BBK 10: ‘ಆಕೆಯ ವಿಷ್ಯಕ್ಕೆ ಬಂದ್ರೆ ಪರಿಣಾಮ ನೆಟ್ಟಗಿರೋಲ್ಲ!’ ಸಂಗೀತಾ ಶೃಂಗೇರಿ ಕುಟುಂಬದಿಂದ ಬಂತು ಎಚ್ಚರಿಕೆ ಸಂದೇಶ
ಸಂಗೀತಾ ಶೃಂಗೇರಿ ಹೆಸರಿನಲ್ಲಿ ಫೇಕ್ ಇನ್‌ಸ್ಟಾಗ್ರಂ ಅಕೌಂಟ್ ಸೃಷ್ಟಿ ಮಾಡಿ, ಬಿಗ್ ಮನೆಯ ಇತರೆ ಸ್ಪರ್ಧಿಗಳ ವಿರುದ್ಧ ಕಾಮೆಂಟ್ ಮಾಡಲಾಗುತ್ತಿದೆ. ಈ ಬಗ್ಗೆ ಸಂಗೀತಾ ಕುಟುಂಬದಿಂದ ಎಚ್ಚರಿಕೆಯ ಸಂದೇಶ ರವಾನೆಯಾಗಿದೆ.
BBK 10: ಬಿಗ್ ಬಾಸ್ ಕನ್ನಡ ಸೀಸನ್ 10 ಭರ್ಜರಿ 75 ದಿನಗಳನ್ನು ಪೂರೈಸಿದೆ. ಫಿನಾಲೆಗೆ ಹೆಚ್ಚೆಂದರೆ ಇನ್ನೊಂದು ತಿಂಗಳಷ್ಟೇ ಬಾಕಿ ಉಳಿದಿದೆ. ಮೊದಲಿಗಿಂತ ಬಿಗ್ ಬಾಸ್ ಮನೆ ಬೇರೆಯದ್ದೇ ಸ್ವರೂಪ ಪಡೆದುಕೊಂಡಿದೆ. ಸ್ವರ್ಧಿಗಳ ನಡುವೆ ಮುನಿಸಿನ ಕಿಡಿ ಹೊತ್ತಿಕೊಂಡಿದೆ. ಮೊದಲೆಲ್ಲ ಚೆನ್ನಾಗಿದ್ದವರು, ಈಗ ಮುಖ ಸಿಂಡರಿಸಿಕೊಂಡಿದ್ದಾರೆ. ಇತ್ತ ಸೋಷಿಯಲ್ ಮೀಡಿಯಾದಲ್ಲಿ ಸ್ಪರ್ಧಿಗಳ ಪರ ವಿರೋಧ ಚರ್ಚೆ ನಡೆಯುತ್ತಲೇ ಇರುತ್ತದೆ. ತಮ್ಮಿಷ್ಟದ ಸ್ಪರ್ಧಿಯ ಹೆಸರಿನ ಫ್ಯಾನ್ ಪೇಜ್ ಮಾಡಿಕೊಂಡು ಕಾಮೆಂಟ್ ಹಾಕುವ ಕೈಂಕರ್ಯವೂ ನಡೆಯುತ್ತಿದೆ.
ಇದೀಗ ಫ್ಯಾನ್ ಪೇಜ್‌ಗಳ ಬಗ್ಗೆ ಸಂಗೀತಾ ಶೃಂಗೇರಿ ಕುಟುಂಬ ಕೊಂಚ ರೊಚ್ಚಿಗೆದ್ದಿದೆ. ಸೋಷಿಯಲ್ ಮೀಡಿಯಾದಲ್ಲಿ ಬೇರೆಯ ಸ್ಪರ್ಧಿಗಳಿಗೆ ಮನಬಂದಂತೆ ಸಂಗೀತಾ ಶೃಂಗೇರಿ ಹೆಸರಿನ ಫ್ಯಾನ್ ಪೇಜ್ ಅಡ್ಮಿನ್‌ಗಳು ಕಾಮೆಂಟ್ ಹಾಕುತ್ತಿದ್ದಾರೆ. ಇದು ಸಂಗೀತಾ ಕುಟುಂಬದ ಗಮನಕ್ಕೂ ಬಂದಿದ್ದು, ಎಚ್ಚರಿಕೆಯ ಸಂದೇಶವನ್ನೇ ರವಾನಿಸಿದ್ದಾರೆ. ಸಂಗೀತಾ ಅವರ ಇನ್‌ಸ್ಟಾಗ್ರಾಂ ಪುಟವನ್ನು ಹ್ಯಾಂಡಲ್ ಮಾಡುತ್ತಿರುವ ಅತ್ತಿಗೆ ಸುಚಿತ್ರಾ ಸ್ಟೋರಿಯೊಂದನ್ನು ಪೋಸ್ಟ್ ಮಾಡಿದ್ದಾರೆ. ನಾವು ಸುಮ್ಮನಿದ್ದೇವೆ ಎಂದು ಅಲಕ್ಷಿಸಿದರೆ ಪರಿಣಾಮ ಸರಿಯಾಗಿರೋದಿಲ್ಲ ಎಂದು ವಾರ್ನಿಂಗ್ ಮಾಡಿದ್ದಾರೆ.
ಪರಿಣಾಮ ನೆಟ್ಟಗಿರೋದಿಲ್ಲ..
"ಸಂಗೀತಾಳ ಅಭಿಮಾನಿಗಳು ಎನ್ನುವ ಸೋಗಿನಲ್ಲಿ ಅವಳ ಹೆಸರಿನಲ್ಲಿ ಫೇಕ್ ಅಕೌಂಟ್ಸ್ ಸೃಷ್ಟಿ ಮಾಡಿ, ಅನ್ಯ ಸ್ಪರ್ಧಿಗಳ ಮೇಲೆ ಸುಳ್ಳು ಪ್ರಚಾರಗಳನ್ನು ಮಾಡುತ್ತ, ಸಂಗೀತಾತಾ ಹೆಸರನ್ನು ಎಳೆಯುತ್ತಾ ಸುಮ್ಮ ಸುಮ್ಮನೆ ನಿಮ್ಮ ಕಪಿ ಆಟಗಳ ಮೂಲಕ ತೊಂದರೆ ಕೊಡುವುದನ್ನು ನಿಲ್ಲಿಸಿ. ಸಂಗೀತಾಳ ಕುಟುಂಬವಾಗಿ ನಾವು ಯಾವ ಅಭ್ಯರ್ಥಿಯ ಮೇಲು ಯಾವುದೇ ಆರೋಪವನ್ನು ಅಥವಾ ಅಪಪ್ರಚಾರವನ್ನು ಮಾಡಿರುವುದಿಲ್ಲ, ಮಾಡುವುದೂ ಇಲ್ಲ. ನಾವು ಸುಮ್ಮನಿದ್ದೇವೆ ಎಂದು ಅಲಕ್ಷಿಸಿದರೆ ಪರಿಣಾಮ ಸರಿಯಾಗಿರೋದಿಲ್ಲ"
ಮುಂದುವರಿದ ಸಂಗೀತಾ- ವಿನಯ್ ಕಿತ್ತಾಟ
ಬಿಗ್ ಬಾಸ್ ಮನೆಯಲ್ಲಿ ಆರಂಭದಿಂದಲೂ ಸಂಗೀತಾ ಮತ್ತು ವಿನಯ್ ಗೌಡ ನಡುವೆ ಒಂದಲ್ಲ ಒಂದು ಕಾರಣಕ್ಕೆ ಕಿತ್ತಾಟ ನಡೆಯುತ್ತಲೇ ಬಂದಿದೆ. ವಿಕೋಪಕ್ಕೆ ಹೋದ ಉದಾಹರಣೆಗಳೂ ಸಾಕಷ್ಟಿವೆ. ಸಣ್ಣ ಪುಟ್ಟ ವಿಚಾರಕ್ಕೂ ಇವರಿಬ್ಬರೂ ಜಗಳವಾಡಿದ್ದಾರೆ. ಸೇರಿಗೆ ಸವಾ ಸೇರು ಎಂಬಂತೆ ಇಬ್ಬರ ನಡುವಿನ ಜಟಾಪಟಿಗಳಿಗೆ ಇಡೀ ಬಿಗ್ ಮನೆ ಸಾಕ್ಷಿಯಾಗಿದೆ. ಇದೀಗ 75 ದಿನಗಳು ಕಳೆದರೂ, ಆ ಹುಸಿ ಮುನಿಸು ಇಂದಿಗೂ ಮುಂದುವರಿದಿದೆ. ಆರಂಭದಿಂದ ಚೆನ್ನಾಗಿಯೇ ಇದ್ದ ಕಾರ್ತಿಕ್ ಮತ್ತು ಸಂಗೀತಾ ನಡುವೆ ಮೊದಲಿನ ಸ್ನೇಹವೂ ಇದೀಗ ಉಳಿದಿಲ್ಲ.
ಎಲ್ಲರೊಂದಿಗೂ ನಡೆಯುತ್ತಿದೆ ಸಂಗೀತಾ ಜಗಳ
ಬರೀ ವಿನಯ್ ಜತೆಗೆ ಮಾತ್ರವಲ್ಲ, ಮನೆ ಮಂದಿಯ ಎಲ್ಲರ ಜತೆಗೂ ಸಂಗೀತಾ ಕಿತ್ತಾಟ ಮಾಡಿಕೊಂಡಿದ್ದಾರೆ. ಕಾರ್ತಿಕ್ ಜತೆಗೂ ಸಂಗೀತಾ ಜಗಳವಾಡಿದ್ದಾರೆ. ನಮ್ರತಾ ಸಂಗೀತಾ ನಡುವೆಯೂ ವಾಗ್ವಾದಗಳು ನಡೆದಿವೆ. ತನಿಷಾ- ಸಂಗೀತಾ, ತುಕಾಲಿ ಸಂತೋಷ್- ಸಂಗೀತಾ, ಮೈಕಲ್ ಅಜಯ್- ಸಂಗೀತಾ ಹೀಗೆ ಎಲ್ಲರೊಂದಿಗೂ ಕಿತ್ತಾಡಿಕೊಂಡಿದ್ದಾರೆ. ನೆಗೆಟಿವಿಟಿಯ ಕೇಂದ್ರ ಬಿಂದು, ನೆಗೆಟಿವಿಟಿಯ ಬೇರು ಎಂದೆಲ್ಲ ಮನೆಯವರಿಂದ ಬ್ಯಾಡ್ ಕಾಮೆಂಟ್‌ಗಳನ್ನೂ ಪಡೆದುಕೊಂಡಿದ್ದಾರೆ ಸಂಗೀತಾ.