ಕಂಕಣಬಲ ಕೂಡಿಬಂದ್ರೆ ಮದುವೆ ನಿಲ್ಲಲ್ಲ ಅಂತಾರೆ, ಅದೇ ರೀತಿ ನಂಗೂ ಆಗೋಯ್ತು: ‘ಬಿಗ್ ಬಾಸ್’ ಅಕ್ಷತಾ ಕುಕಿ
ಸಂದರ್ಶನ- ಪದ್ಮಶ್ರೀ ಭಟ್: 'ಕನ್ನಡ ಬಿಗ್ ಬಾಸ್ʼ ಖ್ಯಾತಿಯ ಅಕ್ಷತಾ ಕುಕಿ ಅವರು ವರ್ಷಗಳ ಬಳಿಕ ಸಂದರ್ಶನವನ್ನು ನೀಡಿದ್ದು, ಮದುವೆ ಹೇಗಾಯ್ತು? ಹುಡುಗ ಯಾರು? ವಿದೇಶಿ ಜೀವನ ಹೇಗಿದೆ? ಮುಂದಿನ ಪ್ಲ್ಯಾನ್ ಏನು ಎಂಬ ಬಗ್ಗೆ ಮಾತನಾಡಿದ್ದಾರೆ.
‘ಬಿಗ್ ಬಾಸ್ʼ ಸ್ಪರ್ಧಿ ಅಕ್ಷತಾ ಕುಕಿ ಅವರದ್ದು ಪಕ್ಕಾ ಅರೇಂಜ್ ಮ್ಯಾರೇಜ್ ಅಂತೆ. ಇನ್ನೇನು ʼಬಿಗ್ ಬಾಸ್ʼ ಶೋ ಮುಗೀತು, ಸೀರಿಯಲ್, ಸಿನಿಮಾ ಮಾಡೋಣ ಅಂತ ಯೋಜನೆ ಹಾಕಿದ್ದ ಅಕ್ಷತಾ ಮದುವೆಯಾಗಿ ನಟನೆಯಿಂದ ಸ್ವಲ್ಪ ದೂರ ಆಗೋ ಹಾಗಾಯ್ತು. ಏಕಾಏಕಿ ಕಂಕಣಬಲ ಕೂಡಿಬಂದಿದ್ದಕ್ಕೆ ಅಕ್ಷತಾ ಮದುವೆಯಾಗಿ ವಿದೇಶ ಸೇರಿಕೊಂಡಿದ್ದಾರೆ. ಆದರೆ ಆದಷ್ಟು ಬೇಗ ಅವರು ಕರ್ನಾಟಕಕ್ಕೆ ಮರಳಿ ಬಂದು ನಟನೆಯನ್ನು ಮತ್ತೆ ಆರಂಭಿಸುತ್ತಾರೆ. ಈ ಕುರಿತು ಅವರು ಪಂಚಮಿ ಟಾಕ್ಸ್ ಯುಟ್ಯೂಬ್ ಚಾನೆಲ್ ಜೊತೆ ಮಾತಾಡಿದ್ದಾರೆ.
ಪ್ರಶ್ನೆ: ಸಡನ್ ಆಗಿ ಮದುವೆ ಆಯ್ತಾ?
ಉತ್ತರ: ಹೌದು, ಒಂದೊಳ್ಳೆ ಮದುವೆ ಸಂಬಂಧ ಬಂದಿದೆ ಅಂತ ಅಮ್ಮ ಹೇಳಿದರು. ಈಗ ಮದುವೆ ಆಗೋಕೆ ಇಷ್ಟ ಇಲ್ಲ ಅಂತ ನಾನು ಹೇಳಿದ್ದೆ. ಆದರೂ ಫೋನ್‌ನಲ್ಲಿ ಮಾತಾಡು ಅಂತ ಹೇಳಿದರು. ನಾನು ಅವಿನಾಶ್ ಜೊತೆ ಫೋನ್‌ನಲ್ಲಿ ಮಾತಾಡಿದೆ, ಕನೆಕ್ಟ್ ಆದೆವು. ಎಲ್ಲದಕ್ಕಿಂತ ಹೆಚ್ಚಾಗಿ ನನ್ನ, ಅವರ ಮನೆಯವರ ಮಧ್ಯೆ ಒಳ್ಳೆಯ ಬಾಂಧವ್ಯ ಬೆಸೆದಿತ್ತು. ಅವಿನಾಶ್ ಕಾಯೋಕೆ ರೆಡಿ ಇರಲಿಲ್ಲ. ಅವಿನಾಶ್ ಕುಟುಂಬದವರನ್ನು ಭೇಟಿ ಮಾಡಿ ಆರು ತಿಂಗಳೊಳಗಡೆ ಮದುವೆ ಆಗಿತ್ತು. ಕಂಕಣಬಲ ಕೂಡಿಬಂದ್ರೆ ಮದುವೆ ಆಗೋದು ನಿಲ್ಲೋದಿಲ್ಲ, ಬೇಗ ಭೇಗ ಮದುವೆ ಆಗತ್ತೆ. ಇದಕ್ಕೆ ನಾನೇ ದೊಡ್ಡ ಉದಾಹರಣೆ.
ಪ್ರಶ್ನೆ: ಅರೇಂಜ್ ಮ್ಯಾರೇಜ್ ಬಗ್ಗೆ ಏನು ಹೇಳ್ತೀರಾ?
ಉತ್ತರ: ಅವಿನಾಶ್ ಜೊತೆ ಮದುವೆ ಆಗಬೇಕು ಅಂತ ನಾನು ಮೊದಲು ಫೋನ್‌ನಲ್ಲಿ ಮಾತನಾಡಿರಲಿಲ್ಲ. ಎರಡೂ ಫ್ಯಾಮಿಲಿಗಳಿಗೆ ಇಷ್ಟ ಆದ್ಮೇಲೆ ನಾನು ಹುಡುಗನ ಜೊತೆ ಮಾತನಾಡಿದೆ. ಮಾತನಾಡುತ್ತ ನಾವಿಬ್ಬರೂ ಕನೆಕ್ಟ್ ಆದೆವು. ಚಿತ್ರರಂಗದಲ್ಲಿದ್ದವಳು ನಾನು, ಮದುವೆ ಆದ್ಮೇಲೆ ಲೈಫ್ ಹೇಗಿರತ್ತೆ ಎನ್ನೋ ಭಯ ಇತ್ತು. ಮದುವೆ ಆಗೋ ಕೊನೆ ಗಳಿಗೆವರೆಗೂ ನನಗೆ ಹೇಗಾಗತ್ತೋ ಏನೋ, ಏನ್ ಕಥೆನೋ ಏನೋ ಅಂತ ಭಯ ಇತ್ತು. ಆದರೆ ನಾನು ಎಂದಿಗೂ ಬೇರೆ ಆಪ್ಶನ್ ಬಗ್ಗೆ ಎಂದಿಗೂ ಯೋಚನೆ ಮಾಡಿರಲಿಲ್ಲ. ತಮಾಷೆಗೆ ನಾನು ಅವಿನಾಶ್ ಬಳಿ ಇಷ್ಟು ಬೇಗ ನಿನ್ನ ಮದುವೆ ಆಗಬಾರದಿತ್ತು ಅಂತ ಹೇಳುತ್ತಿರುತ್ತೇನೆ.
ಪ್ರಶ್ನೆ: ನನ್ನ ಹುಡುಗ ಪ್ಯಾರೀಸ್‌ನಲ್ಲಿರೋ ಐಫೆಲ್ ಟವರ್ ಮುಂದೆ ಪ್ರೇಮ ನಿವೇದನೆ ಮಾಡಬೇಕು ಅಂತ ಬಿಗ್ ಬಾಸ್ ಮನೆಯಲ್ಲಿದ್ದಾಗ ಹೇಳಿದ್ರಿ. ಅದು ನಿಜ ಆಯ್ತು.
ಉತ್ತರ: ಹೌದು, ನಾನು ಅವರ ಜೊತೆ ಮೊದಲು ಮಾತಾಡುವಾಗಲೇ ಐಫೆಲ್ ಟವರ್ ಮುಂದೆ ಪ್ರೇಮ ನಿವೇದನೆ ಮಾಡಬೇಕು ಅಂತ ಹೇಳಿದ್ದೆ. ಆಗ ಅವರು ಈಗ ನನಗೆ ಟೈಮ್ ಇಲ್ಲ, ಮದುವೆ ಆದ್ಮೇಲೆ ಪಕ್ಕಾ ಕರ್ಕೊಂಡು ಹೋಗ್ತೀನಿ ಅಂತ ಹೇಳಿದ್ದರು. ಮದುವೆಯಾಗಿ ಆರು ತಿಂಗಳಾದ ಮೇಲೆ ವೀಸಾ ಸಿಕ್ಕಿತು, ಆಮೇಲೆ ಐಫೆಲ್ ಟವರ್‌ಗೆ ಹೋದೆವು.
ಪ್ರಶ್ನೆ: ಅವಿನಾಶ್ ಏನು ಮಾಡುತ್ತಾರೆ?
ಉತ್ತರ: ಅವಿನಾಶ್ ಅವರು ಬೆಂಗಳೂರು ಮೂಲದ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಅವಿನಾಶ್ ಅವರು ಸಾಫ್ಟ್‌ವೇರ್ ಡೆವಲಪರ್. ಆದರೆ ಪ್ರಾಜೆಕ್ಟ್ ಸಲುವಾಗಿ ವಿದೇಶದಲ್ಲಿದ್ದಾರೆ. ಪಾರ್ಟಿಯನ್ನು ಹೆಚ್ಚು ಇಷ್ಟಪಡುವ ಅವಿನಾಶ್‌ಗೆ ತುಂಬ ಸ್ನೇಹಿತರಿದ್ದಾರೆ, ಯಾವುದಕ್ಕೂ ಅವರು ಅಷ್ಟಾಗಿ ಚಿಂತೆ ಮಾಡೋದಿಲ್ಲ. ತುಂಬ ಕೂಲ್ ಹುಡುಗ ಅವರು.
ಪ್ರಶ್ನೆ: ನಟನೆಯಿಂದ ದೂರ ಇರೋ ಬಗ್ಗೆ ಹೇಳಿ
ಉತ್ತರ: ನಾನು ನಟನೆ ಮಾಡದೆ ಇರೋದು ಬೇಸರ ತಂದಿದೆ. ಚಿತ್ರರಂಗದವರ ಜೊತೆ ಕಾಂಟ್ಯಾಕ್ಟ್‌ನಲ್ಲಿ ಇರಲಿಲ್ಲ. ವಿದೇಶದಲ್ಲಿ ಒಂದಿಬ್ಬರು ಸಿಕ್ಕಿ ನನ್ನ ಗುರುತಿಸಿ ಮಾತಾಡಿದಾಗ ತುಂಬ ಖುಷಿಯಾಯ್ತು. ವಿದೇಶದಲ್ಲಿ ಕನ್ನಡಿಗರು ನನ್ನನ್ನು ಗುರುತಿಸಿರೋದು ತುಂಬ ಖುಷಿ ಕೊಟ್ಟಿದೆ. ಆದಷ್ಟು ಬೇಗ ಕರ್ನಾಟಕಕ್ಕೆ ಬಂದು ನಟನೆ ಮುಂದುವರೆಸ್ತೀನಿ. ವಿದೇಶದಲ್ಲಿ ಐಟಿ ಜಾಬ್ ಸಿಕ್ಕರೆ ಆಯ್ತು, ಇಲ್ಲ ಅಂದ್ರೆ ಅಲ್ಲಿ ಮಾಡೆಲಿಂಗ್ ಮಾಡೋಣ ಅಂತಿದೆ. ಇನ್ನೊಂದು ಕಡೆ ಒಂದಷ್ಟು ದೇಶ ಸುತ್ತಾಡಬೇಕಿದೆ.
ಪ್ರಶ್ನೆ: ನಾವು ಇಷ್ಟಪಡುವ ವೃತ್ತಿಯಿಂದ ದೂರ ಇರೋದು ಡಿಪ್ರೆಶನ್‌ಗೆ ದೂಡತ್ತಾ?
ಉತ್ತರ: ಹೌದು, ನನಗೆ ನಟನೆ ಅಂದ್ರೆ ಇಷ್ಟ. ಅದನ್ನು ನಾನು ಮಿಸ್ ಮಾಡಿಕೊಂಡಿದ್ದೇನೆ. ಬದುಕಿನಲ್ಲಿ ಎಲ್ಲವೂ ನಾವು ಅಂದುಕೊಂಡ ಹಾಗೆ ಆಗೋದಿಲ್ಲ. ಡಿಪ್ರೆಶನ್ ಎನ್ನುವ ಮಾತು ಈಗ ಸರ್ವೇಸಾಮಾನ್ಯವಾಗಿದೆ. ನಾನು ಡಿಪ್ರೆಶನ್‌ನಲ್ಲಿದ್ದೆ ಅಂತ ಹೇಳೋದಿಲ್ಲ, ಆದರೆ ಅಲ್ಲಿ ಖಾಲಿ ಕೂರೋಕೆ ಬೇಸರ ಆಗುತ್ತಿತ್ತು. ನನ್ನ ಪತಿ ಅವಿನಾಶ್ ನನಗೆ ಬೆಂಬಲ ಕೊಡುತ್ತಿದ್ದರು, ವಿಡಿಯೋ ಮಾಡು ಆಗ ಏನಾದರೂ ಮಾಡುತ್ತಿದ್ದೀಯಾ ಅಂತ ನಿನಗೆ ಅನಿಸುತ್ತದೆ ಅಂತ ಅವಿನಾಶ್ ಹೇಳುತ್ತಿದ್ದರು. ಈಗ ನಾನು ಆ ಬೇಸರದಿಂದ ಹೊರಗಡೆ ಬಂದು ಸ್ಟ್ರಾಂಗ್ ಆಗಿದ್ದೀನಿ.