Bigg Boss Kannada 11: ಈ ವಾರ ಬಿಗ್ ಬಾಸ್ ಮನೆಯಿಂದ ಹೊರ ನಡೆಯಲಿರುವ ಸ್ಪರ್ಧಿ ಇವರೇ? ಕೊನೆಗೂ ರಜತ್ ಹೇಳಿದಂತೇ ಆಯ್ತು
Bigg Boss Kannada 11: ಈ ವಾರ ಮನೆಯಿಂದ ಹೊರ ಹೋಗಲು ಒಟ್ಟು ಐದು ಸ್ಪರ್ಧಿಗಳು ನಾಮಿನೇಟ್ ಆಗಿದ್ದಾರೆ. ಆ ಪೈಕಿ ಭವ್ಯಾ ಗೌಡ ಶನಿವಾರ ಸೇವ್ ಆಗಿದ್ದಾರೆ. ಇನ್ನುಳಿದಂತೆ ಚೈತ್ರಾ ಕುಂದಾಪುರ, ಧನರಾಜ್ ಆಚಾರ್, ಮೋಕ್ಷಿತಾ ಪೈ ಮತ್ತು ತ್ರಿವಿಕ್ರಮ್ ನಾಮಿನೇಟ್ ಆಗಿದ್ದಾರೆ. ಇವರಲ್ಲಿ ಎಲಿಮಿನೇಟ್ ಯಾರು?

Bigg Boss Kannada 11: ಬಿಗ್ ಬಾಸ್ ಕನ್ನಡ 11 ಕೊನೇ ಹಂತಕ್ಕೆ ಆಗಮಿಸಿದೆ. ಇನ್ನೇನು ಮುಂದಿನ ಎರಡೇ ವಾರದಲ್ಲಿ ಬಿಗ್ ಬಾಸ್ ವಿನ್ನರ್ ಪಟ್ಟ ಯಾರಿಗೆ ಎಂಬ ಕೌತುಕಕ್ಕೆ ತೆರೆಬೀಳಲಿದೆ. ದಿನದಿಂದ ದಿನಕ್ಕೆ ಕದನ ಕುತೂಹಲ ಹೆಚ್ಚಾಗುತ್ತಿದ್ದು, ಸ್ಪರ್ಧಿಗಳ ಆಟದ ವೈಖರಿಯೂ ಸಾಕಷ್ಟು ಬದಲಾಗಿದೆ. ಕೆಲವರು ಅಗ್ರೆಸ್ಸಿವ್ ಆಗಿ ಆಟ ಮುಂದುವರಿಸಿದರೆ, ಇನ್ನು ಕೆಲವರು ಫಿನಾಲೆ ಸಮೀಪ ಬಂದಂತೆ ಮಂಕಾಗಿದ್ದಾರೆ. ಇದೆಲ್ಲದರ ನಡುವೆ ಹಳ್ಳಿ ಹೈದ ಹನುಮಂತ ಲಮಾಣಿ ನೇರವಾಗಿ ಫಿನಾಲೆ ಟಿಕೆಟ್ ಪಡೆದು, ಈ ಸೀಸನ್‌ನ ಅಲ್ಟಿಮೇಟ್ ಮತ್ತು ಕೊನೆಯ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದಾರೆ. ಹಾಗಾದರೆ, ಈ ವಾರ ಎಲಿಮಿನೇಟ್ ಆಗುವ ಸ್ಪರ್ಧಿ ಯಾರು?
ನಾಲ್ವರು ನಾಮಿನೇಟ್
ಶನಿವಾರದ ವಾರದ ಕಥೆ ಕಿಚ್ಚನ ಜೊತೆ ಪಂಚಾಯ್ತಿಯಲ್ಲಿ ಸ್ಪರ್ಧಿಗಳಿಗೆ ಕಿಚ್ಚ ಸುದೀಪ್ ಬಿಸಿ ಮುಟ್ಟಿಸಿದ್ದಾರೆ. ಅದರಂತೆ ಈ ವಾರ ಮನೆಯಿಂದ ಹೊರ ಹೋಗಲು ಒಟ್ಟು ಐದು ಸ್ಪರ್ಧಿಗಳು ನಾಮಿನೇಟ್ ಆಗಿದ್ದಾರೆ. ಆ ಪೈಕಿ ಭವ್ಯಾ ಗೌಡ ಶನಿವಾರ ಸೇವ್ ಆಗಿದ್ದಾರೆ. ಇನ್ನುಳಿದಂತೆ ಚೈತ್ರಾ ಕುಂದಾಪುರ, ಧನರಾಜ್ ಆಚಾರ್, ಮೋಕ್ಷಿತಾ ಪೈ ಮತ್ತು ತ್ರಿವಿಕ್ರಮ್ ನಾಮಿನೇಟ್ ಆಗಿದ್ದಾರೆ. ಈ ನಾಲ್ವರ ಪೈಕಿ ಮನೆಯಿಂದ ಯಾರು ಹೊರನಡೆಯಲಿದ್ದಾರೆ ಎಂಬ ಕೌತುಕಕ್ಕೆ ಇಂದು (ಜ 12) ರಾತ್ರಿ ತೆರೆ ಬೀಳಲಿದೆ. ಈ ಮೂಲಕ ಉಳಿದ ಸದಸ್ಯರು ನೇರವಾಗಿ ಫಿನಾಲೆ ವಾರಕ್ಕೆ ಪದಾರ್ಪಣೆ ಮಾಡಲಿದ್ದಾರೆ.
ಭವ್ಯಾ ಗೌಡಗೆ ಜೈಲು
ಶನಿವಾರದ ಏಪಿಸೋಡ್‌ನಲ್ಲಿಯೇ ಭವ್ಯಾ ಗೌಡ ಸೇವ್ ಆದರು. ಸೇವ್ ಆದ ಬೆನ್ನಲ್ಲೇ ಟಾಸ್ಕ್ ವೇಳೆ ಹನುಮಂತು ಮೇಲೆ ದೈಹಿಕವಾಗಿ ಹಲ್ಲೆ ಮಾಡಿದ ಕಾರಣಕ್ಕೆ, ಭವ್ಯಾ ಗೌಡಗೆ ಬಿಗ್ ಬಾಸ್ ಶಿಕ್ಷೆ ನೀಡದಿದ್ದರೂ, ವಾರದ ಪಂಚಾಯ್ತಿಯಲ್ಲಿ ಸುದೀಪ್ ಶಿಕ್ಷೆ ನೀಡಿದ್ದಾರೆ. ಬಿಗ್ ಬಾಸ್‌ನ ಮುಂದಿನ ಆದೇಶದ ವರೆಗೂ ಜೈಲಿನಲ್ಲಿ ಇರುವಂತೆ ಸುದೀಪ್ ಹೇಳಿದ್ದಾರೆ. ಜತೆಗೆ ಮುಂದಿನ ಬಾಕಿ ದಿನಗಳಲ್ಲಿ ಈ ರೀತಿಯ ಯಾರಾದರೂ ಹಲ್ಲೆಗೆ ಮುಂದಾದರೆ, ಆ ಕ್ಷಣವೇ ಅವರನ್ನು ಮನೆಯಿಂದ ಹೊರಕಳಿಸಲಾಗುವುದು ಎಂದೂ ಹೇಳಿದ್ದಾರೆ.
ಈ ವಾರ ಯಾರು ಹೊರಕ್ಕೆ?
ಸದ್ಯದ ಕೆಲ ಮೂಲಗಳ ಮಾಹಿತಿ ಪ್ರಕಾರ ಈ ವಾರ ಬಿಗ್ ಬಾಸ್ ಮನೆಯಿಂದ ಮಹಿಳಾ ಸ್ಪರ್ಧಿಯೊಬ್ಬರು ಎಲಿಮಿನೇಟ್ ಆಗಲಿದ್ದಾರೆ ಎನ್ನಲಾಗುತ್ತಿದೆ. ಸದ್ಯ ನಾಮಿನೇಟ್ ಲಿಸ್ಟ್‌ನಲ್ಲಿ ಉಳಿದಿರುವುದು ಕೇವಲ ಇಬ್ಬರು ಮಹಿಳಾ ಸ್ಪರ್ಧಿಗಳು ಮಾತ್ರ. ಒಬ್ಬರು ಚೈತ್ರಾ ಕುಂದಾಪುರ ಇನ್ನೊಬ್ಬರು ಮೋಕ್ಷಿತಾ ಪೈ. ಇವರಿಬ್ಬರಲ್ಲಿ ಚೈತ್ರಾ ಕುಂದಾಪುರ ಅವರ ಆಟ ಈ ವಾರಕ್ಕೆ ಕೊನೆಗೊಳ್ಳಲಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಒಂದಷ್ಟು ಗಾಸಿಪ್‌ಗಳು ಹರಿದಾಡುತ್ತಿವೆ. ಈ ಬಗ್ಗೆ ಇಂದು ರಾತ್ರಿಯೇ ಅಧಿಕೃತ ಘೋಷಣೆ ಆಗಬೇಕಿದೆ.
ರಜತ್ ಭವಿಷ್ಯ ನಿಜವಾಗುತ್ತಾ?
ಟಾಸ್ಕ್ ಹೊರತುಪಡಿಸಿ ನಾರ್ಮಲ್ ಇದ್ದಾಗಲೂ ಚೈತ್ರಾ ಮತ್ತು ರಜತ್ ನಡುವೆ ಸಾಕಷ್ಟು ಮಾತಿನ ವಾರ್ ನಡೆದಿವೆ. ಸಾಕಷ್ಟು ಬಾರಿ ಇಬ್ಬರೂ ಜಗಳವಾಡಿದ್ದಾರೆ. ಟಾಸ್ಕ್ ನಡುವೆ ಉಸ್ತುವಾರಿ ಮಾಡುವಾಗಲೂ ಇವರಿಬ್ಬರ ಜಗಳ ಅತಿರೇಕಕ್ಕೆ ಹೋದ ಉದಾಹರಣೆಗಳು ಸಾಕಷ್ಟಿವೆ. ಪ್ರತಿಯೊಂದಕ್ಕೂ ಪರಸ್ಪರರು ನಾಮಿನೇಟ್ ಸಹ ಮಾಡಿಕೊಂಡಿದ್ದಾರೆ. "ನಿಮ್ಮನ್ನು ಹೊರಗಡೆ ಕಳಿಸಿದ ಬಳಿಕವೇ ನಾನು ಹೋಗೋದು, ನೋಡ್ತಿರಿ" ಎಂದೂ ಸಾಕಷ್ಟು ಸಲ ಚೈತ್ರಾ ಅವರಿಗೆ ಹೇಳಿದ್ದರು ರಜತ್. ಒಂದು ವೇಳೆ ಚೈತ್ರಾ ಎಲಿಮಿನೇಟ್ ಆದರೆ, ರಜತ್ ನುಡಿದ ಭವಿಷ್ಯ ನಿಜವಾಗಲಿದೆ.
