BBK 10: ಶ್ಯಾಡೋ, ಚಮಚ, ಇನ್‌ಪ್ಲ್ಯೂಯೆನ್ಸ್ ನೆರಳಲ್ಲಿಯೇ ಹೆಚ್ಚು ಕಂಡ ನಮ್ರತಾ; ಹೀಗಿದೆ 15 ವಾರಗಳ ಬಿಗ್ ಬಾಸ್ ಜರ್ನಿ
ಬಿಗ್ ಬಾಸ್ ಕನ್ನಡ ಸೀಸನ್ 10ರಲ್ಲಿ ಹಲವು ಏಳುಬೀಳುಗಳನ್ನು ಹಾದು ಅಂತಿಮ ಹಂತಕ್ಕೆ ಒಂದೇ ಹೆಜ್ಜೆ ಉಳಿದಿರುವಾಗ ನಮ್ರತಾ ಮನೆಯಿಂದ ಹೊರಬಿದ್ದಿದ್ದಾರೆ. ಕೊನೆಕೊನೆಯ ದಿನಗಳಲ್ಲಿ ಅವರ ಆಟದ ವೈಖರಿಯನ್ನು ಕಂಡು ಹಿಂದೆ ಜರಿದವರೇ ಅವರನ್ನು ಹೊಗಳಿದ್ದು ಅವರ ಸಾಮರ್ಥ್ಯಕ್ಕೆ ಸಾಕ್ಷಿ. ಅವರ ಜರ್ನಿಯ ಕಿರುನೋಟ ಇಲ್ಲಿದೆ.
Bigg Boss Kannada 15 week Elimination: ಸೀರಿಯಲ್ ಮೂಲಕ ನಟನೆಗೆ ಕಾಲಿಟ್ಟ ನಮ್ರತಾ ಗೌಡ, ಬಿಗ್‌ಬಾಸ್ ವೇದಿಕೆಗೆ ಕಾಲಿಟ್ಟಿದ್ದು ‘ಡೊಂಟ್ ಯು ನೋ… ಐ ಆಮ್ ವೆರಿ ಸೆಕ್ಸಿ’ ಎಂದು ಹಾಡುತ್ತ… ಸೌಂದರ್ಯ, ಆತ್ಮವಿಶ್ವಾಸ ಮತ್ತು ಸ್ಪಷ್ಟತೆಯ ಹದವಾದ ಮಿಶ್ರಣದಂತೆ ಕಾಣಿಸಿದ್ದ ನಮ್ರತಾ ಅವರಿಗೆ ಪ್ರೀಮಿಯರ್ ವೇದಿಕೆಯಲ್ಲಿ 80% ಮತಗಳು ಬಂದಿದ್ದವು. ಹಾಗೆಯೇ ಈ ಸೀಸನ್‌ನ ಮೊದಲ ಸ್ಪರ್ಧಿಯಾಗಿ ಅವರು ಬಿಗ್‌ಬಾಸ್ ಮನೆಯೊಳಗೆ ಕಾಲಿಟ್ಟಿದ್ದರು. ‘ಹ್ಯಾಪಿ ಬಿಗ್‌ಬಾಸ್’ ಎಂಬ ಟ್ಯಾಗ್‌ಲೈನ್ ಅನ್ನು ತಮ್ಮ ವ್ಯಕ್ತಿತ್ವಕ್ಕೂ ನೇತುಹಾಕಿಕೊಂಡಂತಿದ್ದ ನಮ್ರತಾ ಅವರು ಸದಾ ನಗುನಗುತ್ತಲೇ ಎಲ್ಲರ ಗಮನ ಸೆಳೆದಿದ್ದರು.
ಬಿಗ್‌ಬಾಸ್ ಮನೆಯೊಳಗೆ ದಿನಗಳನ್ನು ಕಳೆಯಲಾರಂಭಿಸಿದಂತೆ, ವಿನಯ್, ತುಕಾಲಿ ಸಂತೋಷ್, ಇಶಾನಿ, ಮೈಕಲ್, ಸ್ನೇಹಿತ್, ಗೌರಿಶ್ ಮತ್ತು ಸಿರಿ ಅವರ ಜೊತೆಗೆ ಆಪ್ತರಾಗಿದ್ದರು. ‘ಶಾಡೋ’, ‘ಚಮಚ’ ‘ಇನ್‌ಪ್ಲ್ಯೂಯೆನ್ಸ್ ಆಗುವವರು’ ಪದೇ ಪದೇ ಇಂಥ ಮಾತುಗಳನ್ನು ಕೇಳುತ್ತಲೇ ಬಂದ ನಮ್ರತಾ, ಬಿಗ್‌ಬಾಸ್ ಮನೆಯಲ್ಲಿ ಹದಿನೈದು ವಾರಗಳನ್ನು ಉಳಿದುಕೊಂಡಿರುವುದೇ ಈ ಎಲ್ಲವಕ್ಕೂ ಉತ್ತರದಂತಿತ್ತು.
ಈ ಸೀಸನ್‌ನಲ್ಲಿ ಹಲವು ಏಳುಬೀಳುಗಳನ್ನು ಹಾದು ಅಂತಿಮ ಹಂತಕ್ಕೆ ಒಂದೇ ಹೆಜ್ಜೆ ಉಳಿದಿರುವಾಗ ನಮ್ರತಾ ಮನೆಯಿಂದ ಹೊರಬಿದ್ದಿದ್ದಾರೆ. ಕೊನೆಕೊನೆಯ ದಿನಗಳಲ್ಲಿ ಅವರ ಆಟದ ವೈಖರಿಯನ್ನು ಕಂಡು ಹಿಂದೆ ಜರಿದವರೇ ಅವರನ್ನು ಹೊಗಳಿದ್ದು ಅವರ ಸಾಮರ್ಥ್ಯಕ್ಕೆ ಸಾಕ್ಷಿ. ಅವರ ಜರ್ನಿಯ ಜಿಯೋಸಿನಿಮಾದಲ್ಲಿ ಕಂಡ ಒಂದು ಕಿರುನೋಟ ಇಲ್ಲಿದೆ.
ತನಿಷಾ ಜೊತೆಗೆ ಹೆಚ್ಚು ಕಿತ್ತಾಟ
ಈ ಸೀಸನ್‌ನ ಆರಂಭದ ದಿನಗಳಲ್ಲಿ ನಮ್ರತಾ ವಿನಯ್ ಮತ್ತು ಇಶಾನಿ ಅವರನ್ನು ಸಾಕಷ್ಟು ಹಚ್ಚಿಕೊಂಡಿದ್ದರು. ಅದರಲ್ಲಿಯೂ ವಿನಯ್ ಅವರ ಜೊತೆಗಿನ ಅವರ ಬಾಂಧವ್ಯ ಕೊನೆಯ ದಿನದವರೆಗೂ ಕಿಂಚಿತ್ ಊನಗೊಳ್ಳದೆ ಬೆಳೆದುಕೊಂಡು ಬಂದಿತ್ತು. ಕ್ರಿಕೆಟ್ ಟಾಸ್ಕ್‌ನಲ್ಲಿ ತನಿಷಾ ಜೊತೆಗೆ ನಡೆದ ಮಾತಿನ ಚಕಮಕಿ ನಮ್ರತಾ ಅವರ ವ್ಯಕ್ತಿತ್ವದ ಮತ್ತೊಂದು ಸ್ಟ್ರಾಂಗ್ ಆಯಾಮವನ್ನು ಜನರೆದುರು ತೆರೆದಿಟ್ಟಿತ್ತು. ಹಾಗೆಯೇ ‘ಹಳ್ಳಿಮನೆ’ ಟಾಸ್ಕ್‌ನಲ್ಲಿಯೂ ತನಿಷಾ ಜೊತೆಗೆ ನಮ್ರತಾ ಮಾತಿನ ಚಕಮಕಿ ಜೋರಾಗಿಯೇ ನಡೆದಿತ್ತು. ಈ ಚಕಮಕಿ ಬೆಂಕಿಯಾಗಿ ಹೊತ್ತಿಕೊಂಡು ಮನೆಯ ನೆಮ್ಮದಿಯನ್ನೇ ಕೆಡಿಸಿದ್ದು, ಬಿಗ್‌ಬಾಸ್ ಮನೆಯ ಆಚೆಗೂ ಸಾಕಷ್ಟು ಚರ್ಚೆಗೆ ಒಳಗಾಗಿತ್ತು. ಸಂಗೀತಾ ಮತ್ತು ತನಿಷಾ ಜೊತೆಗೆ ಅಂದು ಹುಟ್ಟಿಕೊಂಡಿದ್ದ ಭಿನ್ನಾಭಿಪ್ರಾಯದ ಕಿಡಿ ಆರಲು ಸಾಕಷ್ಟು ದಿನಗಳನ್ನೇ ತೆಗೆದುಕೊಂಡಿತು. ತನಿಷಾ ಮನೆಯಿಂದ ಹೊರಗೆ ಹೋಗುವ ಹೊತ್ತಿನಲ್ಲಿಯೂ ನಮ್ರತಾ ಅವರನ್ನೇ ನಾಮಿನೇಟ್ ಮಾಡಿದ್ದು ಇದಕ್ಕೊಂದು ಉದಾಹರಣೆ. ಆದರೆ ಸಂಗಿತಾ ಜೊತೆಗಿನ ಅವರ ಹಳಸಿದ್ದ ಸಂಬಂಧ ಕೊನೆದಿನಗಳಲ್ಲಿ ಸರಿಹೋಗಿತ್ತು. ನಮ್ರತಾ ಹಲವು ಸಲ ಕುಗ್ಗಿದಾಗ ಸಂಗೀತಾ ಹೆಗಲೆಣೆಯಾಗಿ ನಿಂತು ಸಂತೈಸಿದ್ದರು.
ಸ್ನೇಹಿತ್ ಜೊತೆಗಿನ ಮಧುರ ಬಾಂಧವ್ಯ
ಈ ಸೀಸನ್‌ನಲ್ಲಿ ನಮ್ರತಾ ನಂತರ ಮನೆಯೊಳಗೆ ಹೊಕ್ಕಿದ್ದು ಸ್ನೇಹಿತ್. ಮನೆಯೊಳಗೆ ಪರಸ್ಪರ ಎಲ್ಲರಿಗಿಂತ ಮೊದಲು ಮೀಟ್ ಆಗಿದ್ದ ಅವರ ನಡುವಿನ ಬಾಂಧವ್ಯ ನಂತರದ ದಿನಗಳಲ್ಲಿಯೂ ಮುಂದುವರಿದಿತ್ತು. ಅದರಲ್ಲಿಯೂ ಸ್ನೇಹಿತ್ ಅವರಂತೂ ಇನ್ನೊಂದು ಹೆಜ್ಜೆ ಮುಂದಕ್ಕೆ ಹೋಗಿ, ‘ನಿಮ್ಮ ಬಗ್ಗೆ ನನಗೆ ಸೀರಿಯಸ್ ಆಗಿ ಒಲವಿದೆ’ ಎಂಬರ್ಥದ ಮಾತುಗಳನ್ನು ಆಡಿಯೂ ಇದ್ದರು. ಸದಾ ಕಾಲ ನಮ್ರತಾ ಹಿಂದೆ ಸುತ್ತುತ್ತ, ಸಮಯ ಸಿಕ್ಕಾಗೆಲ್ಲ ಅವರನ್ನು ಹೊಗಳುತ್ತ, ಅವರಿಗೆ ಸಹಾಯ ಮಾಡುತ್ತ ಕೆಲವೊಮ್ಮೆ ಕಿರಿಕಿರಿಯಾಗುಷ್ಟು ಜೊತೆಗಿದ್ದರು ಸ್ನೇಹಿತ್. ನಮ್ರತಾ ಮಾತ್ರ ಅವರನ್ನು ತಮಾಷೆಯಾಗಿಯೇ ನೋಡುತ್ತ, ಅವರ ಮಾತಿಗೆಲ್ಲ ನಗುನಗುತ್ತಲೇ ಹಾರಿಕೆಯ ಉತ್ತರ ನೀಡುತ್ತಿದ್ದರು.
ತಾವು ಎಲಿಮಿನೇಟ್ ಆಗುವ ವಾರದಲ್ಲಿ ಪಡೆದ ವಿಶೇಷ ಅಧಿಕಾರವನ್ನೂ ಸ್ನೇಹಿತ್, ನಮ್ರತಾ ಅವರನ್ನು ಇಂಪ್ರೆಸ್ ಮಾಡುವ ರೀತಿಯಲ್ಲಿಯೇ ಉಪಯೋಗಿಸಿದ್ದು ಮನೆಯ ಉಳಿದವರ ಅಸಮಧಾನಕ್ಕೂ ಕಾರಣವಾಗಿತ್ತು. ಆದರೆ ಸ್ನೇಹಿತ್ ಎಲಿಮಿನೇಟ್ ಆಗುವ ಸುದ್ದಿ ಕೇಳುತ್ತಿದ್ದ ಹಾಗೆಯೇ ನಮ್ರತಾ ಬಿಕ್ಕಿ ಬಿಕ್ಕಿ ಅತ್ತಿದ್ದರು. ಹೋಗುವಾಗ ‘ಇನ್ನು ಮೇಲೆ ನೀವು ನಿಮಗೊಬ್ಬರಿಗೆ ಮಾತ್ರವಲ್ಲ, ನನ್ನ ಪರವಾಗಿಯೂ ಆಡುತ್ತಿದ್ದೀರಿ. ಆಡಿ ಗೆದ್ದು ಬನ್ನಿ’ ಎಂದು ಹೇಳಿಯೇ ಸ್ನೇಹಿತ್ ಹೊರಗೆ ಹೋಗಿದ್ದರು. ಸ್ನೇಹಿತ್ ಅವರ ನೆನಪಿಗಾಗಿ ಅವರು ಕಾಫಿ ಕುಡಿಯುತ್ತಿದ್ದ ಕಪ್ ಅನ್ನು ನಮ್ರತಾ ಉಳಿಸಿಕೊಂಡಿದ್ದರು. ಅಲ್ಲದೆ, ಮನೆಯಲ್ಲಿದ್ದಾಗ ಅವರ ಜೊತೆಗೆ ನಡೆದುಕೊಂಡು ರೀತಿಯ ಬಗ್ಗೆ ಪಶ್ಚಾತ್ತಾಪದಿಂದ ಮಾತಾಡಿದ್ದರು. ತಾವು ಕ್ಯಾಪ್ಟನ್ ಆದಾಗಲೂ ಅದನ್ನು ಸ್ನೇಹಿತ್ ಅವರಿಗೆ ಅರ್ಪಿಸಿದ್ದರು.
ಪ್ರತಾಪ್ ಜೊತೆ ನಿಂತಿದ್ದ ನಮ್ರತಾ
ಪ್ರತಾಪ್ ಜೊತೆಗಿನ ನಮ್ರತಾ ಬಾಂಧವ್ಯವೂ ವಿಶೇಷವಾದದ್ದು. ಅಷ್ಟೇ ಏರಿಳಿತಗಳುಳ್ಳದ್ದು. ಮೊದಲ ವಾರದಲ್ಲಿ ಪ್ರತಾಪ್ ಮನೆಯ ಸದಸ್ಯರ ಮಾತಿನಿಂದ ಕುಗ್ಗಿ, ಬಾತ್‌ರೂಮಿಗೆ ಹೋಗಿ ಅಳುವಾಗ ಅವರ ಜೊತೆಗೆ ನಿಂತಿದ್ದು ನಮ್ರತಾ. ನಂತರದ ದಿನಗಳಲ್ಲಿಯೂ ನಮ್ರತಾ ಹಲವು ಬಾರಿ ಪ್ರತಾಪ್ ಅವರ ನೋವಿಗೆ ಸಂತೈಸಿದ್ದಾರೆ. ಜೊತೆಗೆ ನಿಂತಿದ್ದಾರೆ. ಪ್ರತಾಪ್ ಅವರಿಗೆ ಡಾನ್ಸ್ ಕಲಿಸಿ, ವೀಕೆಂಡ್‌ನಲ್ಲಿ ಸುದೀಪ್ ಅವರೆದುರು ಪ್ರತಾಪ್ ಡಾನ್ಸ್ ಮಾಡಿ ಮೆಚ್ಚುಗೆ ಗಳಿಸಿದಾಗ ಖುಷಿಪಟ್ಟಿದ್ದರು.
ಆದರೆ ಕೆಲವು ಸಲ ಅವರ ನಡುವೆ ವೈಮನಸ್ಸು ಬಂದಿದ್ದೂ ಇದೆ. ನಾನು ನೋಡಿದ ಪ್ರತಾಪ್ ಇವನಲ್ಲ. ಹಾಗಾಗಿ ನಾನು ಅವನ ಜೊತೆಗೆ ಮೊದಲಿನ ಹಾಗೆ ಇರಲಾರೆ ಎಂದು ನಮ್ರತಾ ಸ್ಪಷ್ಟವಾಗಿ ಹೇಳಿದ್ದೂ ಇದೆ. ಆದರೆ ಕೊನೆಯ ಹಂತದಲ್ಲಿ ಮತ್ತೆ ಅವರಿಬ್ಬರ ಬಾಂಧವ್ಯ ಗಟ್ಟಿಗೊಂಡಿತ್ತು.
ಕೊನೆಗೂ ಕ್ಯಾಪ್ಟನ್ ಆದರು..
ಮನೆಯ ಕ್ಯಾಪ್ಟನ್ ಆಗಬೇಕು ಎಂಬ ನಮ್ರತಾ ಅವರ ಆಸೆ ಹಲವು ಬಾರಿ ನನಸಾಗುವ ಹಂತಕ್ಕೆ ಬಂದು ಛಿದ್ರವಾಗಿದ್ದಿದೆ. ಆಗೆಲ್ಲ ಅವರು ಕೂತು ಅತ್ತಿದ್ದಾರೆ. ‘ನಾನು ಮನೆಯವರ ಫೋಟೊ ನೋಡಬೇಕು. ಹಾಗಾಗಿ ನಾನು ಕ್ಯಾಪ್ಟನ್ ಆಗಬೇಕು’ ಎಂದು ಕೇಳಿಕೊಂಡಿದ್ದಿದೆ. ಕೊನೆಗೂ ಅವರ ಪ್ರಯತ್ನ ಯಶಸ್ವಿಯಾಗಿ ಮನೆಯ ಕ್ಯಾಪ್ಟನ್ ಆದರು. ಯಾರ ಮೇಲೆಯೂ ಅಧಿಕಾರ ಚಲಾಯಿಸದೆ, ಕೂಲ್ ಆಗಿ ಎಲ್ಲರನ್ನೂ, ಎಲ್ಲವನ್ನೂ ಹ್ಯಾಂಡಲ್ ಮಾಡಿದ್ದು ಅವರ ಕ್ಯಾಪ್ಟನ್ಸಿಯ ವಿಶೇಷ. ಅವರು ಕ್ಯಾಪ್ಟನ್ ಆಗಿದ್ದಾಗಲೇ ಮನೆಯ ಸದಸ್ಯರ ಕುಟುಂಬದವರು ಬಂದು ಹೋಗಿದ್ದೂ ಒಂದು ಸ್ಮರಣೀಯ ನೆನಪು.
ಕಾರ್ತಿಕ್ ಜೊತೆಗಿನ ಸಿಹಿ-ಕಹಿ ಒಡನಾಟ
ಸ್ನೇಹಿತ್ ಮನೆಯಿಂದ ಹೊರಹೋದ ಮೇಲೆ ಅವಿನಾಶ್ ಶೆಟ್ಟಿ, ನಮ್ರತಾ ಜೊತೆಗೆ ತುಸು ಸಲಿಗೆಯಿಂದಿರಲು, ಅವರ ಮೆಚ್ಚುಗೆ ಗಳಿಸಿಕೊಳ್ಳಲು ಯತ್ನಿಸಿದ್ದಿದೆ. ಆದರೆ ನಮ್ರತಾ ಅವಿನಾಶ್ ಕಡೆಗೆ ಗಮನವನ್ನೇ ಹರಿಸಿರಲಿಲ್ಲ. ಆದರೆ ಕೊನೆಯ ಕೆಲವು ವಾರಗಳಲ್ಲಿ ನಮ್ರತಾ ಮತ್ತು ಕಾರ್ತಿಕ್ ನಡುವಿನ ಸಂಬಂಧ ಸಾಕಷ್ಟು ಚರ್ಚೆಗೆ ಒಳಗಾಗಿತ್ತು.
ಕಾರ್ತಿಕ್, ನಮ್ರತಾ ಜೊತೆಗೆ ಫ್ಲರ್ಟ್ ಮಾಡುವಂತೆ ನಡೆದುಕೊಳ್ಳುತ್ತಿದ್ದದ್ದು, ನಮ್ರತಾ ಅದನ್ನು ಸೀರಿಯಸ್ ಆಗಿ ತೆಗೆದುಕೊಂಡಂತೆ ನಟಿಸುತ್ತಿದ್ದದ್ದು ಮನರಂಜನೆಯ ದೃಷ್ಟಿಯಿಂದ ಸಾಕಷ್ಟು ಮಜ ಕೊಟ್ಟಿದ್ದಂತೂ ನಿಜ. ‘ಕಾರ್ತಿಕ್ ನನ್ನ ಕೈ ಹಿಡಿದುಕೊಳ್ಳುವುದು ಕೆಟ್ಟ ಉದ್ದೇಶದಿಂದ ಎಂದು ನನಗೆ ಖಂಡಿತ ಅನಿಸುವುದಿಲ್ಲ. ಅವರು ಹಾಗೆ ಹಿಡಿದುಕೊಂಡಾಗ ನನಗೆ ಕಂಫರ್ಟ್ ಫೀಲ್ ಆಗಿದೆ’ ಎಂದೇ ನಮ್ರತಾ ಹಲವು ಸಲ ನೇರವಾಗಿ ಹೇಳಿದ್ದಾರೆ.
ಆದರೆ ಈ ಸಂಬಂಧಕ್ಕೆ ಬೇರೆಯದೇ ಆಯಾಮ ದೊರೆತಿದ್ದು ಈ ಸೀಸನ್‌ನ ಹಳೆಯ ಸ್ಪರ್ಧಿಗಳೂ ಮನೆಯೊಳಗೆ ಬಂದಾಗ. ಅದರಲ್ಲಿಯೂ ವಿಶೇಷವಾಗಿ ಸ್ನೇಹಿತ್ ಅವರು ಈ ಸಂಬಂಧಕ್ಕೆ ಬಳಿದ ಬಣ್ಣ, ಕೆಸರು ಎರೆಚುವ ಪ್ರಯತ್ನದಂತೆ ಕಂಡಿದ್ದು ಸುಳ್ಳಲ್ಲ. ಹೊರಗೇನೋ ಬಹಳ ಚರ್ಚೆ ನಡೆಯುತ್ತಿದೆ. ‘ಅಗ್ಲಿ’ಯಾಗಿ ಕಾಣಿಸುತ್ತಿದೆ ಎಂದು ಅವರು ಹೇಳಿದ ಮಾತು ನಮ್ರತಾ ಅವರನ್ನಷ್ಟೇ ಅಲ್ಲ, ಕಾರ್ತಿಕ್ ಅವರನ್ನೂ ದಿಕ್ಕೆಡಿಸಿತ್ತು. ಆದರೆ ವೀಕೆಂಡ್ ಎಪಿಸೋಡಿನಲ್ಲಿ ಸುದೀಪ್ ಅವರು ಸ್ನೇಹಿತ್ ಅವರನ್ನುಈ ವಿಷಯಕ್ಕೆ ತರಾಟೆ ತೆಗೆದುಕೊಂಡಿದ್ದಲ್ಲದೆ,ನಮ್ರತಾ ಕಾರ್ತಿಕ್ ಅವರಿಗೆ ಸಮಾಧಾನವನ್ನೂ ಮಾಡಿದ್ದರು. ತಾವು ಅತಿಯಾಗಿನೆಚ್ಚಿಕೊಂಡಿದ್ದ ಸ್ನೇಹಿತ್ ಅವರ ಬಗ್ಗೆಯೇ ನಮ್ರತಾ, ‘ಅವರ ಹೆಸರು ತೆಗೆದುಕೊಳ್ಳುವಷ್ಟು ಯೋಗ್ಯ ವ್ಯಕ್ತಿ ಅವರಲ್ಲ. ಅವರ ಬಗ್ಗೆ ಮಾತಾಡುವುದು ಟೈಮ್ ವೇಷ್ಟ್’ ಎಂದು ಪರೋಕ್ಷವಾಗಿ ಹೇಳುವಷ್ಟು ಹಳಸಿದ್ದು ಸಂಬಂಧಗಳ ಬಗ್ಗೆ ಹೊಸ ಪಾಠವನ್ನೇ ಹೇಳುವಂತಿತ್ತು.
ಸತತ ಹದಿನೈದು ವಾರಗಳ ಕಾಲ ಮನೆಯೊಳಗೆ ನಮ್ರತಾ ಆಡಿದ ಆಟ, ನಡೆದುಕೊಂಡ ರೀತಿ ಅವರಿಗೆ ಹಲವು ಅಭಿಮಾನಿಗಳನ್ನು ದೊರಕಿಸಿಕೊಟ್ಟಿರುವುದಂತೂ ನಿಜ. ಉತ್ತಮ, ಕ್ಯಾಪ್ಟನ್ಸಿ, ಟಾಸ್ಕ್ಗಳಲ್ಲಿ ಅತ್ಯುತ್ತಮ ಪರ್ಫಾರ್ಮೆನ್ಸ್ ಹೀಗೆ ಅವರು ನೆನಪುಳಿಯುವಂತ ಹಲವು ಗಳಿಗೆಗಳನ್ನು ಈ ಸೀಸನ್‌ಗೆ ಕೊಟ್ಟಿದ್ದಾರೆ. ಮನೆಯೊಳಗಿಂದ ಬದುಕಿನಲ್ಲಿ ಮರೆಯಾಗದಂಥ ಹಲವು ಸಂಬಂಧಗಳನ್ನು, ನೆನಪುಗಳನ್ನು ಹೊತ್ತೊಯ್ದಿದ್ದಾರೆ. ಅವರ ಅದ್ಭುತ ಪಯಣವನ್ನು ಜಿಯೊ ಸಿನಿಮಾದಲ್ಲಿ ಉಚಿತವಾಗಿ ವೀಕ್ಷಿಸಬಹುದು.