Chhaava Collection Day 2: ಬಾಲಿವುಡ್‌ನಲ್ಲಿ ಈ ವರ್ಷದ ಮೊದಲ ಬ್ಲಾಕ್‌ಬಸ್ಟರ್ ಹಿಟ್ ಪಟ್ಟ ಪಡೆದ ಛಾವಾ ಸಿನಿಮಾ
Chhaava Box Office Collection Day 2: ಛಾವಾ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ. ವಿಕ್ಕಿ ಕೌಶಲ್ ಮತ್ತು ರಶ್ಮಿಕಾ ಮಂದಣ್ಣ ನಟನೆಯ ಈ ಸಿನಿಮಾ, ಎರಡನೇ ದಿನವಾದ ಶನಿವಾರ ದಾಖಲೆಯ ಗಳಿಕೆ ಕಂಡಿದೆ. ಎರಡೇ ದಿನಗಳಲ್ಲಿ 67.50 ಕೋಟಿ ಕಲೆಕ್ಷನ್ ಮಾಡಿ, ಶತಕೋಟಿಯತ್ತ ದಾಪುಗಾಲಿಟ್ಟಿದೆ.

Chhaava Collection Day 2: ಬಾಲಿವುಡ್ ನಟ ವಿಕ್ಕಿ ಕೌಶಲ್ ಮತ್ತು ರಶ್ಮಿಕಾ ಮಂದಣ್ಣ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಐತಿಹಾಸಿಕ ಹಿನ್ನೆಲೆಯ ಛಾವಾ ಸಿನಿಮಾ, ಶುಕ್ರವಾರ (ಫೆಬ್ರವರಿ 14) ವಿಶ್ವದಾದ್ಯಂತ ಬಿಡುಗಡೆಯಾಗಿದೆ. ಬಾಲಿವುಡ್‌ನಲ್ಲಿ ಆರಂಭದಿಂದಲೂ ಸಾಕಷ್ಟು ಕ್ರೇಜ್ ಸೃಷ್ಟಿ ಮಾಡಿದ್ದ ಈ ಸಿನಿಮಾ, ಅದಕ್ಕೆ ತಕ್ಕಂತೆ ಮೊದಲ ದಿನ ದಾಖಲೆಯ ಕಲೆಕ್ಷನ್ ಮಾಡಿ, ಕಮಾಲ್ ಮಾಡಿತ್ತು. ಇದೀಗ ಎರಡನೇ ದಿನವೂ ತನ್ನ ಅಬ್ಬರವನ್ನು ಮುಂದುವರಿಸಿದೆ.
ಎರಡು ದಿನಗಳ ಕಲೆಕ್ಷನ್ ಎಷ್ಟು?
ಮೊದಲ ದಿನ 31 ಕೋಟಿ ಗಳಿಕೆ ಕಂಡಿದ್ದ ಛಾವಾ ಸಿನಿಮಾ, ಎರಡನೇ ದಿನ ಭಾರತದಲ್ಲಿ 36.50 ಕೋಟಿ ರೂ. ಕಲೆಕ್ಷನ್ ಮಾಡಿದೆ. ಎರಡು ದಿನದ ಗಳಿಕೆ ಲೆಕ್ಕ ಹಾಕಿದರೆ ಒಟ್ಟಾರೆ 67.50 ಕೋಟಿ ಬಾಚಿಕೊಂಡಿದೆ ಎಂದು ಸ್ಯಾಕ್ನಿಲ್ಕ್ ವರದಿ ಮಾಡಿದೆ. ಈ ದಾಖಲೆಯ ಗಳಿಕೆ ಮೂಲಕ ಪ್ರಚಂಡ ಗೆಲುವು ದಾಖಲಿಸಿದೆ ಛಾವಾ ಸಿನಿಮಾ. ಇನ್ನೇನು ಮುಂದಿನ ಇನ್ನೆರಡೇ ದಿನಗಳಲ್ಲಿ ಈ ಸಿನಿಮಾ ಶತಕೋಟಿ ಗಳಿಕೆ ಕಾಣುವ ಸಾಧ್ಯತೆಯಿದೆ. ಇತ್ತ ವಿಶ್ವದಾದ್ಯಂತ ಈ ಸಿನಿಮಾ ಈಗಾಗಲೇ 150 ಕೋಟಿ ಕಲೆಕ್ಷನ್ ಗಡಿ ದಾಟಿದೆ.
ಈ ವರ್ಷದ ಮೊದಲ ಹಿಟ್
130 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗಿರುವ ಛಾವಾ ಸಿನಿಮಾ ಎರಡೇ ದಿನಗಳ ಅವಧಿಯಲ್ಲಿ ಬಜೆಟ್‌ನ ಅರ್ಧದಷ್ಟು ಪಾಲನ್ನು ಬಾಚಿಕೊಂಡಿದೆ. ಇನ್ನೇನು ಮುಂದಿನ ಎರಡ್ಮೂರು ದಿನಗಳಲ್ಲಿ ಪೂರ್ತಿ ಬಜೆಟ್ ವಾಪಾಸಾಗಲಿದೆ. ಈಗಾಗಲೇ ಒಟಿಟಿ ಮತ್ತು ಸ್ಯಾಟಲೈಟ್ ಹಕ್ಕುಗಳಿಂದಲೂ ಈ ಚಿತ್ರಕ್ಕೆ ಒಳ್ಳೆಯ ಮೊತ್ತ ಬಂದಿದೆ ಎಂದೇ ಹೇಳಲಾಗುತ್ತಿದೆ. ಇದೆಲ್ಲವನ್ನು ಅಳೆದು ತೂಗಿದರೆ, ಮುಂದಿನ ಎರಡೇ ದಿನಗಳಲ್ಲಿ ಲಾಭದತ್ತ ಮುಖಮಾಡಲಿದೆ ಛಾವಾ ಸಿನಿಮಾ. ಈ ಮೂಲಕ ಈ ವರ್ಷದ ಮೊದಲ ಬ್ಲಾಕ್ ಬಸ್ಟರ್ ಹಿಟ್ ಆಗಿ ಹೊರಹೊಮ್ಮಲಿದೆ. ಕಳೆದ ತಿಂಗಳ ಜನವರಿಯಲ್ಲಿ ಬಾಲಿವುಡ್‌ನಲ್ಲಿ ಬಿಡುಗಡೆ ಆದ ಫತೇಹ್, ಎಮರ್ಜೆನ್ಸಿ, ಸ್ಕೈಫೋರ್ಸ್ ಮತ್ತು ದೇವ ಸಿನಿಮಾ ಹೇಳಿಕೊಳ್ಳುವ ಕಲೆಕ್ಷನ್ ಮಾಡಲಿಲ್ಲ.
ಸಂಭಾಜಿ ಪಾತ್ರದಲ್ಲಿ ವಿಕ್ಕಿ ಕೌಶಲ್
ಛಾವಾ ಸಿನಿಮಾ, ಮರಾಠಾ ಯೋಧ ಛತ್ರಪತಿ ಶಿವಾಜಿ ಮಹಾರಾಜ್ ಅವರ ಪುತ್ರ ಛತ್ರಪತಿ ಸಂಭಾಜಿ ಮಹಾರಾಜ್ ಅವರ ಜೀವನವನ್ನು ಆಧರಿಸಿದೆ. ಈ ಚಿತ್ರವನ್ನು ಲಕ್ಷ್ಮಣ್ ಉಟೇಕರ್ ನಿರ್ದೇಶಿಸಿದ್ದಾರೆ. ಸಂಭಾಜಿ ಮಹಾರಾಜ್ ಪಾತ್ರದಲ್ಲಿ ವಿಕ್ಕಿ ಕೌಶಲ್ ಅವರ ಅಭಿನಯವನ್ನು ಅದ್ಭುತವೆಂದು ಕೊಂಡಾಡುತ್ತಿದ್ದಾರೆ. ಚಿತ್ರದಲ್ಲಿ ರಶ್ಮಿಕಾ ಮಂದಣ್ಣ, ಯೇಸುಬಾಯಿ ಪಾತ್ರದಲ್ಲಿದ್ದಾರೆ.
ಇನ್ನುಳಿದಂತೆ ಅಕ್ಷಯ್ ಖನ್ನಾ, ಅಶುತೋಷ್ ರಾಣಾ, ದಿವ್ಯಾ ದತ್ತ, ವಿನೀತ್ ಕುಮಾರ್ ಸಿಂಗ್, ಸಂತೋಷ್ ಜುವೇಕರ್, ಅಲೋಕ್ ನಾಥ್ ಮತ್ತು ಕಿರಣ್ ಕಮರ್ಕರ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಎ.ಆರ್.ರೆಹಮಾನ್ ಹಿನ್ನೆಲೆ ಸಂಗೀತ ಚಿತ್ರಕ್ಕೆ ದೊಡ್ಡ ಶಕ್ತಿಯಾಗಿದೆ. ಸೌರಭ್ ಗೋಸ್ವಾಮಿ ಛಾಯಾಗ್ರಹಣ ಮಾಡಿದ್ದಾರೆ. ಮ್ಯಾಡಾಕ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ದಿನೇಶ್ ವಿಜನ್ ಈ ಚಿತ್ರವನ್ನು ನಿರ್ಮಿಸಿದ್ದಾರೆ.
