Saif ali Khan: ಸೈಫ್‌ ಅಲಿಖಾನ್‌ಗೆ ಇರಿದ ವ್ಯಕ್ತಿಯೇ ಬೇರೆ, ಶಂಕಿತನ ಬಿಡುಗಡೆ ಮಾಡಿದ ಬಾಂದ್ರಾ ಪೊಲೀಸರು
ಕನ್ನಡ ಸುದ್ದಿ  /  ಮನರಂಜನೆ  /  Saif Ali Khan: ಸೈಫ್‌ ಅಲಿಖಾನ್‌ಗೆ ಇರಿದ ವ್ಯಕ್ತಿಯೇ ಬೇರೆ, ಶಂಕಿತನ ಬಿಡುಗಡೆ ಮಾಡಿದ ಬಾಂದ್ರಾ ಪೊಲೀಸರು

Saif ali Khan: ಸೈಫ್‌ ಅಲಿಖಾನ್‌ಗೆ ಇರಿದ ವ್ಯಕ್ತಿಯೇ ಬೇರೆ, ಶಂಕಿತನ ಬಿಡುಗಡೆ ಮಾಡಿದ ಬಾಂದ್ರಾ ಪೊಲೀಸರು

ಸೈಫ್‌ ಅಲಿ ಖಾನ್‌ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ವ್ಯಕ್ತಿಯ ಹುಡುಕಾಟದಲ್ಲಿದ್ದ ಬಾಂದ್ರಾ ಪೊಲೀಸರು, ಶಂಕಿತ ವ್ಯಕ್ತಿಯನ್ನು ವಿಚಾರಣೆಗೆ ಕರೆತಂದಿದ್ದರು. ಆದರೆ, ಸುದೀರ್ಘ 5 ಗಂಟೆಗಳ ವಿಚಾರಣೆ ಬಳಿಕ, ಘಟನೆಯಲ್ಲಿ ಆತನ ಪಾತ್ರವಿಲ್ಲ ಎಂಬುದ ಅರಿತ ಪೊಲೀಸರು ಶಂಕಿತನನ್ನು ಬಿಡುಗಡೆ ಮಾಡಿದ್ದಾರೆ.

ಸೈಫ್‌ ಅಲಿ ಖಾನ್‌ ಮೇಲೆ ಹಲ್ಲೆ ಆರೋಪ, ಶಂಕಿತ ವ್ಯಕ್ತಿಯನ್ನು ಬಿಡುಗಡೆ ಮಾಡಿದ ಬಾಂದ್ರಾ ಪೊಲೀಸರು
ಸೈಫ್‌ ಅಲಿ ಖಾನ್‌ ಮೇಲೆ ಹಲ್ಲೆ ಆರೋಪ, ಶಂಕಿತ ವ್ಯಕ್ತಿಯನ್ನು ಬಿಡುಗಡೆ ಮಾಡಿದ ಬಾಂದ್ರಾ ಪೊಲೀಸರು

Saif ali Khan: ಬಾಲಿವುಡ್‌ ನಟ ಸೈಫ್ ಅಲಿ ಖಾನ್ ಬಾಂದ್ರಾ ನಿವಾಸಕ್ಕೆ ತೆರಳಿ, ಮಾರಣಾಂತಿಕವಾಗಿ ಚಾಕುವಿನಿಂದ ಇರಿದ ಶಂಕಿತ ವ್ಯಕ್ತಿಯನ್ನು ಮುಂಬೈ ಪೊಲೀಸರು ಶುಕ್ರವಾರವೇ ಬಂಧಿಸಿ ಕರೆತಂದಿದ್ದರು. ಘಟನೆ ನಡೆದ 40 ಗಂಟೆಗಳ ಬಳಿಕವೂ ಶಂಕಿತ ವ್ಯಕ್ತಿ, ಪೊಲೀಸ್‌ ಬಲೆಗೆ ಬಿದ್ದಿರಲಿಲ್ಲ. ಬಟ್ಟೆಗಳನ್ನು ಬದಲಾಯಿಸಿಕೊಂಡು, ಓಡಾಡುತ್ತಿದ್ದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದವು. ಕೊನೆಗೆ ಶತಾಯಗತಾಯ ಪ್ರಯತ್ನದಿಂದ ಆ ವ್ಯಕ್ತಿಯನ್ನು ಬಂಧಿಸಲಾಗಿತ್ತು. ಇದೀಗ ಬಂಧಿತ ವ್ಯಕ್ತಿಗೂ, ಸೈಫ್‌ ಅಲಿಖಾನ್‌ ಮೇಲಿನ ದಾಳಿಗೂ ಸಂಬಂಧವಿಲ್ಲ ಎಂದು ಪೊಲೀಸರು ತಿಳಿಸಿ, ಆತನನ್ನು ಬಿಡುಗಡೆ ಮಾಡಿದ್ದಾರೆ.

ಶಂಕಿತನನ್ನು ಪತ್ತೆಹಚ್ಚಲು ಮುಂಬೈ ಪೊಲೀಸ್‌ ಇಲಾಖೆ, ಅಪರಾಧ ವಿಭಾಗ ಮತ್ತು ಗುಪ್ತಚರ ಘಟಕದ ಒಟ್ಟು 25 ಸಿಬ್ಬಂದಿಯ ನೆರವು ಪಡೆದಿತ್ತು. ಅದರಂತೆ, ಶಂಕಿತ ವ್ಯಕ್ತಿಯನ್ನು ಪತ್ತೆ ಮಾಡಿ, ಹಿಡಿದು ವಿಚಾರಣೆಗೆ ಕರೆತಂದಿದ್ದರು. ಆದರೆ ಸುದೀರ್ಘ ಐದು ಗಂಟೆಗಳ ವಿಚಾರಣೆ ಬಳಿಕ ಈ ಪ್ರಕರಣಕ್ಕೂ ಆ ವ್ಯಕ್ತಿಗೂ ಯಾವುದೇ ಸಂಬಂಧವಿಲ್ಲ ಎಂದು ಪೊಲೀಸರು ಕಂಡುಕೊಂಡ ನಂತರ, ಆತನನ್ನು ಬಿಡುಗಡೆ ಮಾಡಲಾಯಿತು.

ಸೈಫ್ ಅಲಿ ಖಾನ್‌ ಅವರ ಕಟ್ಟಡದ ಸಿಸಿಟಿವಿಯಲ್ಲಿ ಸೆರೆಯಾಗಿದ್ದ ದೃಶ್ಯಾವಳಿ ಪ್ರಕಾರ, ಆರೋಪಿಯನ್ನೇ ಹೋಲುವ, ಸಣ್ಣಪುಟ್ಟ ಅಪರಾಧಗಳಲ್ಲಿ ಭಾಗಿಯಾದ ವ್ಯಕ್ತಿಯೊಬ್ಬನನ್ನು ವಿಚಾರಣೆಗೆ ಕರೆತರಲಾಗಿತ್ತು. ಆದರೆ, ಸುದೀರ್ಘ ವಿಚಾರಣೆಯ ಬಳಿಕ, ಸೈಫ್‌ ಮನೆ ಪ್ರವೇಶಿಸಿದ ವ್ಯಕ್ತಿ ಇವನಲ್ಲ ಎಂಬುದು ತಿಳಿದಿದೆ. ಇದರ ಜತೆಗೆ ಸೈಫ್ ಅವರ ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದ ಬಡಗಿಯನ್ನು ಮತ್ತು ಅಲ್ಲಿನ ಇತರ ಕೆಲವು ಕೆಲಸಗಾರರನ್ನು ಸಹ ಪೊಲೀಸರು ವಿಚಾರಣೆ ನಡೆಸಿದರು. ಆದರೆ, ಆರೋಪಿ ಮಾತ್ರ ಇನ್ನೂ ಪತ್ತೆ ಆಗಿಲ್ಲ.

ಭೂಗತಲೋಕದ ನಂಟಿಲ್ಲ..

ಬಾಲಿವುಡ್ ನಟ ಸೈಫ್ ಅಲಿ ಖಾನ್ ಮೇಲಿನ ಚಾಕು ದಾಳಿಯ ಹಿಂದೆ ಯಾವುದೇ ಭೂಗತ ಲೋಕದ ನಂಟಿಲ್ಲ ಎಂದು ಮಹಾರಾಷ್ಟ್ರ ಗೃಹ ಖಾತೆ ರಾಜ್ಯ ಸಚಿವ ಯೋಗೇಶ್ ಕದಮ್ ಶುಕ್ರವಾರ ಹೇಳಿದ್ದಾರೆ. "ದಾಳಿಗೆ ಸಂಬಂಧಿಸಿದಂತೆ ಬಂಧಿಸಲ್ಪಟ್ಟ (ಮತ್ತು ನಂತರ ಬಿಡುಗಡೆಯಾದ) ಶಂಕಿತ ವ್ಯಕ್ತಿ ಯಾವುದೇ ಗ್ಯಾಂಗ್‌ನ ಭಾಗವಲ್ಲ. ಯಾವುದೇ ಗ್ಯಾಂಗ್ ಈ ದಾಳಿಯನ್ನು ನಡೆಸಿಲ್ಲ" ಎಂದು ಕದಮ್ ಪಿಟಿಐಗೆ ತಿಳಿಸಿದ್ದಾರೆ.

ಲೀಲಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ

ಸೈಫ್ ಅಲಿ ಖಾನ್ ಪ್ರಸ್ತುತ ಲೀಲಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಐದು ಗಂಟೆಗಳ ಶಸ್ತ್ರಚಿಕಿತ್ಸೆಯ ಬಳಿಕ ಬೆನ್ನುಮೂಳೆಯಿಂದ 2.5 ಇಂಚಿನ ಚಾಕುವಿನ ತುಂಡನ್ನು ವೈದ್ಯರು ಹೊರತೆಗೆದಿದ್ದಾರೆ. ಅವರ ಆರೋಗ್ಯದಲ್ಲಿಯೂ ಸುಧಾರಣೆ ಕಂಡುಬಂದಿದೆ ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ. 

Whats_app_banner