ಬಿಗ್ ಬಾಸ್ ಖರೀದಿ ಮಾಡ್ತೀನಿ ಅಂದಿದ್ದ ಬಾಯಲ್ಲಿ ಈ ಮಾತಾ? ಎಲಿಮಿನೇಟ್ ಆದ ಜಗದೀಶ್ ಮೊದಲ ಪ್ರತಿಕ್ರಿಯೆ ಹೀಗಿತ್ತು
Bigg Boss 11: ಬಿಗ್‌ಬಾಸ್ ಕನ್ನಡ ಸೀಸನ್ 11ರಿಂದ ಲಾಯರ್ ಜಗದೀಶ್ ಅವರನ್ನು ಹೊರಹಾಕಲಾಗಿದೆ. ಮನೆಯಿಂದ ಹೊರ ಹೋದ ನಂತರ ಲಾಯರ್ ಜಗದೀಶ್ ನೀಡಿದ ಮೊದಲ ರಿಯಾಕ್ಷನ್ ಹೇಗಿತ್ತು ನೋಡಿ. ಬಿಗ್ ಬಾಸ್ ಖರೀದಿ ಮಾಡ್ತೀನಿ ಅಂದಿದ್ದವರು ಇಂದು ಬಿಗ್‌ಬಾಸ್ ಆಟದಿಂದಲೇ ಹೊರಗೆ.

ಬಿಗ್‌ಬಾಸ್ ಕನ್ನಡ ಸೀಸನ್ 11ರಿಂದ ಲಾಯರ್ ಜಗದೀಶ್ ಅವರನ್ನು ಹೊರಹಾಕಲಾಗಿದೆ. ಮನೆಯಲ್ಲಿ ಅಶಿಸ್ತು ತೋರಿ, ಮಹಿಳೆಯರ ನಿಂದನೆ ಮಾಡಿ, ಅವಾಚ್ಯ ಶಬ್ಧಗಳಿಂದ ಮಾತನಾಡಿದ್ದಾರೆ ಎನ್ನುವ ಕಾರಣಕ್ಕಾಗಿ ಅವರನ್ನು ಮನೆಯಿಂದ ಹೊರ ಹಾಕಿದ್ದಾರೆ. ಹೊರಗೆ ಬಂದ ಬಳಿಕ ಜಗದೀಶ್ ಪ್ರತಿಕ್ರಿಯೆ ನೀಡಿದ್ದಾರೆ. ತನ್ನನ್ನು ತಾನು ಬಿಗ್ ಬಾಸ್ ಮನೆಯಲ್ಲಿ ಯಾವ ರೀತಿಯಾಗಿ ಕಂಡುಕೊಂಡಿದ್ದೆ ಎನ್ನುವುದನ್ನು ಹೇಳಿದ್ದಾರೆ.
ಇಂದು ಬಿಡುಗಡೆಯಾಗಿದ್ದ ಪ್ರೊಮೋದಲ್ಲಿ ಜಗದೀಶ್ ಅವರು ಹಾಗೂ ರಂಜಿತ್ ಅವರನ್ನು ಬಿಗ್ ಬಾಸ್ ಮನೆಯಿಂದ ಹೊರಗಡೆ ಕಳಿಸಲಾಗಿದೆ ಎನ್ನುವುದರ ಬಗ್ಗೆ ಸ್ಪಷ್ಟನೆ ಸಿಕ್ಕಿತ್ತು. ಈ ಹಿಂದೆಯೇ ರಂಜಿತ್ ಹಾಗೂ ಜಗದೀಶ್ ಅವರನ್ನು ಮನೆಯಿಂದ ಹೊರ ಹಾಕಲಾಗಿದೆ ಎಂಬ ಸುದ್ದಿ ಎಲ್ಲೆಡೆ ಹಬ್ಬಿತ್ತು. ಬಿಗ್ ಬಾಸ್ ಕಡೆಯಿಂದ ಯಾವುದೇ ನಿಖರ ಮಾಹಿತಿ ಇಲ್ಲದ ಕಾರಣದಿಂದಾಗಿ ಈ ಬಗ್ಗೆ ಜನರು ಇನ್ನೂ ಗೊಂದಲದಲ್ಲಿದ್ದರು. ಆದರೆ ಇದೀಗ ಅದಕ್ಕೆ ನೇರವಾಗಿ ಬಿಗ್ ಬಾಸ್ ಉತ್ತರ ನೀಡಿದ್ದಾರೆ.
ಲಾಯರ್ ಜಗದೀಶ್ ಅವರು ಮನೆಗೆ ಸೇರಿಕೊಂಡಾಗಿನಿಂದ ವಿಭಿನ್ನ ರೀತಿಯಲ್ಲಿ ತಾನು ಕಾಣಬೇಕು ಎಂದು ಹಂಬಲಿಸುತ್ತಿದ್ದರು. ಪ್ರತಿದಿನ ಒಂದಿಲ್ಲೊಂದು ರೀತಿಯಲ್ಲಿ ಜನರನ್ನು ರಂಜಿಸುತ್ತಿದ್ದರು. ಮೊದಲಿಗೆ ಯಾರಿಗೂ ಇಷ್ಟವಾಗದ ಲಾಯರ್ ಜಗದೀಶ್ ಇತ್ತೀಚೆಗೆ ತನ್ನದೇ ಆದ ಅಭಿಮಾನಿಗಳನ್ನು ಸೃಷ್ಟಿಸಿಕೊಂಡಿದ್ದರು. ಸಾಮಾಜಿಕ ಜಾಲತಾಣಗಳಲ್ಲೂ ಅವರ ಅಭಿಮಾನಿಗಳ ಸಂಖ್ಯೆ ಹೆಚ್ಚಾಗಿತ್ತು.
ಆದರೆ ಮನೆಯಲ್ಲಿ ಆಡಿದ ಮಾತುಗಳು, ಎಲ್ಲರನ್ನೂ ಕೆಣಕುತ್ತಿದ್ದ ರೀತಿಯನ್ನು ಮನೆಯೊಳಗಿನ ಸ್ಪರ್ಧಿಗಳಿಗೆ ಸಹಿಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಆ ಕಾರಣಕ್ಕಾಗಿ ಇಡೀ ಮನೆ ಅವರ ವಿರುದ್ಧ ತಿರುಗಿ ಬಿದ್ದಿತ್ತು. ಇದೇ ವಿಚಾರವಾಗಿ ಜಗಳ ಕೂಡ ಆಯಿತು. ಆ ಜಗಳ ಮಿತಿ ಮೀರಿದ ಕಾರಣದಿಂದಾಗಿ ಅವರನ್ನು ಬಿಗ್ ಬಾಸ್ ಮನೆಯಿಂದ ಹೊರ ಹಾಕಲಾಯಿತು. ಹೊರ ಬಂದ ನಂತರ ಅವರು ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ.
ಜಗದೀಶ್ ನೀಡಿದ ಮೊದಲ ರಿಯಾಕ್ಷನ್
“ಒಂದು ವ್ಯಕ್ತಿಯ ಜೀವನವನ್ನು ತೋರಿಸುವ ಕನ್ನಡಿ ಬಿಗ್ ಬಾಸ್. ನಾನೂ ಕೂಡ ನನ್ನನ್ನು ನೋಡಿಕೊಂಡೆ, ನನಗೇ ಆಶ್ಚರ್ಯ ಆಯ್ತು - ನಾನು ಸ್ಪರ್ಧಿಸಿ ಅಲ್ಲಿ ಆಟ ಆಡಿದಾಗ ನನ್ನಲ್ಲಿದ್ದ ಕೋಪ, ಪ್ರತಿಭೆ ಇವುಗಳೆಲ್ಲ ಹೊರ ಬಂತು. ನಾನು ಅದೃಷ್ಟವಂತ ಎಷ್ಟೋ ಜನರು ಬಿಗ್ ಬಾಸ್‌ಗೆ ಹೋಗಬೇಕು ಅಂದುಕೊಳ್ಳುತ್ತಾರೆ. ಆದರೆ ಆ ಅವಕಾಶ ನನಗೆ ಸಿಕ್ಕಿತ್ತು. ನನ್ನನ್ನು ವಿಭಿನ್ನವಾಗಿ ತೋರಿಸಿದಂತ ಮೀಡಿಯಾ, ಎಂಜಾಯ್ ಮಾಡಿದ ವೀಕ್ಷಕರು ಹಾಗೂ ನನ್ನ ಅಭಿಮಾನಿಗಳಿಗೆ ಕೋಟಿ ಕೋಟಿ ನಮನ, ಸ್ಟಿಲ್ ಐ ಮಿಸ್ ಬಿಗ್ ಬಾಸ್” ಎಂದು ಹೇಳಿದ್ದಾರೆ.