BBK 10: ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಹಳ್ಳಿಕಾರ್, ವಿನಯ್ ಕಳ್ಳಾಟ! ಶಾಶ್ವತವಾಗಿ ಕ್ಯಾಪ್ಟನ್ ಕೋಣೆಗೆ ಬೀಗ ಜಡಿದ ಬಿಗ್ ಬಾಸ್
ಬಿಗ್‌ಬಾಸ್ ಮನೆಯಲ್ಲಿ ಜಗಳ, ಕಿತ್ತಾಟದ ನಡುವೆ ಮೋಸದಾಟವೂ ನಡೆದಿದೆ. ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ವಿನಯ್ ಗೌಡ ಮತ್ತು ವರ್ತೂರು ಸಂತೋಷ್ ಕಳ್ಳಾಟ ಆಡಿ ಸಿಕ್ಕಿಬಿದ್ದಿದ್ದಾರೆ.
- - ಬಿಗ್‌ಬಾಸ್‌ನಲ್ಲಿ ಕಳ್ಳಾಟ ಆಡಿದ ವಿನಯ್, ವರ್ತೂರು ಸಂತೋಷ್
- - ವಿನಯ್ ಮೋಸದಾಟಕ್ಕೆ ಬೆಲೆತೆತ್ತ ಬಿಗ್‌ಬಾಸ್ ಮನೆ ಮಂದಿ
- - ಶಾಶ್ವತವಾಗಿ ಬಿಗ್‌ಬಾಸ್ ಕ್ಯಾಪ್ಟನ್ ಕೋಣೆಗೆ ಬೀಗ ಜಡಿದ ಬಿಗ್ ಬಾಸ್
BBK 10: ಬಿಗ್‌ಬಾಸ್ ಕನ್ನಡ ಸೀಸನ್ 10 ಈ ಸಲ ಸಾಕಷ್ಟು ಸುದ್ದಿಯಲ್ಲಿದೆ. ಹೊಡೆದಾಟ, ಬಡಿದಾಟಗಳ ನಡುವೆ ಇದೀಗ ಮೋಸದಾಟವೂ ಇದೀಗ ಎಲ್ಲರ ಗಮನಕ್ಕೆ ಬಂದಿದೆ. ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ನಡೆದ ಕಳ್ಳಾಟವನ್ನು ಕಿಚ್ಚ ಸುದೀಪ್ ಎಲ್ಲರ ಮುಂದೆಯೇ ಬಹಿರಂಗ ಮಾಡಿ, ಇಬ್ಬರು ಕಳ್ಳರನ್ನು ಪತ್ತೆ ಮಾಡಿದ್ದಾರೆ. ಅಷ್ಟೇ ಅಲ್ಲ ಇನ್ಮೇಲೆ ಬಿಗ್ ಬಾಸ್‌ನಲ್ಲಿ ಕ್ಯಾಪ್ಟನ್ ಆಯ್ಕೆ ಇರಲ್ಲ ಎಂದು ಹೇಳಿ, ಕ್ಯಾಪ್ಟನ್ ಕೋಣೆಗೆ ಶಾಶ್ವತವಾಗಿ ಬೀಗ ಹಾಕಿಸಿದ್ದಾರೆ.
ಹೌದು, ಶುಕ್ರವಾರ ಒಂಭತ್ತನೇ ವಾರದ ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಅಂತಿಮ ಘಟ್ಟಕ್ಕೆ ಮೂವರು ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದರು. ಆ ಪೈಕಿ ಸಿರಿ, ವರ್ತೂರು ಸಂತೋಷ್, ಅವಿನಾಶ್ ಶೆಟ್ಟಿ ಮತ್ತು ಮೈಕಲ್. ಈ ನಾಲ್ವರ ಪೈಕಿ ವರ್ತೂರು ಸಂತೋಷ್, ನಿಮಿಷಗಳನ್ನು ಎಣಿಸೋ ಟಾಸ್ಕ್‌ನಲ್ಲಿ ವಿನ್ ಆಗಿ, ಮನೆಯ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದರು. ವರ್ತೂರು ಕ್ಯಾಪ್ಟನ್ ಆಗುತ್ತಿದ್ದಂತೆ, ವಿನಯ್ ಮೊಗದಲ್ಲಿ ಗೆದ್ದ ನಗೆ ಕಾಣಿಸಿತ್ತು. ಆದರೆ, ಆ ಆಟದಲ್ಲಿ ವರ್ತೂರು ಕಳ್ಳಾಟವಾಡಿದ್ದರು. ಅದಕ್ಕೆ ಸಾಥ್ ನೀಡಿದವರು ವಿನಯ್.
ಸುತ್ತ ಕ್ಯಾಮರಾಗಳಿದ್ದರೂ, ವಿನಯ್ ಮತ್ತು ವರ್ತೂರು ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡು ಮೋಸದಾಟ ಆಡಿದ್ದಾರೆ. ಈ ಮೋಸದಾಟದಲ್ಲಿ ಕ್ಯಾಪ್ಟನ್ ಆಗಿದ್ದ ಸಂತೋಷ್ ಅವರನ್ನು ಕ್ಯಾಪ್ಟನ್ ಪಟ್ಟದಿಂದಲೇ ವಜಾಗೊಳಿಸಲಾಗಿದೆ. ಅಷ್ಟೇ ಅಲ್ಲ ಕ್ಯಾಪ್ಟನ್‌ಗೆ ನೀಡಲಾಗುತ್ತಿದ್ದ ಎಲ್ಲ ಸೌಲಭ್ಯಗಳನ್ನು ಹಿಂಪಡೆಯಲಾಗಿದೆ. ಈ ಕೂಡಲೇ ಕೋಣೆ ಖಾಲಿ ಮಾಡುವಂತೆಯೇ ವರ್ತೂರ ಅವರಿಗೆ ಸುದೀಪ್ ಆದೇಶ ನೀಡಿದ್ದರು. ಅದರಂತೆ, ಕ್ಯಾಪ್ಟನ್ ಕೋಣೆಯನ್ನು ಖಾಲಿ ಮಾಡಿದ್ದಾರೆ. ಕೊನೆಗೆ ಅಚ್ಚರಿಯ ರೀತಿಯಲ್ಲಿ ಇನ್ಮೇಲೆ ಈ ಮನೆಯಲ್ಲಿ ಕ್ಯಾಪ್ಟನ್ ಇರುವುದಿಲ್ಲ ಎಂದಿದ್ದಾರೆ ಕಿಚ್ಚ.
ಟಾಸ್ಕ್‌ನಲ್ಲಿ ಆಗಿದ್ದೇನು?
ಈ ವಾರದ ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಮೈಕಲ್ ಅಜಯ್, ಸಿರಿ, ವರ್ತೂರು ಸಂತೋಷ್ ಹಾಗೂ ಅವಿನಾಶ್ ಶೆಟ್ಟಿ ಆಯ್ಕೆಯಾಗಿದ್ದರು. ಈ ನಾಲ್ವರಲ್ಲಿ ಕ್ಯಾಪ್ಟನ್ ಆಗಲು ವಿಶೇಷ ಟಾಸ್ಕ್ ನೀಡಿದ್ದರು ಬಿಗ್ ಬಾಸ್. ಗಾರ್ಡನ್ ಏರಿಯಾದಲ್ಲಿ ವೃತ್ತಾಕಾರದ ಚಕ್ರದ ಮೇಲೆ ಒಂದು ಕುರ್ಚಿಯನ್ನು ಹಾಕಲಾಗಿತ್ತು. ಅದರ ಮೇಲೆ ಒಬ್ಬೊಬ್ಬರೇ ಕೂತು, 13 ನಿಮಿಷಗಳನ್ನು ನಿಖರವಾಗಿ ಹೇಳಬೇಕಿತ್ತು. ಇದಕ್ಕೆ ಇನ್ನುಳಿದವರು ಮಧ್ಯೆ ಮಧ್ಯೆ ಅವರ ಎಣಿಕೆಗೆ ಭಂಗ ಮಾಡಬಹುದಿತ್ತು. 13 ನಿಮಿಷ ಆಗುತ್ತಿದ್ದಂತೆ, ತಲೆ ಮೇಲಿನ ಗಂಟೆ ಬಾರಿಸಬೇಕಿತ್ತು. ಯಾವ ಸ್ಪರ್ಧಿ ಆ 13 ನಿಮಿಷಕ್ಕೆ ಹತ್ತಿರವಿರುತ್ತಾರೋ ಅವರೇ ಈ ವಾರದ ಕ್ಯಾಪ್ಟನ್ ಆಗಬೇಕಿತ್ತು.
ಹಳ್ಳಿಕಾರ್, ಮೈಕಲ್‌ಗೆ ವಿನಯ್ ಸಹಾಯ!
ಈ ಟಾಸ್ಕ್ ಮೊದಲೇ ಫಿಕ್ಸ್ ಆಗಿತ್ತು. ನಾನು ಇಲ್ಲಿ ಕೂತು ಎಣಿಸಿ ಒಂದು ಸಿಗ್ನಲ್ ಕೊಡುತ್ತೇನೆ. ಆ ಕ್ಷಣಕ್ಕೆ ನೀನು ಗಂಟೆ ಬಾರಿಸು ಎಂದು ವಿನಯ್ ವರ್ತೂರ್ ಮತ್ತು ಮೈಕಲ್‌ಗೆ ಹೇಳಿದ್ದರು. ಆಟದ ಸಮಯದಲ್ಲಿ ಈ ಮಾತುಕತೆ ಯಾರ ಗಮನಕ್ಕೂ ಬಂದಿರಲಿಲ್ಲ. ಆಟ ಶುರುವಾಗುತ್ತಿದ್ದಂತೆ, ಸಿರಿ ಮತ್ತು ಅವಿನಾಶ್ ತಮ್ಮ ಆಟ ಆಡಿದರು. ಸಿರಿ 19 ನಿಮಿಷ ಎಣಿಸಿದರೆ, ಅವಿನಾಶ್ 9 ನಿಮಿಷ ಎಣಿಸಿದ್ದರು. ಈ ನಡುವೆ ಮೈಕಲ್ 10 ನಿಮಿಷದ ಆಸುಪಾಸಿದ್ದರೆ, ವರ್ತೂರು 12 ನಿಮಿಷದ ಆಸುಪಾಸಿದ್ದರು. ಈ ನಾಲ್ವರ ಪೈಕಿ ವರ್ತೂರು 13 ನಿಮಿಷಕ್ಕೆ ಹತ್ತಿರವಿದ್ದರು, ಹಾಗಾಗಿ ಅವರೇ ಈ ವಾರದ ಕ್ಯಾಪ್ಟನ್ ಆದರು. ಹೀಗೆ ವಿನ್ ಆಗಲು ಅಲ್ಲೇ ಕೂತು ವಿನಯ್ ಸ್ವತಃ ತಾವೇ 13 ನಿಮಿಷ ಕೌಂಟ್ ಮಾಡಿ, ಸಿಗ್ನಲ್ ರವಾನಿಸಿದ್ದರು.
ಮೋಸದಾಟಕ್ಕೆ ಬೆಲೆತೆತ್ತ ಬಿಗ್ ಮಂದಿ
ಕ್ಯಾಪ್ಟನ್ಸಿ ಟಾಸ್ಕ್‌ಗೆ ಅದರದೇ ಆದ ಗೌರವವಿದೆ. ಆ ಆಟವನ್ನೇ ಫಿಕ್ಸಿಂಗ್ ಮಾಡಿದ್ದನ್ನು ಗಮನಿಸಿದ ಬಿಗ್ ಬಾಸ್, ಮನೆ ಮಂದಿಗೆ ದೊಡ್ಡ ಶಿಕ್ಷೆಯನ್ನೇ ನೀಡಿದೆ. ಈ ಅಪ್ರಾಮಾಣಿಕ ಆಟಕ್ಕೆ ಇಡೀ ಮನೆ ಮಂದಿ ಬೆಲೆತೆತ್ತಿದ್ದಾರೆ. ಇನ್ಮೇಲೆ ಈ ಮನೆಯಲ್ಲಿ ಕ್ಯಾಪ್ಟನ್ ಇರುವುದಿಲ್ಲ ಎಂದು ಹೇಳಿ, ಕ್ಯಾಪ್ಟನ್ ಕೋಣೆಗೆ ಬೀಗ ಹಾಕಿಸಿದ್ದಾರೆ.