Bigg Boss Kannada 11: ಬಿಗ್ ಬಾಸ್ ಕನ್ನಡ 11ರ ಗ್ರ್ಯಾಂಡ್ ಫಿನಾಲೆಗೆ ದಿನಾಂಕ ಫಿಕ್ಸ್? ಕಿಚ್ಚ ಸುದೀಪ್ ಕೊಟ್ರು ಬಿಗ್ ಸುಳಿವು
96 ದಿನಗಳನ್ನು ಪೂರೈಸಿರುವ ಬಿಗ್ ಬಾಸ್ ಕನ್ನಡ 11 ಇನ್ನೇನು ಕೊನೇ ಹಂತಕ್ಕೆ ಬಂದಿದೆ. ಇನ್ನೇನು ಫಿನಾಲೆಗೆ ಸನಿಹ ಬಂದಿದೆ. ಹಾಗಾದರೆ ಈ ಸಲದ ಗ್ರ್ಯಾಂಡ್ ಫಿನಾಲೆ ಯಾವಾಗ? ಈ ಬಗ್ಗೆ ಶನಿವಾರದ ಸಂಚಿಕೆಯಲ್ಲಿ ಕಿಚ್ಚ ಸುದೀಪ್ ಸುಳಿವು ನೀಡಿದ್ದಾರೆ.
Bigg Boss Kannada 11: ಬಿಗ್ ಬಾಸ್ ಕನ್ನಡ 11 ಈಗಾಗಲೇ 97 ದಿನಗಳನ್ನು ಪೂರೈಸಿದೆ. ಮೊದಲಿಗಿಂತ ಮತ್ತಷ್ಟು ಮಗದಷ್ಟು ಆಟ ರೋಚಕತೆಯತ್ತ ಸಾಗುತ್ತಿದೆ. 17 ಮಂದಿಯಿದ್ದ ಬಿಗ್ ಮನೆಯಲ್ಲೀಗ ಕೇವಲ 9 ಜನ ಮಾತ್ರ ಉಳಿದಿದ್ದಾರೆ. ಟಾಸ್ಕ್‌ಗಳು ಕಠಿಣ ಆಗುತ್ತಿವೆ. ಟಾಸ್ಕ್‌ಗಳಲ್ಲಿ ಸ್ಪರ್ಧಿಗಳ ಸ್ವಾರ್ಥ ಕಾಣುತ್ತಿದೆ. ಒಟ್ಟಾರೆಯಾಗಿ ಫಿನಾಲೆ ಸಮೀಪಿಸುತ್ತಿದ್ದಂತೆ, ಎಲ್ಲರ ಕಣ್ಣೀಗ ಟ್ರೋಫಿ ಮೇಲೆ ನೆಟ್ಟಿದೆ. ಹಾಗಾದರೆ ಬಿಗ್ ಬಾಸ್ ಫಿನಾಲೆ ಯಾವಾಗ? ಇನ್ನೆಷ್ಟು ವಾರ ಬಿಗ್ ಬಾಸ್ ಇರಲಿದೆ? ಕಿಚ್ಚ ಕೊಟ್ಟ ಉತ್ತರ ಹೀಗಿದೆ.
ಬಿಗ್ ಬಾಸ್ ಮನೆಯಲ್ಲೀಗ ಉಗ್ರಂ ಮಂಜು, ಹನುಮಂತು, ತ್ರಿವಿಕ್ರಮ್, ಗೌತಮಿ ರಜತ್ ಕಿಶನ್, ಧನರಾಜ್, ಭವ್ಯಾ ಗೌಡ, ಚೈತ್ರಾ ಕುಂದಾಪುರ, ಮೋಕ್ಷಿತಾ ಪೈ ಉಳಿದಿದ್ದಾರೆ. ಈ ಒಂಭತ್ತು ಮಂದಿಯ ಪೈಕಿ ಯಾರು ಈ ಸಲದ ಟಾಪ್ 6 ಕಂಟೆಸ್ಟಂಟ್ ಎಂಬುದು ಇನ್ನೆರಡು ವಾರದಲ್ಲಿ ಗೊತ್ತಾಗಲಿದೆ. ಇಂತಿಪ್ಪ ಬಿಗ್ ಬಾಸ್ ಕನ್ನಡ 11 ಇದೀಗ ಕೊನೇ ಹಂತಕ್ಕೆ ಮತ್ತಷ್ಟು ಸಮೀಪ ಬಂದು ನಿಂತಿದೆ. ಅದರಂತೆ ಆ ಫಿನಾಲೆಗೂ ದಿನಾಂಕ ನಿಗದಿಯಾಗಿದ್ದು, ಶನಿವಾರದ ವಾರದ ಕಥೆ ಕಿಚ್ಚನ ಜೊತೆಯಲ್ಲಿ ಈ ಬಗ್ಗೆ ಸ್ವತಃ ಕಿಚ್ಚ ಸುದೀಪ್ ಹೇಳಿಕೊಂಡಿದ್ದಾರೆ.
ಬಿಗ್ ಬಾಸ್ ಇನ್ನು ಮೂರು ವಾರ ಮಾತ್ರ!
ಶನಿವಾರದ ಸಂಚಿಕೆಯಲ್ಲಿ ಈ ಬಗ್ಗೆ ಕಿಚ್ಚ ಸುದೀಪ್ ಮಾತನಾಡಿದ್ದಾರೆ. ಬಿಗ್ ಬಾಸ್ ಇರೋದೇ ಇನ್ನು ಮೂರು ವಾರ. ಈಗಾಗಲೇ ಎಲಿಮಿನೇಟ್ ಆಗಿ 8 ಜನ ಮನೆಯಿಂದ ಎಕ್ಸಿಟ್ ಆಗಿದ್ದಾರೆ. ಈಗ ಉಳಿದಿದ್ದು 9 ಜನ. ಕಪ್ ಗೆಲ್ಲಬೇಕಿರೋದು ಕೇವಲ ಒಬ್ಬರು ಮಾತ್ರ ಎಂದಿದ್ದಾರೆ. ಅಲ್ಲಿಗೆ ಈ ಶೋ ಮುಂದಿನ ಮೂರು ವಾರಗಳಲ್ಲಿ ಮುಕ್ತಾಯವಾಗಲಿದೆ ಅಂತ ಅರ್ಥ. ಹಾಗಾದರೆ, ಯಾವಾಗ ಗ್ರ್ಯಾಂಡ್ ಫಿನಾಲೆ? ಸುದೀಪ್ ಅವರು ಹೇಳಿದ ಮಾತಂತೆ, ಈ ವಾರ ಹೊರತುಪಡಿಸಿ ಮುಂದಿನ ಮೂರು ವಾರ ಅಂದರೆ, ಜನವರಿ 25ಕ್ಕೆ ಗ್ರ್ಯಾಂಡ್ ಫಿನಾಲೆ ನಡೆಯುವ ಸಾಧ್ಯತೆ ಇದೆ.
ಎಲಿಮಿನೇಷನ್ ಯಾರು?
ಕೆಲ ಮೂಲಗಳ ಪ್ರಕಾರ ಈ ವಾರ ಎಲಿನಿಮೇಷನ್ ಪ್ರಕ್ರಿಯೆ ಇಲ್ಲ ಅನ್ನೋ ಮಾತು ಕೇಳಿಬರುತ್ತಿದೆ. ಅದರಂತೆ ಶನಿವಾರದ ಸಂಚಿಕೆಯಲ್ಲಿ ಸೇವ್ ಮಾಡುವ ಪ್ರಸ್ತಾಪವನ್ನೇ ಕಿಚ್ಚ ಸುದೀಪ್ ಕೈ ಬಿಟ್ಟಿದ್ದಾರೆ. ಅಥವಾ ಮಿಡ್ ವೀಕ್ ನಾಮಿನೇಷನ್ ಇರಬಹುದಾ ಎಂಬ ಗುಮಾನಿಯೂ ಇದೆ. ಒಟ್ಟಾರೆ ಈ ವಾರ ಕುಟುಂಬಸ್ಥರ ತಂದಿದ್ದ ಬುತ್ತಿ ಸವಿದ ಬಿಗ್ ಬಾಸ್ ಸ್ಪರ್ಧಿಗಳಿಗೆ, ಕಿಚ್ಚ ಸುದೀಪ್ ಸಹ ಪ್ರೀತಿಯಿಂದ ಕಳುಹಿಸಿದ ಊಟವೂ ರುಚಿಕಟ್ಟು ಎನಿಸಿದೆ. ಒಳಗೊಳಗೆ ಈ ವಾರದ ಎಲಿನೇಷನ್ ನಡುಕವೂ ಸ್ಪರ್ಧಿಗಳಿಗೆ ಶುರುವಾಗಿದೆ.