ಬಿಗ್‌ಬಾಸ್‌ ಹೊಸ ಅಧ್ಯಾಯದ ಘಟನೆಗಳು ಪೂರ್ವನಿಯೋಜಿತವೇ, ಸೀರಿಯಲ್‌ ರೀತಿ ಶೂಟಿಂಗ್‌ ಮಾಡ್ತಾರ? ಅಪಸವ್ಯಗಳಿಗೆ ಬೇಸತ್ರ ಕಿಚ್ಚ ಸುದೀಪ್‌
ಕನ್ನಡ ಸುದ್ದಿ  /  ಮನರಂಜನೆ  /  ಬಿಗ್‌ಬಾಸ್‌ ಹೊಸ ಅಧ್ಯಾಯದ ಘಟನೆಗಳು ಪೂರ್ವನಿಯೋಜಿತವೇ, ಸೀರಿಯಲ್‌ ರೀತಿ ಶೂಟಿಂಗ್‌ ಮಾಡ್ತಾರ? ಅಪಸವ್ಯಗಳಿಗೆ ಬೇಸತ್ರ ಕಿಚ್ಚ ಸುದೀಪ್‌

ಬಿಗ್‌ಬಾಸ್‌ ಹೊಸ ಅಧ್ಯಾಯದ ಘಟನೆಗಳು ಪೂರ್ವನಿಯೋಜಿತವೇ, ಸೀರಿಯಲ್‌ ರೀತಿ ಶೂಟಿಂಗ್‌ ಮಾಡ್ತಾರ? ಅಪಸವ್ಯಗಳಿಗೆ ಬೇಸತ್ರ ಕಿಚ್ಚ ಸುದೀಪ್‌

ಬಿಗ್‌ಬಾಸ್‌ ಕನ್ನಡ ಸ್ಕ್ರಿಪ್ಟೆಡಾ? ಅಲ್ಲವೇ? ಎಂದು ಈ ಹಿಂದೆ ಅಪೂರ್ವ ಅಗ್ನಿಹೋತ್ರಿ, ಚೈತ್ರಾ ಕುಂದಾಪುರ, ಕಿರಿಕ್‌ ಕೀರ್ತಿ ಮಾತನಾಡಿದ್ದರು. ಆದರೆ, ಬಿಬಿಕೆ 11 ಹೊಸ ಅಧ್ಯಾಯದ ಕೆಲವು ಘಟನೆಗಳು "ದೊಡ್ಮನೆಯೊಳಗೆ ನಡೆಯೋದು ಪೂರ್ವಯೋಜಿತವೇ? ಸೀರಿಯಲ್‌ ರೀತಿ ಶೂಟಿಂಗ್‌ ಮಾಡ್ತಾರ? ಎಂಬ ಸಂದೇಹ ಹುಟ್ಟಿಸಿದೆ.

ಬಿಗ್‌ಬಾಸ್‌ ಹೊಸ ಅಧ್ಯಾಯದ ಘಟನೆಗಳು ಪೂರ್ವ ನಿಯೋಜಿತವೇ, ಸೀರಿಯಲ್‌ ರೀತಿ ಶೂಟಿಂಗ್‌ ಮಾಡ್ತಾರ? ಹೊಸ ಸಂದೇಹಗಳು
ಬಿಗ್‌ಬಾಸ್‌ ಹೊಸ ಅಧ್ಯಾಯದ ಘಟನೆಗಳು ಪೂರ್ವ ನಿಯೋಜಿತವೇ, ಸೀರಿಯಲ್‌ ರೀತಿ ಶೂಟಿಂಗ್‌ ಮಾಡ್ತಾರ? ಹೊಸ ಸಂದೇಹಗಳು

ಒಂದು ಹತ್ತು ಜನರನ್ನು ಬಾವಿಯೊಳಗೆ ಇಳಿಸಿ, ನೀವೇ ನಿಮ್ಮ ಕೈಯಾರೆ ನಿಮ್ಮ ಶ್ರಮದಿಂದ, ಪ್ರತಿಭೆಯಿಂದ ಮೇಲಕ್ಕೆ ಬನ್ನಿ, ನಾವು ಕ್ಯಾಮೆರಾದಲ್ಲಿ ಮೇಲಿನಿಂದ ಶೂಟ್‌ ಮಾಡ್ತಿವಿ. ಯಾರು ಮೊದಲು ಮೇಲಕ್ಕೆ ಬರ್ತಾರೆ ಅವರು ವಿನ್ನರ್‌ ಎಂದು ಚಾನೆಲ್‌ನವರು ಹೇಳುತ್ತಾರೆ ಅಂದುಕೊಳ್ಳೋಣ. ಕಷ್ಟಪಟ್ಟು ಮೇಲಕ್ಕೆ ಹತ್ತಲು ಸಾಧ್ಯವಾಗುವಂತೆ ಆ ಬಾವಿಯಲ್ಲಿ ಅಲ್ಲಲ್ಲಿ ಕಾಲಿಡಲು, ಕೈಯಿಂದ ಹಿಡಿದುಕೊಳ್ಳಲು ಸಣ್ಣಪುಟ್ಟ ವ್ಯವಸ್ಥೆಯೂ ಇದೆ ಎಂದುಕೊಳ್ಳೋಣ. ಹತ್ತು ಜನರೂ ಬಾವಿಯಿಂದ ಮೇಲಕ್ಕೆ ಬರಲು ಪ್ರಯತ್ನಿಸುವ ಸಾಹಸ ಅಲ್ಲಿ ಕಾಣುತ್ತದೆ. ಈ ರೀತಿ ನೀವು ಮೇಲಕ್ಕೆ ಬರುವಾಗ ಉಳಿದವರು ಮೊದಲು ಬರದಂತೆ ತಡೆಯಬಹುದು ಎಂಬ ವ್ಯವಸ್ಥೆ ಇದ್ದರೆ ಒಂದಿಷ್ಟು ಜಗಳ, ತಳ್ಳಾಟ ಆಗಬಹುದು.

ಇಲ್ಲಿ ಕೆಲವೊಮ್ಮೆ ಜನಪ್ರಿಯ ವ್ಯಕ್ತಿ ಮೊದಲ ನಾಲ್ಕೈದು ಸ್ಥಾನದಲ್ಲಿ ಇರದೆ ಇದ್ದರೆ ಆತನನ್ನು ಯಾರಿಗೂ ಕಾಣದಂತೆ(ವೀಕ್ಷಕರಿಗೆ) ಮೇಲಕ್ಕೆ ಎಳೆಯಲು ಆರಂಭಿಸಿದರೆ, ಮೇಲೆ ಶೂಟಿಂಗ್‌ ಮಾಡುತ್ತಿರುವವರು ಟಾಪ್‌ನಲ್ಲಿದ್ದವರಿಗೆ "ಇಲ್ಲಿಗೆ ತಲುಪುವ ಕ್ಷಣದಲ್ಲಿ ಮತ್ತೆ ಜಾರಿ ನೀರಿಗೆ ಬೀಳು, ನೋಡಲು ರೋಚಕವಾಗಿರುತ್ತದೆ, ನಮಗೆ ಒಳ್ಳೆಯ ಟಿಆರ್‌ಪಿ ಬರುತ್ತದೆ" ಎನ್ನುತ್ತಾರೆ ಎಂದಿರಲಿ. ಆಗ ಅದು ಸ್ಕ್ರಿಪ್ಟೆಡ್‌ ಆಗುತ್ತದೆ. ನಿರ್ದೇಶಕನ ಅಣತಿಯಂತೆ ಇಲ್ಲಿ ಆಟ ನಡೆಯುತ್ತದೆ ಎಂದುಕೊಳ್ಳಬಹುದು. ಮೇಲಿರುವ ಕ್ಯಾಮೆರಾದವರು, ಡೈರಕ್ಟರ್‌ ಸೈಲೆಂಟ್‌ ಆಗಿ ಸಹಜವಾಗಿ ಪ್ರತಿಭೆ ಇದ್ದವರು ಮೇಲೆ ಬರಲಿ, ನಾವು ಜಸ್ಟ್‌ ಶೂಟಿಂಗ್‌ ಮಾಡೋಣ ಎಂದುಕೊಂಡರೆ ಅದು ಸ್ಕ್ರಿಪ್ಟೆಡ್‌ ಅಲ್ಲದ ಶೋ‌ ಆಗುತ್ತದೆ. ಸ್ಕ್ರಿಪ್ಟ್‌ ಅಂದರೆ ಪೇಪರ್‌ನಲ್ಲಿ ಬರೆದಿಡಬೇಕಿಲ್ಲ, ನಿರ್ದೇಶಕರು ಇದೇ ರೀತಿ ಆಗಬೇಕು ಎಂದುಕೊಂಡರೂ, ಪೂರ್ವಯೋಜಿತವಾಗಿ ಒಂದಿಷ್ಟು ಘಟನೆಗಳು ಇದೇ ರೀತಿ ಆಗಬೇಕೆಂದು ನಿರ್ಧರಿಸಿದರೂ, ಅದಕ್ಕೆ ತಕ್ಕಂತೆ ಶೋ ನಡೆಸಿದರೂ ಅದನ್ನೂ ಸ್ಕ್ರಿಪ್ಟೆಡ್‌ ಅನ್ನಬಹುದಲ್ವೆ?

ಬಿಗ್‌ಬಾಸ್‌ ಕನ್ನಡ ಸೀಸನ್‌ 11 ಹೊಸ ಅಧ್ಯಾಯ ನೋಡಿದರೆ ನಿಮಗೇನು ಅನಿಸುತ್ತದೆ?

ವಾರಾಂತ್ಯದಲ್ಲಿ ಕಿಚ್ಚ ಸುದೀಪ್‌ ಮಾತನಾಡುವುದು ಸ್ಕ್ರಿಪ್ಟೆಡ್‌ ಅಲ್ಲದಿರಬಹುದು. ಅವರದ್ದು ನೇರಾನೇರ ಉತ್ತರ ಇರಬಹುದು. ಆದರೆ, ಉಳಿದ ದಿನಗಳಲ್ಲಿ ಮನೆಯೊಳಗೆ ನಡೆಯುವ ಘಟನೆಗಳಲ್ಲಿ ಕೆಲವಾದರೂ ಸ್ಕ್ರಿಪ್ಟೆಡ್‌ ಆಗದೆ ಇರಬಹುದೇ?

ಅಕ್ಟೋಬರ್‌ 15ರ ಬಿಗ್‌ಬಾಸ್‌ ಕನ್ನಡವನ್ನೇ ಒಮ್ಮೆ ನೆನಪಿಸಿಕೊಳ್ಳಿ. ಲಾಯರ್‌ ಜಗದೀಶ್‌ ಚೈತ್ರಾ ಕುಂದಾಪುರ ಬಗ್ಗೆ ಮಾತನಾಡುವುದಕ್ಕೂ ಅದೇ ಸಮಯದಲ್ಲಿ ಚೈತ್ರಾ ಅಲ್ಲಿ ಹಾದು ಹೋಗುವ ದೃಶ್ಯವನ್ನೊಮ್ಮೆ ನೋಡಿ. ಇವರು ಡೈಲಾಗ್‌ ಹೇಳುತ್ತಿದ್ದಾರೆ, ಅದೇ ಕ್ಷಣದಲ್ಲಿ ಚೈತ್ರಾ ಅಲ್ಲಿ ಹಾದು ಹೋಗುತ್ತಾರೆ.. ಥೇಟ್‌ ಸಿನಿಮಯ ದೃಶ್ಯದಂತೆ ಕಾಣುತ್ತದೆ. ಸೀರಿಯಲ್‌ನಲ್ಲಿ ಹೇಳಿಕೊಟ್ಟಂಗೆ ಆಕ್ಟ್‌ ಮಾಡಿದಂತೆ ಈ ದೃಶ್ಯ ಕಾಣಿಸುತ್ತಿತ್ತು.

ಅಯ್ಯೋ ಸ್ವಾಮಿ, ಅದು ಸ್ಕ್ರಿಪ್ಟೆಡ್‌ ಅಲ್ಲ. ಅದು ಕಾಕತಾಳೀಯವಾಗಿ ನಡೆದ ಘಟನೆ. ಜಗದೀಶ್‌ ಏನೋ ಹೇಳ್ತಾ ಇದ್ರು, ಆಗ ಚೈತ್ರಾ ಪಾಸ್‌ ಆದ್ರು ಅನ್ನಬಹುದು. ಆದರೆ, ಇಂತಹ ಕೆಲವು ದೃಶ್ಯಗಳು "ಕಾಕತಾಳೀಯ" ಆಗಿರದೆಯೂ ಇರಬಹುದು.

ಸುಮ್ಮನಿರಬೇಡಿ, ಧ್ವನಿ ಎತ್ತಿ, ಇಲ್ಲದಿದ್ದರೆ ಉಳಿಗಾಲವಿಲ್ಲ!

ಸಹಜ ಶೂಟಿಂಗ್‌ ಎಂದರೆ ಇಲ್ಲಿ ನಾನು ಹೇಗಿರಲಿ, ಏನು ಮಾತನಾಡಲಿ ಎಂದು ತೊಳಲಾಟದಲ್ಲಿರುವ ಮೋಕ್ಷಿತಾ ಪೈ ಮುಗ್ಧ ಮನಸ್ಸಿಗೆ ಕ್ಯಾಮೆರಾ ಇಡಬೇಕು. ಇಲ್ಲಿ ನಾನು ಬೊಬ್ಬೆ ಹೊಡೆಯಬೇಕಿಲ್ಲ ಎಂದು ಎರಡು ವಾರದಿಂದ ಸಹಜವಾಗಿದ್ದ ಚೈತ್ರಾರನ್ನು ಅದೇ ರೀತಿ ಆಟ ಆಡಲು ಬಿಡಬೇಕಿತ್ತು. ಅದರ ಬದಲು "ಹೀಗಿದ್ದರೆ ಆಗದು, ತೋರಿಸಿ ನಿಮ್ಮ ಪವರ್‌ ತೋರಿಸಿ" ಎಂದು ಬಿಗ್‌ಬಾಸ್‌ ಕಡೆಯಿಂದಲೇ ಎಲ್ಲರಿಗೂ ಜಗಳ ಮಾಡಲು ಪರೋಕ್ಷವಾಗಿ ಸೂಚನೆಗಳು ಬರುತ್ತಾ ಇರುತ್ತವೆ. ಇದೇ ಕಾರಣಕ್ಕೆ ಈ ವಾರ ಚೈತ್ರಾ ಕುಂದಾಪುರ ಅಬ್ಬರಿಸಿದ್ದಾರೆ. ತನ್ನ ನಿಜವಾದ ಧ್ವನಿ ಎತ್ತಿದ್ದಾರೆ.

ಪ್ರತಿಭೆ ಪ್ರದರ್ಶನ ನಗಣ್ಯ, ಮಾತೇ ಆಭರಣ

ಬಿಗ್‌ಬಾಸ್‌ ಹೊಸ ಅಧ್ಯಾಯದಲ್ಲಿ ಸ್ಪರ್ಧಿಗಳ ಪ್ರತಿಭೆಗೆ ಅಂತಹ ಅವಕಾಶವಿಲ್ಲ. ಮೊದಲ ವಾರದಲ್ಲಿ ಅಚ್ಚರಿಯಾಗಿ ಹೊರಬಿದ್ದಿದ್ದ ಯಮುನಾ ಅವರು ಇತರರಿಗೆ ನಾಟ್ಯ ಕಳಿಸಿದ್ದು, ಇತರರಿಗೆ ತನ್ನ ಪ್ರತಿಭೆ ಹಂಚಿದ್ದು ಜನರಿಗೆ ಕಾಣಿಸಲಿಲ್ಲ. ಇದರ ಬದಲು, ಅವರು ಜಗಳಗಂಟಿ ಎಂದೇ ಹೈಲೈಟ್‌ ಆಗಿತ್ತು. ಈ ಹಿಂದಿನ ಶೋಗಳನ್ನು ನೆನಪಿಸಿಕೊಳ್ಳಿ. ವಾಸುಕಿ ವೈಭವ್‌, ಚಂದನ್‌ ಶೆಟ್ಟಿ ಸೇರಿದಂತೆ ಸಾಕಷ್ಟು ಜನರು ತಮ್ಮ ಪ್ರತಿಭೆಗಳನ್ನು ಅಲ್ಲಿ ಹೈಲೈಟ್‌ ಮಾಡಿದ್ದರು. ಆದರೆ, ಈ ಬಾರಿ ಸ್ಪರ್ಧಿಗಳನ್ನು "ಯಾರೋ" ಆಟ ಆಡಿಸುತ್ತಿದ್ದಾರೆ ಎಣಿಸದೆ ಇರದು.

ಅನುಮಾನ ಹುಟ್ಟಿಸುವ ಹಲವು ಅಂಶಗಳು

ಈ ಶೋನಲ್ಲಿ ಆಗಾಗ ಸ್ಪರ್ಧಿಗಳ ಬಾಯಿಯಿಂದ "ನಾನಿದು ಸ್ಕ್ರಿಪ್ಟೆಡ್‌ ಅಂದುಕೊಂಡಿದ್ದೆ, ಇಲ್ಲಿ ಹಾಗೆ ಇಲ್ಲ" ಎಂದು ಆಗಾಗ ಮಾತುಗಳು ಕೇಳುಬರುವುದು "ಕುಂಬಳಕಾಯಿ ಕಳ್ಳ ಹೆಗಲು ಮುಟ್ಟಿನೋಡಿದಂತೆ" ಅನಿಸುತ್ತದೆ.

ಇದೇ ಸಮಯದಲ್ಲಿ ಕಾರ್ಯಕ್ರಮದ ನಡುವೆಯೇ, ಒಳ್ಳೆಯ ಟಿಆರ್‌ಪಿ ಸಮಯದಲ್ಲಿ ಕಿಚ್ಚ ಸುದೀಪ್‌ "ಮುಂದಿನ ಆಟಕ್ಕೆ ನಾನಿಲ್ಲ" ಎಂದಿರುವುದು ಕೂಡ ಅನುಮಾನಸ್ಪದ ನಡವಳಿಕೆ. ಶೋ ಮುಗಿದ ಬಳಿಕ ಧನ್ಯವಾದ ಸಮರ್ಪಿಸಿ ಈ ವಿಚಾರ ಘೋಷಿಸಬಹುದಿತ್ತು.

ಬಿಗ್‌ಬಾಸ್‌ ಕನ್ನಡದಲ್ಲಿ ಈ ಬಾರಿ ಕೆಲವೊಂದು ಘಟನೆಗಳು ಸಹಜವಾಗಿ ನಡೆಯುವಂತೆ ಕಾಣಿಸುತ್ತಿಲ್ಲ. ಒಳ್ಳೆಯ ಟಿಆರ್‌ಪಿ ಬರಲೇಬೇಕು ಎಂಬ ಜಿದ್ದಿಗೆ ಬಿದ್ದಂತೆ ಹಲವು ಘಟನೆಗಳನ್ನು ಪೋಣಿಸುತ್ತಾ ಇದ್ದಾರೆಯೇ ಎಂಬ ಅನುಮಾನ ಕಾಡುತ್ತಿದೆ. ಒಳಗಿರುವವರಿಗೆ ನಿಮಗೆ ಆಡಲು ಗೊತ್ತಿಲ್ಲ, ನಾವು ಹೇಳಿಕೊಡ್ತಿವಿ ಅದೇ ರೀತಿ ಆಡಿ ಎಂದು ಸೂಚಿಸುವಂತೆ ಮೇಲ್ನೋಟಕ್ಕೆ ಕಾಣಿಸುತ್ತದೆ.

ಸುರೇಶ್‌ ಈ ಬಾರಿ ಚಿನ್ನದೊಂದಿಗೆ ಮನೆ ಪ್ರವೇಶಿಸಿದ್ದಾರೆ. ಕೋಟಿ ರೂಪಾಯಿಗಿಂತಲೂ ಹೆಚ್ಚು ಬೆಲೆಬಾಳುವ ಚಿನ್ನವನ್ನು ದೊಡ್ಮನೆಯೊಳಗೆ ತಂದಿರುವುದೂ ಅನುಮಾನಕ್ಕೆ ಕಾರಣವಾಗಿದೆ. ಈ ಚಿನ್ನ ಕಾಯಲು ಏನಾದರೂ ವ್ಯವಸ್ಥೆ ಇರುವುದೇ? ಕಲಾವಿದರಲ್ಲಿ ಕೆಲವರು ಆರಂಭದಲ್ಲಿ ಡಲ್‌ ಆಗಿದ್ದರೂ ಈ ವಾರದಿಂದ ಯಾರದ್ದೋ ಅಣತಿಯಲ್ಲಿ ಆಡುವಂತೆ ಆಕ್ಟಿವ್‌ ಆಗಿದ್ದಾರೆ.

ಲಾಯರ್‌ ಜಗದೀಶ್‌ ಬೈದ್ರೂ ಬೇಜಾರಿಲ್ಲ, ಟಿಆರ್‌ಪಿ ಮುಖ್ಯ

ಮೊದಲ ವಾರದಲ್ಲಿ ಲಾಯರ್‌ ಜಗದೀಶ್‌ ಬಿಗ್‌ಬಾಸ್‌ಗೆ ಅವಾಜ್‌ ಹಾಕಿರೋದು ಸ್ಕ್ರಿಪ್ಟೆಡ್‌ ಅಲ್ಲವಾಗಿರಬಹುದು. ಆದರೆ, ಮುಂದಿನ ದಿನಗಳಲ್ಲಿ "ಈ ವ್ಯಕ್ತಿ ಚೆನ್ನಾಗಿ ಆಡ್ತಾರೆ, ನಮಗೆ ಬೈಯಲಿ, ಉಗಿಯಲಿ, ಒಳ್ಳೆ ಟಿಆರ್‌ಪಿ ಖಾತ್ರಿ" ಎಂದು ಅವರನ್ನು ಕರ್ನಾಟಕದ ಕ್ರಶ್‌ರನ್ನಾಗಿ ಮಾಡಿದ್ರು.

ಬಿಗ್‌ಬಾಸ್‌ ತಮಿಳಿನಿಂದ ಕಮಲ್‌ ಹಾಸನ್‌ ಆರಂಭದಲ್ಲಿಯೇ ಹೊರನಡೆದರು. ಮುಂದಿನ ಬಾರಿ ಕಿಚ್ಚ ಸುದೀಪ್‌ ಕೂಡ ಬಿಬಿಕೆ ನಿರೂಪಣೆ ಮಾಡಲಾರೆ ಎಂದಿದ್ದಾರೆ. ಇದಕ್ಕೆ ಇವರು ನೀಡುವ ಕಾರಣಗಳು ಮೇಲ್ನೋಟಕ್ಕೆ ಸರಿ ಎಣಿಸಬಹುದು. ಇದನ್ನು ಹೊರತುಪಡಿಸಿ "ಆಟ ಬದಲಾಗಿದೆ, ನನ್ನ ವ್ಯಕ್ತಿತ್ವಕ್ಕೆ ಇದು ಸರಿ ಹೊಂದುತ್ತಿಲ್ಲ" ಎಂಬ ಭಾವ ಇರಬಹುದೇ? ಜನರಿಗೆ ಕಾಣುವುದು ಒಂದು, ತೆರೆ ಹಿಂದೆ ಏನೋ ನಡೆಯುತ್ತಿದೆಯೋ? ಯಾರಿಗೆ ಗೊತ್ತು.

ಇಂದಿಗೂ ಬಿಗ್‌ಬಾಸ್‌ ಸ್ಕ್ರಿಪ್ಟೆಡಾ, ಅಲ್ಲವೇ ಎನ್ನುವುದು ಬಹುಚರ್ಚಿತ ವಿಷಯ. ಯಾಕೋ ಬಿಗ್‌ಬಾಸ್‌ ಕನ್ನಡ ಹೊಸ ಅಧ್ಯಾಯ ನೋಡುತ್ತಿದ್ದರೆ ಇದು ತುಸು ಸ್ಕ್ರಿಪ್ಟೆಡ್‌ ಅನಿಸದೆ ಇರದು. ಬಿಬಿಕೆ ಸ್ಕ್ರಿಪ್ಟೆಡಾ, ಅರೆ ಸ್ಕ್ರಿಪ್ಟೆಡಾ ಎಂಬ ಪ್ರಶ್ನೆಗೆ ಸದ್ಯ ಉತ್ತರವಿಲ್ಲ. ಸತ್ಯ ಏನೆಂದು ಬಿಗ್‌ಬಾಸ್‌ ಕನ್ನಡ ಸ್ಪರ್ಧಿಗಳು ದೊಡ್ಮನೆ ಪ್ರವೇಶಿಸುವ ಮೊದಲು ಸಹಿ ಹಾಕುವ ಅಗ್ರಿಮೆಂಟ್‌ಗೆ ಮಾತ್ರ ಗೊತ್ತಿರಬಹುದು.

Whats_app_banner