15 ವರ್ಷಗಳ ನಂತರ ಜೊತೆಯಾದ ಅಕ್ಷಯ್ ಕುಮಾರ್ - ಪ್ರಿಯದರ್ಶನ್; 2026ರಲ್ಲಿ ತೆರೆಕಾಣಲಿದೆ ಭೂತ್ ಬಂಗ್ಲಾ
ಅಕ್ಷಯ್ ಕುಮಾರ್ ನಟನೆಯಲ್ಲಿ ‘ಭೂತ್ ಬಂಗ್ಲಾ’ ಎಂಬ ಹಾರರ್ ಕಾಮಿಡಿ ಚಿತ್ರಕ್ಕೆ ನಿರ್ದೇಶನ ಪ್ರಿಯದರ್ಶನ್ ಆಕ್ಷನ್ ಕಟ್ ಹೇಳಲಿದ್ದಾರೆ. ಇತ್ತೀಚೆಗಷ್ಟೇ ಈ ಚಿತ್ರದ ಘೋಷಣೆ ಅಧಿಕೃತವಾಗಿ ಆಗಿದೆ. ಚಿತ್ರದ ಮೊದಲ ಪೋಸ್ಟರ್ ಬಿಡುಗಡೆಯಾಗಿದ್ದು, 2026ರ ಏಪ್ರಿಲ್ 02ರಂದು ಚಿತ್ರ ತೆರೆಗೆ ಬರಲಿದೆ. (ವರದಿ: ಚೇತನ್ ನಾಡಿಗೇರ್)
ಬಾಲಿವುಡ್‍ನ ಜನಪ್ರಿಯ ನಿರ್ದೇಶಕ-ನಟ ಜೋಡಿಯ ಪೈಕಿ ಪ್ರಿಯದರ್ಶನ್ ಮತ್ತು ಅಕ್ಷಯ್ ಕುಮಾರ್ ಜೋಡಿ ಸಹ ಒಂದು. ಅಕ್ಷಯ್ ಕುಮಾರ್ ಅಭಿನಯದಲ್ಲಿ ಪ್ರಿಯದರ್ಶನ್, ಈ ಹಿಂದೆ ‘ಹೇರಾ ಫೇರಿ’, ‘ಗರಂ ಮಸಾಲ’, ‘ಭೂಲ್ ಬುಲಯ್ಯ’, ‘ಭಾಗಂ ಭಾಗ್’ ಮತ್ತು ‘ದೇ ದನಾ ಧನ್’ ಚಿತ್ರಗಳನ್ನು ನಿರ್ದೇಶಿಸಿದ್ದರು. 2009ರಲ್ಲಿ ಬಿಡುಗಡೆಯಾದ ದೇ ದನಾ ಧನ್’ ಚಿತ್ರವೇ ಕೊನೆ. ಆ ನಂತರ ಇಬ್ಬರೂ ಒಟ್ಟಿಗೆ ಕೆಲಸ ಮಾಡಿರಲಿಲ್ಲ. ಈಗ ಸುಮಾರು 15 ವರ್ಷಗಳ ನಂತರ ಇವರಿಬ್ಬರೂ ಜೊತೆಯಾಗಿ ಕೆಲಸ ಮಾಡುತ್ತಿರುವ ಸುದ್ದಿ ಬಂದಿದೆ.
ಅಕ್ಷಯ್ ಕುಮಾರ್ ಅಭಿನಯದಲ್ಲಿ ಪ್ರಿಯದರ್ಶನ್, ‘ಭೂತ್ ಬಂಗ್ಲಾ’ ಎಂಬ ಹಾರರ್ ಕಾಮಿಡಿ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದು, ಈ ಚಿತ್ರದ ಘೋಷಣೆ ಇತ್ತೀಚೆಗೆ ಅಧಿಕೃತವಾಗಿ ಆಗಿದೆ. ಚಿತ್ರದ ಮೊದಲ ಪೋಸ್ಟರ್ ಬಿಡುಗಡೆಯಾಗಿದ್ದು, ಮುಂದಿನ ವರ್ಷದಿಂದ ಚಿತ್ರೀಕರಣ ಪ್ರಾರಂಭವಾಗಲಿದೆ. 2026ರ ಏಪ್ರಿಲ್ 02ರಂದು ಚಿತ್ರ ಬಿಡುಗಡೆಯಾಗಲಿದೆ.
ಈ ಪೋಸ್ಟರ್‌ನಲ್ಲಿ ಅಕ್ಷಯ್ ಕುಮಾರ್ ಒಂದು ದೊಡ್ಡ ಬಂಗಲೆಯ ಮುಂದೆ ಲಾಟೀನು ಹಿಡಿದು, ಯಾರನ್ನೋ ಹುಡುಕುತ್ತಾ ಕೂತಿರುವ ದೃಶ್ಯವನ್ನು ಕಟ್ಟಿಕೊಡಲಾಗಿದೆ. ಅಕ್ಷಯ್ ಕುಮಾರ್ ಅವರ ಗೆಟಪ್ ನೋಡಿದರೆ, ಇದೊಂದು ರೆಟ್ರೋ ಚಿತ್ರವಿರಬಹುದು ಎಂಬ ಭಾವನೆ ಮೂಡುತ್ತಿದೆ. ಈ ಹಿಂದೆ 1960ರ ದಶಕದಲ್ಲಿ ಹಿಂದಿಯಲ್ಲಿ ಒಂದು ‘ಭೂತ್ ಬಂಗ್ಲಾ’ ಎಂಬ ಹಾರರ್ ಕಾಮಿಡಿ ಚಿತ್ರ ಬಿಡುಗಡೆಯಾಗಿದ್ದು, ಈಗ ಅದೇ ಹೆಸರಿನಲ್ಲಿ ಬರುತ್ತಿರುವ ಎರಡನೇ ಚಿತ್ರ ಇದಾಗಿದೆ.
2026ರ ಏಪ್ರಿಲ್ 02ರಂದು ಬಿಡುಗಡೆ
ಈ ಚಿತ್ರದ ಘೋಷಣೆ, ಅಕ್ಷಯ್ ಕುಮಾರ್ ಹುಟ್ಟುಹಬ್ಬದಂದೇ ಆಗಿತ್ತು. ಆಗ ಒಂದು ಪೋಸ್ಟರ್ ಸಹ ಬಿಡುಗಡೆಯಾಗಿತ್ತು. ಆ ಸಂದರ್ಭದಲ್ಲಿ ಚಿತ್ರವನ್ನು 2025ರಲ್ಲಿ ಬಿಡಗುಡೆ ಮಾಡಲಾಗಿದೆ ಎಂದು ಹೇಳಲಾಗಿತ್ತು. ಮಂಗಳವಾರ, ಅಕ್ಷಯ್ ಕುಮಾರ್ ಈ ಚಿತ್ರದ ಇನ್ನೊಂದು ಹೊಸ ಪೋಸ್ಟರ್ ಹಂಚಿಕೊಂಡಿದ್ದು, ಅದರಲ್ಲಿ ಚಿತ್ರ 2026ರ ಏಪ್ರಿಲ್ 02ರಂದು ಬಿಡುಗಡೆಯಾಗಲಿದೆ ಎಂದು ನಮೂದಾಗಿದೆ. ತಮ್ಮ ನೆಚ್ಚಿನ ನಿರ್ದೇಶಕರೊಂದಿಗೆ ಮತ್ತೊಮ್ಮೆ ಕೆಲಸ ಮಾಡುತ್ತಿರುವುದಾಗಿ ಅಕ್ಷಯ್ ಕುಮಾರ್, ಈ ಪೋಸ್ಟ್‌ನಲ್ಲಿ ಹೇಳಿಕೊಂಡಿದ್ದಾರೆ.
ಅಕ್ಷಯ್ ಕುಮಾರ್ ಅಭಿನಯದ ‘ಬಡೇ ಮಿಯಾ ಚೋಟೆ ಮಿಯಾ’, ‘ಸರ್ಫಿರಾ’, ‘ಖೇಲ್ ಖೇಲ್ ಮೇ’, ‘ಸಿಂಗಂ ಅಗೇನ್’ ಚಿತ್ರಗಳು ಈ ವರ್ಷ ಬಿಡುಗಡೆಯಾಗಿದ್ದು, ಈ ಪೈಕಿ ‘ಸಿಂಗಂ ಅಗೇನ್’ ಹೊರತುಪಡಿಸಿದರೆ ಮಿಕ್ಕಂತೆ ಯಾವ ಚಿತ್ರ ಸಹ ಅಷ್ಟೇನೂ ಸದ್ದು ಮಾಡಲಿಲ್ಲ. ಮುಂದಿನ ವರ್ಷ ಅಕ್ಷಯ ಕುಮಾರ್ ಅಭಿನಯದ ‘ಶಂಕರ’, ‘ಜಾಲಿ ಎಲ್.ಎಲ್.ಬಿ 3’, ‘ವೆಲ್ಕಮ್ ಟು ದಿ ಜಂಗಲ್’ ಸೇರಿದಂತೆ ಒಂದಿಷ್ಟು ಚಿತ್ರಗಳು ಬಿಡುಗಡೆಯಾಗುವುದಕ್ಕೆ ಸಜ್ಜಾಗಿವೆ.
(ವರದಿ: ಚೇತನ್ ನಾಡಿಗೇರ್)
ಇನ್ನಷ್ಟು ಬಾಲಿವುಡ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ | ಶೀಘ್ರದಲ್ಲೇ ಒಟಿಟಿಗೆ ಬರಲಿದೆ ಅಜಯ್ ದೇವ್ಗನ್ ಅಭಿನಯದ ಸಿನಿಮಾ ‘ಸಿಂಗಂ ಅಗೇನ್’; ಈ ಪ್ಲಾಟ್ಫಾರ್ಮ್ನಲ್ಲಿ ವೀಕ್ಷಿಸಿ
ವಿಭಾಗ