Bigg Boss Kannada: ಕನ್ನಡದ ಬಿಗ್‌ಬಾಸ್‌ಗೆ ಕಂಟಕ! ನಿಯಮ ಮೀರಿ 7 ಎಕರೆ ಗೋಮಾಳದಲ್ಲಿ ಬಿಗ್ ಮನೆ ನಿರ್ಮಾಣ ಆರೋಪ
ಫಿನಾಲೆಗೆ ಹತ್ತಿರ ಬಂದಿರುವ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ವಿರುದ್ಧ ಇದೀಗ ಗಂಭೀರ ಆರೋಪವೊಂದು ಕೇಳಿ ಬಂದಿದೆ. ಬೆಂಗಳೂರು ಹೊರವಲಯದಲ್ಲಿ ನಿರ್ಮಾಣ ಮಾಡಿರುವ ಬಿಗ್ ಬಾಸ್ ಕಟ್ಟಡವನ್ನು ಯಾವ ಅನುಮತಿ ಪಡೆದುಕೊಳ್ಳದೇ, ಕೃಷಿ ಜಮೀನಿನಲ್ಲಿ ನಿರ್ಮಿಸಿದ್ದಾರೆ ಎಂದು ಅರ್ಜಿ ಸಲ್ಲಿಕೆಯಾಗಿದೆ.
Bigg Boss Kannada: ಕನ್ನಡ ಕಿರುತೆರೆಯ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಕನ್ನಡ ಸೀಸನ್ 10, ಇನ್ನೇನು ಫಿನಾಲೆ ಹಂತಕ್ಕೆ ಬಂದು ನಿಂತಿದೆ. ಇದೀಗ ಇದೇ ಬಿಗ್‌ಬಾಸ್‌ಗೆ ಕೊನೇ ಕ್ಷಣಕ್ಕೆ ಕಂಟಕ ಎದುರಾಗಿದೆ. ಅಕ್ರಮವಾಗಿ, ಯಾವುದೇ ಅನುಮತಿ ಪಡೆದುಕೊಳ್ಳದೇ, ನಿಯಮ ಮೀರಿ ಬಿಗ್ ಬಾಸ್ ಮನೆ ನಿರ್ಮಾಣ ಮಾಡಿ ವಾಣಿಜ್ಯ ಚಟುವಟಿಕೆ ನಡೆಸುತ್ತಿರುವ ಆರೋಪ ಕೇಳಿಬಂದಿದೆ. ಸಾಮಾಜಿಕ ಕಾರ್ಯಕರ್ತ ಹಾಗೂ ಪತ್ರಕರ್ತ ರಾಘವೇಂದ್ರಚಾರ್ ಆರ್, ಎಂಬುವವರು ಈ ಸಂಬಂಧ ಪಂಚಾಯಿತಿಗೆ ಅರ್ಜಿ ಸಲ್ಲಿದ್ದಾರೆ.
ಬೆಂಗಳೂರು ದಕ್ಷಿಣ ತಾಲೂಕು ಕೆಂಗೇರಿ ಹೋಬಳಿಯ ಮಾಳಗೊಂಡನಹಳ್ಳಿ ಸರ್ವೇ ನಂಬರ್ 128\1ರಲ್ಲಿ 7 ಎಕರೆ 11 ಗುಂಟೆ ಕೃಷಿ ಜಮೀನಿನಲ್ಲಿ ಬಿಗ್‌ಬಾಸ್ ಶೋ ಸಲುವಾಗಿ ಪ್ರಾಧಿಕಾರದಿಂದ ಯಾವುದೇ ಅನುಮತಿ ಪಡದುಕೊಳ್ಳದೇ ಅಕ್ರಮವಾಗಿ ಕಟ್ಟಡ ನಿರ್ಮಿಸಿ ವಾಣಿಜ್ಯ ಚಟುವಟಿಕೆ ನಡೆಸಲಾಗುತ್ತಿದೆ ಎಂದು ಬೆಂಗಳೂರು ದಕ್ಷಿಣ ಉಪವಿಭಾಗದ ಉಪವಿಭಾಗಾಧಿಕಾರಿ ಅವರಿಗೆ ರಾಘವೇಂದ್ರಚಾರ್ ದಾಖಲೆಗಳ ಸಮೇತ ಅರ್ಜಿ ಸಲ್ಲಿಸಿದ್ದಾರೆ.
ಅನುಮತಿ ಪಡೆಯದೇ ಕಟ್ಟಡ ನಿರ್ಮಾಣ!?
ಈ ಅರ್ಜಿಗೆ ಉತ್ತರ ನೀಡಿರುವ ರಾಮೋಹಳ್ಳಿ ಗ್ರಾಮ ಪಂಚಾಯತಿ ಪಿಡಿಒ, ಸರ್ವೇ ನಂ 26ರಲ್ಲಿ ಯಾವುದೇ ಕಾರ್ಯಕ್ರಮ ನಡೆಸಲು ಅನುಮತಿಯಿಲ್ಲ. ಇದಕ್ಕಾಗಿ ಯಾವುದೇ ನಿರಾಪೇಕ್ಷಣಾ ಪತ್ರ (NOC) ನೀಡಿಲ್ಲ ಎಂದು ಡಿಸೆಂಬರ್ 11ರಂದು ರಾಮೋಹಳ್ಳಿ ಪಿಡಿಒ ಲಿಖಿತ ರೂಪದಲ್ಲಿ ಬರೆದುಕೊಟ್ಟಿದ್ದಾರೆ. ಇನ್ನು ದಕ್ಷಿಣ ವಲಯದ ರಾಮೋಹಳ್ಳಿಯ ಮಾಳಿಗೊಂಡನಹಳ್ಳಿ ಗ್ರಾಮದ ಸರ್ವೆ ನಂಬರ್ 128ರಲ್ಲಿರುವ ಬಿಗ್‌ಬಾಸ್ ಮನೆ ನಿರ್ಮಾಣವಾಗಿದೆ. ಡಿ ಮುನಿರಾಜು ಎಂಬುವವರಿಗೆ ಸೇರಿದ 7 ಎಕರೆ 11 ಗುಂಟೆ ಜಾಗ ಇದಾಗಿದೆ. ಅಧಿಕೃತ ಮಾಹಿತಿ ಪ್ರಕಾರ ಈ 7.11 ಎಕರೆ ಜಾಗ ಕೃಷಿ ಭೂಮಿಯಾಗಿದ್ದು, ಈ ಪ್ರದೇಶ ಗ್ರೀನ್ ಬೆಲ್ಟ್ ಝೋನ್ ವ್ಯಾಪ್ತಿಗೆ ಒಳಪಡುತ್ತದೆ.
ತಹಶೀಲ್ದಾರ್ ವರದಿಯಲ್ಲೇನಿದೆ?
ಸದ್ಯ ಬಿಗ್‌ಬಾಸ್ ನಡೀತಿರುವ ಜಾಗ ಮೂಲತ ಸರ್ಕಾರಿ ಗೋಮಾಳ ಜಮೀನಾಗಿದೆ. ಮುನಿರಾಜು ಮತ್ತು ಮುನಿಯಮ್ಮ ಹೆಸರಿನಲ್ಲಿರುವ ಈ ಜಮೀನು. ಡಿಸೆಂಬರ್ 19ರಂದು 7.11 ಎಕರೆ ಜಮೀನು ಕೃಷಿಗಾಗಿ ಭೂಪರಿವರ್ತನೆಯಾಗಿದೆ. ಇದೀಗ ಈ ಜಾಗದಲ್ಲಿ ಷರತ್ತು ಉಲ್ಲಂಘಿಸಿ ಶೆಡ್ ನಿರ್ಮಾಣ ಮಾಡಲಾಗಿದೆ. ಜಮೀನಿನ ಸುತ್ತಲೂ ಕೌಂಪೌಂಡ್ ನಿರ್ಮಾಣ ಮಾಡಲಾಗಿದ್ದು, 2.20 ಎಕರೆ ಪ್ರದೇಶದಲ್ಲಿ ಬಿಗ್‌ಬಾಸ್ ಕಟ್ಟಡ ನಿರ್ಮಿಸಲಾಗಿದೆ. ಇಲ್ಲಿ ಯಾವುದೇ ವಾಣಿಜ್ಯ ಕಟ್ಟಡ ನಿರ್ಮಾಣಕ್ಕೆ ಲೈಸೆನ್ಸ್ ಪಡೆದುಕೊಂಡಿಲ್ಲ. ಜಮೀನು ಪಕ್ಕದಲ್ಲಿ ದೊಡ್ಡ ಕೆರೆ ಸಹ ಇದ್ದು, ಅದೂ ಒತ್ತುವರಿ ಆಗಿರುವ ಅನುಮಾನ ವ್ಯಕ್ತವಾಗಿದೆ. ಅಳತೆ ಮಾಡಿದ ಬಳಿಕವೇ ನಿಖರ ಮಾಹಿತಿ ಸಿಗಲಿದೆ. ಈ ಪ್ರದೇಶಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಿರುವ ಬಗ್ಗೆಯೂ ಮಾಹಿತಿಯಿಲ್ಲ ಎಂದು ಬೆಂಗಳೂರು ದಕ್ಷಿಣ ತಾಲ್ಲೂಕು ತಹಶೀಲ್ದಾರ್ ಶ್ರೀನಿವಾಸ್ ವರದಿ ನೀಡಿದ್ದಾರೆ.
ಜಿಲ್ಲಾಧಿಕಾರಿಗೆ ದೂರು
ಕೃಷಿ ಜಮೀನಿನಲ್ಲಿ ಅಕ್ರಮವಾಗಿ ವಾಣಿಜ್ಯ ಚಟುವಟಿಕೆ ನೀಡಲಾಗುತ್ತಿದೆ ಎಂಬ ಬಗ್ಗೆ ರಾಘವೇಂದ್ರಚಾರ್ ಈ ಹಿಂದೆ ಜಿಲ್ಲಾಧಿಕಾರಿ ದಯಾನಂದ್ ಅವರಿಗೂ ದೂರು ನೀಡಿದ್ದರು. ಈ ಸಂಬಂಧ ತನಿಖೆ ನಡೆಸಿ ವರದಿ ನೀಡಲು ಬೆಂಗಳೂರು ದಕ್ಷಿಣ ತಾಲ್ಲೂಕು ತಹಶೀಲ್ದಾರ್ ಶ್ರೀನಿವಾಸ್ ಅವರಿಗೆ ಸೂಚಿಸಿದ್ದರು. ಇದೀಗ ಅದರಂತೆ, ಅಕ್ರಮಗಳ ಸರಮಾಲೆಯನ್ನೇ ತಹಶೀಲ್ದಾರ್ ಶ್ರೀನಿವಾಸ್ ಬಿಚ್ಚಿಟ್ಟಿದ್ದಾರೆ.