ರೀಲ್ಸ್ ವಿವಾದ: ಬಿಗ್‌ಬಾಸ್ ಖ್ಯಾತಿಯ ರಜತ್, ವಿನಯ್ ಮತ್ತೆ ಬಂಧನ, ಪೊಲೀಸರಿಂದ ಸ್ಥಳ ಮಹಜರು; ದರ್ಶನ್ ಡೆವಿಲ್ ಸಿನಿಮಾಕ್ಕೂ ಆತಂಕ
Vinay and Rajath Reels Case: ಬಿಗ್‌ಬಾಸ್ ಕನ್ನಡ ಮಾಜಿ ಸ್ಪರ್ಧಿಗಳಾದ ರಜತ್ ಮತ್ತು ವಿನಯ್ ಗೌಡ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಂದು ಕೆಲವು ನಾಟಕೀಯ ಬೆಳವಣಿಗೆಗಳು ನಡೆದಿವೆ. ಪೊಲೀಸರ ಬಂಧನದಿಂದ ಬಿಡುಗಡೆಯಾಗಿದ್ದ ಇವರಿಬ್ಬರನ್ನು ಮತ್ತೆ ಬಂಧಿಸಲಾಗಿದೆ. ಪೊಲೀಸರು ಇವರಿಬ್ಬರನ್ನು ಕರೆದುಕೊಂಡು ಸ್ಥಳ ಮಹಜರು ಕೂಡ ನಡೆಸಿದ್ದಾರೆ.

Vinay and Rajath Reels Case: ಬಿಗ್‌ಬಾಸ್ ಕನ್ನಡ ಮಾಜಿ ಸ್ಪರ್ಧಿಗಳಾದ ರಜತ್ ಮತ್ತು ವಿನಯ್ ಗೌಡ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಂದು ಕೆಲವು ನಾಟಕೀಯ ಬೆಳವಣಿಗೆಗಳು ನಡೆದಿವೆ. ಪೊಲೀಸರ ಬಂಧನದಿಂದ ಬಿಡುಗಡೆಯಾಗಿದ್ದ ಇವರಿಬ್ಬರನ್ನು ಮತ್ತೆ ಬಂಧಿಸಲಾಗಿದೆ. ಪೊಲೀಸರು ಇವರಿಬ್ಬರನ್ನು ಕರೆದುಕೊಂಡು ಸ್ಥಳ ಮಹಜರು ಕೂಡ ನಡೆಸಿದ್ದಾರೆ.
ರಜತ್ ಮತ್ತು ವಿನಯ್ ಗೌಡ ಮತ್ತೆ ಬಂಧನ
ಮಾರಕಾಸ್ತ್ರ ಹಿಡಿದು ರೀಲ್ಸ್ ಮಾಡಿರುವ ರಜತ್ ಮತ್ತು ವಿನಯ್ ಅವರನ್ನು ಪೊಲೀಸರು ನಿನ್ನೆ ಬಂಧಿಸಿದ್ದರು. ಮಧ್ಯರಾತ್ರಿ ಇವರಿಬ್ಬರನ್ನು ಬಿಡುಗಡೆ ಮಾಡಿದ್ದರು. ಇಂದು ಇವರಿಬ್ಬರು ವಿಚಾರಣೆಗೆ ಬಂದ ಸಮಯದಲ್ಲಿ ಮತ್ತೆ ಬಂಧಿಸಿದ್ದಾರೆ. ಇದಕ್ಕೂ ಮೊದಲು ರಜತ್ ಅವರು ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಸ್ಪಷ್ಟನೆ ನೀಡಿದ್ದರು. ಜನರಿಗೆ ತಪ್ಪು ಸಂದೇಶ ನೀಡುವ ಉದ್ದೇಶದಿಂದ ಈ ರೀಲ್ಸ್ ಮಾಡಿಲ್ಲ ಎಂದು ಅವರು ಹೇಳಿದ್ದಾರೆ.
"ನಾವು ಕಲಾವಿದರಾಗಿ ಈ ರೀಲ್ಸ್ ಮಾಡಿದ್ದೇವೆ. ಅದನ್ನು ಜನರು ಅನುಸರಿಸಲಿ ಎಂದು ಮಾಡಿಲ್ಲ. ಇದಕ್ಕೆ ಸಂಬಂಧಪಟ್ಟ ಪ್ರಾಪರ್ಟಿ ನಿನ್ನೆ ಪೊಲೀಸರಿಗೆ ನೀಡಿದ್ದೇವೆ. ಇದರಲ್ಲಿ ಏನು ತಪ್ಪಾಗಿದೆ ಎಂದು ಗೊತ್ತಾಗಿಲ್ಲ. ಪೊಲೀಸರ ದಾರಿ ತಪ್ಪಿಸುವ ಯಾವುದೇ ಕೆಲಸ ಮಾಡಿಲ್ಲ" ಎಂದು ವಿಡಿಯೋದಲ್ಲಿ ರಜತ್ ಸ್ಪಷ್ಟನೆ ನೀಡಿದ್ದರು.
ರೀಲ್ಸ್‌ನಲ್ಲಿ ಇರುವ ಮಚ್ಚಿಗೂ, ಪೊಲೀಸರ ವಶದಲ್ಲಿರುವ ಮಚ್ಚಿಗೂ ಇರುವ ವ್ಯತ್ಯಾಸದ ಕುರಿತು ವಿನಯ್ ಪ್ರತಿಕ್ರಿಯೆ ನೀಡಿದ್ದಾರೆ. "ನಾವು ನಿನ್ನೆ ತಂದ ಮಚ್ಚಿಗೂ ಪೊಲೀಸ್ ಸ್ಟೇಷನ್‌ನಲ್ಲಿರುವಾಗ ಅವರು ತಂದ ಮಚ್ಚಿಗೂ ತರುವಾಗ ವ್ಯತ್ಯಾಸ ಆಗಿರಬಹುದು. ಪೊಲೀಸರ ದಿಕ್ಕು ತಪ್ಪಿಸುವ ಉದ್ದೇಶ ಇರಲಿಲ್ಲ. ಇದರಲ್ಲಿ ಸಾಕಷ್ಟು ಗೊಂದಲವಿದೆ. ರಜತ್ ಬಳಸಿರುವ ಮಚ್ಚು ಅನ್ನೇ ನಾನು ಬಳಸಿದ್ದೆ" ಎಂದು ವಿನಯ್ ವಿಡಿಯೋ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸ್ಥಳ ಮಹಜರು
ಪೊಲೀಸರು ಇಂದು ವಿನಯ್ ಮತ್ತು ರಜತ್ ಅವರನ್ನು ರೀಲ್ಸ್ ಮಾಡಿರುವ ಸ್ಥಳಕ್ಕೆ ಸ್ಥಳ ಮಹಜರು ಮಾಡಲು ಕರೆಸಿಕೊಂಡಿದ್ದಾರೆ. ಯಾವ ಸ್ಥಳದಲ್ಲಿ ರೀಲ್ಸ್ ಮಾಡಿದ್ದು, ಮಚ್ಚು ನೀಡಿರುವವರು ಯಾರು ಇತ್ಯಾದಿ ವಿವರಗಳನ್ನು ಪೊಲೀಸರು ಪಡೆದಿದ್ದಾರೆ ಎಂದು ಪಬ್ಲಿಕ್ ಟಿವಿ ವರದಿ ಮಾಡಿದೆ. ಮಚ್ಚು ವಶಪಡಿಸಿಕೊಂಡು ಕೋರ್ಟ್‌ಗೆ ಇವರಿಬ್ಬರನ್ನು ಹಾಜರು ಪಡಿಸಲಿದ್ದಾರೆ ಎಂದು ವರದಿಗಳು ತಿಳಿಸಿವೆ.
ಏನಿದು ಪ್ರಕರಣ?
ಕೈಯಲ್ಲಿ ಲಾಂಗ್ ಹಿಡಿದು ನಟ ದರ್ಶನ್ ಅವರ ಕರಿಯ ಸಿನಿಮಾದ ಟ್ಯೂನ್‌ಗೆ ಪೋಸ್ ನೀಡಿದ್ದ ಬಿಗ್ ಬಾಸ್ ಕನ್ನಡ ಸೀಸನ್ 10ರ ವಿನಯ್ ಗೌಡ ಮತ್ತು ಸೀಸನ್ 11ರ ರಜತ್ ಕಿಶನ್ ಇಬ್ಬರನ್ನು ಸೋಮವಾರ (ಮಾ. 24) ಪೊಲೀಸರು ವಶಕ್ಕೆ ಪಡೆದಿದ್ದರು. ಬೆಂಗಳೂರಿನ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ರಜತ್ ಕಿಶನ್, ತಮ್ಮ ಶರ್ಟ್ ಮೇಲೆ ಡಿ ಬಾಸ್ ಎಂದು ಬರೆದುಕೊಂಡು, ದರ್ಶನ್ ಸಿನಿಮಾಗಳ ಹೆಸರುಗಳಿರುವ ಪ್ಯಾಂಟ್ ಧರಿಸಿ ಕೈಯಲ್ಲಿ ಲಾಂಗ್ ಹಿಡಿದು ರೀಲ್ಸ್ ಮಾಡಿದ್ದರು. ಕಿಶನ್ ಜತೆಗೆ ವಿನಯ್ ಗೌಡ ಸಹ ಕೈಯಲ್ಲಿ ಲಾಂಗ್ ಹಿಡಿದು ಪೋಸ್ ಕೊಟ್ಟಿದ್ದರು. ಕಳೆದ ಆರು ದಿನಗಳ ಹಿಂದೆಯೇ ಈ ವಿಡಿಯೋವನ್ನು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದರು ರಜತ್. ಸಾರ್ವಜನಿಕ ಸ್ಥಳಗಳಲ್ಲಿ ಕಾನೂನು ಬಾಹಿರವಾಗಿ ಲಾಂಗ್ ಹಿಡಿದು ರೀಲ್ಸ್ ಮಾಡಿದ್ದು, ಸಾರ್ವಜನಿಕ ಶಾಂತಿ ಮತ್ತು ನೆಮ್ಮದಿ ಹಾಳು ಮಾಡುವ ದುರ್ವತನೆ ಇದಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿತ್ತು. ಇದೇ ರೀಲ್ಸ್‌ಗೆ ಸಂಬಂಧಿಸಿದಂತೆ ಶಸ್ತ್ರಾಸ್ತ್ರ ಕಾಯಿದೆ ಅಡಿಯಲ್ಲಿ ಕೇಸ್ ದಾಖಲಿಸಿಕೊಳ್ಳಲಾಗಿದೆ.
