Chhaava Review: ಅಬ್ಬರದ ಶೌರ್ಯಕ್ಕಷ್ಟೇ ಸೀಮಿತ, ಕಣ್ಮನ ಸೆಳೆಯುವ ದೃಶ್ಯ ವೈಭವದ ನಡುವೆ ಘನ ಕಥೆಯ ಕೊರತೆ! ಛಾವಾ ಚಿತ್ರ ವಿಮರ್ಶೆ
ವಿಕ್ಕಿ ಕೌಶಾಲ್ ಮತ್ತು ರಶ್ಮಿಕಾ ಮಂದಣ್ಣ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಛಾವಾ ಸಿನಿಮಾ ಇಂದಿನಿಂದ (ಫೆ 14) ಚಿತ್ರಮಂದಿರಗಳಿಗೆ ಲಗ್ಗೆ ಇಟ್ಟಿದೆ. ಸಂಭಾಜಿ ಮಹಾರಾಜರ ಶೌರ್ಯ ಮತ್ತು ಸಾಹಸವನ್ನು ಛಾವಾ ಸಿನಿಮಾದಲ್ಲಿ ಎರಕಹೊಯ್ದಿದ್ದಾರೆ ನಿರ್ದೇಶಕ ಲಕ್ಷ್ಮಣ್ ಉಟೇಕರ್. ಇಲ್ಲಿದೆ ಛಾವಾ ಚಿತ್ರವಿಮರ್ಶೆ.

Chhaava Review: ಇತಿಹಾಸದ ಪುಟಗಳಲ್ಲಿ ಛತ್ರಪತಿ ಶಿವಾಜಿ ಮಹಾರಾಜರನ್ನು ಸಂಭ್ರಮಿಸಿದಷ್ಟು, ಆತನ ನಂತರದ ವಂಶವನ್ನು ಎತ್ತಿ ಮೆರೆಸಿದ್ದು ಕಡಿಮೆ. ಪಠ್ಯಗಳಲ್ಲೂ ಆ ಬಗ್ಗೆ ಸಿಗುವ ಮಾಹಿತಿಯೂ ಪರಿಪೂರ್ಣವಾಗಿಲ್ಲ. ಇದೀಗ ತೆರೆಮರೆಯ ಇತಿಹಾಸವನ್ನು ಹೊಸ ಹೊಳಪಿನೊಂದಿಗೆ ತೆರೆಗೆ ತಂದಿದ್ದಾರೆ ನಿರ್ದೇಶಕ ಲಕ್ಷ್ಮಣ್ ಉಟೇಕರ್. 'ಜರಾ ಹಟ್ಕೆ ಜರಾ ಬಚ್ಕೆ', 'ಮಿಮಿ' ಮತ್ತು 'ಲುಕಾ ಚುಪ್ಪಿ' ಸಿನಿಮಾಗಳ ಮೂಲಕ ಕಮರ್ಷಿಯಲ್ ಸಿನಿಮಾಗಳನ್ನು ನೀಡಿದ್ದ ಲಕ್ಷ್ಮಣ್, ಛಾವಾ ಸಿನಿಮಾದೊಂದಿಗೆ ಇತಿಹಾಸವನ್ನು ಕೆದಕುವ ಪ್ರಯತ್ನ ಮಾಡಿದ್ದಾರೆ. ದೃಶ್ಯವೈಭೋಗದ ಮೂಲಕವೇ ಮರಾಠಾ ಸಾಮ್ರಾಜ್ಯದ ವೈಭವವನ್ನು ತೆರೆದಿಟ್ಟಿದ್ದಾರೆ. ಹಾಗಾದರೆ ಹೇಗಿದೆ ಛಾವಾ ಸಿನಿಮಾ? ಇಲ್ಲಿದೆ ವಿಮರ್ಶೆ.
ಛಾವಾ ಎಂದರೆ ಸಿಂಹದ ಮರಿ ಎಂದರ್ಥ. ಶಿವಾಜಿ ಮಹಾರಾಜರ ಮಗ ಸಂಭಾಜಿಯೇ ಇಲ್ಲಿ ಸಿಂಹದ ಮರಿ. ಮರಾಠಿ ಕಾದಂಬರಿಕಾರ ಶಿವಾಜಿ ಸಾವಂತ್ ಬರೆದ ಛಾವಾ ಹೆಸರಿನ ಕಾದಂಬರಿಯನ್ನೇ ಆಧರಿಸಿ ನಿರ್ದೇಶಕ ಲಕ್ಷ್ಮಣ್ ಉಟೇಕರ್ ಈ ಸಿನಿಮಾ ಕೆತ್ತಿದ್ದಾರೆ. ಇಡೀ ಸಿನಿಮಾ ಸಂಭಾಜಿ ಮಹಾರಾಜರ ಶೌರ್ಯ ಮತ್ತು ಸಾಹಸಗಳ ಪ್ರತೀಕ ಎಂಬಂತೆ ಮೂಡಿಬಂದಿದೆಯೇ ಹೊರತು, ಪರಿಣಾಮಕಾರಿಯಾಗಿ ಇತಿಹಾಸದ ಆಳ ಅಗಲವನ್ನು ಮುಟ್ಟುವಲ್ಲಿ ಕೊಂಚ ಹಿಂದೇಟು ಹಾಕಿದಂತಿದೆ!
'ಛಾವಾ' ಕಥೆ ಏನು?
ಛತ್ರಪತಿ ಶಿವಾಜಿ ಮಹಾರಾಜರ ನಿಧನದ ಬಳಿಕ, ಮೊಘಲ್ ಸಾಮ್ರಾಜ್ಯದ ಚಕ್ರವರ್ತಿ ಔರಂಗಜೇಬ್, ದಕ್ಷಿಣದಲ್ಲಿ ತನ್ನನ್ನು ಸೋಲಿಸಲು ಯಾರೂ ಉಳಿದಿಲ್ಲ ಎಂದು ಗಹಗಹಿಸುತ್ತಿರುತ್ತಾನೆ. ಮರಾಠರನ್ನು ಸೆದೆಬಡಿಯುವ, ಏಕಾಂಗಿಯಾಗಿಯೇ ಆಳಲು ನಿರ್ಧರಿಸುತ್ತಾನೆ. ಆದರೆ, ಛತ್ರಪತಿ ಶಿವಾಜಿ ಮಹಾರಾಜರ 24 ವರ್ಷದ ನಿರ್ಭೀತ ಮತ್ತು ಧೈರ್ಯಶಾಲಿ ಮಗ ಸಂಭಾಜಿ (ವಿಕ್ಕಿ ಕೌಶಾಲ್), ಅಪ್ಪನ ಸ್ವರಾಜ್ಯದ ಕನಸನ್ನು ನನಸು ಮಾಡಲು ಪಣತೊಡುತ್ತಾನೆ. ಆತನ ಪತ್ನಿ ಯೇಸುಬಾಯಿ (ರಶ್ಮಿಕಾ ಮಂದಣ್ಣ) ಸಹ ಸಂಭಾಜಿ ಜತೆ ಕೈ ಜೋಡಿಸುತ್ತಾಳೆ.
ಕೆಚ್ಚೆದೆಯ ಸೈನಿಕರೊಂದಿಗೆ ಔರಂಗಜೇಬನ ಭದ್ರಕೋಟೆಯಾದ ಬುರ್ಹಾನ್‌ಪುರದ ಮೇಲೆ ದಾಳಿ ಮಾಡಿದ ಸಂಭಾಜಿ, ಆತನ ಕೋಟೆಯನ್ನು ತನ್ನ ತೆಕ್ಕೆಗೆ ಪಡೆದುಕೊಳ್ಳುತ್ತಾನೆ. ಮುಂದುವರಿದು, ಸುದೀರ್ಘ 9 ವರ್ಷಗಳ ಕಾಲ ಔರಂಗಜೇಬನ ವಿವಿಧ ಕೋಟೆಗಳನ್ನು ಸಂಭಾಜಿ ತನ್ನ ಚಾಣಾಕ್ಷತನ ಮತ್ತು ಸೈನ್ಯದ ಬಲದಿಂದ ವಶಪಡೆಯುತ್ತ ಹೋಗುತ್ತಾನೆ. ಯಾರಿಗೂ ಬಗ್ಗದ ಸಂಭಾಜಿ ಕೊನೆಗೆ ತನ್ನವರಿಂದಲೇ ಮೋಸದ ಬಲೆಗೆ ಬೀಳುತ್ತಾನೆ! ಬಳಿಕ ಔರಂಗಜೇಬನ ಕೈವಶವಾಗುತ್ತಾನೆ. ಚಿತ್ರಹಿಂಸೆಯ ನರಕಯಾತನೆ ಅನುಭವಿಸುತ್ತಾನೆ. ಅಲ್ಲಿಂದ ಮುಂದೇನು? ಸಂಭಾಜಿ ಏನಾದ? ಹೀಗೆ ಒಂದಷ್ಟು ಕುತೂಹಲಭರಿತವಾಗಿಯೇ ನೋಡಿಸಿಕೊಂಡು ಹೋಗುತ್ತದೆ ಈ ಛಾವಾ ಸಿನಿಮಾ.
ಕಥೆ ಮೇಲೆ ಗಮನ ಹರಿಸದ ನಿರ್ದೇಶಕರು
ಇತಿಹಾಸದಲ್ಲಿ ಕೆಲವೇ ವಾಕ್ಯಗಳಲ್ಲಿ ವಿವರಿಸಲಾದ ಒಂದು ಅಜ್ಞಾತ ಐತಿಹಾಸಿಕ ಕಥೆಯನ್ನು ಸಿನಿಮಾ ರೂಪದಲ್ಲಿ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಲಕ್ಷ್ಮಣ್ ಉಟೇಕರ್. ನಿರ್ದೇಶಕರ ಇಡೀ ಗಮನ ಸಂಭಾಜಿ ಅನ್ನೋ ಪಾತ್ರವೊಂದರ ಮೇಲೆಯೇ ಕೇಂದ್ರೀಕೃತವಾದಂತೆ ಕಾಣುತ್ತದೆ. ಮೊದಲಾರ್ಧದಲ್ಲಿ ಸಂಭಾಜಿಯ ಧೈರ್ಯ ಮತ್ತು ಸಾಹಸದ ವೈಭವೀಕರಣಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡಲಾಗಿದೆ. ಆದರೆ, ಅದೇ ಸಂಭಾಜಿಯ ಹಿನ್ನೆಲೆ ಕಡೆಗೆ ಗಮನ ಹರಿಸದೇ ಇರುವುದು ವಿಪರ್ಯಾಸ. ಹಾಗಾಗಿ ದೊಡ್ಡ ಘನ ಕಥೆಯ ಕೊರತೆ ಚಿತ್ರದುದ್ದಕ್ಕೂ ಎದ್ದು ಕಾಣಿಸುತ್ತದೆ!
ಅಮೋಘವಾದ ಮೇಕಿಂಗ್
ದೊಡ್ಡ ಕ್ಯಾನ್ವಾಸ್, ಅಮೋಘವಾದ ಸೆಟ್‌ಗಳು, ಅತ್ಯಾಕರ್ಷಕ ಕಾಸ್ಟ್ಯೂಮ್, ಕಲರ್‌ಫುಲ್ ದೃಶ್ಯಗಳು, ಮೈ ನವಿರೇಳಿಸುವ ಸಾಹಸ ದೃಶ್ಯಗಳು, ಹಾಡುಗಳ ಮೇಕಿಂಗ್... ಹೀಗೆ ಒಂದಕ್ಕಿಂತ ಒಂದು ಅದ್ಭುತ, ಅಮೋಘ ಎನಿಸುತ್ತದೆ. ನಿರ್ದೇಶಕರ ಕಲ್ಪನೆಗೆ ತಕ್ಕಂತೆ ಅಷ್ಟೊಂದು ಸೊಗಸಾಗಿಯೇ ಸಿನಿಮಾ ಮೂಡಿಬಂದಿದೆ. ಔರಂಗಜೇಬನ ಸೈನ್ಯದಿಂದ ತನ್ನನ್ನು ತಾನು ಮುಕ್ತಗೊಳಿಸಲು ಛತ್ರಪತಿ ಸಂಭಾಜಿ ಮಹಾರಾಜರ ಸಣ್ಣ ಸೈನ್ಯ ಬಳಸಿದ ತಂತ್ರ ಇಷ್ಟವಾಗುವ ದೃಶ್ಯ. ಕ್ಲೈಮ್ಯಾಕ್ಸ್ ಕಾಳಗ ಇಡೀ ಸಿನಿಮಾದ ಆತ್ಮ ಎಂಬಂತೆ ಕಾಣಿಸುತ್ತದೆ.
ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಈ ಚಿತ್ರದ ಮತ್ತೊಬ್ಬ ನಾಯಕ. ಹಾಡುಗಳಷ್ಟೇ ಅಲ್ಲದೆ, ಹಿನ್ನೆಲೆ ಸಂಗೀತದ ಮೂಲಕ ಪ್ರೇಕ್ಷಕನ ಕಿವಿಗಳಿಗೆ ಹೊಸತನ್ನು ಉಣಬಡಿಸಿದ್ದಾರವರು. ಚಿತ್ರದ ನಿರ್ದೇಶಕ ಲಕ್ಷ್ಮಣ್ ಉಟೇಕರ್ ಸ್ವತಃ ಒಬ್ಬ ನಿಪುಣ ಕ್ಯಾಮರಾಮನ್ ಆಗಿದ್ದರೂ, ಛಾಯಾಗ್ರಹಣದ ಜವಾಬ್ದಾರಿಯನ್ನು ಸೌರಭ್ ಗೋಸ್ವಾಮಿ ಅವರ ಹೆಗಲಿಗೆ ಜಾರಿಸಿ, ದೃಶ್ಯಗಳನ್ನು ಮತ್ತಷ್ಟು ಶ್ರೀಮಂತಗೊಳಿಸಿದ್ದಾರೆ.
ಪಾತ್ರಕ್ಕೆ ಸರ್ವಸ್ವವನ್ನೂ ಧಾರೆ ಎರೆದ ವಿಕ್ಕಿ
ನಟನೆಯ ವಿಚಾರಕ್ಕೆ ಬಂದರೆ, ವಿಕ್ಕಿ ಕೌಶಾಲ್, ಸಂಭಾಜಿ ಅನ್ನೋ ಐತಿಹಾಸಿಕ ಪಾತ್ರವನ್ನು ಪರದೆ ಮೇಲೆ ಆವಾಹಿಸಿಕೊಂಡಂತೆ ಕಾಣುತ್ತಾರೆ. ಪ್ರತಿ ದೃಶ್ಯಕ್ಕೂ ಜೀವ ತುಂಬಿದ್ದಾರೆ. ಸರ್ವಸ್ವವನ್ನೂ ಧಾರೆಯೆರೆದಿದ್ದಾರೆ ಎಂದರೆ ಅತಿಶಯೋಕ್ತಿಯಲ್ಲ! ಔರಂಗಜೇಬ್ ಪಾತ್ರದಲ್ಲಿ ಅಕ್ಷಯ್ ಖನ್ನಾ ಅತ್ಯದ್ಭುತ ನಟನೆ ಒಪ್ಪಿಸಿದ್ದಾರೆ. ಅಶುತೋಷ್ ರಾಣಾ ಪಾತ್ರ ಪ್ರಭಾವಶಾಲಿಯಾಗಿದೆ. ಇನ್ನು ಈ ಚಿತ್ರದಲ್ಲಿ ಮಹಿಳಾ ಪಾತ್ರಗಳಿಗೆ ಹೆಚ್ಚಿನ ಪ್ರಾಧಾನ್ಯತೆ ಇಲ್ಲ. ಅದರ ಹೊರತಾಗಿಯೂ ದಿವ್ಯಾ ದತ್ತ ಮತ್ತು ನಟಿ ರಶ್ಮಿಕಾ ಮಂದಣ್ಣ ಸಿಕ್ಕ ಸ್ಕ್ರೀನ್ ಅನ್ನು ಚೆನ್ನಾಗಿ ಬಳಿಸಿಕೊಂಡಿದ್ದಾರೆ. ಒಟ್ಟಾರೆಯಾಗಿ ಮೇಕಿಂಗ್ ವಿಚಾರದಲ್ಲಿ ಪೂರ್ಣಾಂಕ ಗಿಟ್ಟಿಸಿಕೊಳ್ಳುವ ಈ ಸಿನಿಮಾ, ಆಕ್ಷನ್ ಪ್ರಿಯರಿಗೆ ಇಷ್ಟವಾಗಬಹುದು.
ಚಿತ್ರ: ಛಾವಾ
ನಿರ್ದೇಶನ: ಲಕ್ಷ್ಮಣ್ ಉಟೇಕರ್
ನಿರ್ಮಾಪಕ: ದಿನೇಶ್ ವಿಜಾನ್
ತಾರಾಗಣ: ವಿಕ್ಕಿ ಕೌಶಾಲ್, ರಶ್ಮಿಕಾ ಮಂದಣ್ಣ, ಅಕ್ಷಯ್ ಖನ್ನಾ, ಅಶುತೋಷ್ ರಾಣಾ, ಡಯಾನಾ ಪೆಂಟಿ, ದಿವ್ಯಾ ದತ್ತ ಮುಂತಾದವರು.
ಛಾಯಾಗ್ರಹಣ: ಸೌರಭ್ ಗೋಸ್ವಾಮಿ
ಸಂಗೀತ: ಎ.ಆರ್ ರೆಹಮಾನ್
ಎಚ್‌ಟಿ ರೇಟಿಂಗ್: 3\5
ವಿಮರ್ಶೆ: ಮಂಜು ಕೊಟಗುಣಸಿ
