Aishwarya Rai: ಐಶ್ವರ್ಯಾ ರೈ ಬಚ್ಚನ್‌ ಕಾರು- ಕೆಂಪು ಬೆಸ್ಟ್‌ ಬಸ್‌ ನಡುವೆ ಅಪಘಾತ; ಬಸ್‌ ಚಾಲಕನಿಗೆ ಬೌನ್ಸರ್‌ ಕಪಾಳಮೋಕ್ಷ, ಮುಂದೇನಾಯ್ತು?
ಕನ್ನಡ ಸುದ್ದಿ  /  ಮನರಂಜನೆ  /  Aishwarya Rai: ಐಶ್ವರ್ಯಾ ರೈ ಬಚ್ಚನ್‌ ಕಾರು- ಕೆಂಪು ಬೆಸ್ಟ್‌ ಬಸ್‌ ನಡುವೆ ಅಪಘಾತ; ಬಸ್‌ ಚಾಲಕನಿಗೆ ಬೌನ್ಸರ್‌ ಕಪಾಳಮೋಕ್ಷ, ಮುಂದೇನಾಯ್ತು?

Aishwarya Rai: ಐಶ್ವರ್ಯಾ ರೈ ಬಚ್ಚನ್‌ ಕಾರು- ಕೆಂಪು ಬೆಸ್ಟ್‌ ಬಸ್‌ ನಡುವೆ ಅಪಘಾತ; ಬಸ್‌ ಚಾಲಕನಿಗೆ ಬೌನ್ಸರ್‌ ಕಪಾಳಮೋಕ್ಷ, ಮುಂದೇನಾಯ್ತು?

Aishwarya Rai Bachchan car accident: ಬೃಹನ್ ಮುಂಬೈ ವಿದ್ಯುತ್ ಸರಬರಾಜು ಮತ್ತು ಸಾರಿಗೆ (ಬೆಸ್ಟ್) ಸಂಸ್ಥೆಯ ಕೆಂಪು ಬಣ್ಣದ ಬಸ್‌ಗೆ ವಿಲಾಸಿ ಕಾರೊಂದು ಡಿಕ್ಕಿ ಹೊಡೆದಿರುವ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಬಸ್‌ ಚಾಲಕನಿಗೆ ಬೌನ್ಸರ್‌ ಹೊಡೆದಾಗ ಬಸ್‌ ಚಾಲಕ ಪೊಲೀಸರಿಗೆ ಕರೆ ಮಾಡಿದ್ದಾನೆ. ಈ ಹೈಡ್ರಾಮಾದ ವಿವರ ಇಲ್ಲಿದೆ.

Aishwarya Rai: ಐಶ್ವರ್ಯಾ ರೈ ಬಚ್ಚನ್‌ ಕಾರು- ಕೆಂಪು ಬೆಸ್ಟ್‌ ಬಸ್‌ ನಡುವೆ ಅಪಘಾತ
Aishwarya Rai: ಐಶ್ವರ್ಯಾ ರೈ ಬಚ್ಚನ್‌ ಕಾರು- ಕೆಂಪು ಬೆಸ್ಟ್‌ ಬಸ್‌ ನಡುವೆ ಅಪಘಾತ

Aishwarya Rai Bachchan car accident: ಮುಂಬೈನ ಜುಹು ಉಪನಗರದಲ್ಲಿ ಬುಧವಾರ ಬೃಹನ್ ಮುಂಬೈ ವಿದ್ಯುತ್ ಸರಬರಾಜು ಮತ್ತು ಸಾರಿಗೆ (ಬೆಸ್ಟ್) ಸಂಸ್ಥೆಯ ಬಸ್‌ ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್ ಅವರ ಐಷಾರಾಮಿ ಕಾರಿಗೆ ಡಿಕ್ಕಿ ಹೊಡೆದಿದೆ. ಈ ಅಪಘಾತದಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ವರದಿಗಳ ಪ್ರಕಾರ ಈ ಅಪಘಾತವಾದ ಬಳಿಕ ನಟಿ ಐಶ್ವರ್ಯಾ ರೈ ಅವರ ಬೌನ್ಸರ್‌ ಕೋಪಗೊಂಡು ಬಸ್‌ ಚಾಲಕನ ಕೆನ್ನೆಗೆ ಹೊಡೆದಿದ್ದಾನೆ ಎನ್ನಲಾಗಿದೆ. ಬಳಿಕ ಬಸ್‌ ಚಾಲಕ ಪೊಲೀಸರಿಗೆ ಕರೆ ಮಾಡಿದ್ದಾನೆ. ಅಮಿತಾಬ್‌ ಬಚ್ಚನ್‌ ಮನೆಯ ಮೇಲ್ವಿಚಾರಕರು ಬಳಿಕ ಬೌನ್ಸರ್‌ ವರ್ತನೆಗೆ ಕ್ಷಮೆ ಯಾಚಿಸಿದ್ದಾರೆ. ಹೀಗಾಗಿ, ಬಸ್‌ ಚಾಲಕ ಕೇಸ್‌ ನೀಡದೆ ಪ್ರಕರಣವನ್ನು ಅಲ್ಲಿಗೆ ಬಿಟ್ಟಿದ್ದಾನೆ ಎಂದು ವರದಿಗಳು ತಿಳಿಸಿವೆ.

ಐಶ್ವರ್ಯ ರೈ ಅವರ ದುಬಾರಿ ಕಾರು ಮತ್ತು ಬೆಸ್ಟ್‌ ಬಸ್‌ ನಡುವಿನ ಅಪಘಾತದ ಹಲವು ಚಿತ್ರಗಳು, ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ. ಅಮಿತಾಬ್‌‌ ಬಚ್ಚನ್‌ ಅವರ ಬಂಗಲೆ ಜಲ್ಸಾ ಬಳಿ ಈ ಅಪಘಾತ ಸಂಭವಿಸಿದೆ. ಅಪಘಾತದ ಸಮಯದಲ್ಲಿ ನಟಿ ಐಶ್ವರ್ಯಾ ರೈ ಬಚ್ಚನ್‌ ಅವರು ಕಾರಿನಲ್ಲಿ ಇರಲಿಲ್ಲ. ಅಪಘಾತದ ನಂತರ ಜಲ್ಸಾದ ಬೌನ್ಸರ್ ಬಸ್ ಚಾಲಕನಿಗೆ ಕಪಾಳಮೋಕ್ಷ ಮಾಡಿದ್ದಾನೆ ಎಂದು ಹೇಳಲಾಗುತ್ತಿದೆ.

ದಿ ಫ್ರೀ ಪ್ರೆಸ್ ಜರ್ನಲ್ ವರದಿ ಮಾಡಿರುವ ಪ್ರಕಾರ ಬೆಸ್ಟ್ ಬಸ್ (ಸಂಖ್ಯೆ 8021, ಮಾರ್ಗ 231) ಜುಹು ಬಸ್ ಡಿಪೋದಿಂದ ಹೊರಟಾಗ ಅಮಿತಾಬ್ ಬಚ್ಚನ್ ಅವರ ಮನೆಯ ಹೊರಗೆ ಐಷಾರಾಮಿ ಕಾರಿಗೆ ಡಿಕ್ಕಿ ಹೊಡೆದಿದೆ. ಬಸ್‌ಗೆ ಎಷ್ಟು ಹಾನಿಯಾಗಿದೆ ಎಂದು ನೋಡಲು ಬಸ್ ಚಾಲಕ ಬಸ್ಸಿನಿಂದ ಇಳಿದಾಗ ಅಮಿತಾಬ್‌ ಬಚ್ಚನ್‌ ಮನೆಯಲ್ಲಿರುವ ಬೌನ್ಸರ್ ಬಂಗಲೆಯಿಂದ ಹೊರಬಂದು ಕಪಾಳಮೋಕ್ಷ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.

ನಂತರ ಬಸ್ ಚಾಲಕ 100 ಸಂಖ್ಯೆಗೆ ಕರೆ ಮಾಡಿ ಪೊಲೀಸರಿಗೆ ದೂರು ನೀಡಿದ್ದಾನೆ. ಪೊಲೀಸರು ಬಂದಾಗ ಅಮಿತಾಭ್ ಅವರ ಬಂಗಲೆಯ ಮೇಲ್ವಿಚಾರಕರು ಬೌನ್ಸರ್ ವರ್ತನೆಗೆ ಕ್ಷಮೆಯಾಚಿಸಿದರು. ಕ್ಷಮೆಯಾಚಿಸಿದ ನಂತರ ಬಸ್ ಚಾಲಕ ಕಾನೂನು ಕ್ರಮ ತೆಗೆದುಕೊಳ್ಳದಿರಲು ನಿರ್ಧರಿಸಿದರು. ಇದಾದ ನಂತರ ಬಸ್ ಚಾಲಕ ತನ್ನ ಬಸ್ ತೆಗೆದುಕೊಂಡು ಅಲ್ಲಿಂದ ಹೊರಟನು ಎಂದು ವರದಿಗಳು ತಿಳಿಸಿವೆ.

ಈ ಕಾರು ಐಶ್ವರ್ಯಾ ರೈ ಬಚ್ಚನ್ ಅವರಿಗೆ ಸೇರಿದೆ. ಆದರೆ, ಬಸ್ ಮತ್ತು ಕಾರಿನ ನಡುವಿನ ಡಿಕ್ಕಿಯ ಬಗ್ಗೆ ಕುಟುಂಬದಿಂದ ಯಾವುದೇ ಹೇಳಿಕೆ ಬಂದಿಲ್ಲ. ಅದೇ ಸಮಯದಲ್ಲಿ, ಈ ಪ್ರಕರಣದಲ್ಲಿ ಯಾವುದೇ ಕಾನೂನು ದೂರು ದಾಖಲಾಗಿಲ್ಲ ಎಂದು ಪೊಲೀಸರು ದೃಢಪಡಿಸಿದ್ದಾರೆ. ಈ ವಿಷಯವನ್ನು ಸ್ಥಳದಲ್ಲೇ ಇತ್ಯರ್ಥಪಡಿಸಲಾಯಿತು ಎಂದು ವರದಿಗಳು ತಿಳಿಸಿವೆ.

ಐಶ್ವರ್ಯಾ ರೈ ಮತ್ತು ಅಭಿಷೇಕ್‌ ಬಚ್ಚನ್‌ ಕಾರ್‌ ಕಲೆಕ್ಷನ್‌

ಕರ್ನಾಟಕದ ಮಂಗಳೂರು ಮೂಲದ ಐಶ್ವರ್ಯಾ ರೈ ಮತ್ತು ಅಭಿಷೇಕ್‌ ಬಚ್ಚನ್‌ ದಂಪತಿ ಸಾಕಷ್ಟು ದುಬಾರಿ ಕಾರುಗಳನ್ನು ಹೊಂದಿದ್ದಾರೆ. ಇವರ ಬಳಿ ಹಲವು ಕಾರುಗಳಿವೆ. ಇವರ ಬಳಿ ರೋಲ್ಸ್‌ ರಾಯ್ಸ್‌ ಪ್ಯಾಂಟಮ್‌ ಕಾರಿದೆ. ಈ ಕಾರಿನ ದರ 9.50 ಕೋಟಿ ರೂಪಾಯಿ ಆಸುಪಾಸಿನಲ್ಲಿದೆ. ಇದು 6.8 ಲೀಟರ್‌ನ ವಿ12 ಎಂಜಿನ್‌ ಹೊಂದಿದ್ದು, 563 ಬಿಎಚ್‌ಪಿ ಮತ್ತು 900 ಎನ್‌ಎಂ ಟಾರ್ಕ್‌ ಬಿಡುಗಡೆ ಮಾಡುತ್ತದೆ. ಇದಲ್ಲದೆ ಇವರ ಬಳಿ ಮರ್ಸಿಡಿಸ್‌ ಬೆಂಜ್‌ ಎಸ್‌500 ಕಾರಿದೆ. ಇದರ ದರ 1.76 ಕೋಟಿ ರೂಪಾಯಿ ಆಸುಪಾಸಿನಲ್ಲಿದೆ. ಬೆಂಟ್ಲಿ ಕಾಂಟಿನೆಂಟಲ್‌ ಜಿಟಿ ಎಂಬ ಭರ್ಜರಿ ಕಾರು ಕೂಡ ಇವರ ಬಳಿ ಇದೆ. ಮರ್ಸಿಡಿಸ್‌ ಬೆಂಜ್‌ ಜಿಎಲ್‌63 ಎಎಂಜಿ, ಪೋರ್ಷ್‌ ಕಯ್‌ಮ್ಯಾನ್‌ ಎಸ್‌ ಸೇರಿದಂತೆ ಹಲವು ಕಾರುಗಳು ಇವರ ಗ್ಯಾರೇಜ್‌ನಲ್ಲಿದೆ ಎಂದು ವರದಿಗಳು ತಿಳಿಸಿವೆ.

ಪ್ರವೀಣ್ ಚಂದ್ರ ಪುತ್ತೂರು: 'ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ'ದಲ್ಲಿ ಸಹಾಯಕ ಸುದ್ದಿ ಸಂಪಾದಕ. ಒನ್‌ ಇಂಡಿಯಾ, ವಿಜಯ ಕರ್ನಾಟಕದಲ್ಲಿ ಒಟ್ಟು 16 ವರ್ಷಗಳ ಅನುಭವ. ಆನ್‌ಲೈನ್‌ ಪತ್ರಿಕೋದ್ಯಮದಲ್ಲಿ ಎತ್ತರದ ಸಾಧನೆ ಮಾಡುವ ಕನಸು. ಡಿಜಿಟಲ್‌ ಜಗತ್ತಿನಲ್ಲಿ ಹೊಸತನ್ನು ಕಲಿಯುವ ಆಸಕ್ತಿ. ಮನರಂಜನೆ, ಶಿಕ್ಷಣ, ಉದ್ಯೋಗ, ತಂತ್ರಜ್ಞಾನ, ವಾಣಿಜ್ಯ, ಕರ್ನಾಟಕ, ದೇಶ- ವಿದೇಶ, ಸಿನಿಮಾ, ಷೇರುಪೇಟೆ, ಜೀವನಶೈಲಿ... ಹಲವು ವಿಚಾರಗಳ ಬಗ್ಗೆ ತಳಸ್ಪರ್ಶಿಯಾಗಿ ಬರೆಯಬಲ್ಲರು. ಎಸ್‌ಇಒ ತಂತ್ರಗಳನ್ನು ಪತ್ರಿಕೋದ್ಯಮದ ಹದಕ್ಕೆ ಪಳಗಿಸುವ ಸಾಮರ್ಥ್ಯ ರೂಢಿಸಿಕೊಂಡವರು. ಇಮೇಲ್: praveen.chandra@htdigital.in