BBK 10: ‘ಮಾನಸಿಕ ಹಿಂಸೆ ನೀಡಬೇಡಿ’ ಎನ್ನುತ್ತಲೇ ಶುಭ ಸುದ್ದಿ ಕೊಟ್ಟ ರಕ್ಷಕ್ ಬುಲೆಟ್; ‘ಸೋತಿರಬಹುದು ಸತ್ತಿಲ್ಲ’ ನೆಟ್ಟಿಗರಿಂದಲೂ ಬೆಂಬಲ
ಬುಲೆಟ್ ಪ್ರಕಾಶ್ ಪುತ್ರ ರಕ್ಷಕ್ ಬುಲೆಟ್ ಬಿಗ್‌ಬಾಸ್ ಕನ್ನಡ ಸೀಸನ್ 10ರಿಂದ ಹೊರಬಂದ ಬಳಿಕ ಹಲವು ಹೇಳಿಕೆಗಳಿಂದ ಸುದ್ದಿಯಲ್ಲಿದ್ದಾರೆ. ಇದೆಲ್ಲದರ ಬಗ್ಗೆ ಬೇಸರದಲ್ಲಿಯೇ ಹೊಸ ಪೋಸ್ಟ್ ಹಂಚಿಕೊಂಡು, ಮಾನಸಿಕ ಹಿಂಸೆ ಬಗ್ಗೆ ಮಾತನಾಡಿ, ಕ್ಷಮೆಯಾಚಿಸಿದ್ದಾರೆ.
BBK 10: ಸೋಷಿಯಲ್ ಮೀಡಿಯಾದಲ್ಲಿ ಒಳ್ಳೆಯ ವಿಚಾರಕ್ಕಿಂತ ತಮ್ಮ ಆಟಿಟ್ಯೂಡ್ ಮೂಲಕವೇ ಸದಾ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಲ್ಲಿರುತ್ತಾರೆ ಬುಲೆಟ್ ಪ್ರಕಾಶ್ ಪುತ್ರ ರಕ್ಷಕ್ ಬುಲೆಟ್. ಬಿಗ್‌ಬಾಸ್‌ಗೆ ಹೋಗಿ ಬಂದ ಮೇಲಂತೂ ಅವರ ಬಗ್ಗೆ ಇನ್ನಷ್ಟು ನೆಗೆಟಿವ್ ವಿಚಾರಗಳೇ ಜಾಲತಾಣಗಳಲ್ಲಿ ಮುನ್ನೆಲೆಗೆ ಬರುತ್ತಿವೆ. ಅವರು ಆಡುವ ಮಾತುಗಳು ನೆಗೆಟಿವ್ ಪರಿಣಾಮ ಬೀರುತ್ತಿವೆ. ಇತ್ತೀಚೆಗಷ್ಟೇ ಕಿಚ್ಚ ಸುದೀಪ್ ಬಗ್ಗೆಯೂ ಸಂದರ್ಶನದಲ್ಲಿ ಆಡಿದ ಮಾತು ಬೇರೆ ರೀತಿಯಲ್ಲಿಯೇ ನೋಡುಗರನ್ನು ತಲುಪಿತ್ತು. ಇದೆಲ್ಲದರಿಂದ ಬೇಸತ್ತು ಕ್ಷಮೆ ಕೋರಿದ್ದಾರೆ ರಕ್ಷಕ್.
ನಾನು ಬಿಗ್‌ಬಾಸ್‌ಗೆ ಬಂದಿದ್ದೇ ನೇಮು ಫೇಮು ಗಿಟ್ಟಿಸಿಕೊಳ್ಳಲು ಎಂದು ಹೇಳಿ ಬಿಗ್ ಮನೆ ಪ್ರವೇಶಿಸಿದ್ದ ಬುಲೆಟ್, ಒಂದೇ ತಿಂಗಳ ಬಳಿಕ ಮನೆಯಿಂದ ಎಲಿಮಿನೇಟ್ ಆಗಿ ಹೊರಬಂದಿದ್ದರು. ಮನೆಯಲ್ಲಿ ಇದ್ದಷ್ಟು ದಿನ ಡ್ರೋಣ್ ಪ್ರತಾಪ್ ಅವರನ್ನು ಟೀಕಿಸಿದ್ದ ರಕ್ಷಕ್, ಗೂಬೆ ಎಂದೂ ಅವರನ್ನು ಸಂಬೋಧಿಸಿ ವ್ಯಾಪಕ ವಿರೋಧಕ್ಕೂ ಕಾರಣರಾಗಿದ್ದರು. ಮನೆಯಿಂದ ಹೊರ ಬಂದ ಬಳಿಕವೂ ಅದು ಮುಂದುವರಿದಿತ್ತು. ಈಗ ಸುದೀರ್ಘ ಬರಹದ ಮೂಲಕ ಎಲ್ಲರಲ್ಲೂ ಕ್ಷಮೆಯಾಚಿಸಿದ್ದಾರೆ. ಪತ್ರದಲ್ಲಿ ರಕ್ಷಕ್ ಹೀಗೆ ಹೇಳಿಕೊಂಡಿದ್ದಾರೆ.
ರಕ್ಷಕ್ ಬರೆದ ಪತ್ರದಲ್ಲೇನಿದೆ?
ಅಪ್ಪನ ಗುಣ ನನಗೂ ಬಂದಿದೆ ಎಂದ ರಕ್ಷಕ್, "ನಾನು ನಟ ಬುಲೆಟ್ ಪ್ರಕಾಶ್ ಅವರ ಮಗ. ನನ್ನ ತಂದೆ ಸುಮಾರು 350ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಇಡೀ ರಾಜ್ಯದ ಜನತೆ ಅವರನ್ನು ಹರಸಿ ಹಾರೈಸಿ ಅತ್ಯಂತ ಉನ್ನತ ಸ್ಥಾನಕ್ಕೆ ಬೆಳೆಸಿದ್ದಾರೆ. ಅವನ ಮಗನಾಗಿ ಜನಿಸಿರುವುದು ನನ್ನ ಜನ್ಮ ಜನ್ಮದ ಸುಕೃತ. ಇಂದು ಅವರು ನಮ್ಮೊಂದಿಗೆ ಇಲ್ಲದಿದ್ದರೂ. ನನಗೆ ನನ್ನ ತಂದೆ ಇಲ್ಲೇ ನನ್ನ ಜತೆಗೆ ಇದ್ದಾರೆಂದು ಈಗಲೂ ಅನಿಸುತ್ತದೆ. ಅವರಿದ್ದಾಗ ಎಂದೂ ಅವರನ್ನು ಬಿಟ್ಟು ನಾನು ಇರುತ್ತಿರಲಿಲ್ಲ. ಹಾಗಾಗಿ ಅವರಲ್ಲಿನ ನೇರ ನುಡಿಯ ಗುಣ ನನಗೂ ಬಂದಿದೆ. ಕರ್ನಾಟಕದ ಜನತೆ ನನ್ನ ತಂದೆ ಬುಲೆಟ್ ಪ್ರಕಾಶ್‌ಗೆ ಕೊಟ್ಟಿರುವ ಪ್ರೀತಿಯನ್ನು ನನಗೂ ಕೊಟ್ಟಿದ್ದಾರೆ. ಇದಕ್ಕೆ ನಾನು ಚಿರಋಣಿ ಎಂದಿದ್ದಾರೆ.
ಮಾನಸಿಕ ಹಿಂಸೆ ಬಗ್ಗೆಯೂ ಮಾತನಾಡಿರುವ ರಕ್ಷಕ್, ಇತ್ತೀಚಿನ ದಿನಗಳಲ್ಲಿ ನನ್ನ ಹೇಳಿಕೆಗಳನ್ನು. ತಿರುಚಿ ಸಾಮಾಜಿಕ ಜಾಲತಾಣಗಳಲ್ಲಿ ಬಿಡುತ್ತಿದ್ದಾರೆ. ಹಾಗೆ ಮಾಡಿದ್ದರಿಂದ ನನಗೆ ಕೆಲವೊಮ್ಮೆ ಮಾನಸಿಕವಾಗಿ ಹಿಂಸೆಯಾಗುತ್ತಿದೆ. ನಾನು ಯಾರ ಭಾವನೆಗೂ ಧಕ್ಕೆ ತರುವ ಹೇಳಿಕೆಗಳನ್ನಾಗಲಿ ನೀಡಿಲ್ಲ. ಯಾರ ಮನಸ್ಸಿಗೆ ನೋವಾಗುವಂಥ ಹೇಳಿಕೆಗಳನ್ನಾಗಲಿ ನೀಡುವುದನ್ನು ಅಭ್ಯಾಸ ಸಹ ಮಾಡಿಕೊಂಡಿಲ್ಲ. ಎಲ್ಲೆ ಹೋದರು ರಾಜ್ಯದ ಜನ ನನ್ನನ್ನು ಗುರುತಿಸಿ ಪ್ರೀತಿಸುತ್ತಾರೆ ಎಂದು ಪತ್ರದಲ್ಲಿ ಬರೆದುಕೊಂಡಿದ್ದಾರೆ.
ಈಗಾಗಲೇ ಗುರುಶಿಷ್ಯರು ಸಿನಿಮಾದಲ್ಲಿ ಸಣ್ಣ ಪಾತ್ರದಲ್ಲಿ ನಟಿಸಿರುವ ರಕ್ಷಕ್, ಹೊಸ ಸಿನಿಮಾಗಳ ಅವಕಾಶಗಳನ್ನೂ ಪಡೆಯುತ್ತಿದ್ದಾರೆ. ಆ ಬಗ್ಗೆ ಹೇಳುವ ರಕ್ಷಕ್, ಇದೀಗ ಒಂದು ಶುಭ ಸುದ್ದಿಯೆಂದರೆ ಇತ್ತೀಚಿನ ದಿನಗಳಲ್ಲಿ ಕೆಲವೊಂದು ಚಿತ್ರಗಳಲ್ಲಿ ನಟಿಸುವ ಅವಕಾಶ ಒದಗಿ ಬಂದಿದೆ. ಈಗಾಗಲೇ ಅದೇ ಕೆಲಸಗಳಲ್ಲಿ ಬಿಜಿಯಾಗಿದ್ದೇನೆ. ಮುಂದಿನ ದಿನಗಳಲ್ಲಿ ನನ್ನ ಪರಿಶ್ರಮದಿಂದ ಚಿತ್ರಗಳ ಮೂಲಕ ರಂಜಿಸಿ ನಿಮ್ಮ ಮನಸ್ಸಿನಲ್ಲಿ ಮನೆ ಮಾಡುತ್ತೇನೆ. ಎಲ್ಲ ಚಿತ್ರರಂಗದ ಹಿರಿಯರು, ನಮ್ಮ ಮಾರ್ಗದರ್ಶಕರು, ಟ್ರೋಲರ್ಸ್, ಬ್ಲಾಗರ್ಸ್, ಯೂಟ್ಯೂಬರ್‌ಗಳು ನನಗೆ ಸಹಕಾರ ನೀಡಿದ್ದಾರೆ. ಆ ಬೆಂಬಲ ಮುಂದೆಯೂ ಹೀಗೆ ಇರಲಿ. ಆದಷ್ಟು ಬೇಗ ಹೊಸ ಬದಲಾವಣೆಗಳೊಂದಿಗೆ ಹೊಸ ರೀತಿಯಲ್ಲಿ ನಿಮ್ಮ ಮುಂದೆ ಬರಲಿದ್ದೇನೆ. ಹರಸಿ ಹಾರೈಸಿ ಎಂದಿದ್ದಾರೆ ರಕ್ಷಕ್ ಬುಲೆಟ್.
ನೆಟ್ಟಿಗರಿಂದ ಬೆಂಬಲ
ಇತ್ತ ರಕ್ಷಕ್ ಬುಲೆಟ್ ಪೋಸ್ಟ್‌ಗೆ ನೂರಾರು ಕಾಮೆಂಟ್‌ಗಳು ಹರಿದು ಬಂದಿವೆ. ಆ ಪೈಕಿ ಬಹುತೇಕರು ಬುದ್ಧಿ ಮಾತನ್ನೇ ಹೇಳಿದ್ದಾರೆ. ಮಾತಿನ ಮೇಲೆ ಹಿಡಿತ ಇರಲಿ ರಕ್ಷಕ್. ಒಳ್ಳೆದಾಗಲಿ ಇನ್ನು ಮುಂದೆ ಯಾರಿಗೂ ಏನು ಮಾತಾಡಬೇಡ. ನಿಮ್ಮ ತಂದೆ ಹೆಸರು ಉಳಿಸಿ. ವಯಸ್ಸಿಗೆ ತಕ್ಕಂತೆ ಮಾತನಾಡಿ ಬ್ರದರ್, ಜಗತ್ತನ್ನೇ ಗಲ್ತೀಯಾ. ಇವತ್ತು ಸೋತಿರಬಹುದು, ಸತ್ತಿಲ್ಲ. ಮುಂದೆ ಒಳ್ಳೆಯ ಫ್ಯೂಚರ್ ಇದೆ, ಒಳ್ಳೆಯದನ್ನೇ ಮಾತನಾಡಿ ಎಂದು ಕಾಮೆಂಟ್ ಹಾಕಿದ್ದಾರೆ.