Viral Photo: ತಮ್ಮ ತೋಟದಲ್ಲಿ ಬೆಳೆದ ಮಾವಿನಹಣ್ಣಿನ ರಾಶಿ ಮುಂದೆ ಕುಳಿತಿರುವ ಈ ನಿಂಬೆಹಣ್ಣಿನ ಹುಡುಗಿ ಯಾರು ಗುರುತು ಸಿಕ್ತಾ?
ಕನ್ನಡ ಸುದ್ದಿ  /  ಮನರಂಜನೆ  /   Viral Photo: ತಮ್ಮ ತೋಟದಲ್ಲಿ ಬೆಳೆದ ಮಾವಿನಹಣ್ಣಿನ ರಾಶಿ ಮುಂದೆ ಕುಳಿತಿರುವ ಈ ನಿಂಬೆಹಣ್ಣಿನ ಹುಡುಗಿ ಯಾರು ಗುರುತು ಸಿಕ್ತಾ?

Viral Photo: ತಮ್ಮ ತೋಟದಲ್ಲಿ ಬೆಳೆದ ಮಾವಿನಹಣ್ಣಿನ ರಾಶಿ ಮುಂದೆ ಕುಳಿತಿರುವ ಈ ನಿಂಬೆಹಣ್ಣಿನ ಹುಡುಗಿ ಯಾರು ಗುರುತು ಸಿಕ್ತಾ?

ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿದ್ದರೂ ಆಕೆಗೆ ವ್ಯವಸಾಯದಲ್ಲಿ ಬಹಳ ಆಸಕ್ತಿ. ಜೊತೆಗೆ ಆಕೆ ಪರಿಸರ ಪ್ರೇಮಿ ಕೂಡಾ. ಜೂಹಿಯ ಸೋಷಿಯಲ್‌ ಮೀಡಿಯಾದಲ್ಲಿ ಪರಿಸರ, ಕೃಷಿಗೆ ಸಂಬಂಧಿಸಿದಂತೆ ಅನೇಕ ಫೋಟೋ, ವಿಡಿಯೋಗಳನ್ನು ನೋಡಬಹುದು.

ಮಾವಿನ ರಾಶಿ ಮುಂದೆ ಜೂಹಿ ಚಾವ್ಲಾ
ಮಾವಿನ ರಾಶಿ ಮುಂದೆ ಜೂಹಿ ಚಾವ್ಲಾ (PC: Juhi Chawla Social media)

ಬೇಸಿಗೆ ಎಂದರೆ ನಮಗೆ ನೆನಪಾಗುವುದು ಮಾವು. ಈ ಸಮಯದಲ್ಲಿ ಮಾರುಕಟ್ಟೆಯಲ್ಲಿ ದೊರೆಯುವ ನಾನಾ ರೀತಿಯ ಮಾವಿನಹಣ್ಣನ್ನು ತಂದು ವೆರೈಟಿ ರೆಸಿಪಿ ಮಾಡಿ ತಿನ್ನುವುದು ಸಾಮಾನ್ಯ. ಇದೆಲ್ಲಕ್ಕಿಂತ ನಮ್ಮದೇ ತೋಟದ ಮಾವು ಎಂದರೆ ಎಲ್ಲರಿಗೂ ಖುಷಿ. ಈ ನಿಂಬೆಹಣ್ಣಿನ ಹುಡುಗಿಗೆ ಕೂಡಾ ತಮ್ಮ ತೋಟದ ಮಾವಿನಹಣ್ಣು ಎಂದರೆ ಎಲ್ಲಿಲ್ಲದ ಪ್ರೀತಿ. ಈಗ ಈಕೆ ಮಾವಿನ ಕೊಯ್ಲು ಮಾಡಲು ಮುಂದಾಗಿದ್ದಾರೆ.

ಅಂದಹಾಗೆ ತಮ್ಮ ತೋಟದ ಮಾವಿನ ರಾಶಿಯ ಮುಂದೆ ಕುಳಿತಿರುವ ಈ ನಿಂಬೆಹಣ್ಣಿನ ಹುಡುಗಿ ಯಾರು ಅಂತ ಗುರುತು ಸಿಕ್ತಾ? ಇದೇನಪ್ಪಾ ಮಾವಿನಹಣ್ಣಿಗೂ, ನಿಂಬೆಹಣ್ಣಿಗೂ ಹೋಲಿಕೆ ಅಂತಿದ್ದೀರಾ. ಈ ನಿಂಬೆಹಣ್ಣಿನಂತ ಹುಡುಗಿ ಬಂತು ನೋಡು... ಹಾಡು ನೆನಪಾಗುತ್ತಿದ್ದಂತೆ ಈ ಫೋಟೋದಲ್ಲಿರುವರು ಯಾರು ಎಂಬ ಪ್ರಶ್ನೆಗೆ ಬಹಳಷ್ಟು ಜನರಿಗೆ ಉತ್ತರ ಸಿಕ್ಕಿರುತ್ತದೆ. ಹೌದು, ಇವರು ಅವರೇ, 'ಪ್ರೇಮಲೋಕ' ಚಿತ್ರದ ಜೂಹಿ ಚಾವ್ಲಾ. ಈ ಚಿತ್ರದ ಮೂಲಕ ರವಿಚಂದ್ರನ್‌, ಜೂಹಿಯನ್ನು ತಮ್ಮ ಚಿತ್ರಕ್ಕೆ ಕರೆತಂದಿದ್ದರು.

ಜೂಹಿ ಚಾವ್ಲಾ, ತಮ್ಮ ಫಾರ್ಮ್‌ ಹೌಸ್‌ನ ಮಾವಿನಹಣ್ಣಿನ ರಾಶಿ ಮುಂದೆ ಕುಳಿತಿರುವ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ಅಂದಹಾಗೆ ಇದು ಹಳೆಯ ಫೋಟೋ. ಆದರೆ ಪ್ರತಿ ವರ್ಷ ಈ ಸಮಯದಲ್ಲಿ ಜೂಹಿ ತಮ್ಮ ಫಾರ್ಮ್‌ಹೌಸ್‌ನಲ್ಲಿ ಬೆಳೆದಿರುವ ಮಾವಿನಹಣ್ಣಿನ ಕೊಯ್ಲು ಕೆಲಸದಲ್ಲಿ ಭಾಗಿಯಾಗುತ್ತಾರಂತೆ. ಜೂಹಿ, ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿದ್ದರೂ ಆಕೆಗೆ ವ್ಯವಸಾಯದಲ್ಲಿ ಬಹಳ ಆಸಕ್ತಿ. ಜೊತೆಗೆ ಆಕೆ ಪರಿಸರ ಪ್ರೇಮಿ ಕೂಡಾ. ಇವರ ಸೋಷಿಯಲ್‌ ಮೀಡಿಯಾದಲ್ಲಿ ಪರಿಸರ, ಕೃಷಿಗೆ ಸಂಬಂಧಿಸಿದಂತೆ ಅನೇಕ ಫೋಟೋ, ವಿಡಿಯೋಗಳನ್ನು ನೋಡಬಹುದು.

ಜೂಹಿ ಚಾವ್ಲಾ ಈಗ ಚಿತ್ರರಂಗದಲ್ಲಿ ಮೊದಲಿನಂತೆ ಸಕ್ರಿಯರಾಗಿಲ್ಲ. ಸದ್ಯಕ್ಕೆ ತಮ್ಮ ಬಿಡುವಿನ ವೇಳೆಯಲ್ಲಿ ಅವರು ಫಾರ್ಮ್‌ಹೌಸ್‌ನಲ್ಲೇ ಹೆಚ್ಚು ಕಾಲ ಕಳೆಯುತ್ತಾರಂತೆ. ಜೊತೆಗೆ ತಮ್ಮ ಮನೆಯ ಸುತ್ತಮುತ್ತ ಕೂಡಾ ಅವರು ಮನೆಗೆ ಬೇಕಾದ ತರಕಾರಿ, ಸೊಪ್ಪುಗಳನ್ನು ಬೆಳೆಯುತ್ತಾರೆ. ಅದರಲ್ಲೂ ಲಾಕ್‌ಡೌನ್‌ ಸಮಯದಲ್ಲಿ ಜೂಹಿ ಬಹಳ ದಿನಗಳ ಕಾಲ ತಮ್ಮ ತೋಟದಲ್ಲೇ ಉಳಿದುಕೊಂಡಿದ್ದರಂತೆ. ಅಷ್ಟೇ ಅಲ್ಲ, ಫ್ಯಾಮಿಲಿ ಜೊತೆ ಹೊರಗೆ ಹೋಗಬೇಕಾಗಿ ಬಂದಾಗ ಪ್ರಕೃತಿ ಜೊತೆ ಹೆಚ್ಚು ಕಾಲ ಕಳೆಯಲು ಇಷ್ಟಪಡುತ್ತಾರೆ. ಒಮ್ಮೆ ಕರ್ನಾಟಕದ ಕಬಿನಿಗೆ ಜೂಹಿ ತಮ್ಮ ಕುಟುಂಬದೊಂದಿಗೆ ಟ್ರಿಪ್‌ಗೆ ಬಂದಿದ್ದರು. ನಾಗರಹೊಳೆ ಅಭಯಾರಣ್ಯದಲ್ಲಿ ಸಫಾರಿಗೆ ತೆರಳಿದ್ದ ಫೋಟೋಗಳನ್ನು ಕೂಡಾ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದರು. ಒಟ್ಟಿನಲ್ಲಿ ಬಾಲಿವುಡ್‌ನಲ್ಲಿ ಸ್ಟಾರ್‌ ನಟಿಯಾಗಿ ಹೆಸರು ಮಾಡಿದ್ದರೂ, ಆಕೆಗೆ ಪರಿಸರ ಹಾಗೂ ಕೃಷಿಯ ಮೇಲಿನ ಕಾಳಜಿ ನೋಡಿ ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ಧಾರೆ.

ಹರಿಯಾಣ ಮೂಲದ ಚೆಲುವೆ ಜೂಹಿ, 'ಸುಲ್ತಾನತ್‌' ಚಿತ್ರದ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟರು. ಆದರೆ ಈ ಸಿನಿಮಾ ಹೇಳಿಕೊಳ್ಳುವಂತ ಹೆಸರು ತರಲಿಲ್ಲ. ನಂತರ ಅವರು ಬಂದಿದ್ದು ಕನ್ನಡಕ್ಕೆ. 1987ರಲ್ಲಿ ತೆರೆಕಂಡ 'ಪ್ರೇಮಲೋಕ' ಸಿನಿಮಾ ಸೂಪರ್‌ ಡೂಪರ್‌ ಹಿಟ್‌ ಆಯ್ತು. ಅದಾದ ನಂತರ ಅವರು ಆಮೀರ್‌ ಖಾನ್‌ ಜೊತೆ ನಟಿಸಿದ 'ಖಯಾಮತ್‌ ಸೇ ಖಯಾಮತ್‌ ತಕ್‌' ಸಿನಿಮಾ ಆಕೆಗೆ ಬಾಲಿವುಡ್‌ನಲ್ಲಿ ಬ್ರೇಕ್‌ ನೀಡಿತು. ಅಲ್ಲಿಂದ ಈ ಚೆಲುವೆ ಹಿಂತಿರುಗಿ ನೋಡಲೇ ಇಲ್ಲ. ಹಿಂದಿ ಚಿತ್ರರಂಗದಲ್ಲಿ ಹೆಸರು ಗಳಿಸಿದ ನಂತರ ಕೂಡಾ ಜೂಹಿ ಚಾವ್ಲಾ ಕನ್ನಡದಲ್ಲಿ ರಣಧೀರ, ಕಿಂದರಿಜೋಗಿ, ಶಾಂತಿಕ್ರಾಂತಿ ಚಿತ್ರದಲ್ಲಿ ಕ್ರೇಜಿಸ್ಟಾರ್‌ ಜೊತೆ ನಟಿಸಿದರು. ರಮೇಶ್‌ ಅರವಿಂದ್‌ ನಟನೆಯ ಪುಷ್ಪಕವಿಮಾನ, ವೆರಿಗುಡ್‌ 10/10 ಸಿನಿಮಾಗಳಲ್ಲೂ ಜೂಹಿ ನಟಿಸಿದ್ದಾರೆ.

1995 ರಲ್ಲಿ ಜೂಹಿ ಚಾವ್ಲಾ, ಉದ್ಯಮಿ ಜಯ್‌ ಮೆಹ್ತಾ ಅವರ ಕೈ ಹಿಡಿದರು. ಈ ದಂಪತಿಗೆ ಜಾನ್ವಿ ಮೆಹ್ತಾ ಹಾಗೂ ಅರ್ಜುನ್‌ ಮೆಹ್ತಾ ಎಂಬ ಇಬ್ಬರು ಮಕ್ಕಳಿದ್ದಾರೆ. ಪತಿ ಹಾಗೂ ಮಕ್ಕಳೊಂದಿಗೆ ಜೂಹಿ ಮುಂಬೈನಲ್ಲಿ ನೆಲೆಸಿದ್ದಾರೆ.

Whats_app_banner