BBK 10: ಮಾಡಿದ್ದುಣ್ಣೋ ಮಹಾರಾಯ! ಡ್ರೋಣ್ಗೆ ಉರುಳಾಯ್ತು ತಪ್ಪು ನಿರ್ಧಾರ, ಕಳಪೆ ಪಟ್ಟ ಹೊತ್ತು ಜೈಲು ಸೇರಿದ ಪ್ರತಾಪ್
ಈ ವಾರದ ಮಣ್ಣಿನ ಮಕ್ಕಳು ತಂಡದ ಕ್ಯಾಪ್ಟನ್ ಆಗಿದ್ದ ಡ್ರೋಣ್ ಪ್ರತಾಪ್, ವಾರದ ಕೊನೇ ಹತ್ತಿರ ಬರುತ್ತಿದ್ದಂತೆ ಕಳಪೆ ಪಟ್ಟ ಪಡೆದುಕೊಂಡಿದ್ದಾರೆ. ಇದಕ್ಕೆ ಅವರ ನಿರ್ಧಾರಗಳೇ ಕಾರಣ ಎಂದು ಮನೆಯವರು ಆರೋಪ ಮಾಡುತ್ತಿದ್ದಾರೆ.
BBK 10: ಬಿಗ್ಬಾಸ್ ಸೀಸನ್ 10ರ ಈ ವಾರ ಹಲವು ಬದಲಾವಣೆಗಳಿಗೆ ಸಾಕ್ಷಿಯಾಗಿದೆ. ಕಳೆದ ಕೆಲ ವಾರಗಳ ಹಿಂದಷ್ಟೇ ಕಿಚ್ಚನಿಂದ ಚಪ್ಪಾಳೆ ಗಿಟ್ಟಿಸಿಕೊಂಡಿದ್ದ ಡ್ರೋಣ್ ಪ್ರತಾಪ್, ಅಚ್ಚರಿಯ ರೀತಿಯಲ್ಲಿ ಈ ವಾರ ಮನೆ ಮಂದಿಯ ಟೀಕೆಗೆ ಗುರಿಯಾಗಿ ಕಳಪೆ ಪಟ್ಟ ಅಲಂಕರಿಸಿದ್ದಾರೆ. ಈ ವಾರದ ಎಲ್ಲ ಟಾಸ್ಕ್ಗಳಲ್ಲಿಯೂ ಪ್ರತಾಪ್ ಮುಂದಾಳತ್ವದ ‘ಮಣ್ಣಿನ ಮಕ್ಕಳು’ ತಂಡ ಸೋತು ಸುಣ್ಣವಾಗಿದೆ. ಆ ತಂಡದ ನಾಯಕತ್ವವನ್ನು ವಹಿಸಿದ್ದ ಡ್ರೋಣ್ ಪ್ರತಾಪ್ ಜೈಲುಪಾಲಾಗಿದ್ದಾರೆ!
ನಾಯಕತ್ವದ ಪರಿಣಾಮವಾಗಿ ಜೈಲುಡುಗೆ ತೊಟ್ಟ ಪ್ರತಾಪ್ ಚಿತ್ರ ಜಿಯೋ ಸಿನಿಮಾ ಬಿಡುಗಡೆ ಮಾಡಿರುವ ಬೆಳಗಿನ ಫ್ರೊಮೊದಲ್ಲಿ ಕಾಣಿಸಿದೆ. ವಾರದ ಕೊನೆಗೆ ಕಳಪೆ ಯಾರು, ಉತ್ತಮ ಯಾರು ಎಂಬುದನ್ನು ಆರಿಸುವ ಸಂದರ್ಭದಲ್ಲಿ ಎರಡೂ ತಂಡದ ಬಹುತೇಕ ಸದಸ್ಯರು ಪ್ರತಾಪ್ ಹೆಸರನ್ನು ಸೂಚಿಸಿದ್ದಾರೆ. ಪ್ರತಾಪ್ ನಿರ್ಧಾರಗಳು ಸರಿ ಇರಲಿಲ್ಲ, ಸ್ಟ್ರಾಂಗ್ ಸ್ಪರ್ಧಿಯನ್ನೇ ತಂಡದಿಂದ ಹೊರಕಳಿಸಿದ್ದು ತಪ್ಪು ಎಂದು ಮನೆ ಮಂದಿ ಪ್ರಶ್ನಿಸುತ್ತಿದ್ದಾರೆ.
‘ನನ್ನನ್ನು ಕ್ಯಾಪ್ಟನ್ಸಿ ಟಾಸ್ಕ್ನಿಂದ ಹೊರಗಿಟ್ಟಿದ್ದು ಬೇಜಾರಾಯ್ತು’ ಎಂದು ನಮ್ರತಾ ಕಾರಣ ಕೊಟ್ಟಿದ್ದರೆ, ‘ಕಾರ್ತಿಕ್ ಅವರಂಥ ಆಟಗಾರನನ್ನು ಹೊರಗಿಟ್ಟಿದ್ದರಿಂದ ತಂಡ ವಾರದ ಎಲ್ಲ ಟಾಸ್ಕ್ಗಳಲ್ಲಿಯೂ ಸೋಲುವಂತಾಯ್ತು’ ಎಂದು ವಿನಯ್ ಕಾರಣ ನೀಡಿದ್ದಾರೆ. ‘ಎಲ್ಲೋ ಒಂದು ಕಡೆ ಕೋಪದಿಂದ ಮಾತಾಡ್ತಾರೆ ಎಂದು ಈ ವಾರನೂ ಅಗ್ರೆಶನ್ನಲ್ಲಿಯೇ ಆಡ್ತಾರೆ ಅಂದುಕೊಳ್ಳುವುದು ಸರಿಯಲ್ಲ’ ಎಂದು ತನಿಷಾ ಹೇಳಿದ್ದಾರೆ. ವರ್ತೂರು, ಸ್ನೇಹಿತ್ ಕೂಡ ಪ್ರತಾಪ್ ಹೆಸರನ್ನೇ ಹೇಳಿದ್ದಾರೆ.
ಮನೆಯವರ ನಿರ್ಧಾರಕ್ಕೆ ಬದ್ಧನಾಗಿ ಪ್ರತಾಪ್ ಜೈಲುಡುಗೆಯೇನೋ ತೊಟ್ಟಿದ್ದಾರೆ. ಆದರೆ ಅವರ ನಿರ್ಧಾರ ನನಗೆ ಸಮ್ಮತ ಅನಿಸಿಲ್ಲ ಎಂದೂ ಗಟ್ಟಿಯಾಗಿಯೇ ಹೇಳಿದ್ದಾರೆ. ‘ನನ್ನ ಪ್ರಕಾರ ನಾನು ತೆಗೆದುಕೊಂಡ ನಿರ್ಧಾರಗಳು ಸರಿ ಇತ್ತು. ಎಲ್ಲರೂ ಸೇರಿ ನನಗೆ ಕಳಪೆ ಕೊಟ್ಟಿದ್ದು ಬೇಜಾರಾಗಿದೆ. ಇದಕ್ಕೆ ನನಗೆ ಸಮ್ಮತಿ ಇಲ್ಲ’ ಎಂದು ಹೇಳಿ ಅವರು ಜೈಲಿನೊಳಗೆ ಹೋಗಿ ಕೂತಿದ್ದಾರೆ.
ಹಾಗಾದರೆ ಈ ವಾರ ಉತ್ತಮ ಪಟ್ಟ ಯಾರಿಗೆ ಬಂದಿದೆ? ಕ್ಯಾಪ್ಟನ್ಸಿ ಓಟದಲ್ಲಿ ಯಾರು ಗೆದ್ದಿದ್ದಾರೆ? ಈ ಪ್ರಶ್ನೆಗಳಿಗೆ ಉತ್ತರ ಸಿಗಲು ಜಿಯೋಸಿನಿಮಾದಲ್ಲಿ ಪ್ರಸಾರವಾಗುವ ಬಿಗ್ಬಾಸ್ ಕನ್ನಡವನ್ನು ಉಚಿತವಾಗಿ ನೇರಪ್ರಸಾರ ವೀಕ್ಷಿಸಬಹುದು.