ಬಿಗ್‌ಬಾಸ್ ಫಿನಾಲೆ ಟಿಕೆಟ್‌ಗೆ ಹರಕೆಯ ಕುರಿ ಆದ್ರಾ ಧನರಾಜ್? ಧನು ಗೌತಮಿಗಿಂತ ವೀಕಾ ಎಂದು ಪ್ರಶ್ನಿಸಿದ ರಜತ್
Bigg Boss Kannada 11: ಬಿಗ್‌ಬಾಸ್ ಕನ್ನಡ ಸೀಸನ್ 11ರ ಇಂದಿನ ಸಂಚಿಕೆಯ ಪ್ರೊಮೋವನ್ನು ಕಲರ್ಸ್ ಕನ್ನಡ ಬಿಡುಗಡೆ ಮಾಡಿದೆ. ಫಿನಾಲೆ ಟಿಕೆಟ್ ಆಟದಲ್ಲಿ ಉಳಿದವರು ಧನರಾಜ್‌ರನ್ನು ಹರಕೆಯ ಕುರಿ ಮಾಡಿರುವುದನ್ನು ಈ ಪ್ರಮೋದಲ್ಲಿ ತೋರಿಸಲಾಗಿದೆ. ಈ ಸಂದರ್ಭದಲ್ಲಿ ಗೌತಮಿ ಮತ್ತು ಮಂಜು ಬಗ್ಗೆಯೂ ಚರ್ಚೆಯಾಗಿರುವುದು ಪ್ರೊಮೊದಲ್ಲಿ ಕಾಣಿಸಿದೆ.
ಬೆಂಗಳೂರು: ಬಿಗ್‌ಬಾಸ್ ಕನ್ನಡ ಸೀಸನ್ 11ರ ಇಂದಿನ ಸಂಚಿಕೆಯ ಪ್ರೊಮೋವನ್ನು ಕಲರ್ಸ್ ಕನ್ನಡ ಬಿಡುಗಡೆ ಮಾಡಿದೆ. ಫಿನಾಲೆ ಟಿಕೆಟ್ ಆಟದಲ್ಲಿ ಮಂಜು-ಗೌತಮಿ ಇಬ್ಬರು ಜತೆಯಾಗಿ ಧನರಾಜ್‌ರನ್ನು ಹರಕೆಯ ಕುರಿ ಮಾಡಿರುವುದನ್ನು ಈ ಪ್ರಮೋದಲ್ಲಿ ತೋರಿಸಲಾಗಿದೆ. ಬಿಗ್‌ಬಾಸ್ ಕನ್ನಡದ ಗ್ರ್ಯಾಂಡ್ ಫಿನಾಲೆಗೆ ನೇರವಾಗಿ ಎಂಟ್ರಿ ನೀಡಲು ಟಾಸ್ಕ್ ನಡೆದಿತ್ತು. ಫಿನಾಲೆ ಟಿಕೆಟ್‌ನ ಫಲಿತಾಂಶದಲ್ಲಿ ಇಂದು ಧನರಾಜ್ ವಿರುದ್ಧ ಫಲಿತಾಂಶ ಬಂದಿರುವುದನ್ನು ತೋರಿಸಲಾಗಿದೆ.
ಧನರಾಜ್ ತಂಡದಿಂದ ಚೈತ್ರಾ ಕುಂದಾಪುರ ಆಟದಿಂದ ಹೊರಗೆ ಉಳಿದಿದ್ದರು. ಧನರಾಜ್, ಗೌತಮಿ, ಮಂಜು ಮಾತ್ರ ಆಟದಲ್ಲಿದ್ದರು. ತಂಡದ ನಾಯಕನಾಗಿದ್ದ ಧನರಾಜ್‌ನನ್ನೇ ಇವರು ಆಟದಿಂದ ಹೊರಗಿಟ್ಟಿರುವ ಝಲಕ್ ಅನ್ನು ಕಲರ್ಸ್ ಕನ್ನಡದ ಪ್ರೊಮೊದಲ್ಲಿ ನೋಡಬಹುದಾಗಿದೆ. ಇನ್ನೊಂದೆಡೆ ತ್ರಿವಿಕ್ರಮ್ ಅವರು ಫಿನಾಲೆ ಟಿಕೆಟ್ ಪಡೆದಿದ್ದಾರೆ.
ಮಂಜು ಮತ್ತು ಗೌತಮಿ ತಂಡದಲ್ಲಿ ಧನರಾಜ್‌ನನ್ನೇ ಹರಕೆಯ ಕುರಿ ಮಾಡುತ್ತಾರೆ ಎಂದು ಇತರರು ಮಾತನಾಡುತ್ತಾರೆ. ಅದರಂತೆ, ಮಂಜು ಮತ್ತು ಗೌತಮಿ "ಧನರಾಜ್ ಅವರ ಹೆಸರು ತೆಗೆದುಕೊಳ್ಳುತ್ತೇನೆ" ಎನ್ನುತ್ತಾರೆ. "ಮಾರಮ್ಮನ ಜಾತ್ರೆಯಲ್ಲಿ ಕುರಿಯನ್ನು ಬಲಿಕೊಟ್ಟಂತೆ" ಎಂದು ಇತರರು ಕಾಮೆಂಟ್ ಮಾಡುತ್ತಾರೆ.
ಧನರಾಜ್‌ರನ್ನು ಹೊರಹಾಕಲು "ಆರಂಭದ ಮೂರು ವಾರಗಳಲ್ಲಿ ತುಸು ಹಿಂಜರಿಯುತ್ತಿದ್ದರು" ಎಂದು ಗೌತಮಿ ಕಾರಣ ನೀಡಿದಾಗ ರಜತ್ ಜೋರಾಗಿ ಸಿಳ್ಳೆ ಹೊಡೆಯುತ್ತಾರೆ. "ಹೋಯ್, ಫಸ್ಟ್ ಮೂರು ವಾರ ಯಾಕೋ ಚೆನ್ನಾಗಿ ಆಡಿಲ್ಲ" ಎಂದು ರಜತ್ ಇನ್‌ಡೈರೆಕ್ಟ್ ಆಗಿ ಟಾಂಗ್ ನೀಡುತ್ತಾರೆ. "ಧನು ಗೌತಮಿಗಿಂತ ವೀಕಾ" ಎಂದು ರಜತ್ ಪ್ರಶ್ನಿಸಿದ್ದಾರೆ.
ಧನರಾಜ್‌ನನ್ನು ಬಕ್ರಾ ಮಾಡಿದ್ದು ಹೇಗೆ?
ಮುಂದಿನ ಆಟದಲ್ಲಿ ಫಿನಾಲೆ ಟಿಕೆಟ್ ಪಡೆಯಲು ಅರ್ಹರಲ್ಲದ ಸ್ಪರ್ಧಿಯ ಹೆಸರನ್ನು ಸೂಚಿಸುವಂತೆ ಬಿಗ್‌ಬಾಸ್ ಸೂಚಿಸಿದಾಗ ಉಗ್ರಂ ಮಂಜು ಮತ್ತು ಗೌತಮಿ ಜಾಧವ್ "ಈ ಟಿಕೆಟ್ ಆಟದಿಂದ ಹೊರಗೆ ಉಳಿಯುವಂತೆ" ಧನರಾಜ್‌ರನ್ನು ಮನವೋಲಿಸುತ್ತಾರೆ. ಇದಕ್ಕೆ ಧನರಾಜ್ ಒಪ್ಪುತ್ತಾರೆ. ಈ ಮೂಲಕ ಇವರಿಬ್ಬರ ನಾಟಕಕ್ಕೆ ಧನರಾಜ್ ಬಲಿಯಾಗುತ್ತಾರೆ. "ಇಲ್ಲಿ ನಾವು ಯಾರನ್ನೂ ನಂಬಿಕೊಂಡು ಆಡ್ತಾ ಇಲ್ಲ" ಎಂದು ಮಂಜು ಮೋಕ್ಷಿತಾ ಬಳಿ ಹೇಳುತ್ತಾರೆ. "ಹಾಗಾದರೆ, ನೀವಿಬ್ಬರು ಯಾಕೆ ಒಬ್ಬರನ್ನೊಬ್ಬರು ಸೇಫ್ ಮಾಡಿಕೊಂಡು ಆಟ ಆಡಿದ್ರಿ" ಎಂದು ಮೋಕ್ಷಿತಾ ಪ್ರಶ್ನಿಸುತ್ತಾರೆ. "ಮಂಜಣ್ಣನ ನಂಬಿ ನೀನು ಮೋಸ ಹೋದೆ ದೋಸ್ತಾ" ಎಂದು ಹನುಮಂತ ಕೂಡ ಧನರಾಜ್‌ಗೆ ಹೇಳುತ್ತಾನೆ. ಧನರಾಜ್ ಇನ್ನು ನೇರವಾಗಿ ಫಿನಾಲೆ ರೇಸ್‌ನಲ್ಲಿ ಭಾಗವಹಿಸುವ ಅವಕಾಶ ಪಡೆಯಲಿದ್ದಾರೆ.
ರಜತ್ ಮತ್ತು ಹನುಮಂತನನ್ನು ಮೋಸದಿಂದ ಸೋಲಿಸಲಾಯಿತು. ಚೈತ್ರಾ ಕುಂದಾಪುರ ಅವರನ್ನು ನೇರವಾಗಿ ಆಟದಿಂದ ಹೊರಗಿಡಲಾಯಿತು. ಧನರಾಜ್‌ನನ್ನು ಇದೀಗ ಮಂಜು ಮತ್ತು ಗೌತಮಿ ಹರಕೆಯ ಕುರಿ ಮಾಡಿದ್ದಾರೆ. ಈ ಮೂಲಕ ಎಲ್ಲರೂ ಮೋಸದಿಂದಲೇ ಆಟ ಆಡಿದ್ದಾರೆ. ಇದನ್ನು ಈ ವಾರದ ಪಂಚಾಯ್ತಿಯಲ್ಲಿ ಸುದೀಪ್ ಪ್ರಶ್ನಿಸುವುದು ಖಾತ್ರಿಯಾಗಿದೆ.
ನೆಟ್ಟಿಗರ ಪ್ರತಿಕ್ರಿಯೆ
"ಉಗ್ರಂ ಮಂಜುಗೆ ಸುದೀಪ್ ಪ್ರತಿವಾರ ಎಚ್ಚರಿಸುತ್ತಿದ್ದರು. ಆತ ಅದನ್ನು ಕಡೆಗಣಿಸಿದ್ದಾನೆ. ಆತನ ತಂಗಿ ಬಂದು ಪ್ರಾಮೀಸ್ ತೆಗೆದುಕೊಂಡ್ರು. ಅದಕ್ಕೂ ರೆಸ್ಪೆಕ್ಟ್ ಇಲ್ಲ. ತಂದೆಯ ವಿಟಿ ಕೂಡ ಈತನನ್ನು ಬದಲಾಯಿಸಿಲ್ಲ. ಹೆಣ್ಣು ಮಾಯೆ, ಮಂಜು ಹೊರಗಡೆ ಬಂದ್ಮಲೆ ಅವಳು ನಿನ್ನ ಮನೆಗೆ ಊಟಕ್ಕೆ ಕೂಡ ಕರೆಯೋದಿಲ್ಲ" "ಇವರಿಬ್ಬರಿಗೆ ಫ್ಯಾಮಿಲಿ ವೀಕ್ ಆದ್ಮೇಲೆ ಕೂಡ ಬುದ್ಧಿ ಬಂದಿಲ್ಲ" "ಗೌತಮಿಗೆ ಇಲ್ಲಿ ಉಳಿಯಲು ಮಂಜುವಿನ ಆಸರೆಯೇ ಬೇಕು, ಆಕೆ ವೈಯಕ್ತಿಕವಾಗಿ ಆಡುವುದಿಲ್ಲ" "ಆಟದಿಂದ ಯಾರನ್ನಾದರೂ ಹೊರಗೆ ಹಾಕುವುದು ದೊಡ್ಡ ವಿಷಯವಲ್ಲ. ಆದರೆ, ಇದರಲ್ಲಿ ಪ್ರಾಮಾಣಿಕತೆ ಇರಬೇಕು" "ಮಂಜು ಮತ್ತು ಗೌತಮಿ ತೆಗೆದುಕೊಂಡ ಕೆಟ್ಟ ನಿರ್ಧಾರವಿದು" ಎಂದೆಲ್ಲ ಕಲರ್ಸ್ ಕನ್ನಡದ ಪ್ರೊಮೊಗೆ ಜನರು ಪ್ರತಿಕ್ರಿಯೆ ನೀಡಿದ್ದಾರೆ.