ಬಿಗ್ ಬಾಸ್ ಕನ್ನಡ ಸೀಸನ್ 10ರ ವಿಜೇತ ಕಾರ್ತಿಕ್ ಮಹೇಶ್ ನಟಿಸಿರುವ ಮೂಕ ಜೀವ ಚಿತ್ರ ಈ ವಾರ ಬಿಡುಗಡೆ
ಬಿಗ್ ಬಾಸ್ ಕನ್ನಡ ಸೀಸನ್ 10ರ ವಿಜೇತ ಕಾರ್ತಿಕ್ ಮಹೇಶ್ ಇದೀಗ ಚಿತ್ರಮಂದಿರಕ್ಕೆ ಬರಲು ಸಿದ್ಧರಾಗಿದ್ದಾರೆ. ಈ ಹಿಂದೆ ನಟಿಸಿದ ಮೂಕ ಜೀವ ಅನ್ನೋ ಸಿನಿಮಾ ಈ ವಾರ (ಅ. 25) ತೆರೆಗೆ ಬರುತ್ತಿದೆ.
Mooka Jeeva Movie: ಬಿಗ್ ಬಾಸ್ ಕನ್ನಡ ಸೀಸನ್ 10ರ ವಿಜೇತರಾಗಿ ಹೊರಹೊಮ್ಮಿದ ನಟ ಕಾರ್ತಿಕ್ ಮಹೇಶ್, ಬಿಗ್ ಬಾಸ್‌ಗೂ ಮೊದಲು ಹಲವು ಸಿನಿಮಾ, ಸೀರಿಯಲ್‌ಗಳಲ್ಲಿ ನಟಿಸಿದ್ದಾರೆ. ಡೊಳ್ಳು ಸಿನಿಮಾದಲ್ಲಿ ನಟಿಸಿ, ಆ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿಯೂ ಸಿಕ್ಕಿದೆ. ಹೀಗಿರುವಾಗಲೇ ರಾಮರಸ ಅನ್ನೋ ಸಿನಿಮಾದಲ್ಲಿಯೂ ಕಾರ್ತಿಕ್ ನಾಯಕನಾಗಿ ನಟಿಸಿದ್ದಾರೆ. ಗುರು ದೇಶಪಾಂಡೆ ಅಂಡ್ ಟೀಮ್ ಈ ಸಿನಿಮಾ ನಿರ್ಮಾಣ ಮಾಡಿದರೆ, ಗಿರಿರಾಜ್ ನಿರ್ದೇಶನವಿದೆ. ಈಗಾಗಲೇ ಈ ಚಿತ್ರದ ಬಿಡುಗಡೆಯ ಸನಿಹದಲ್ಲಿದೆ. ಹೀಗಿರುವಾಗಲೇ ಈ ಹಿಂದಿನ ಅವರ ಮೂಕ ಜೀವ ಸಿನಿಮಾವೊಂದು ಇದೀಗ ಬಿಡುಗಡೆಯ ಹಂತಕ್ಕೆ ಬಂದಿದೆ.
ಕಾದಂಬರಿ ಆಧರಿತ ಸಿನಿಮಾ
ಜೆ ಎಂ ಪ್ರಹ್ಲಾದ್ ಅವರ ಕಾದಂಬರಿ ಆಧಾರಿತ ಸಿನಿಮಾ "ಮೂಕ ಜೀವ" ಈ ವಾರ ಬಿಡುಗಡೆಯಾಗುತ್ತಿದೆ. ಹಳ್ಳಿಯ ಬಡ ಕುಟುಂಬದಲ್ಲಿ ಪ್ರಾರಂಭವಾಗುವ ಈ ಕಥೆ ಪಟ್ಟಣದಲ್ಲಿ ಅಂತ್ಯವಾಗುತ್ತದೆ. ಯಾವುದೇ ವ್ಯಕ್ತಿ ತಾನು ಸ್ವಾವಲಂಬಿಯಾಗಿ ಬದುಕಲು ಬೇಕಾದ ಸಹಾಯ, ಮಾರ್ಗದರ್ಶನ ಮತ್ತು ಸಹಾಯ ಪಡೆಯುವ ವ್ಯಕ್ತಿಯು ಸ್ಪಂದಿಸುವ ರೀತಿಯನ್ನು ಎಳೆ ಎಳೆಯಾಗಿ ತೆರೆದಿಡುವ ಪ್ರಯತ್ನವನ್ನು ಈ ಚಲನಚಿತ್ರದಲ್ಲಿ ಮಾಡಲಾಗಿದೆ.
ಹಳ್ಳಿಯಲ್ಲಿ ಜೀವಿಸುತ್ತಿರುವ ಒಂದು ಬಡ ಕುಟುಂಬದ ಕಥೆ ಮೂಕ ಜೀವ. ಮನೆಗೆ ಆಸರೆಯಾಗಿ ಇರಬೇಕಿದ್ದ ತಂದೆ ಇಲ್ಲದ ಕುಟುಂಬ ಇವರದು. ತಾಯಿಗೆ ಇಬ್ಬರು ಮಕ್ಕಳು ಒಂದು ಹೆಣ್ಣು ಮತ್ತು ಒಂದು ಗಂಡು. ಮಗಳು ಮದುವೆಯ ವಯಸ್ಸಿಗೆ ಬಂದಿದ್ದರು ತನ್ನ ಕುಟುಂಬದ ಪರಿಸ್ಥಿತಿಯನ್ನು ನೋಡಿ ಮದುವೆ ಮಾಡಿಕೊಂಡು ಗಂಡನ ಮನೆಗೆ ಹೋಗಲು ಮನಸ್ಸಾಗದೆ ತಾಯಿಯ ಮನೆಯಲ್ಲಿ ಉಳಿದಿರುವ ಮಗಳು. ಮಗ ನಮ್ಮ ಕಥಾನಾಯಕ, ಇವನ ಹೆಸರು ಶ್ರೀಕಂಠ. ಇವನಿಗೆ ಕಿವಿಯು ಕೇಳುವುದಿಲ್ಲ. ಮಾತು ಬರುವುದಿಲ್ಲ, ಬಡತನದ ಬೇಗೆ ಮಗನ ಪರಿಸ್ಥಿತಿ ಹೀಗೆ, ಇದರ ನಡುವೆ ಇವರ ಕುಟುಂಬ ಜೀವನವನ್ನು ನಡೆಸುತ್ತಿದೆ.
ಅಂಗವಿಕಲ ವ್ಯಕ್ತಿಗಳಿಗೆ ತಮ್ಮ ಅಂಗವಿಕಲತೆಯೇ ನ್ಯೂನತೆ ಎಂದು ಭಾವಿಸದೆ ಅದರ ಜೊತೆಗೆ ಸಮಾಜದಲ್ಲಿ ತಾವು ಎಲ್ಲರಂತೆ ಬದುಕಬಹುದು ಎಂಬ ಆತ್ಮಸ್ಥೈರ್ಯವನ್ನು ತುಂಬುವ ಕಥಾಹಂದರವನ್ನು ಹೇಳುವ ಸಿನಿಮಾ ಈ ಮೂಕ ಜೀವ. ನಿರ್ಮಾಪಕರಾದ ಎಂ ವೆಂಕಟೇಶ ಮತ್ತು ಮಂಜುಳಾ ಅವರು ಈ ಸಿನಿಮಾವನ್ನು ಎ.ವಿ.ಎಮ್ ಎಂಟರ್ ಟೈನರ್ಸ್ ಸಂಸ್ಥೆಯ ಮೂಲಕ ನಿರ್ಮಾಣ ಮಾಡಿದ್ದಾರೆ. ಕನ್ನಡ ನಾಡು ಕಂಡ ಶ್ರೇಷ್ಠ ಕಲಾವಿದರ ಪಂಕ್ತಿಯ ಸಾಲಿಗೆ ಸೇರುವ ಶ್ರೀನಾಥ್ ವಸಿಷ್ಠ ಅವರು ಈ ಸಿನಿಮಾ ನಿರ್ದೇಶನ ಮಾಡಿದ್ದಾರೆ.
ಕೈ,ಕಾಲು, ಕಣ್ಣು, ಕಿವಿ ಎಲ್ಲವೂ ಸುರಕ್ಷಿತವಾಗಿ ಇರುವ ಜನಗಳ ಜೊತೆ ಅಂಗವಿಕಲರು ಹೇಗೆ ತಮ್ಮ ಬದುಕನ್ನ ಕಟ್ಟಿಕೊಳ್ಳಬಹುದು? ಸಮಾಜದಲ್ಲಿ ತಾವು ಎಲ್ಲರಂತೆ ಬದುಕಬಹುದು ಎಂಬುದನ್ನು ಸೂಕ್ಷ್ಮವಾಗಿ ಈ ಸಿನಿಮಾ ಮೂಲಕ ನಾಡಿನ ಜನತೆಗೆ ತಿಳಿಸುವ ಒಂದು ಪ್ರಯತ್ನ ಈ ಮೂಕ ಜೀವ. ಬಿಗ್ ಬಾಸ್ ವಿನ್ನರ್ ಕಾರ್ತಿಕ್ ಮಹೇಶ್, ಶ್ರೀಹರ್ಷ, ಅಪೂರ್ವಶ್ರೀ, ಮೇಘಶ್ರೀ, ಗಿರೀಶ್ ವೈದ್ಯನಾಥನ್, ರಮೇಶ್ ಪಂಡಿತ್, ವೆಂಕಟಾಚಲ, ಶ್ರೀನಾಥ್ ವಸಿಷ್ಠ ಮುಂತಾದವರು ಈ ಚಿತ್ರದ ನಟಿಸಿದ್ದಾರೆ.