BBK 10: ‘ಪ್ರತಾಪ್‌ಗೆ ಸ್ವಂತ ಪರ್ಸನಾಲಿಟಿ ಇಲ್ಲ, ಅವನು ಸಿಂಪತಿಯಲ್ಲಿ ಬದುಕ್ತಾನೆ’; ಬಿಗ್‌ಬಾಸ್ ಪಾಠಶಾಲೆಯಲ್ಲಿ ಮೈಕಲ್ ಮಾತು
ಕಳೆದ ಮೂರು ದಿನಗಳಿಂದ ಬಿಗ್ ಬಾಸ್ ಪಾಠಶಾಲೆಯಲ್ಲಿ ಮೋಜು ಮಸ್ತಿ ನಡೆದಿತ್ತು. ಇದೀಗ ಅದು ಬೇರೆಯ ಹಾದಿ ಹಿಡಿದಿದೆ. ಮೈಕಲ್ ಅಜಯ್ ಸಂಗೀತಾ ಮತ್ತು ಡ್ರೋಣ್ ಪ್ರತಾಪ್ ಬಗ್ಗೆ ತಮ್ಮ ನಿಲುವನ್ನು ತಿಳಿಸಿದರೆ, ಇದೇ ಜೋಡಿ ಮೈಕಲ್ ಅನ್ನೇ ಟಾರ್ಗೆಟ್ ಮಾಡಿದೆ.
BBK 10: ಬಿಗ್‌ಬಾಸ್ ಪಾಠಶಾಲೆ ತರಗತಿಯಿಂದ ತರಗತಿಗೆ ಸೀರಿಯಸ್ ಆಗುತ್ತ ನಡೆದಿದೆ. ಮೊದಲ ದಿನಕ್ಕೆ ಹೋಲಿಸಿದರೆ ನಿನ್ನೆಯ ತರಗತಿಗಳು ಸಾಕಷ್ಟು ಸೀರಿಯಸ್ ಆಗಿದ್ದವು. ನಮ್ರತಾ ಕ್ಲಾಸಿನಲ್ಲಿ ಎಲ್ಲರೂ ಡಾನ್ಸ್ ಮಾಡಿ ಖುಷಿಪಟ್ಟರೆ, ಸಂಗೀತಾ ಬಹುಗಂಭೀರವಾಗಿ ಅಧ್ಯಾತ್ಮದ ಪಾಠವನ್ನು ಹೇಳಿಕೊಟ್ಟಿದ್ದರು. ತುಂಬ ಗಹನವಾಗಿಯೂ ಇದ್ದ ಅವರ ತರಗತಿ ಪ್ರೀತಿಯನ್ನು ಹರಡುವ ಸಂದೇಶದೊಂದಿಗೆ ಕೊನೆಗೊಂಡಿತ್ತು. ಸಿರಿ ಅವರ ತರಗತಿಯಲ್ಲಿ ಕಾರ್ತಿಕ್ ಮತ್ತು ವಿನಯ್ ಪರಸ್ಪರ ಹಾರ್ಟ್ ಕ್ರಾಫ್ಟ್ ಹಂಚಿಕೊಂಡು ಖುಷಿಗೊಂಡಿದ್ದರು.
ಕಾರ್ತಿಕ್ ರಾಜಕೀಯ ಪಾಠದ ಪ್ರೋಮೋ ಸಹ ಇಂದು ಬಿಡುಗಡೆ ಆಗಿದೆ. ಅದರಲ್ಲಿಯೂ ಉತ್ತಮ ನಾಯಕತ್ವ ಹೇಗಿರಬೇಕು ಎಂಬುದರ ಕುರಿತು ಅವರು ಚರ್ಚೆ ಹುಟ್ಟುಹಾಕಿದ್ದಾರೆ. ಅದರಲ್ಲಿ ವಿದ್ಯಾರ್ಥಿಗಳೂ ಪಾಲ್ಗೊಳ್ಳುತ್ತಿದ್ದಾರೆ. ‘ಬಿಗ್‌ಬಾಸ್ ಮನೆಯಲ್ಲಿ ರಾಜಕೀಯ ನಡೆಯುತ್ತಿದೆ’ ಎಂದು ಹೇಳುವುದರ ಮೂಲಕ ಕಾರ್ತಿಕ್ ಮನೆಯೊಳಗಿನ ಪಾಲಿಟಿಕ್ಸ್ ಬಗ್ಗೆಯೇ ಮಾತಾಡಲು ಪ್ರಾರಂಭಿಸಿದ್ದಾರೆ.
ಕಾರ್ತಿಕ್ ಪೊಲಿಟಿಕ್ಸ್ ತರಗತಿಯ ಝಲಕ್‌ನ ನಂತರ ಜಿಯೋ ಸಿನಿಮಾ ಬಿಡುಗಡೆ ಮಾಡಿರುವ ಪ್ರೋಮೊ ಈಗ ವರ್ತೂರು ಸಂತೋಷ್ ಅವರ ಕ್ಲಾಸಿನ ಖದರ್ ಹೇಗಿದೆ ಎನ್ನುವುದರ ಸುಳಿವು ನೀಡಿದೆ. ಈ ಬಾರಿಯ ಪ್ರೋಮೋ ಹಲವು ಕುತೂಹಲಗಳಿಗೆ ಸಾಕ್ಷಿಯಾಗಿದೆ. ವರ್ತೂರು ಸಂತೋಷ್ ಶಿಕ್ಷಕರಾದ ಬಳಿಕ ಒಂದಷ್ಟು ಬೆಳವಣಿಗೆಗಳು ಘಟಿಸಿವೆ.
ವರ್ತೂರು ಸಂತೋಷ್ ಮೇಷ್ಟ್ರಾಗಿರುವ ತರಗತಿಯಲ್ಲಿ ಒಬ್ಬರನ್ನೊಬ್ಬರು ಎಲಿಮಿನೇಟ್ ಮಾಡುವ ಚಟುವಟಿಕೆಯೂ ನಡೆದಿದೆ. ಸಂಗೀತಾ ಮತ್ತು ಪ್ರತಾಪ್ ಇಬ್ಬರೂ ಮೈಕಲ್ ಅವರನ್ನು ಎಲಿಮಿನೇಟ್ ಮಾಡಬೇಕು ಎಂದು ಹೇಳಿದ್ದಾರೆ. ‘ಮೈಕಲ್ ಸಣ್ಣ ಸಣ್ಣ ವಿಷಯಕ್ಕೂ ನನಗೆ ಚುಚ್ಚಿ ಮಾತಾಡುತ್ತಿದ್ದಾರೆ’ ಎಂದು ಸಂಗೀತಾ ಆರೋಪಿಸಿದ್ದರೆ, “ನನ್ನ ವಿರುದ್ಧ ಎಲ್ಲರ ಮನಸ್ಸಿನಲ್ಲಿಯೂ ತಪ್ಪು ಭಾವನೆ ಮೂಡಿಸುತ್ತಿದ್ದಾರೆ’ ಎಂದು ಪ್ರತಾಪ್ ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಮೈಕಲ್, ‘ಐ ಡೋಂಟ್ ಲೈಕ್ ಯು’ ಎಂದು ನೇರವಾಗಿ ಹೇಳಿದ್ದಾರೆ. ‘ಪ್ರತಾಪ್ ಅವರಿಗೆ ಸ್ವಂತ ಪರ್ಸನಾಲಿಟಿ ಇಲ್ಲ. ಸಿಂಪತಿಯಲ್ಲಿದ್ದು ಬದುಕುವವನ ಬಳಿ ಮಾತಾಡಲು ನನಗೆ ಏನೂ ಇಲ್ಲ’ ಎಂದೂ ಉತ್ತರಿಸಿದ್ದಾರೆ. ಹಾಗಾದರೆ ವರ್ತೂರ್ ಕ್ಲಾಸ್‌ನಲ್ಲಿ ನಡೆದಿದ್ದು ರಿಯಲ್ ಎಲಿಮಿನೇಷನ್ನಾ? ಅಥವಾ ಟಾಸ್ಕ್‌ನ ಭಾಗವಾ? ಬಿಗ್‌ಬಾಸ್ ಕನ್ನಡ 24 ಗಂಟೆ ನೇರಪ್ರಸಾರವನ್ನು ಜಿಯೋಸಿನಿಮಾದಲ್ಲಿ ಉಚಿತವಾಗಿ ನೋಡಿ.