Deva Box Office Collection: ಮೊದಲ ದಿನವೇ ಕನಿಷ್ಠ ಗಳಿಕೆ ಕಂಡ ಬಾಲಿವುಡ್‌ನ ದೇವ ಚಿತ್ರ; ಸೋಲಿನ ಹಾದಿ ಹಿಡಿದ ಶಾಹೀದ್‌ ಕಪೂರ್‌ ಸಿನಿಮಾ
ಕನ್ನಡ ಸುದ್ದಿ  /  ಮನರಂಜನೆ  /  Deva Box Office Collection: ಮೊದಲ ದಿನವೇ ಕನಿಷ್ಠ ಗಳಿಕೆ ಕಂಡ ಬಾಲಿವುಡ್‌ನ ದೇವ ಚಿತ್ರ; ಸೋಲಿನ ಹಾದಿ ಹಿಡಿದ ಶಾಹೀದ್‌ ಕಪೂರ್‌ ಸಿನಿಮಾ

Deva Box Office Collection: ಮೊದಲ ದಿನವೇ ಕನಿಷ್ಠ ಗಳಿಕೆ ಕಂಡ ಬಾಲಿವುಡ್‌ನ ದೇವ ಚಿತ್ರ; ಸೋಲಿನ ಹಾದಿ ಹಿಡಿದ ಶಾಹೀದ್‌ ಕಪೂರ್‌ ಸಿನಿಮಾ

ಶುಕ್ರವಾರ (ಜ. 31) ರಂದು ತೆರೆಗೆ ಬಂದ ಶಾಹೀದ್‌ ಕಪೂರ್‌ ನಟನೆಯ ದೇವ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ಹೆಚ್ಚು ಮೋಡಿ ಮಾಡಲಿಲ್ಲ. ಕಲೆಕ್ಷನ್‌ ವಿಚಾರದಲ್ಲಿ ಸಾಕ್ನಿಲ್ಕ್ ವರದಿ ಪ್ರಕಾರ ಮೊದಲ ದಿನ ಕೇವಲ 5 ಕೋಟಿ ಕಲೆಕ್ಷನ್‌ ಕಂಡಿದೆ ಈ ಸಿನಿಮಾ.

ದೇವ ಚಿತ್ರದ ಮೊದಲ ದಿನದ ಗಳಿಕೆ
ದೇವ ಚಿತ್ರದ ಮೊದಲ ದಿನದ ಗಳಿಕೆ

Deva box office collection day 1: ಬಾಲಿವುಡ್‌ ನಟ ಶಾಹೀದ್‌ ಕಪೂರ್‌ ನಟನೆಯ ದೇವ ಸಿನಿಮಾ ಶುಕ್ರವಾರ (ಜ. 31) ಬಿಡುಗಡೆ ಆಗಿದೆ. ಹೆಚ್ಚು ಹೈಪ್‌ ಇಲ್ಲದಿದ್ದರೂ, ಹಿಂದಿ ಭಾಷಿಕರ ಗಮನ ಸೆಳೆದಿತ್ತು ಈ ಸಿನಿಮಾ. ಆದರೆ, ಬಿಡುಗಡೆ ಆದ ಬಳಿಕ ಅದ್ಯಾಕೋ ಕೊಂಚ ಮಂಕಾಗಿದೆ. ವಿಮರ್ಶೆ ದೃಷ್ಟಿಯಿಂದ ಮಿಶ್ರ ಪ್ರತಿಕ್ರಿಯೆ ಪಡೆದ ದೇವ, ಮೊದಲ ದಿನದ ಗಳಿಕೆಯಲ್ಲಿಯೂ ಹೇಳಿಕೊಳ್ಳುವ ಮೊತ್ತ ಕಲೆಹಾಕಿಲ್ಲ. ಇಷ್ಟಿದ್ದರೂ, ಈ ವರ್ಷ ಬಾಲಿವುಡ್‌ನಲ್ಲಿ ಬಿಡುಗಡೆಯಾದ ಸಿನಿಮಾಗಳ ಪೈಕಿ ಅತಿ ಹೆಚ್ಚು ಕಲೆಕ್ಷನ್‌ ಮಾಡಿದ ಹಿಂದಿ ಸಿನಿಮಾಗಳ ಸಾಲಿನಲ್ಲಿ ಎರಡನೇ ಸ್ಥಾನದಲ್ಲಿದೆ. ಹಾಗಾದರೆ ದೇವ ಚಿತ್ರದ ಮೊದಲ ದಿನದ ಕಲೆಕ್ಷನ್‌ ಎಷ್ಟು?

1.67 ಕೋಟಿ ರೂ. ಮುಂಗಡ ಬುಕಿಂಗ್‌ನೊಂದಿಗೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ದೇವ ಚಿತ್ರವು ಮೊದಲ ದಿನ ಕೋಟಿ ಲೆಕ್ಕದಲ್ಲಿ ಎರಡಂಕಿ ದಾಟಲು ವಿಫಲವಾಗಿದೆ. ಸಾಕ್ನಿಲ್ಕ್ (sacnilk) ವರದಿಯ ಪ್ರಕಾರ, ರೋಷನ್ ಆಂಡ್ರ್ಯೂಸ್ ನಿರ್ದೇಶನದ 'ದೇವ' ಚಿತ್ರ ದೇಶದಲ್ಲಿ 5 ಕೋಟಿ ರೂ. ಕಲೆಕ್ಷನ್ ಮಾಡಿದೆ. ಈ ಮೂಲಕ ಮೊದಲ ದಿನವೇ ಚಿತ್ರಕ್ಕೆ ಹಿನ್ನಡೆಯಾಗಿದೆ. ದೊಡ್ಡ ಬಜೆಟ್‌ನಲ್ಲಿ ನಿರ್ಮಾಣವಾಗಿರುವ ಈ ಸಿನಿಮಾ, ಹಾಕಿದ ದುಡ್ಡು ಮರಳಲು ಬಾಕ್ಸ್‌ ಆಫೀಸ್‌ನಲ್ಲಿ ಮ್ಯಾಜಿಕ್‌ ನಡೆಯಬೇಕಿದೆ.

ಸದ್ಯ ಚಿತ್ರಮಂದಿರಗಳಲ್ಲಿ ಅಕ್ಷಯ್‌ ಕುಮಾರ್‌ ನಟನೆಯ ಸ್ಕೈ ಫೋರ್ಸ್‌ ಸಿನಿಮಾ ಬಿಟ್ಟು ಬೇರೆ ಚಿತ್ರಗಳಿಲ್ಲ. ಇದರ ಲಾಭವನ್ನು ಈ ಸಿನಿಮಾ ಹೇಗೆ ಪಡೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ. 2025ರ ಮೊದಲ ತಿಂಗಳಲ್ಲಿ 5 ಬಾಲಿವುಡ್ ಚಿತ್ರಗಳು ಬಿಡುಗಡೆಯಾಗಿವೆ. ಬೇಸರದ ಸಂಗತಿ ಏನೆಂದರೆ, ಈ ಐದರಲ್ಲಿ ಯಾವುದೇ ಚಿತ್ರಗಳು ಬಂಪರ್ ಗಳಿಕೆಯನ್ನು ಕಂಡಿಲ್ಲ. ಸ್ಕೈ ಫೋರ್ಸ್‌ ಸಿನಿಮಾ ಮೊದಲ ದಿನ 12.25 ಕೋಟಿ ಕಲೆಕ್ಷನ್‌ ಮಾಡಿತ್ತು. ಈಗ ದೇವ ಸಿನಿಮಾ 5 ಕೋಟಿ ಗಳಿಸಿ ಎರಡನೇ ಸ್ಥಾನದಲ್ಲಿದೆ. ಕಳೆದ ವರ್ಷದ ಫೆಬ್ರವರಿಯಲ್ಲಿ ಶಾಹೀದ್‌ ಕಪೂರ್‌ ನಟನೆಯ "ತೇರಿ ಬಾತೋ ಮೇ ಐಸಾ ಉಲ್ಜಾ ಜಿಯಾ" ಚಿತ್ರ ಮೊದಲ ದಿನ 6.70 ಕೋಟಿ ಗಳಿಸಿ, ಒಟ್ಟಾರೆ 85 ಕೋಟಿ ಬಾಚಿಕೊಂಡಿತ್ತು.

ಕೈ ಹಿಡಿಯದ ರಿಮೇಕ್‌ ತಂತ್ರ

ನಟ ಶಾಹಿದ್‌ ಕಪೂರ್‌, ಸರಣಿ ಸೋಲುಗಳ ಬಳಿಕ ಗೆದ್ದಿದ್ದು ಕಬೀರ್‌ ಸಿಂಗ್‌ ಸಿನಿಮಾ ಮೂಲಕ. ಅದು ತೆಲುಗಿನ ಅರ್ಜುನ್‌ ರೆಡ್ಡಿ ಸಿನಿಮಾದ ರಿಮೇಕ್. ದೊಡ್ಡ ಹಿಟ್‌, ಜನಪ್ರಿಯತೆ ಎರಡನ್ನೂ ಕಬೀರ್‌ ಸಿಂಗ್‌ ಸಿನಿಮಾ ತಂದುಕೊಟ್ಟಿತು. ಅದಾದ ಮೇಲೆ ಜೆರ್ಸಿ ಸಿನಿಮಾ ಎವರೇಜ್‌ ಹಿಟ್‌ ಆಯಿತು. ಆದರೆ, ದೊಡ್ಡ ಯಶಸ್ಸು ಮಾತ್ರ ದಕ್ಕಿರಲಿಲ್ಲ. ಹೀಗಿರುವಾಗ ಪೃಥ್ವಿರಾಜ್‌ ಸುಕುಮಾರನ್‌ ನಟನೆಯ 2013ರಲ್ಲಿ ಬಿಡುಗಡೆ ಆದ ಮಲಯಾಳಂನ “ಮುಂಬೈ ಪೊಲೀಸ್‌” ಚಿತ್ರವನ್ನು ಇದೀಗ ದೇವ ಹೆಸರಲ್ಲಿ ರಿಮೇಕ್‌ ಮಾಡಲಾಗಿದೆ.

Whats_app_banner