BBK 10: ‘ಇವ್ನೆಂಥಾ ಫ್ರೆಂಡ್, ಬುಲ್‌ಶಿಟ್!’ ಕ್ಯಾಪ್ಟನ್ಸಿ ಟಾಸ್ಕ್‌ನಿಂದ ಕೈಬಿಟ್ಟಿದ್ದಕ್ಕೆ ಸ್ನೇಹಿತ್ ವಿರುದ್ಧವೇ ತಿರುಗಿ ಬಿದ್ದ ನಮ್ರತಾ
ಬಿಗ್‌ಬಾಸ್ ಕ್ಯಾಪ್ಟನ್ಸಿ ಟಾಸ್ಕ್‌ನಿಂದ ವಿನಯ್ ಮತ್ತು ನಮ್ರತಾರನ್ನು ಟಾಸ್ಕ್‌ನ ಉಸ್ತುವಾರಿ ಸ್ನೇಹಿತ್ ಕೈಬಿಟ್ಟಿದ್ದಾರೆ. ಸ್ನೇಹಿತ್ ಈ ನಿರ್ಧಾರಕ್ಕೆ ನಮ್ರತಾ ಇವ್ನೆಂಥಾ ಫ್ರೆಂಡ್, ಬುಲ್‌ಶಿಟ್ ಎಂದಿದ್ದಾರೆ.
BBK 10: ಬಿಗ್ ಬಾಸ್ ಮನೆಯಲ್ಲಿ ಸ್ನೇಹಿತ್ ಮತ್ತು ನಮ್ರತಾ ಮಧ್ಯೆ ಒಂದು ವಿಶೇಷ ಬಾಂಡಿಂಗ್ ಇದೆ. ನಮ್ರತಾ ಮೇಲೆ ನನಗೆ ವಿಶೇಷ ಒಲವಿದೆ ಎಂದು ಸ್ನೇಹಿತ್ ಈ ಹಿಂದೆ ಹಲವು ಬಾರಿ ಹೇಳಿಕೊಂಡಿದ್ದಿದೆ. ಅದನ್ನು ಸ್ವತಃ ನಮ್ರತಾ ಮುಂದೆಯೂ ನಿವೇದನೆ ಮಾಡಿದ್ದಾರೆ ಸ್ನೇಹಿತ್. ಆದರೆ, ನಾವಿಬ್ಬರೂ ಬೆಸ್ಟ್ ಫೆಂಡ್ಸ್ ಆಗಿರೋಣ ಎಂದೇ ಹೇಳುತ್ತ ಬಂದಿದ್ದರು ನಮ್ರತಾ. ಅದಕ್ಕೆ ಸ್ನೇಹಿತ್ ಕಡೆಯಿಂದಲೂ ಸಮ್ಮತಿ ಸಿಕ್ಕಿತ್ತು. ಇದೀಗ ಹೀಗಿದ್ದ ಸ್ನೇಹಿತರ ನಡುವೆ ಬಿರುಕು ಮೂಡಿದೆ. ಅದಕ್ಕೆ ಕಾರಣವಾಗಿದ್ದು ಕ್ಯಾಪ್ಟನ್ಸಿ ಪಟ್ಟ!
ಹೌದು, ಬಿಗ್‌ಬಾಸ್ ಮನೆ ಈ ವಾರದಲ್ಲಿ ಹಲವು ಕೋಲಾಹಲಗಳಿಗೆ, ಕೋಪ ತಾಪಗಳಿಗೆ, ಜಗಳಗಳಿಗೆ, ರೋಷಾವೇಶಗಳಿಗೆ ಸಾಕ್ಷಿಯಾಗಿದೆ. ಸಾಕ್ಷಿಯಾಗುತ್ತಿದೆ. ವಾರದ ಕೊನೆ ಸಮೀಪಿಸುತ್ತಿದ್ದಂತೆಯೇ ಮನೆಯೊಳಗಿನ ಲೆಕ್ಕಾಚಾರಗಳೂ ಬದಲಾಗುತ್ತಿವೆ. ಜಿಯೋ ಸಿನಿಮಾ ಬಿಡುಗಡೆ ಮಾಡಿರುವ ಬೆಳಗಿನ ಪ್ರೋಮೊ ಇಂಥದ್ದೇ ಒಂದು ಅಚ್ಚರಿಯ ಲೆಕ್ಕಾಚಾರಕ್ಕೆ ಸಾಕ್ಷಿಯಾಗಿದೆ.
ಈ ವಾರ ಮನೆಯ ಕ್ಯಾಪ್ಟನ್ ಆಗಿರುವ ಸ್ನೇಹಿತ್ ವಿಶೇಷ ಅಧಿಕಾರವನ್ನು ಪಡೆದಿದ್ದರು. ಆ ಅಧಿಕಾರದ ಪ್ರಕಾರ ಮನೆಯೊಳಗಿನ ಹಲವು ಸಂಗತಿಗಳ ಬಗ್ಗೆ ಅವರ ನಿರ್ಧಾರವೇ ಅಂತಿಮವಾಗಿತ್ತು. ಅಲ್ಲದೆ ಮನೆಯಲ್ಲಿ ತಂಡಗಳನ್ನು ರಚಿಸುವ, ವಾರವಿಡೀ ಬಿಗ್‌ಬಾಸ್ ನೀಡುವ ಟಾಸ್ಕ್‌ಗಳ ಉಸ್ತುವಾರಿ ವಹಿಸುವ ಜವಾಬ್ದಾರಿಯನ್ನೂ ಸ್ನೇಹಿತ್‌ಗೆ ಒಪ್ಪಿಸಲಾಗಿತ್ತು.
ಅದರಂತೆ ತಂಡವನ್ನು ರಚಿಸುವ ಹಂತದಲ್ಲಿಯೇ ಉಸ್ತುವಾರಿಯೊಂದಿಗೆ ಉಂಟಾದ ಭಿನ್ನಾಭಿಪ್ರಾಯ ವಾರವಿಡೀ ಮುಂದುವರಿಯಿತು. ಸಂಗೀತಾ ನಾಯಕತ್ವದ ತಂಡದ ಪ್ರಕಾರ ಸ್ನೇಹಿತ್, ವರ್ತೂರು ಅವರ ತಂಡದ ಪರವಾಗಿ ನಿರ್ಣಯಗಳನ್ನು ನೀಡುತ್ತಿದ್ದಾರೆ. ನಮ್ರತಾ ಮತ್ತು ವಿನಯ್ ಅವರಿಂದ ಪ್ರಭಾವಿತರಾಗಿ ತಮ್ಮ ನಿರ್ಧಾರಗಳನ್ನು ಬದಲಿಸುತ್ತಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಲೇ ಇದ್ದವು.
ಆದರೆ ವಾರಾಂತ್ಯದಲ್ಲಿ ಬಿಗ್‌ಬಾಸ್, ಸ್ನೇಹಿತ್‌ಗೆ ಮತ್ತೊಂದು ಜವಾಬ್ದಾರಿ ವಹಿಸಿದ್ದಾರೆ. ‘ಮನೆಯ ಸದಸ್ಯರ ಪೈಕಿ ಕ್ಯಾಪ್ಟನ್ ಪಟ್ಟಕ್ಕೆ ಸ್ಪರ್ಧಿಸಲು ಅನರ್ಹರಾದ ಸದಸ್ಯರನ್ನು ಸೂಚಿಸಿ’ ಎಂದು ಬಿಗ್‌ಬಾಸ್ ಕೇಳಿದ್ದಾರೆ. ಇದಕ್ಕೆ ಎಲ್ಲರೂ ಅಚ್ಚರಿ ಪಡುವಂತೆ ಸ್ನೇಹಿತ್ ನಾಮಿನೇಟ್ ಮಾಡಿದ್ದಾರೆ. ಅವರು ನಾಮಿನೇಟ್ ಮಾಡಿದ ಎರಡು ಮುಖ್ಯ ಸದಸ್ಯರೆಂದರೆ, ನಮ್ರತಾ ಮತ್ತು ವಿನಯ್!
ಇದಕ್ಕೆ ಅವರು ಕೊಟ್ಟ ಕಾರಣ, ‘ವಿನಯ್ ಮತ್ತು ನಮ್ರತಾ ಇಬ್ಬರೂ ಉಸ್ತುವಾರಿಯಾದ ನನ್ನ ಮಾತುಗಳನ್ನು ಮೀರಿದ್ದಾರೆ’ ಎಂಬುದು. ತಮ್ಮನ್ನು ಖಂಡಿತ ಕ್ಯಾಪ್ಟನ್ಸಿ ಟಾಸ್ಕ್‌ನಿಂದ ಹೊರಗಿಡುವುದಿಲ್ಲ ಎಂದೇ ನಂಬಿದ್ದ ವಿನಯ್ ಮತ್ತು ನಮ್ರತಾ ಇಬ್ಬರಿಗೂ ಸ್ನೇಹಿತ್ ಮಾತು ಕೇಳಿ ಆಘಾತವಾಗಿದೆ. ‘ಇವ್ನೆಂತಾ ಫ್ರೆಂಡ್, ಬುಲ್ ಶಿಟ್’ ಎಂದು ನಮ್ರತಾ ಕಣ್ಣಲ್ಲಿ ನೀರು ತುಂಬಿಕೊಂಡಿದ್ದಾರೆ.
ಇವರಿಬ್ಬರಷ್ಟೇ ಅಲ್ಲ ಬೇರೆ ಯಾರನ್ನೆಲ್ಲ ಸ್ನೇಹಿತ್ ಕ್ಯಾಪ್ಟನ್ಸಿ ಟಾಸ್ಕ್‌ನಿಂದ ಹೊರಗಿಟ್ಟಿದ್ದಾರೆ? ಕೊನೆಗೆ ಮನೆಯ ಕ್ಯಾಪ್ಟನ್ ಆಗುವುದು ಯಾರು? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಗಲು ಇಂದಿನ ಟಾಸ್ಕ್ ನೋಡಬೇಕಷ್ಟೆ. ಬಿಗ್‌ಬಾಸ್ ಕನ್ನಡ 24 ಗಂಟೆ ನೇರಪ್ರಸಾರವನ್ನು ಜಿಯೋಸಿನಿಮಾದಲ್ಲಿ ಉಚಿತವಾಗಿ ನೋಡಿ.