಗೂ ಅಭಿಮಾನ ಬಳಗವಿದ್ದು ತಮ್ಮ ಮೆಚ್ಚಿನ ಸ್ಪರ್ಧಿಗಳು ಗೆಲ್ಲಲಿ ಎಂದು ವೀಕ್ಷಕರು ಹಾರೈಸುತ್ತಿದ್ದಾರೆ.

ಮನೆಯಲ್ಲಿ ಉಳಿದಿರುವ 6 ಸ್ಪರ್ಧಿಗಳು

ಬಿಗ್‌ಬಾಸ್‌ಗೆ ಈಗಾಗಲೇ ಬಹಳಷ್ಟು ಸೆಲೆಬ್ರಿಟಿಗಳು ಬಂದು ಕಂಟಸ್ಟಂಟ್‌ಗಳನ್ನು ಭೇಟಿ ಮಾಡಿ ಹೋಗಿದ್ದಾರೆ. ತಾರಾ ಅನುರಾಧ, ಶರಣ್‌, ಅದಿತಿ ಪ್ರಭುದೇವ ಹಾಗೂ ಇನ್ನಿತರರು ದೊಡ್ಮೆನೆಗೆ ಬಂದು ಹೋಗಿದ್ದಾರೆ. ಇತ್ತೀಚೆಗೆ ಮಜಾ ಟಾಕೀಸ್‌ ತಂಡ ಕೂಡಾ ಬಂದು ಹೋಗಿದ್ದರು. 114 ನೇ ದಿನ ಬೆಳಗ್ಗೆ ಸ್ಪರ್ಧಿಗಳು ಹುಡುಗರು ಚಿತ್ರದ ಘಲ್ಲು ಘಲ್ಲೆನುತಾವ್‌ ಗೆಜ್ಜೆ… ಹಾಡಿಗೆ ಡ್ಯಾನ್ಸ್‌ ಮಾಡುವ ಮೂಲಕ ದಿನವನ್ನು ಸ್ವಾಗತಿಸಿದರು. ಮಧ್ಯಾಹ್ನ, ಮನೆಗೆ ಶ್ರೀ ವಿದ್ಯಾಶಂಕರಾನಂದ ಸರಸ್ವತಿ ಗುರೂಜಿ ಆಗಮಿಸುತ್ತಾರೆ. ಸ್ಪರ್ಧಿಗಳೆಲ್ಲರೂ ಅವರ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆಯುತ್ತಾರೆ.

ಕಲರ್ಸ್‌ ಕನ್ನಡದಲ್ಲಿ ಪ್ರತಿದಿನ ಬೆಳಗ್ಗೆ 7.30ಕ್ಕೆ ಪ್ರಸಾರವಾಗಲಿರುವ ಮಹರ್ಷಿ ದರ್ಶನ ಕಾರ್ಯಕ್ರಮದಲ್ಲಿ ವಿದ್ಯಾಶಂಕರಾನಂದ ಸರಸ್ವತಿ ಗುರೂಜಿ ಭವಿಷ್ಯ ಹೇಳುತ್ತಾರೆ. ಕಳೆದ ವರ್ಷ ಕೂಡಾ ಅವರು ಬಿಗ್‌ಬಾಸ್‌ಗೆ ಬಂದು ಸದಸ್ಯರ ಭವಿಷ್ಯ ನುಡಿದಿದ್ದರು. ಈ ಬಾರಿ ಕೂಡಾ ಆರೂ ಜನರ ಸ್ಪರ್ಧಿಗಳ ಭವಿಷ್ಯ ತಿಳಿಸಿಕೊಟ್ಟಿದ್ಧಾರೆ. ಅದರಲ್ಲಿ ಉಗ್ರಂ ಮಂಜುಗೆ ಬಿಗ್‌ಬಾಸ್‌ನಿಂದ ಹೊರ ಹೋದ ನಂತರ ಮದುವೆ ಆಗಲಿದೆ ಎಂದು ಹೇಳಿದ್ದಾರೆ.

ಉಗ್ರಂ ಮಂಜು ಮದುವೆ ಭವಿಷ್ಯ ನುಡಿದ ಗುರೂಜಿ

ಏನು ಕೇಳಬೇಕು ಕೇಳಿ ಎಂದು ಗುರುಗಳು ಹೇಳಿದ ಮಾತಿಗೆ, ವಯಸ್ಸು 38 ಆಯ್ತು, ತಂಗಿಯರಿಗೆ ಮದುವೆ ಮಾಡಿ ನಾನೂ ಮದುವೆ ಆಗೋಣ ಎಂದುಕೊಂಡಿದ್ದೆ, ಮದುವೆ ಹಾಗೂ ವೃತ್ತಿ ಜೀವನ ಹೇಗಿರಲಿದೆ ಎಂದು ಉಗ್ರಂ ಮಂಜು ಕೇಳುತ್ತಾರೆ. ನಿಮ್ಮದು ಆಶ್ಲೇಷಾ ನಕ್ಷತ್ರ, ಕರ್ಕಾಟಕ ರಾಶಿ, ನೀವು ಎಮೋಷನಲ್‌ ಫೂಲ್, ಹೊರಗಿನಿಂದ ನೋಡಲು ಹಲಸಿನ ಹಣ್ಣಿನಂತೆ ಒರಟಾಗಿ ಇದ್ದೀರಿ, ಅದರೆ ಅದನ್ನು ಬಿಡಿಸಿದರೆ ತೊಳೆಗಳು ಮೃದುವಾಗಿರುವಂತೆ ಇದ್ದೀಯ. ಯಾವಾಗಲೂ ನಿನಗೆ ಭಯ ಕಾಡುತ್ತಿರುತ್ತದೆ.

ನಿಮ್ಮ ವೃತ್ತಿ ಜೀವನ ಬಹಳ ಚೆನ್ನಾಗಿರುತ್ತದೆ, 2029ವರೆಗೆ ನೀವು ಹಿಂತಿರುಗಿ ನೋಡುವುದೇ ಇಲ್ಲ, ಜೊತೆಗೆ ಕಳೆದ ವರ್ಷದಿಂದಲೇ ಕಂಕಣ ಬಲ ಶುರುವಾಗಿದೆ. ಇಲ್ಲಿಂದ ಹೊರ ಹೋಗುತ್ತಿದ್ದಂತೆ ಆದಷ್ಟು ಬೇಗ ಮದುವೆ ಆಗುತ್ತದೆ, ಒಳ್ಳೆ ಸಂಗಾತಿ ಸಿಗುತ್ತಾಳೆ, ಎಲ್ಲವೂ ಚೆನ್ನಾಗಿರುತ್ತದೆ. ಒಳ್ಳೆ ಹೆಸರು ಬರುತ್ತದೆ, ತಲೆ ಕೆಡಿಸಿಕೊಳ್ಳಬೇಡ, ತಾಯಿಯ ಆರೋಗ್ಯದ ಕಡೆ ಗಮನ ಕೊಡು ಎಂದು ಭವಿಷ್ಯ ಹೇಳುತ್ತಾರೆ, ಇದರಿಂದ ಮಂಜು ಖುಷಿಯಾಗಿ ಗುರುಗಳಿಗೆ ನಮಸ್ಕರಿಸಿ, ಅವರು ಕೊಟ್ಟ ಪ್ರಸಾದ ಪಡೆಯುತ್ತಾರೆ.

Whats_app_banner